1. ತೋಟಗಾರಿಕೆ

ಗುಣಮಟ್ಟದ ಬಿತ್ತನೆ ಬೀಜಗಳ ಬಳಕೆ

ಗುಣಮಟ್ಟದ ಬಿತ್ತನೆ ಬೀಜಗಳ ಬಳಕೆ

ರೈತ ಬಾಂಧವರು ಉತ್ತಮ ಗುಣಮಟ್ಟದ ಬೀಜಗಳನ್ನು ಬಳಸುವುದರಿಂದ ಉತ್ತಮ ಮೊಳಕೆ ಪ್ರಮಾಣ ಸಾಧ್ಯವಾಗುತ್ತದೆ. ಬೆಳೆಯಲ್ಲಿ ಒಂದೇ ರೀತಿಯ ಬೆಳವಣಿಗೆ ಕಂಡುಬರುವುದಲ್ಲದೆ ಏಕಕಾಲಕ್ಕೆ ಕಟಾವಿಗೆ ಬರುತ್ತದೆ. ಬೀಜದಿಂದ ಹರಡುವ ರೋಗಗಳನ್ನು ನಿಯಂತ್ರಿಸಬಹುದು. ಗೊಬ್ಬರ ಹಾಗು ಇತರೆ ಪರಿಕರಗಳಿಗೆ ಸ್ಪಂಧಿಸುತ್ತವೆ ಹಾಗೂ ಉತ್ತಮ ಕೃಷಿ ನಿರ್ವಹಣೆಗೆ ಸಹಕಾರಿಯಾಗಿರುತ್ತವೆ. ಇಂತಹ ಉತ್ತಮ ಗುಣಮಟ್ಟದ ಬೀಜಗಳನ್ನು ಉಪಯೋಗಿಸಿ ಬೆಳೆದ ಬೆಳೆಯಿಂದ ಸಾಮಾನ್ಯ ಇಳುವರಿಗಿಂತ ಸುಮಾರು ಶೇ 20 ರಷ್ಟು ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತದೆಯಲ್ಲದೇ ಈ ರೀತಿ ಪಡೆಯುವ ಬೆಳೆಯ ಉತ್ಪನ್ನವೂ ಗುಣಮಟ್ಟವುಳ್ಳದ್ದಾಗುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ದೊರಕಿಸಿಕೊಳ್ಳಬಹುದು.

ಉತ್ತಮ ಬೀಜಗಳ ಗುಣಲಕ್ಷಣಗಳು:

ರೈತ ಬಾಂಧವರು ಬಿತ್ತನೆ ಬೀಜಗಳನ್ನು ಕೊಳ್ಳುವಾಗ ಅಧಿಕೃತ ಬೀಜಮಾರಾಟಗಾರರಲ್ಲೆ ಖರೀದಿಸಬೇಕು. ಬೀಜಗಳನ್ನು ಕೊಳ್ಳುವಾಗ ಕಡ್ಡಾಯವಾಗಿ ನಗದು / ಸಾಲದ ರಸೀದಿ ಪಡೆಯಬೇಕಲ್ಲದೇ ಬಿತ್ತನೆ ಬೀಜದ ಅವಧಿ ಮುಗಿಯದಿರುವ ಬಗ್ಗೆ ಗಮನಿಸುವುದು ಸೂಕ್ತ. ಖರೀದಿಸುವ ಪ್ರತಿಚೀಲವು ಗುರುತಿನ ಚೀಟಿಯನ್ನು ಹೊಂದಿರಬೇಕು. ಭಿತ್ತನೆ ಬೀಜದ ಚೀಲಕ್ಕೆ ಯಾವುದೇ ರೀತಿಯ ಹಾನಿಯಾಗಿರಬಾರದು ಮತ್ತು ಚೀಟಿಯ / ಕಟ್ಟು ದಾರವನ್ನು ಬದಲಿಸದಿರುವುದು ತಿದ್ದಿಲ್ಲದಿರುವುದು ಮುಂತಾದ ಅಂಶಗಳನ್ನು ಖಾತರಿಪಡಿಸಿಕೊಂಡ ನಂತರವೇ ಕೊಳ್ಳಬೇಕು.

