1. ಇತರೆ

“ದೈನಂದಿನ ಆಹಾರದಲ್ಲಿ ಬೆಳಗಿನ ಉಪಹಾರದ ಪ್ರಾಮುಖ್ಯತೆ”

idly

ಆಹಾರ ಸೇವನೆ ನಮ್ಮ ಜೀವನದ ಮುಖ್ಯ ಅಂಶಗಳಲ್ಲಿ ಒಂದು. ಇದು ಜೀವನದ ಅಗತ್ಯವೂ ಹೌದು. ನಾವು ಸೇವಿಸುವ ಆಹಾರ ನಮ್ಮ ಆರೋಗ್ಯದ ಮೇಲೆ ಬಹುದೊಡ್ಡ ಪಾತ್ರ ಬೀರುತ್ತದೆ. ಬೆಳಗಿನ ಉಪಹಾರವನ್ನು ದಿನದ ಪ್ರಮುಖ ಆಹಾರವೆಂದು ಪರಿಗಣಿಸಲಾಗಿದೆ. ಇದು ನಮ್ಮ ಜೀವರಾಸಾಯನಿಕ ಕ್ರಿಯೆಗೆ ಚಾಲನೆ ನೀಡಲು ಸಹಾಯ ಮಾಡುತ್ತದೆ ಮತ್ತು ಪೂರ್ಣ ದಿನ ನಮಗೆ ಚೈತನ್ಯ ನೀಡುತ್ತದೆ. ಬೆಳಗಿನ ಆರೋಗ್ಯಕರ ನಿಯಮಿತ ಉಪಹಾರ ಸೇವನೆಯಿಂದ ಸಂಪೂರ್ಣ ದಿನವು ಲವಲವಿಕೆಯಿಂದ ಕೂಡಿದ್ದು, ದಿನದ ಕೆಲಸ ಕಾರ್ಯಗಳಲ್ಲಿ ಚಟುವಟಿಕೆಯಿಂದ ಇರಲು ಸಾಧ್ಯ. ಆರೋಗ್ಯಕರ ಜೀವನಕ್ಕೆ ನಾಂದಿ ಎಂದು ಹೇಳಬಹುದು.

ಉತ್ತಮ ಆರೋಗ್ಯಕ್ಕೆ ಒಳ್ಳೆಯ ಆಹಾರ ಮುಖ್ಯವಾಗಿದೆ. ಆರೋಗ್ಯಕರ ಜೀವನಕ್ಕಾಗಿ ಬೆಳಗಿನ ಉಪಹಾರ ಅತೀ ಅವಶ್ಯಕ. ರಾತ್ರಿ ಇಡೀ ಉಪವಾಸವಿರುವ ದೇಹ ಹಾಗೂ ವ್ಯವಸ್ಥೆಗೆ ಇಂಧನ ದೊರೆಯುವ ಆಹಾರವೇ ಈ ಬೆಳಗಿನ ತಿಂಡಿ. ಅದಕ್ಕಾಗಿ ಇಂಗ್ಲೀಷ್‌ನಲ್ಲಿ ಬ್ರೇಕ್‌ಫಾಸ್ಟ್ ಅಂದರೆ ಉಪವಾಸವ ಬ್ರೇಕ್ ಮಾಡುವುದೇ ಬ್ರೇಕ್‌ಫಾಸ್ಟ್. ಬೆಳಗಿನ ತಿಂಡಿ ಇಲ್ಲದೇ ದಿನದ ಪ್ರಾರಂಭ ಮಾಡಿದರೆ ಅದು ಇಂಧನವಿಲ್ಲದ ವಾಹನ ಚಾಲನೆ ಮಾಡಿದಂತೆ. ನಮ್ಮ ಮಿದುಳಿನ ಮೇಲೆ ಒತ್ತಡ ಉಂಟಾಗುವುದಲ್ಲದೇ ದೇಹದ ಚಯಾಪಚಯ ಕ್ರಿಯೆಯ ಮೇಲೆಯೂ ಪರಿಣಾಮ ಬೀರುತ್ತದೆ. ಬೆಳಗಿನ ತಿಂಡಿ ಅರಸನಂತೆಯೂ, ಮಧ್ಯಾಹ್ನದ ಊಟ ಕಾರ್ಮಿಕನಂತೆಯೂ, ರಾತ್ರಿಯೂಟ ಸಂತನAತೆಯೂ ಇರಬೇಕು. ಒಂದುವೇಳೆ ಊಟವನ್ನು ತಪ್ಪಿಸಬಹುದು ಆದರೆ ಬೆಳಗಿನ ತಿಂಡಿಯನ್ನು ತಪ್ಪಿಸಬಾರದು. ಬೆಳಗಿನ ತಿಂಡಿ ಆಯೋಜಿಸಿಕೊಳ್ಳುವುದು ಜಾಣ್ಮೆಯ ಕೆಲಸ. ಬೆಳಿಗ್ಗೆ ನಾವು ಯಾವ ಆಹಾರವನ್ನು ಸೇವಿಸುತ್ತೇವೆ ಎನ್ನುವುದರ ಮೇಲೆ ನಮ್ಮ ಆರೋಗ್ಯ ಅವಲಂಬಿತವಾಗಿದೆ. ಬೆಳಗಿನ ಉಪಹಾರ ಬಹಳ ಮಹತ್ವದ್ದು.

