ಎತ್ತುಗಳ ಓಟದ ಸ್ಪರ್ಧೆ, ಒಂದೆರಡು ಟನ್ ಭಾರ ಎಳೆಯುವ ಸ್ಪರ್ಧೆಗಳ ಬಗ್ಗೆ ಕೇಳಿದ್ದೇವೆ. ನೋಡಿದ್ದೇವೆ. ಆದರೆ ಬರೋಬ್ಬರಿ 15 ಟನ್ ಕಬ್ಬು ಮೂರು ಕಿಲೋ ಮೀಟರ್ ದೂರ ಎಳೆದ ಎತ್ತುಗಳ ಸಾಹಸ ಕೇಳಿದ್ದೀರಾ... ಹೋದು ಮಂಡ್ಯ ಜಿಲ್ಲೆಯಲ್ಲಿ ಇಂತಹ ಸಾಮರ್ಥ್ಯವನ್ನು ಮಾಡಿ ತೋರಿಸಿವೆ ಎತ್ತುಗಳು.
ಕಾರಹುಣ್ಣಿಮೆಯಂದು ರಾಯಚೂರಿನಲ್ಲಿ ಗುಂಡು ಎಳೆಯುವ ಸ್ಪರ್ಧೆ ಮನೆಮಾತಾಗಿದೆ. ಆದರೆ ಮಂಡ್ಯ ಜಿಲ್ಲೆಯಲ್ಲಿ ಇಂತಹ ಸ್ಪರ್ಧೆಗಳ ಕ್ರೇಜ್ ಸ್ವಲ್ಪ ಜಾಸ್ತಿ ಇರುತ್ತದೆ. ಅಬ್ಬಬ್ಬಾ ಅಂದ್ರೆ ಒಂದು ಎತ್ತಿನ ಗಾಡಿಯಲ್ಲಿ ಒಂದರಿಂದ ಎರಡು ಟನ್ ಕಬ್ಬನ್ನು ತುಂಬಬಹುದು.ಅದನ್ನು ಎಳೆಯಬಹುದು. ಆದರೆ, ಮಂಡ್ಯದ ಯುವಕರು ಒಂದು ಎತ್ತಿನ ಗಾಡಿಯಲ್ಲಿ ಬರೋಬ್ಬರಿ 15 ಟನ್ ಕಬ್ಬು ತುಂಬಿ ಈ ಸಾಧನೆ ಮಾಡಿದ್ದಾರೆ.ಮಂಡ್ಯ ತಾಲೂಕಿನ ಎಚ್.ಮಲ್ಲೀಗೆರೆ ಗ್ರಾಮದ ವಿನಾಯಕ ಗೆಳೆಯರ ಬಳಗ ಈ ಸಾಧನೆ ಮಾಡಿದೆ. 15 ಟನ್ ಭಾರದ ಕಬ್ಬನ್ನು ಹೊತ್ತುಕೊಂಡು ಎತ್ತಿನ ಗಾಡಿ 3 ಕಿಮೀ ಸಾಗಿದೆ.
ಭಾರೀ ಕಬ್ಬು ತುಂಬಿದ ಕಬ್ಬಿನ ಗಾಡಿ ನೋಡಲು ಅಲ್ಲಿ ನೂರಾರು ರೈತರು ಮುಗಿಬಿದ್ದಿದ್ದರು. ಯುವ ಬಳಗ ಹಾಗೂ ಎತ್ತುಗಳ ಸಾಮರ್ಥ್ಯವನ್ನು ಕಣ್ತುಂಬಿಸಿಕೊಳ್ಳು ಸುತ್ತಮುತ್ತಲಿನ ಗ್ರಾಮಸ್ಥರ ಜನಜಾತ್ರೆ ಸೇರಿತ್ತು.
ಬಂಡಿ ಸಾಗುವ 3 ಕಿಮೀ ಉದ್ದಕ್ಕೂ ರಸ್ತೆಯಲ್ಲಿ ಕಾದು ನಿಂತಿದ್ದ ಜನ ಸಿಳ್ಳೆ ಕೇಕೇ ಹಾಕುತ್ತಾ ಹುರಿದುಂಬಿಸಿದರು, ಜೈಕಾರ ಹಾಕುತ್ತಾ ಯುವಕರಿಗೆ ಪ್ರೋತ್ಸಾಹ ನೀಡಿದ್ದಾರೆ. ಯುವಕರ ಸಾಧನೆ ಕಂಡು ಅಲ್ಲಿನ ರೈತ ಸಮುದಾಯವೇ ಮೂಗಿನ ಮೇಲೆ ಬೆರಳಿಟ್ಟಿದೆ.
ಇಲ್ಲಿಯವರೆಗೂ 12 ಟನ್ ಕಬ್ಬು ತುಂಬಿದ್ದ ಗಾಡಿಯನ್ನು ರೈತರು ಎಳೆಸಿದ್ದೇ ಹಿಂದಿನ ದಾಖಲೆಯಾಗಿತ್ತು. ಆದರೆ, ಈಗ 15 ಟನ್ ಕಬ್ಬನ್ನು ತುಂಬಿ ಎಳೆಸಿರುವ ವಿನಾಯಕ ಗೆಳೆಯರ ಬಳಗ ದೊಡ್ಡ ಸಾಧನೆಯನ್ನೇ ಮಾಡಿದೆ.
Share your comments