ರೈತರು ಈ ರೀತಿ ಖರೀದಿಸಿದ ಬಿತ್ತನೆ ಬೀಜಗಳನ್ನು ಬಿತ್ತನೆಗೆ ಉಪಯೋಗಿಸಿದ ನಂತರ ಅದರ ನಗದು ರಸೀದಿ, ಗುರುತಿನ ಚೀಟೆ/ಕಟ್ಟುದಾರ, ಚೀಲ ಮುಂತಾದವನ್ನು ಸರಿಯಾಗಿ ಸಂರಕ್ಷಿಸಿಡಬೇಕು. ಇದರಿಂದ ಕೊಂಡಿರುವ ಬಿತ್ತನೆ ಬೀಜದಲ್ಲಿ ಲೋಪದೋಷಗಳಿದ್ದು ಅದರ ಮೊಳಕೆ ಪ್ರಮಾಣ ಕಡಿಮೆಯಾದರೆ ಅಥವಾ ಬೆಳೆ ವಿಫಲವಾದರೆ ಅವಶ್ಯಕ ಲಗತ್ತುಗಳೊಂದಿಗೆ ಕೃಷಿ ಇಲಾಖೆಗೆ ಪತ್ರ ಮುಖೇನ ಮನವಿ ಸಲ್ಲಿಸಲು ಸುಗಮವಾಗುತ್ತದೆ. ರೈತರು ತಾವು ಕೊಳ್ಳುವ ಬೀಜಗಳು ಹೊಸ ತಳಿಗಳಾಗಿದ್ದಲ್ಲಿ, ಅವುಗಳ ನಿರ್ವಹಣೆ ಬಗ್ಗೆ ಪೂರ್ಣಮಾಹಿತಿಯನ್ನು ಮಾರಾಟಗಾರರಿಂದಲೇ ಪಡೆಯುವುದು ಉತ್ತಮ ಹಾಗೂ ಮೆಕ್ಕೆಜೋಳ, ನೆಲಗಡಲೆ, ಸೂರ್ಯಕಾಂತಿ ಮತ್ತು ಬೀಜಗಳಿಗೆ ಬೀಜೋಪಚಾರ ಮಾಡಿರುವ ಬಗ್ಗೆ ಖಾತರಿಪಡಿಸಿಕೊಳ್ಳುವುದು.

ಬಿತ್ತನೆ ಪೂರ್ವ ಮತ್ತು ಬಿತ್ತನೆ ಸಮಯದಲ್ಲಿ ರೈತರು ಗಮನಿಸಬೇಕಾದ ಅಂಶಗಳು:

