1. ತೋಟಗಾರಿಕೆ

ನುಗ್ಗೆಕಾಯಿ

ನುಗ್ಗೆಕಾಯಿ

ದಕ್ಷಿಣ ಭಾರತದ ಅಡಿಗೆಯಲ್ಲಿ ನುಗ್ಗೆಕಾಯಿ ವಿಶೇಷ ಸ್ಥಾನವನ್ನು ಹೊಂದಿದೆ. ನುಗ್ಗೆಕಾಯಿ ತೆಳ್ಳಗೆ ಉದ್ದವಿದ್ದು, ಡೊಳ್ಳು ಬಡೆಯುವ ಕೋಲಿನ ಆಕಾರ ಇರುವುದರಿಂದ ಆಂಗ್ಲ ಭಾಷೆಯಲ್ಲಿ `ಡ್ರಮಸ್ಟಿಕ್’ ಎಂದು ಕರೆಯುತ್ತಾರೆ. ನುಗ್ಗೆಯು ಮೊರಿಂಗೆಯೆ ಕುಟುಂಬಕ್ಕೆ ಸೇರಿದ್ದು, `ಮೊರಿಂಗಾ ಓಲಿಫೇರಾ’ ಸಸ್ಯನಾಮ. ಅತೀ ಪುಷ್ಟಿದಾಯಿಕ ತರಕಾರಿಗಳಲ್ಲಿ ನುಗ್ಗೆ ಪ್ರಧಾನವಾಗಿದೆ. ನುಗ್ಗೆಕಾಯಿ ವ್ಯಾಪಕವಾಗಿ ಸಾಂಬಾರಿನಲ್ಲಿ ಬಳಸಲಾಗುತ್ತದೆ. ಹಾಗೆಯೆ ನುಗ್ಗೆಕಾಯಿ ಸೊಪ್ಪನ್ನು ಪಲ್ಯವಾಗಿಯೂ ಬಳಸಲಾಗುತ್ತದೆ. ಕೆಲವು ಭಾಗಗಳಲ್ಲಿ ನುಗ್ಗೆ ಉಪ್ಪಿನಕಾಯಿ ತಯಾರಿಸಲಾಗುತ್ತದೆ. ಕಾಯಿ ಮಾತ್ರವಲ್ಲದೆ ನುಗ್ಗೆಯ ಹೂ, ಎಲೆಗಳು ಮತ್ತು ಬೀಜಗಳು ತಿನ್ನಲುಯೋಗ್ಯವಾಗಿರುತ್ತವೆ. ಕೆಲವು ಭಾಗಗಳಲ್ಲಿ ಅಡುಗೆಗೆ ಬಳಸುತ್ತಾರೆ.   ನುಗ್ಗೆಕಾಯಿಯ ಬೀಜಗಳನ್ನು ಒಣಗಿಸಿ ಹುರಿದು ತಿಂದರೆ ನೆಲೆಗಡಲೆಯ ಸ್ವಾದ ಭಾಸವಾಗಿರುತ್ತದೆ. ನುಗ್ಗೆ ಸೊಪ್ಪಿನಲ್ಲಿ ಜೀವಸತ್ವ ‘ಎ’ ಮೂಲವಾದ ಬೀಟಾಕ್ಯಾರೋಟಿನ್ ಇತರ ಎಲ್ಲ ಹಣ್ಣು-ತರಕಾರಿಗಳಿಗಿಂತಲೂ ಅತ್ಯಧಿಕವಾಗಿದೆ. 100 ಗ್ರಾಂ ಪೊಪ್ಪಿನಲ್ಲಿ 19,690 ಮೈಕ್ರೋಗ್ರಾಂ ಬಿಟಾಕೆರಿಟನ್ ಅಂಶ ಇರುತ್ತದೆ. ‘ಎ’ ಜೀವಸತ್ವದ ಮೂಲಗಳೆಂದು ಜನಪ್ರಿಯವಾಗಿರುವ ಹಸಿರು ತರಕಾರಿಗಳು (ಮೆಂತ್ಯೆ, ಪಾಲಕ್, ರಾಜಗಿರಿ) ಗಜ್ಜರಿ ಮತ್ತು ಮಾವಿನ ಹಣ್ಣುಗಳಿಗಿಂತ ಶೇ.10-100ರಷ್ಟು ಹೆಚ್ಚಿನ `ಬೀಟಾಕ್ಯಾರೋಟಿನ್’ ನುಗ್ಗೆ ಸೊಪ್ಪಿನಲ್ಲಿದೆ. ಇದಲ್ಲದೆ ನುಗ್ಗೆಸೊಪ್ಪಿನಲ್ಲಿ ‘ಸಿ’ಜೀವಸತ್ವವು ಇತರೆ ಸೊಪ್ಪು ಹಾಗೂ ಹಣ್ಣುಗಳಿಗಿಂತ (ನೆಲ್ಲಿಕಾಯಿಯನ್ನು ಹೊರತುಪಡಿಸಿ) ಅಧಿಕ ಪ್ರಮಾಣದಲ್ಲಿದೆ. ಹಾಗೆಯೇ ಕ್ಯಾಲ್ಸಿಯಂ(ಸುಣ್ಣ) ಕೂಡ ನುಗ್ಗೆಯಲ್ಲಿ ಹೇರಳವಾಗಿದೆ. ಪೋಷಕಾಂಶ ಭರಿತವಾದ ನುಗ್ಗೆ ಮತ್ತು ನುಗ್ಗೆಸೊಪ್ಪು ಎಲ್ಲಾ ಕಾಲದಲ್ಲಿಯೂ ನಿರಂತರವಾಗಿ ದೊರೆಯುವ ತರಕಾರಿಯಾಗಿದೆ. ಜೀವಸತ್ವ ‘ಎ’ ಕೊರತೆಯಿಂದಾಗುವ ಇರುಳುಗಣ್ಣು, ಕ್ಯಾಟರಾಕ್ಟ್ ಸಮಸ್ಯೆ ಹಾಗೂ ಇತರೆ ಅನೇಕ ತೊಂದರೆಗಳಿಗೆ ಸುಲಭವಾಗಿ ದೊರಕುವ ನುಗ್ಗೆ ಸೊಪ್ಪ ರಾಮಬಾಣವಾಗಬಲ್ಲದು. ನುಗ್ಗೆಸೊಪ್ಪನ್ನು ಇತರೆ ಸೊಪ್ಪುಗಳಂತೆ ಪಲ್ಯ ಮತ್ತು ಸಾಂಬಾರು ಮಾಡಲು ಬಳಸಬಹುದು. ನುಗ್ಗೆಸೊಪ್ಪುನ್ನು ಗೋದಿಹಿಟ್ಟಿನೊಂದಿಗೆ ಬೆರೆಸಿ ಚಪಾತಿಯನ್ನು ತಯಾರಿಸಬಹುದು. ಸೊಪ್ಪನ್ನು ಬಳಸುವಾಗ ಅದನ್ನು ಸ್ವಲ್ಪ ಎಣ್ಣೆಯೊಂದಿಗೆ ಬಿಸಿಮಾಡಿ ಬಳಸಿದಾಗ ಅದರಲ್ಲಿ ಬೀಟಾಕ್ಯಾರೋಟಿನ್ ಅಂಶವು ಸುಲಭವಾಗಿ ದೊರಕುತ್ತದೆ. ನುಗ್ಗೆಸೊಪ್ಪಿನಲ್ಲಿ ದೇಹಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳು ದೃಷ್ಠಿ, ರಕ್ತ, ಮೂಳೆ ಹಾಗೂ ಚರ್ಮದ ಆರೋಗ್ಯಕ್ಕೆ ಸಹಾಯವಾಗಿದೆ. ನುಗ್ಗೆಯಲ್ಲಿ ಪಾಲಿಫೀನಾಲ್ಸ್‍ಗಳು ಅಧಿಕವಾಗಿದ್ದು, ಆಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿರುವುದರಿಂದ ಹೃದಯ ಸಂಬಂಧಿರೋಗಗಳು ಮತ್ತು ಕ್ಯಾನ್ಸರ್ ಮುಂತಾದ ಸಮಸ್ಯೆಗಳನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ. ನುಗ್ಗೆಯು ವಿವಿಧ ಭಾಗಗಳು ಸೋಂಕು, ಮಲಬದ್ಧತೆ, ಸಂಧಿವಾತ, ಕಫಾ, ಜೀರ್ಣಾಂಗಗಳ ತೊಂದರೆ ಮೂತ್ರಕೋಶ ತೊಂದರೆ, ಲೈಂಗಿಕ ಸಮಸ್ಯೆ,, ಇತ್ಯಾದಿಗಳಲ್ಲಿ ಬಳಸುತ್ತಾರೆ.   ಸೌಂದರ್ಯವರ್ಧಕಗಳಲ್ಲಿಯೂ ಕೂಡಾ ನುಗ್ಗೆಯನ್ನು ಉಪಯೋಗಿಸಲಾಗುತ್ತದೆ. ಹೆಚ್ಚಾಗಿ ಬಳಸಲಾಗುವ ನುಗ್ಗೆಕಾಯಿ ಮಾತ್ರವಲ್ಲದೆ ಸುಲಭವಾಗಿ ದೊರೆಯುವ ನುಗ್ಗೆಸೊಪ್ಪು ಮತ್ತು ಹೂವನ್ನು ಸೇವಿಸುವುದು ಆರೋಗ್ಯವನ್ನು ಕಾಪಾಡಲು ಪರಿಣಾಮಕಾರಿಯಾಗಿದೆ. ಮನೆಯ ಹಿತ್ತಲಿನಲ್ಲಿ ಮತ್ತು ಹೊಲದ ಬದುವಿನಲ್ಲಿ ಸಾಮಾನ್ಯವಾಗಿ ಕಂಡುಬರುವ ನುಗ್ಗೆ ಗಿಡಗಳಿಂದ ನುಗ್ಗೆ ಸೊಪ್ಪನ್ನು ಯಾವುದೇ ದುಡ್ಡನ್ನು ಕೊಡದೆ ದಿನನಿತ್ಯದ ಅಡುಗೆಯಲ್ಲಿ, ಶಾಲೆ ಮತ್ತು ಅಂಗನವಾಡಿ ಬಿಸಿಯೂಟ ಕಾರ್ಯಕ್ರಮಗಳಲ್ಲಿ ಬಳಸುವುದರಿಂದ ಮಕ್ಕಳ ಮತ್ತು ಮಹಿಳೆಯರ ಆರೋಗ್ಯವನ್ನು ವೃದ್ಧಿಸುವುದು ಖಂಡಿತ.