ಬೆಳಗಿನ ಉಪಹಾರ ಏಕೆ ಮುಖ್ಯ:

ಬೆಳಗಿನ ಉಪಹಾರ ಮಾಡುವುದರಿಂದ ಹಲವಾರು ಪ್ರಯೋಜನÀಗಳಿದ್ದು, ಇದರಿಂದ ದೇಹ ಮತ್ತು ಮೆದುಳಿಗೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ. ಇದು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ದಿನವಿಡೀ ಪದೇ ಪದೇ ತಿನ್ನುವ ಹಂಬಲವನ್ನು ಕಡಿಮೆ ಮಾಡುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು  ಹೆಚ್ಚಿಸುತ್ತದೆ. ಬೆಳಗಿನ ಉಪಹಾರದಲ್ಲಿ ಹಣ್ಣು, ತರಕಾರಿ, ಲಿಂಬೆ, ನೀರು, ಸಾಕಷ್ಟು ನಾರು ಇರುವ ಆಹಾರಗಳು, ಹಾಲು, ಮೊಸರು ಮೊದಲಾದವುಗಳನ್ನು ಸೇವಿಸಿದರೆ ರೋಗ ನಿರೋಧಕ ಶಕ್ತಿ ಅತ್ತುತ್ಯಮವಾಗುತ್ತದೆ. ಬೆಳಗಿನ ಉಪಹಾರ ಸೇವನೆಯಿಂದ ಮಕ್ಕಳಲ್ಲಿ ಉತ್ತಮ ಬೆಳವಣಿಗೆಯೊಂದಿಗೆ, ಶಾಲೆಯಲ್ಲಿ ಏಕಾಗ್ರತೆ ಹೆಚ್ಚಿಸುತ್ತದೆ ಹಾಗೂ ಶೈಕ್ಷಣಿಕ ಕಾರ್ಯಕ್ಷಮತೆ ವೃದ್ಧಿಯಾಗಿ, ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಹೆಚ್ಚಾಗಿ, ಸ್ಥೂಲಕಾಯತೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಸಂಪೂರ್ಣ ದಿನ ಲವಲವಿಕೆಯಿಂದಿರಲು ಸಹಾಯ ಮಾಡುತ್ತದೆ.

ಬೆಳಗಿನ ತಿಂಡಿಯು ಹೇಗೆ, ಯಾವಾಗ ಮಾಡಬೇಕು?

