1. ತೋಟಗಾರಿಕೆ

ಶುಂಠಿ ಕೃಷಿ

Ginger cultivation

ಮಲೆನಾಡಿನಲ್ಲಿ ಶುಂಠಿ ಬೇಸಾಯ ವ್ಯಾಪಕವಾಗಿ ಹಬ್ಬುತ್ತಿದೆ: ಉತ್ತರಕನ್ನಡ, ದಕ್ಷಿಣಕನ್ನಡ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ. ಕೇರಳದವರು ಇಲ್ಲಿನ ಫ‌ಲವತ್ತಾದ ಹೊಲಗಳಿಗೂ ಅರಣ್ಯದಂಚಿನ ಪ್ರದೇಶಗಳಿಗೂ ಲಗ್ಗೆಯಿಡುತ್ತಿದ್ದಾರೆ  ಶುಂಠಿ ಬೆಳೆಯಲಿಕ್ಕಾಗಿ. ಕೇರಳ ಶುಂಠಿ ಬೆಳೆಗಾರರ ಸಂಘದ ಅಂಕಿಸಂಖ್ಯೆಗಳ ಅನುಸಾರ, ಕೇರಳದ 13,000 ರೈತ ತಂಡಗಳು ಮಲೆನಾಡಿನಲ್ಲಿ ಶುಂಠಿ ಬೆಳೆದ ಪ್ರದೇಶದ ವಿಸ್ತೀರ್ಣ 50,000 ಹೆಕ್ಟೇರು! ಶಿಕಾರಿಪುರದಲ್ಲಿ ಶುಂಠಿ ಬೇಸಾಯ ಪ್ರದೇಶ 2013ರಲ್ಲಿದ್ದ 5,200 ಹೆಕ್ಟೇರಿನಿಂದ 2014ರಲ್ಲಿ 6,000 ಹೆಕ್ಟೇರಿಗೆ ಹೆಚ್ಚಳ. ಭತ್ತ, ಜೋಳ ಇತ್ಯಾದಿ ಆಹಾರದ ಬೆಳೆ ಬೆಳೆಯುತ್ತಿದ್ದ ಹೊಲಗಳು ಈಗ ಶುಂಠಿ ಬೆಳೆಗೆ ಬಳಕೆ.

ಹತ್ತು ವರುಷಗಳ ಮುಂಚೆ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಅರಣ್ಯದ ಅಂಚಿನ ಫ‌ಲವತ್ತಾದ ಜಮೀನಿನಲ್ಲಿ ಶುಂಠಿ ಬೆಳೆಯಲು ಶುರು ಮಾಡಿದ ಕೇರಳದ ಕೃಷಿಕರಿಗೆ ಲಾಭದ ರುಚಿ ಹತ್ತಿದೆ. ಉದಾಹರಣೆಗೆ, ಕೇರಳದ ವಯನಾಡಿನ ಸಿಬಿ ಥೋಮಸ್‌ ಶಿವಮೊಗ್ಗ ಜಿಲ್ಲೆಯಲ್ಲಿ ಈಗ ಹತ್ತು ಹೆಕ್ಟೇರ್‌ ಶುಂಠಿ ಹೊಲದ ಮಾಲೀಕ. ಅವರು ಶುಂಠಿ ಬೇಸಾಯ ಶುರು ಮಾಡಿದ್ದು ತನ್ನೂರಿನಲ್ಲಿ. ಅನಂತರ, ಕೊಡಗು, 

ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಅವರ ಶುಂಠಿ ಕೃಷಿಯ ವಿಸ್ತರಣೆ. ಕರ್ನಾಟಕ ರಾಜ್ಯ ಕೇರಳದ ಹಾಗಲ್ಲ. ಇಲ್ಲಿ ವಿಸ್ತಾರವಾದ ಜಮೀನು ಲೀಸಿಗೆ ಸಿಗುತ್ತದೆ ಮತ್ತು ಕೃಷಿಕಾರ್ಮಿಕರ ದಿನಮಜೂರಿ ಕಡಿಮೆ ಎನ್ನುತ್ತಾರೆ ಅವರು.