ಮಣ್ಣು ಮತ್ತು ಹವಾಗುಣ :

ನುಗ್ಗೆ ಶುಷ್ಕವಲಯದ ಒಣ ಬೇಸಾಯದಲ್ಲಿ (ಬೆಳೆ ಉಳಿಸುವ ಮಟ್ಟದಲ್ಲಿ ನೀರು ಪೂರ್ಯೆಸಿದರೆ) ಶೀಘ್ರವಾಗಿ ಬೆಳೆಯುವ  ಬೆಳೆಯಾಗಿದೆ. ಇದು ಹೆಚ್ಚು ನೀರು ಅಥವಾ ತೇವಾಂಶವನ್ನು ಸಹಿಸುವುದಿಲ್ಲ. ಇದನ್ನು ಮನೆಯ ಕೈ ತೋಟದಲ್ಲಿಯೂ ಬೆಳೆಯಬಹುದು. ಇದಕ್ಕೆ ಮರುಳು ಮಿಶ್ರಿತ ಗೋಡುಮಣ್ಣು ಸೂಕ್ತ ಸವಳು ಭೂಮಿ ಸೂಕ್ತ. ಅಂದರೆ, ಮಣ್ಣಿನಲ್ಲಿ ಕ್ಷಾರದ ಅಂಶ4 ಡಿಎಸ್/ಮಿಗಿಂತ ಹೆಚ್ಚು ಇದ್ದರೆ ಇದಕ್ಕೆ ಒಗ್ಗುವುದಿಲ್ಲ. ಈ ಬೆಳೆಗೆ ಸೂಕ್ತವಾದ ಮಣ್ಣಿನ ರಸಸಾರ 6 ರಿಂದ 6.2 ಆಗಿದೆ.