ಬೆಳಗಿನ ತಿಂಡಿಯು ಹೇಗೆ, ಯಾವಾಗ ಮಾಡಬೇಕು ಎಂದು ತಿಳಿಯುವುದು ಅತೀ ಮುಖ್ಯ. ಬೆಳಿಗ್ಗೆ ಎದ್ದ ನಂತರ ಎರಡು ಗಂಟೆಯೊಳಗೆ ನಾವು ನಮ್ಮ ತಿಂಡಿಯನ್ನು ಸೇವಿಸಬೇಕು. ಈ ತಿಂಡಿಯಲ್ಲಿ ಒಳ್ಳೆಯ ಗುಣಮಟ್ಟದ ಸಸಾರಜನಕ ಹಾಗೂ ಅವಶ್ಯಕ ಪೋಷಕಾಂಶಗಳು ಯತೇಚ್ಛವಾಗಿ ಇರಬೇಕು. ಬೆಳಗಿನ ಸಮಯದಲ್ಲಿ ನಮ್ಮ ದೇಹಕ್ಕೆ ಶಕ್ತಿ ಅವಶ್ಯಕತೆ ಹೆಚ್ಚಿಗೆ ಇರುತ್ತದೆ ಮತ್ತು ಎಷ್ಟೇ ತಿಂದರೂ ಜೀರ್ಣಿಸಿಕೊಳ್ಳಲು ಸುಲಭ ಕೂಡ. ಬೆಳಗಿನ ತಿಂಡಿಯ ಜೊತೆಗೆ ಒಂದು ಬಟ್ಟಲು ಹಸಿ ತರಕಾರಿ ಅಥವಾ ಹಣ್ಣು ಇದ್ದರೆ ತುಂಬಾ ಒಳ್ಳೆಯದು. ಸರಿಯಾದ ಸಮಯಕ್ಕೆ ತಿಂಡಿ ಸೇವನೆ ಮಾಡುವುದು ಅತೀ ಮುಖ್ಯ. ಇದರಿಂದ ಮೆದುಳಿಗೆ ಸರಿಯಾದ ಪ್ರಮಾಣದಲ್ಲಿ ಗ್ಲೂಕೋಸ್ ದೊರೆತು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯ. ಉಪಹಾರವನ್ನು ಸೇವಿಸಿದರೆ ದೇಹಕ್ಕೆ ಶಕ್ತಿ ಸಿಗುತ್ತದೆ. ಇದರಿಂದ ದಿನವಿಡಿ ಉಲ್ಲಾಸದಿಂದ ಕೆಲಸ ಮಾಡಬಹುದು. ಆದರೆ ಸೇವಿಸುವ ಉಪಹಾರ ಆರೋಗ್ಯಕರವಾಗಿರಬೇಕು.

ಬೆಳಗಿನ ತಿಂಡಿಯು ಹೇಗಿರಬೇಕು?