 • ಬಿತ್ತನೆಗೆ ಆಯ್ಕೆ ಮಾಡಿರುವ ತಳಿಯು ತಮ್ಮ ಜಿಲ್ಲೆ / ವಲಯಕ್ಕೆ ಹಾಗೂ ಹಂಗಾಮಿಗೆ ಶಿಫಾರಸ್ಸು ಮಾಡಿರುವ ಬಗ್ಗೆ ಖಾತರಿ ಪಡಿಸಿಕೊಳ್ಳುವುದು.
 • ಬಿತ್ತನೆ ಸಮಯದಲ್ಲಿ ಮಣ್ಣಿನಲ್ಲಿ ತೇವಾಂಶ ತೃಪ್ತಿಕರವಾಗಿರಬೇಕು.
 • ಶಿಫಾರಸ್ಸು ಮಾಡಿರುವ ಪ್ರಮಾಣದಲ್ಲಿ ಪ್ರತಿ ಎಕರೆಗೆ ಬಿತ್ತನೆ ಬೀಜಗಳನ್ನು ಬಳಸುವುದು, ತಾಕುಗಳನ್ನು ಕೃಷಿ ವಿಶ್ವವಿದ್ಯಾನಿಲಯ ಅಥವಾ ಖಾಸಗಿ ಸಂಸ್ಥೆಗಳು ಶಿಫಾರಸ್ಸು ಮಾಡುವ ಆಧುನಿಕ ಬೇಸಾಯಕ್ರಮಗಳನ್ನು ಅನುಸರಿಸಿ ನಿರ್ವಹಿಸುವುದು.
 • ಬಿತ್ತನೆಯಾದ 7 ರಿಂದ 10 ದಿವಸದೊಳಗಾಗಿ ಸರಿಯಾಗಿ ಮೊಳಕೆ ಬಾರದಿದ್ದಲ್ಲಿ, ತಕ್ಷಣವೇ ಬೀಜಖರೀದಿಯ ರಶೀದಿ ಮತ್ತು ಇತರೆ ದಾಖಲಾತಿಗಳೊದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ / ತಾಲೂಕು ಸಹಾಯಕ ಕೃಷಿ ನಿರ್ದೇಶಕರಿಗೆ ಲಿಖಿತವಾಗಿ ದೂರು ನೀಡುವುದು.
 • ಬೆಳವಣಿಗೆ ಹಂತದಲ್ಲಿ ಬೀಜದ ದೋಷದಿಂದ ಹೂವು/ಕಾಯಿ/ತೆನೆ ಬಾರದೇ ಇದ್ದಲ್ಲಿ ಕೂಡಲೇ ಬೀಜ ಖರೀದಿಯ ರಸೀದಿ ಮತ್ತು ಇತರೆ ದಾಖಲಾತಿಗಳೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರಿಗೆ ಲಿಖಿತವಾಗಿ ದೂರು ನೀಡುವುದು.

ಉತ್ತಮ ಗುಣಮಟ್ಟದ ಬೀಜಗಳ ಗುಣಲಕ್ಷಣಗಳೆಂದರೆ, ಇವು ಉತ್ತಮ ವಂಶವಾಹಿನಿ ಹೊಂದಿರುತ್ತವೆ. ಉತ್ತಮ ತಳಿಶುದ್ಧತೆ, ಭೌತಿಕ ಶುದ್ಧತೆ, ಕಳೆ ಹಾಗೂ ಇತರ ಬೆಳೆ/ತಳಿಗಳ ಬೀಜಗಳಿಲ್ಲದಿರುವುದು, ರೋಗ ಮತ್ತು ಕೀಟಗಳ ಸೊಂಕಿನಿಂದ ಮುಕ್ತವಾಗಿರುವುದು ಹಾಗೂ ಉತ್ತಮ ಮೊಳಕೆ ಸಾಮಥ್ರ್ಯ ಇವೇ ಮುಂತಾದವು. ರೈತರು ಬೀಜ ಖರೀದಿ ಸಮಯದಲ್ಲಿ ಹಾಗೂ ನಂತರ ಗಮನಿಸಬೇಕಾದ ಅಂಶಗಳು.

ಸರಿಯಾದ ರೀತಿಯಲ್ಲಿ ಬಿತ್ತನೆ ಮಾಡುವುದು:

ರಾಜ್ಯದಲ್ಲಿ ಮುಂಗಾರು ಬಿತ್ತನೆ ಕಾರ್ಯವನ್ನು ಭೂಮಿ ಸಿದ್ಧಗೊಳಿಸಿದ ಕಡೆಗಳಲ್ಲಿ ಸೂಕ್ತವಾದ ಹದ ಮಳೆಯಾದ ಕೂಡಲೇ ಆರಂಭವಾಡಬಹುದು.

ಸಾಧಾರಣವಾಗಿ ಪರಿಷ್ಕøತ / ಪ್ರಮಾಣಿತ ಬಿತ್ತನೆ ಬೀಜವನ್ನು ಬೀಜ ಪರೀಕ್ಷಾಲಯದಲ್ಲಿ ಪರೀಕ್ಷೆ ಮಾಡಿಸಿ ಅದರ ಮೊಳಕೆಯೊಡೆಯುವ ಪ್ರಮಾಣ, ಪರಿಶುದ್ಧತೆ ಮೊದಲಾದವುಗಳನ್ನು ಕಂಡು ಹಿಡಿದು ಅವು ಬಿತ್ತನೆಗೆ ಯೋಗ್ಯವೇ ಅಥವಾ ಇಲ್ಲವೇ ಎಂಬುದನ್ನು ತಿಳಿದ ನಂತರ ರೈತರಿಗೆ ಬಿಡುಗಡೆ ಮಾಡಲಾಗುತ್ತದೆ.