ಬಿತ್ತನೆ ಕಾಲ:-

ಮಳೆಯಾಶ್ರಯದಲ್ಲಿ ಜೂನ್–ಜುಲೈ ತಿಂಗಳುಗಳಲ್ಲಿ ಬೀಜವನ್ನು ಬಿತ್ತನೆ ಮಾಡಬಹುದು. ನೀರಾವರಿ ಅನುಕೂಲತೆ ಇದ್ದರೆ ಬೀಜಗಳನ್ನು ವರ್ಷದ ಯಾವ ಸಮಯದಲ್ಲಾದರೂ ಬಿತ್ತನೆ ಮಾಡಬಹುದು. ಸೂಕ್ತ ಉಷ್ಣಾಂಶ 25-30, ಉಷ್ಣತೆ 40ಡಿಗ್ರಿಗಿಂತ ಹೆಚ್ಚು ಹಾಗೂ ಅತೀ ಕಡಿಮೆ ಉಷ್ಣತೆ ಇದಕ್ಕೆ ಸೂಕ್ತವಾಗಿರುವುದಿಲ್ಲ.

ತಳಿಗಳು:

1 . ಧನರಾಜ (ಸೆಲೆಕ್ಷನ್ 6/4)

  ಧಾರವಾಡದ ಕೃಷಿ ವಿಶ್ವವಿದ್ಯಾಲಯದಿಂದ ಬಿಡುಗಡೆಯಾದ ಗಿಡ್ಡ ತಳಿ, ತೆಂಗು ಮತ್ತು ಮಾವು ತೋಟಗಳಲ್ಲಿ ಅಂತರ ಬೆಳೆಯಾಗಿ, ಜಲಾನಯನ ಪ್ರದೇಶಗಳಲ್ಲಿ ಏಕ ಬೆಳೆಯಾಗಿ ಹಾಗೂ ಕೈತೋಟಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಬೀಜ ಬಿತ್ತಿದ ಕೇವಲ 9-10 ತಿಂಗಳುಗಳಲ್ಲಿ ಫಸಲು ಆರಮಭವಾಗುವುದು. 2ವರ್ಷದ ಗಿಡ, ಪ್ರತಿ ವರ್ಷ 250-300 ಕಾಯಿ ಕೊಡುವುದು. ಕಾಯಿಗಳು 35-40 ಸೆಂ.ಮೀ ಉದ್ದವಾಗಿ ಬೆಳೆಯುತ್ತವೆ.

  1. ಪಿ. ಕೆ. ಎಂ :- 1

ನುಗ್ಗೆ, ತಮಿಳುನಾಡಿನ ಗಿಡ್ಡ ಜಾತಿಯ ತಳಿ. ಇದರ ಕಾಯಿಗಳು ಹಸಿರಾಗಿ ಉದ್ದವಾಗಿರುತ್ತವೆ. 6- 12 ತಿಂಗಳಲ್ಲಿ ಫಸಲು ಕೊಡುತ್ತದೆ. ಸ್ವಾಧಿಷ್ಟವಾದ ರುಚಿಯನ್ನು ಹೊಂದಿರುತ್ತದೆ.

  1. ಪಿ. ಕೆ. ಎಂ :-2

ಇದು ತಮಿಳುನಾಡಿನ ಗಿಡ್ಡ ಜಾತಿಯ ತಳಿ. ಇದರ ಕಾಯಿಗಳು ಹಸಿರಾಗಿ ಉದ್ದವಾಗಿರುತ್ತವೆ. 6-12 ತಿಂಗಳಲ್ಲಿ ಫಸಲು ಕೊಡುತ್ತದೆ. ಕಾಯಿಗಳು ಹಸಿರಾಗಿದ್ದು 75-90ಸೆಂ.ಮೀ. ಉದ್ದವಿರುತ್ತವೆ. ಈ ತಳಿಯು ಗಿಡ ನೆಟ್ಟ 8-9ತಿಂಗಳಲ್ಲಿ ಫಸಲು ಪ್ರಾರಂಭವಾಗುತ್ತದೆ. ಸ್ವಾಧಿಷ್ಟವಾದ ರುಚಿಯನ್ನು ಹೊಂದಿರುತ್ತದೆ. ಪ್ರತಿ ಮರದಿಂದ ವರ್ಷಕ್ಕೆ 140-200 ಕಾಯಿಗಳನ್ನು ಪಡೆಯಬಹುದು.