ಕೇರಳದ ಕೃಷಿಕರನ್ನು ಮಾತ್ರವಲ್ಲ. ಕರ್ನಾಟಕದ ಕೃಷಿಕರನ್ನೂ ಶುಂಠಿ ಬೇಸಾಯ ಆಕರ್ಷಿಸುತ್ತಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಎನ್‌. ಆರ್‌. ಲೋಕೇಶ್‌ ಕಳೆದ ಹಂಗಾಮಿನಲ್ಲಿ ಒಂದು ಹೆಕ್ಟೇರಿನಲ್ಲಿ ಶುಂಠಿ ಬೆಳೆದು ಗಳಿಸಿದ ಆದಾಯ ಬರೋಬ್ಬರಿ ರೂ.24 ಲಕ್ಷ. 

 

ಇಂತಹ ಭಾರೀ ಆದಾಯದ ನಿರೀಕ್ಷೆಯಲ್ಲಿ ಶುಂಠಿ ಬೆಳೆಯುವ ಹೊಲಗಳಿಗೆ ರಾಸಾಯನಿಕ ಗೊಬ್ಬರ ಹಾಗೂ ಪೀಡೆನಾಶಕಗಳನ್ನು (ಶಿಲೀಧ್ರನಾಶಕಗಳು, ಕೀಟನಾಶಕಗಳು ಮತ್ತು ಕಳೆನಾಶಕಗಳು) ಸುರಿಯುತ್ತಿದ್ದಾರೆ ರೈತರು. ಹಾಗಾಗಿ ಶುಂಠಿ ಬೆಳೆದು ಲಾಭ ಬಾಚಿಕೊಂಡ ಬಳಿಕ ಆ ಹೊಲವನ್ನು ಕೆಲವು ವರುಷ ಪಾಳುಬಿಡಬೇಕಾಗುತ್ತದೆ. (ಆ ವಿಷಭರಿತ ಜಮೀನಿನಲ್ಲಿ ಬೇರೆ ಬೆಳೆ ಬೆಳೆದರೆ, ಅದರ ಫ‌ಸಲಿನಿಂದಾಗಿ ಲೇಖನದ ಆರಂಭದಲ್ಲಿ ತಿಳಿಸಿದಂತಹ ಅಪಾಯ ಖಂಡಿತ.)

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಅಂಗವಾದ ಇಕಾಲಜಿ ವಿಜ್ಞಾನಗಳ ಕೇಂದ್ರವು ಕಳೆದ ವರುಷ ನಡೆಸಿದ ಅಧ್ಯಯನದ ಫ‌ಲಿತಾಂಶಗಳು ಅಂತಹ ಅಪಾಯ ಸಂಭವ(ರಿಸ್ಕ್)ವನ್ನು ಖಚಿತ ಪಡಿಸುತ್ತವೆ. ಶುಂಠಿ ಬೇಸಾಯದಲ್ಲಿ ವಿಷರಾಸಾಯನಿಕಗಳ ವಿವೇಚನಾರಹಿತ ಬಳಕೆಯಿಂದಾಗಿ ದಾಖಲಾಗಿರುವ ಅಪಾಯಗಳು: ಜೀವವೈವಿಧ್ಯದ ನಾಶ ಮತ್ತು ಮಣ್ಣು, ತೊರೆ, ನದಿ, ಸರೋವರಗಳ ಮಾಲಿನ್ಯ  ಇದು ಇಕಾಲಜಿ ವಿಜ್ಞಾನಗಳ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಅಧ್ಯಯನ ವರದಿ ತಂಡದ ಮುಂದಾಳು ಟಿ.ವಿ. ರಾಮಚಂದ್ರನ್‌ ನೀಡುವ ಮಾಹಿತಿ.

ಶುಂಠಿ ಬೇಸಾಯದ ಜಮೀನಿನ ಹತ್ತಿರದ ತೊರೆ ಮತ್ತು ಕೆರೆಗಳಿಂದ ಮೀನು, ಏಡಿ ಮತ್ತು ಕಪ್ಪೆಗಳು ಕಣ್ಮರೆ ಆಗುತ್ತಿವೆ. ವರದಾ, ಕುಮುದಾವತಿ, ತುಂಗಾ ಮತ್ತು ಭದ್ರಾ ನದಿಗಳ ನೀರು, ಶುಂಠಿ ಬೇಸಾಯ ಹೊಲಗಳಿಗೆ ಸುರಿದ ವಿಷರಾಸಾಯನಿಕಗಳಿಂದಾಗಿ ಕಲುಷಿತವಾಗುತ್ತಿದೆ. ಶುಂಠಿ ಬೇಸಾಯ ಪ್ರದೇಶದಲ್ಲಿ, ಮಿದುಳು, ಹೃದಯ, ಸಣ್ಣಕರುಳು ಮತ್ತು ಶ್ವಾಸಕೋಶಗಳ ಅನಾರೋಗ್ಯದ ಮತ್ತು ಅಲರ್ಜಿ ಚಿಕಿತ್ಸೆಗೆ ವೈದ್ಯರ ಬಳಿ ಬರುವವರ ಸಂಖ್ಯೆ ಹೆಚ್ಚುತ್ತಿದೆ. 