ಹೀಗಿದ್ದರೂ ಕೂಡ ಅದೆಷ್ಟೋಸಲ ಮೊಳಕೆಯೊಡೆಯುವಿಕೆ ಕಡಿಮೆಯಾಗಲು ಅನೇಕ ಕಾರಣಗಳಿವೆ. ಈ ದಿಸೆಯಲ್ಲಿ ಕೆಲವು ಮುಖ್ಯ ಕಾರಣಗಳನ್ನು ಮತ್ತು ಅವುಗಳನ್ನು ನಿವಾರಿಸುವುದು ಹೇಗೆಂಬುದನ್ನು ರೈತ ಬಾಂಧವರು ತಿಳಿದು ಕೊಳ್ಳಬೇಕು.

ಕಾರಣ ಮತ್ತು ಪರಿಹಾರ:

 • ಬೀಜವನ್ನು ಹೆಚ್ಚು ಆಳದಲ್ಲಿ ಬಿತ್ತುವುದರಿಂದ ಮೊಳಕೆಯೊಡೆಯುವುದು ಕಡಿಮೆಯಾಗುವ ಸಂಭವವಿರುತ್ತದೆ. ಆದುದರಿಂದ ಯಾವುದೇ ಬೀಜವನ್ನು 2 ಅಂಗುಲಕ್ಕಿಂತ ಹೆಚ್ಚು ಆಳದಲ್ಲಿ ಬಿತ್ತನೆ ಮಾಡಬಾರದು.
 • ಕೆಲವೊಮ್ಮೆ ಬಿತ್ತಿದ ಬೀಜವು ಸರಿಯಾದ ರೀತಿಯಲ್ಲಿ ಮಣ್ಣಿನಲ್ಲಿ ಮುಚ್ಚಿಕೊಂಡಿರದೆ ಗಾಳಿ ಬಿಸಿಲಿಗೆ ಸಿಕ್ಕಲ್ಲಿ ಅಂತಹ ಬೀಜವು ಮೊಳಕೆಯೊಡೆಯಲು ಸಾಧ್ಯವಾಗುವುದಿಲ್ಲ ಇದರಿಂದಲೂ ಸರಿಯಾದ ಪ್ರಮಾಣದಲ್ಲಿ ಸಸಿಗಳ ಸಂಖ್ಯೆಯನ್ನು ನಿರ್ವಹಿಸಲಾಗುವುದಿಲ್ಲ.
 • ಮಣ್ಣಿನಲ್ಲಿ ತೇವಾಂಶವು ಸರಿಯಾಗಿಲ್ಲದಿದ್ದರೆ ಬೀಜದಿಂದ ಉತ್ತಮ ಮೊಳಕೆ ಬರುವುದಿಲ್ಲ. ಆದುದರಿಂದ ಮಣ್ಣಿನಲ್ಲಿ ಅಗತ್ಯ ಪ್ರಮಾಣದ ತೇವಾಂಶವಿರುವಾಗ ಮತ್ತು ಬಿತ್ತನೆಗೆ ಮೊದಲು ಬೀಜಗಳನ್ನು 12 ಗಂಟೆ ಕಾಲ ನೀರಿನಲ್ಲಿ ನೆನೆಸಿ ನಂತರ ಆರಿಸಿ ಬಿತ್ತನೆ ಮಾಡಬೇಕು.
 • ಬೀಜವನ್ನು ಯಾವುದೇ ಕೃತಕ ಗೊಬ್ಬರದ ಜೊತೆ ಮಿಶ್ರ ಮಾಡಿ ಬಿತ್ತಬಾರದು. ಹಾಗೇನಾದರೂ ಮಿಶ್ರ ಮಾಡಿದಲ್ಲಿ ಬೀಜವು ಸರಿಯಾಗಿ ಮೊಳಕೆ ಬರುವುದಿಲ್ಲ, ಇದರಿಂದ ಬೆಳೆ ನಷ್ಟವಾಗುತ್ತದೆ.
 • ಬೀಜದ ಹತ್ತಿರಕ್ಕೆ ಗೊಬ್ಬರವನ್ನು ಹಾಕಬಾರದು. ಯಾವಾಗಲೂ ಬೀಜಕ್ಕೂ ಗೊಬ್ಬರಕ್ಕೂ 2 ರಿಂದ 4 ಅಂಗುಲದಷ್ಟು ಅಂತರವಿರಬೇಕು.
 • ಮಣ್ಣಿನಲ್ಲಿ ಗೊಬ್ಬರದ ಹುಳು / ಗೊಣ್ಣೆಹುಳು, ಗೆದ್ದಲು ಮತ್ತುತರ ಕ್ರಿಮಿ ಕೀಟಗಳ ಉಪದ್ರವವಿದ್ದರೆ ಅವು ಬೀಜಕ್ಕೆ ಹಾನಿ ಮಾಡುವುದರಿಂದ ಬೀಜವು ಸರಿಯಾಗಿ ಮೊಳಕೆ ಬರುವುದಿಲ್ಲ. ಆದುದರಿಂದ ಅಂತಹ ತಾಕಿಗೆ ಗೆದ್ದಲು ನಾಶಕಗಳನ್ನು ಬಳಿಸಿ ಬಿತ್ತನೆಗೆ ಸ್ವಲ್ಪ ಮುಂಚಿತವಾಗಿ ಮಣ್ಣಿನಲ್ಲಿ ಬೆರೆಸುವ ಮೂಲಕ ಅವುಗಳ ಹಾವಳಿ ತಡೆಗಟ್ಟಬೇಕು.
 • ಬೀಜ ಬಿತ್ತಿದ ಕೂಡಲೇ ಬೀಜವು ಮುಚ್ಚಿಕೊಳ್ಳುವ ಹಾಗೆ ತೆಳುವಾಗಿ ಆದ್ರ್ರಮಣ್ಣಿನಿಂದ ಮುಚ್ಚಬೇಕು. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಮುಂಜಾಗ್ರತಾ ಕ್ರಮಗಳನ್ನು ರೈತಬಾಂಧವರು ಕೈಗೊಂಡರೆ ಬೀಜಗಳು ಸರಿಯಾಗಿ ಮೊಳಕೆ ಬರುತ್ತವೆ.