  1. ಭಾಗ್ಯ(ಕೆ.ಡಿ.ಎಮ್-01)

ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಲ್ಲಿ ಈ ತಳಿಯನ್ನು ಬಿಡುಗಡೆ ಮಾಡಲಾಗಿದೆ. ಈ ತಳಿಯು ಮೂಲವಾಗಿ ಗಿಡ್ಡ ಜಾತಿಯಾಗಿದ್ದು ಗಿಡದ ಎತ್ತರ 2-4ಮೀ ವರೆಗೆ ಬೆಳೆಯುವುದು. ಗಿಡಗಳು ಶೀಘ್ರವಾಗಿ ಹೂ ಬಿಡುತ್ತವೆ. (100-110 ದಿನಗಳು ನಾಟಿ ಮಾಡಿದ ನಂತರ) ನಾಟಿ ಮಾಡಿದ 160-180 ದಿನಗಳ ನಂತರ ಕಾಯಿಗಳು ಕೊಯ್ಲಿಗೆ ಸಿದ್ಧವಾಗುತ್ತವೆ. ಪ್ರತಿ ಕಾಯಿಯು 60-70ಸೆಂ.ಮೀ. ಉದ್ದವಿದ್ದು, ಕಡುಹಸಿರು ಬಣ್ಣದೊಂದಿಗೆ ದುಂಡಗೆ ಇರುತ್ತದೆ. ಈ ತಳಿಯು ಅಕ್ಟೋಬರ್ ದಿಂದ ನವೆಂಬರ ತಿಂಗಳಲ್ಲಿ ಹೂ ಕಟ್ಟಿದ 40ದಿನಗಳ ನಂತರ ಕಾಯಿ ಕಟಾವಿಗೆ ಸಿದ್ಧವಾಗುವುದು. ಮುಂದೆ ಫೆಬ್ರುವರಿಯಿಂದ ಮಾರ್ಚ ತಿಂಗಳುಗಳಲ್ಲಿ ಹೂ ಕಟ್ಟಿ ಪುನಃ 40 ದಿನಗಳಲ್ಲಿ ಕಾಯಿಗಳು ಕೊಯ್ಲಿಗೆ ಸಿದ್ದವಾಗುತ್ತವೆ. ಪ್ರಥಮ ವರ್ಷದಲ್ಲಿ 350-400 ಕಾಯಿಗಳು ಹಾಗೂ ಎರಡನೇ ವರ್ಷದಿಂದ 800-1000 ಕ್ಕೂ ಹೆಚ್ಚು ಕಾಯಿಗಳು ಪ್ರತಿ ಗಿಡದಿಂದ ಪಡೆಯಬಹುದು.

ಮುಖ್ಯ ಭೂಮಿಯಲ್ಲಿ ಬೇಸಾಯ ಕ್ರಮಗಳು:-

   ಮುಖ್ಯ ಭೂಮಿಯಲ್ಲಿ 6 \ 6 ಅಡಿ ಅಥವಾ 8 \ 6 ಅಡಿ ಅಥವಾ 8 \ 8  ಅಥವಾ 10 \ 8 ಅಡಿ ಅತಂರದಲ್ಲಿ  ಒಂದೂವರೆ ಘನ ಅಡಿ ಗುಂಡಿಗಳನ್ನು ತೆಗೆದು ಮೇಲ್ಮಣ್ಣು ಹಾಗೂ ತಿಪ್ಪೆ ಗೊಬ್ಬರದ ಸಮ ಪ್ರಮಾಣ ಮಿಶ್ರಣದಿಂದ ತುಂಬಿ ಬೆಳೆಸಿದ  ಒಂದು ಸಸಿ ಅಥವಾ ಎರಡು ಬೀಜಗಳನ್ನು (2 ಸೆಂ . ಮೀ. ಆಳದಲ್ಲಿ) ಗುಂಡಿಯ ಮಧ್ಯದಲ್ಲಿ ನೆಡಬೇಕು.