ಇಷ್ಟೆಲ್ಲ ಅನಾಹುತಗಳಿಗೆ ಕಾರಣವಾದ ಶುಂಠಿ ಕೃಷಿಯಿಂದಾಗಿ ದೊಡ್ಡ ಲಾಭ ಆಗಿರುವುದು ಪೀಡೆನಾಶಕಗಳ ಮಾರಾಟ ಮಳಿಗೆಗಳ ಮಾಲೀಕರಿಗೆ. ಶಿಕಾರಿಪುರದ ರಾಸಾಯನಿಕ ಗೊಬ್ಬರ ಮತ್ತು ಪೀಡೆನಾಶಕ ಮಳಿಗೆಯ ಮಾಲೀಕ ಎಸ್‌. ಮಂಜುನಾಥ…, ತನ್ನ ವ್ಯವಹಾರ ಕಳೆದ ಐದು ವರುಷಗಳಲ್ಲಿ ಶೇಕಡಾ 60 - 70 ಜಾಸ್ತಿಯಾಗಿದೆ ಎನ್ನುತ್ತಾರೆ.

 

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಆ ಅಧ್ಯಯನ ವರದಿಯು ಮಲೆನಾಡಿನಲ್ಲಿ ಪ್ರತಿ ವರುಷ ರೂಪಾಯಿ ಎರಡು ಕೋಟಿ ಬೆಲೆಯ ಪೀಡೆನಾಶಕಗಳು ಮಾರಾಟವಾಗುತ್ತಿವೆ ಎಂಬುದನ್ನು ಬಹಿರಂಗ ಪಡಿಸಿದೆ.

ಶುಂಠಿ ಬೆಳೆಸುವಾಗ ಹೆಕ್ಟೇರಿಗೆ ರೂ.8ರಿಂದ ರೂ.10 ಲಕ್ಷ$ ಖರ್ಚು ಮಾಡಬೇಕಾಗುತ್ತದೆ; ಹಾಗಾಗಿ ಕಿಲೋಗಟ್ಟಲೆ ವಿಷರಾಸಾಯನಿಕಗಳನ್ನು ಆ ಬೆಳೆಗೆ ಸುರಿಯಲೇ ಬೇಕಾಗುತ್ತದೆ ಎನ್ನುತ್ತಾರೆ ಶುಂಠಿ ಬೆಳೆಗಾರರು. ಸಾವಯವ ವಿಧಾನದಲ್ಲಿ ಶುಂಠಿ ಬೆಳೆದರೆ ವೆಚ್ಚ ಕಡಿಮೆ; ಫ‌ಸಲು ಕಡಿಮೆಯಾದರೂ ಲಾಭ ಕಡಿಮೆಯಾಗದು ಎನ್ನುತ್ತಾರೆ ಅನುಭವಿ ಬೆಳೆಗಾರರು. ನಾವು ಬೆಳೆಸುವ ಆಹಾರ ಆರೋಗ್ಯದಾಯಕ ಆಗಿರಬೇಕೇ ಅಥವಾ ವಿಷಭರಿತ ಆಗಿರಬೇಕೇ? ಇದುವೇ ಈಗಿನ ಸವಾಲು. ಮಣ್ಣು, ನೀರು, ಗಾಳಿ ಎಲ್ಲ ವಿಷಮಯವಾದರೆ ನಮಗಾರಿಗೂ ಉಳಿಗಾಲವಿಲ್ಲ, ಅಲ್ಲವೇ?

Published On: 30 September 2018, 09:32 AM English Summary: Ginger cultivation

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.