 

ರೈತರ ಮಟ್ಟದಲ್ಲಿ ಬೀಜ ಸಂಗ್ರಹಣೆ ಮಾಡುವಾಗ ಅನುಸರಿಸಬೇಕಾದ ಕ್ರಮಗಳು:

                ಸ್ವ-ಪರಾಗಸ್ಪರ್ಶ ಬೆಳೆಗಳಾದ ಭತ್ತ, ರಾಗಿ, ಜೋಳ, ಸಜ್ಜೆ, ಗೋಧಿ, ದ್ವಿದಳಧಾನ್ಯ, ಎಣ್ಣೆಕಾಳು ಹಾಗೂ ಹತ್ತಿ ತಳಿಗಳಲ್ಲಿ ಮಾತ್ರ ಒಮ್ಮೆ ಪ್ರಮಾಣಿತ ಬೀಜಗಳನ್ನು ಪಡೆದು ಉತ್ಪಾದಿಸುವ ಬೀಜಗಳನ್ನು 4 ರಿಂದ 5 ಹಂಗಾಮುಗಳವರೆಗೆ ಬಿತ್ತನೆಗೆ ಬಳಸಿಕೊಳ್ಳಬಹುದು ಹಾಗೂ ಇಳುವರಿಯಲ್ಲಿ ಮಹತ್ವದ ವ್ಯತ್ಯಾಸವಿರುವುದಿಲ್ಲ.