 ಸಸಿಗಳಿಗೆ ಆರಂಭದಲ್ಲಿ ಕಂಬಳಿ ಹುಳಗಳ ಬಾಧೆ ತಡೆಯಲು 0.02 ಮೆಲಾಥಿಯಾನ್ ದ್ರಾವಣವನ್ನು ಸಿಂಪಡಿಸಬೇಕು. ಬೆಳೆಯುತ್ತಿರುವ ಸಸಿಗಳು ಗಾಳಿಯ ರಭಸಕ್ಕೆ ಬೀಳದಂತೆ ಕೋಲುಗಳನ್ನು ಆಸರೆಯಾಗಿ ಕಟ್ಟಬೇಕು. ಶಿಫಾರಸ್ಸು ಮಾಡಿದ ಗೊಬ್ಬರಗಳನ್ನು ವರ್ಷಕ್ಕೆ ಮೂರು ಹಂತದಲ್ಲಿ ಕೊಡಬಹುದು. ಮುಂಗಾರು ಆರಂಭದ ಜೂನ್ ತಿಂಗಳಲ್ಲಿ ಮೊದಲ ಕಂತು, ಸೆಪ್ಪೆಂಬರ್ ಹಾಗೂ ಡಿಸೆಂಬರ್ ತಿಂಗಳುಗಳಲ್ಲಿ ಕ್ರಮವಾಗಿ ಎರಡನೆ ಹಾಗೂ ಮೂರನೆ ಕಂತುಗಳಲ್ಲಿ ರಾಸಾಯನಿಕ ಗೊಬ್ಬರಗಳನ್ನು ಕೊಡಬಹುದು.

 ಪೂರ್ಣ ಮಳೆಯಾಶ್ರಿತ ಬೆಳೆಯಾದಲ್ಲಿ ಮುಂಗಾರು ಹಾಗೂ ಹಿಂಗಾರು ಮಳೆಗಾಲದಲ್ಲಿ ಎರಡು ಕಂತುಗಳಲ್ಲಿ ರಾಸಾಯನಿಕ ಗೊಬ್ಬರಗಳನ್ನು ಕೊಡಬೇಕು. ನೀರಾವರಿ ಬೆಳೆಯಾದಲ್ಲಿ ಹೆಚ್ಚು ನೀರು ಅಥವಾ ತೇವಾಂಶವನ್ನು ಭೂಮಿಯಲ್ಲಿ ನಿಲ್ಲದಂತೆ ಸಮಂಜಸ ಪ್ರಮಾಣದಲ್ಲಿ ನೀರುಣಿಸಬೇಕು. ಭೂಮಿಯನ್ನು ಕಳೆ ರಹಿತವಾಗಿಡಬೇಕು.  ಗಿಡದ ಬುಡದಲ್ಲಿ ಒಣ ಹುಲ್ಲಿನ ಹೊದಿಕೆಯಿಂದ ಕಳೆ ಹಾಗೂ ನೀರಿನ ತೇವಾಂಶವನ್ನು ನಿರ್ವಹಿಸಬಹುದು. ನಾಟಿ ಮಾಡಿದ ಆರು ತಿಂಗಳವರೆಗೆ ಹೂಗಳನ್ನು ಚಿವುಟಿ ತೆಗೆಯುತ್ತಿದ್ದರೆ ಗಿಡಗಳು ಚೆನ್ನಾಗಿ ಬೆಳೆಯುತ್ತವೆ. ಗಿಡಗಳು ಹೂವಿನ ಹಂತದಲ್ಲಿದ್ದಾಗ 20ಪಿಪಿಎಂ ಜಿ.ಎ ಅನ್ನು ಕಾಯಿ ಕಟ್ಟುವ ಸಮಯದಲ್ಲಿ ಸಿಂಪಡಿಸಿದರೆ ಅವುಗಳ ಗಾತ್ರ ಹೆಚ್ಚಿಸಬಹುದು.

ಗಿಡಗಳಿಗೆ ಆಕಾರ ಹಾಗೂ ಚಾಟನಿ:-

ಸಸಿ ನಾಟಿ ಮಾಡಿದ 2 ಅಥವಾ 3 ತಿಂಗಳುಗಳಲ್ಲಿ ಗಿಡದ ತುದಿಯನ್ನು ಚಿವುಟಿ ಹೆಚ್ಚು ಕವಲುಗಳು   ಬರುವಂತೆ ನೊಡಿಕೊಳ್ಳಬೇಕು. ನಂತರ ಗಿಡದ ಬೆಳವಣಿಗೆ ಅವಲಂಭಿಸಿ ಪ್ರತಿ ವರ್ಷ ಅಥವಾ ಎರಡು ವರ್ಷಕ್ಕೊಮ್ಮೆ ಕಾಯಿಗಳನ್ನು ಕಿತ್ತ ನಂತರ ನೆಲದಿಂದ 1ರಿಂದ 2ಅಡಿ ಎತ್ತರದಲ್ಲಿ ಗಿಡವನ್ನು ಪೂರ್ತಿಯಾಗಿ ಕಟಾವು ಮಾಡಿ ಒಂದೆರಡು ತಿಂಗಳು ವಿಶ್ರಾಂತಿ ಕೊಟ್ಟು ನಂತರ ಭೂಮಿಯನ್ನು ಹದ ಮಾಡಿ ಶಿಫಾರಸ್ಸು ಮಾಡಿದ ಗೊಬ್ಬರ ಕೊಟ್ಟು ನೀರನ್ನು ಹಾಯಿಸಬೇಕು. ಇದರಿಂದ ಬುಡದಲ್ಲಿ ಸಾಕಷ್ಟು ಚಿಗುರುಗಳು ಒಡೆಯುತ್ತವೆ. ಅವುಗಳಲ್ಲಿ ಸಧೃಡವಾದ ಸಮಾನ ಅಂತರದಲ್ಲಿರುವ 4ರಿಂದ 5 ಚಿಗುರುಗಳನ್ನು ಬೆಳೆಯಲು ಬಿಟ್ಟು ಉಳಿದವುಗಳನ್ನು ತೆಗೆದು ಹಾಕಬೇಕು. ಈ ಚಿಗುರುಗಳು ಸುಮಾರು ಎರಡುಮೂರು ಅಡಿ ಎತ್ತರವಾದಾಗ ಅವುಗಳ ತುದಿಯನ್ನು ಚಿವುಟಿ ಕವಲು ಟೊಂಗೆಗಳು ಬರುವಂತೆ ನೋಡಿಕೊಳ್ಳಬೇಕು.

ಅಂತರ ಬೆಳೆ:

ನುಗ್ಗೆಯನ್ನು ಇತರೆ ಬಹುವಾರ್ಷಿಕ ಬೆಳೆಗಳ ಆರಂಭದ ವರ್ಷಗಳಲ್ಲಿ ಅಥವಾ ನುಗ್ಗೆಯ ಬೆಳೆಯಲ್ಲಿ ವಾರ್ಷಿಕ ಬೆಳೆಗಳಾದ ಟೊಮೆಟೊ, ಬದನೆ, ಬೆಂಡಿ, ಗಜ್ಜರಿ, ಎಲೆಕೊಸು, ಮೂಲಂಗಿ, ಸೌತೆ, ಇತ್ಯಾದಿ ಬೆಳೆಗಳನ್ನು ಅಂತರ ಬೆಳೆಗಳಾಗಿ ಬೆಳೆಯಬಹುದು. ನುಗ್ಗೆ ಚಾಟನಿ ಮಾಡಿದ 3ರಿಂದ 4 ತಿಂಗಳುಗಳಲ್ಲಿ ಈ ವಾರ್ಷಿಕ ಬೆಳೆಗಳನ್ನು ಬೆಳೆದು ಕಟಾವು ಮಾಡಬಹುದು.

ಸಸ್ಯ ಸಂರಕ್ಷಣೆ ಕ್ರಮಗಳು :

ಕೀಟಗಳು: ಹೇನು, ಕಪ್ಪು ಕಂಬಳಿಹುಳು, ಕಾಯಿನೊಣ, ಬೂದು ಕಂಬಳಿ ಹುಳು, ಹೂ ಮೊಗ್ಗಿನ ಕೊರಕ, ಗೊಣ್ಣೆಹುಳು (ಬೇರು ಹುಳು), ಕಾಂಡ ಕೊರಕ.