                ಬಿತ್ತನೆಗೆ ಉಪಯೋಗಿಸಬಲ್ಲ ತಾಕುಗಳನ್ನು ಇಲಾಖೆಯ ಅಧಿಕಾರಿಗಳಿಗೆ ಪರಿವೀಕ್ಷಿಸಲು ಕೋರಿ, ಅವರ ಶಿಫಾರಿಸ್ಸಿನಂತೆ ಬೆಳೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಬೇಕು ಹಾಗು ಬೆಳೆಯ ವಿವಿಧ ಹಂತಗಳಲ್ಲಿ ಬೆರಕೆ ಗಿಡಗಳನ್ನು ತೆಗೆಯಬೇಕು. ಸಕಾಲಕ್ಕೆ ಉತ್ತಮ ತೆನೆಗಳನ್ನು ಆಯ್ಕೆಮಾಡಿ ಕಟಾವು ಕಾರ್ಯ ಕೈಗೊಂಡು ಪ್ರತ್ಯೇಕವಾಗಿ ಒಕ್ಕಣೆ ಮಾಡಬೇಕು. ಒಕ್ಕಣೆ ಹಂತದಲ್ಲಿ ಇತರೆ ತಳಿಗಳು ಬೆರಕೆಯಾಗದಂತೆ ಎಚ್ಚರವಹಿಸಬೇಕು.

                ಒಕ್ಕೆಣೆ ಮಾಡಿದ ಬೀಜಗಳನ್ನು ಸ್ವಚ್ಛಮಾಡಿ ಚೆನ್ನಾಗಿ ಒಣಗಿಸಿ ಲೋಹದ ಕಣಜ ಅಥವಾ ಪಕ್ಕಾಕೋಠಿ ಅಥವಾ ಬಿದುರಿನ ವಿನ್ಯಾಸಗಳಲ್ಲಿ ಶೇಖರಿಸಿಡಬೇಕು. ಬಿತ್ತನೆ ಬೀಜಗಳನ್ನು ರಸಗೊಬ್ಬರ, ಸಸ್ಯಸಂರಕ್ಷಣಾ ಪೀಡೆನಾಶಕಗಳ ಜೊತೆ ಹಾಗೂ ತೇವಾಂಶವಿರುವ ಜಾಗದಲ್ಲಿ ಸಂಗ್ರಹಿಸಿಡಬಾರದು. ಈ ರೀತಿಯಾಗಿ ಸಂಗ್ರಹಿಸಿದ ಬೀಜಗಳನ್ನು ಬೀಜ ಪರೀಕ್ಷೆಯ ನಂತರ ಸ್ವಂತಕ್ಕೆ ಹಾಗೂ ತಮ್ಮ ಗ್ರಾಮದ ಇತರೆ ರೈತರಿಗೂ ಸಹ ಹಂಚಬಹುದು.

                ಹೆಚ್ಚಿನ ಪ್ರಮಾಣದಲ್ಲಿ ಬೀಜೋತ್ಪಾದನೆ ಮಾಡಿದಲ್ಲಿ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬೀಜೋತ್ಪಾದನಾ ಸಂಸ್ಥೆಗಳ ಮೂಲಕ ವಿತರಣೆಯನ್ನೂ ಸಹ ಮಾಡಬಹುದು. ರೈತರು ನೇರವಾಗಿ ಪ್ರಮಾಣಿತ ಬೀಜ ಅಥವಾ ಇಲಾಖೆಯ ವಿವಿಧ ಯೋಜನೆಯಡಿ ಪ್ರಮಾಣಿತ ಬೀಜಗಳನ್ನು ಖರೀದಿಸಿ ಬೆಳೆದಿರುವ ತಾಕುಗಳಿಂದ ಹಾಗೂ ಬೆಳೆ ಸ್ಪರ್ಧೆಯಲ್ಲಿ ಬರುವ ಉತ್ಪನ್ನಗಳಿಂದ ಬೀಜ ಸಂಗ್ರಹಣೆ ಮಾಡುವುದಲ್ಲದೇ ಸದರಿ ಬೀಜಗಳನ್ನು ರೈತರಿಂದ ರೈತರಿಗೆ ವಿತರಿಸಬಹುದು.

 

Published On: 30 October 2018, 11:03 AM English Summary: Use of quality sowing seeds

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.