ರೋಗಗಳು:

ಬೂದಿ ರೋಗ, ಎಲೆ ಚುಕ್ಕೆ ರೋಗ, ಬೇರು ಕೊಳೆಯುವ ರೋಗ. ಬೆಳೆದ ಗಿಡಗಳಲ್ಲಿ ಬೂದಿ ರೋಗದ ನಿವಾರಣೆಗಾಗಿ 3ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಕರಗುವ ಗಂಧಕವನ್ನು ಹಾಗೂ ಕಾಯಿಯ ಬೆಂಕಿ ರೋಗ ನಿವಾರಣೆಗಾಗಿ 2ಗ್ರಾಂ ಪ್ರತಿ ಲೀಟರ್ ನೀರಿಗೆ ಕ್ಲೊರ್‍ಥಲಾನಿನ್ ಸಿಂಪರಣೆಗಳನ್ನು ಬಳಸಬೇಕು. ಸಸ್ಯ ಹೇನು ಹಾಗೂ ಎಲೆ ತಿನ್ನುವ ಕೀಟಗಳ ಹತೋಟಿಗಾಗಿ 2ಮಿ.ಲೀ. ಅಸಿಪೆಟ್ ಅಥವಾ 1.5ಮಿ.ಲೀ. ಟ್ರೈಜೊಪಾಸ್‍ನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ನುಗ್ಗೆ ಕಾಯಿಗಳಿಗೆ ಗಿಟೋನಾ ಕೀಟದ ಬಾಧೆ ಕಂಡು ಬಂದಾಗ ಡೈಕ್ಲೊರೊವಾಸ್ (0.04%)ನ್ನು ಸಿಂಪಡಿಸಬಹುದು. ಜೂನ್-ಜುಲೈ, ಜನವರಿ-ಫೆಬ್ರವರಿಯಲ್ಲಿ ಗಿಡಗಳು ಹೊಸದಾಗಿ ಚಿಗುರಿದಾಗ 2ಮಿ.ಲೀ. ಮೆಲಾಥಿಯಾನ್ ಪ್ರತಿ ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಕೊಯ್ಲು ಮತ್ತು ಇಳುವರಿ :

                ನುಗ್ಗೆ ನಾಟಿ ಮಾಡಿದ ಆರರಿಂದ ಎಂಟು ತಿಂಗಳುಗಳಲ್ಲಿ ಕಾಯಿಗಳು ಕಟಾವಿಗೆ ಸಜ್ಜಾಗಿ 2- 3ತಿಂಗಳುಗಳ ಕಾಲ ಕಟಾವು ಮಾಡಬಹುದು. ಕಾಯಿಗಳು ಪೂರ್ಣ ಪ್ರಮಾಣದಲ್ಲಿ ಬೆಳವಣಿಗೆ ಹೊಂದಿ, ಗೆರೆಗಳು ತುಂಬಿಕೊಂಡಾಗ ಹಸಿರು ಬಣ್ಣವಿರುವಾಗ ಕಟಾವು ಮಾಡಬೇಕು. ಪ್ರತಿ ಗಿಡಕ್ಕೆ 300 ರಿಂದ 500 ಕಾಯಿಗಳನ್ನು, ಅಂದರೆ 25 ರಿಂದ 30 ಕಿ.ಗ್ರಾಂ. (ತಳಿಗನುಗುಣವಾಗಿ) ಹಾಗೂ ಎಕರೆಗೆ ಸುಮಾರು 25ರಿಂದ 30ಟನ್ ಇಳುವರಿಯನ್ನು ಪಡೆಯಬಹುದು. ಕೊಯ್ಲಿನ ನಂತರ ಕಾಯಿಗಳನ್ನು 8-10% ರಂಧ್ರವಿರುವ ಪಾಲಿಥಿನ್ ಚೀಲಗಳಲ್ಲಿ ಸುಮಾರು 10-12 ದಿನಗಳವರೆಗೆ ಶೇಖರಿಸಿ ಮಾರಾಟ ಮಾಡಬಹುದು.

 

Published On: 01 November 2018, 12:15 PM English Summary: DRUMSTICK

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.