ಬೆಳಗಿನ ತಿಂಡಿ ಆರೋಗ್ಯಕರವಾಗಿರಲಿ, ಬೆಳಗಿನ ತಿಂಡಿಯಲ್ಲಿ ಹೆಚ್ಚು ಪ್ರೋಟೀನ್ ಭರಿತ ಆಹಾರಕ್ಕೆ ಆದ್ಯತೆ ಇರಲಿ. ಮೊಳಕೆಭರಿತ ಕಾಳು, ಬೇಳೆಕಾಳು ಬೆರೆಸಿ ತಯಾರಿಸಿದ ತಿಂಡಿಗಳಾದ ಇಡ್ಲಿ, ದೋಸೆ, ಪೊಂಗಲ್ ಉತ್ತಮ. ಬೆಳಗಿನ ಉಪಹಾರದಲ್ಲಿ ಪೋಷಕಾಂಶಗಳು ಹೆಚ್ಚಾಗಿರುವಂತೆ ನೋಡಿಕೊಳ್ಳಬೇಕು. ಹಸಿ ತರಕಾರಿ ಹಾಗೂ ಹಣ್ಣುಗಳನ್ನು ತಿನ್ನುವುದು ಹೆಚ್ಚು ಉಪಯುಕ್ತ. ಇದರಿಂದ ದೇಹಕ್ಕೆ ಬೇಕಾಗಿರುವ ಎಲ್ಲಾ ತರಹದ ವಿಟಮಿನ್‌ಗಳು, ಲವಣಾಂಶಗಳು ಮತ್ತು ನಾರಿನಾಂಶವು ದೊರಕುತ್ತದೆ. ಬೆಳಗಿನ ತಿಂಡಿಯಲ್ಲಿ ನಾರಿನಾಂಶ, ಪ್ರೋಟೀನ್, ಕಾರ್ಬೋಹೈಡ್ರೇಟ್, ಕ್ಯಾಲ್ಷಿಯಂ ಹಾಗೂ ಕಬ್ಬಿಣಾಂಶದಿAದ ತುಂಬಿರಬೇಕು. ಚಪಾತಿ, ಅವಲಕ್ಕಿ, ಮೊಳಕೆಕಾಳು, ಹಣ್ಣುಗಳ ಸಲಾಡ್, ಹಾಲು, ಮೊಸರು, ಇಡ್ಲಿ, ದೋಸೆ, ಪೊಂಗಲ್ ಇತ್ಯಾದಿ. ಪ್ರತಿದಿನದ ಉಪಹಾರದಲ್ಲಿ ಬದಲಾವಣೆ ಮಾಡುವುದರಿಂದ ವೈವಿಧ್ಯಮಯ ಪೋಷಕಾಂಶಗಳ ಲಭ್ಯತೆ ಆಗುತ್ತದೆ. ಬೆಳಗಿನ ತಿಂಡಿಯಲ್ಲಿ ಕರಿದ ಪದಾರ್ಥಗಳನ್ನು, ಮೈದಾ ಹಿಟ್ಟು ಬಳಸಿ ತಯಾರಿಸಿದ ಪದಾರ್ಥಗಳನ್ನು, ಕೃತಕ ಹಣ್ಣಿನ ಜ್ಯೂಸ್, ಮಾಂಸ ಬಳಸಿದ ಆಹಾರ ಹಾಗೂ ಹೆಚ್ಚು ಸಿಹಿ ಪದಾರ್ಥಗಳನ್ನು ವರ್ಜಿಸುವುದು ಒಳ್ಳೆಯದು.

ಉಪಹಾರವನ್ನು ತ್ಯಜಿಸುವುದರಿಂದ ಆರೋಗ್ಯದ ಮೇಲೆ ಆಗುವ ಪರಿಣಾಮ:

ಕೆಲವರು ದಿನದ ಉಪಹಾರನ್ನು ಕೆಲಸದ ಒತ್ತಡದಿಂದಲೋ ಅಥವಾ ದೇಹದ ತೂಕ ಇಳಿಸುವ ಉದ್ದೇಶಕ್ಕಾಗಿ ತ್ಯಜಿಸುತ್ತಾರೆ. ಇದರಿಂದ ಆರೋಗ್ಯದ ಮೇಲೆ ಅನೇಕ ರೀತಿಯಿಂದ ಪರಿಣಾಮ ಬೀರುತ್ತದೆ. ದೀರ್ಘ ಕಾಲದವರೆಗೆ ಉಪವಾಸವಿರುವುದರಿಂದ ಹೊಟ್ಟೆಯಲ್ಲಿ ಯಾವುದೇ ಆಹಾರವಿರದಿರುವುದರಿಂದ ದೇಹದಲ್ಲಿ ಶಕ್ತಿ ಕುಂದುವುದಕ್ಕೆ ಕಾರಣವಾಗಬಹುದು, ಮನಸ್ಸಿಗೆ ಕಿರಿ ಕಿರಿ, ತಲೆನೋವು, ಸಿಟ್ಟು ಬರುವುದು ಹಾಗೂ ಏಕಾಗ್ರತೆಯಲ್ಲಿ ಕೊರತೆ ಕಂಡುಬರುತ್ತದೆ. ಉಪಹಾರ ತ್ಯಜಿಸುವುದರಿಂದ ದೇಹದ ತೂಕ ಇಳಿಯುವ ಬದಲಾಗಿ ಹೆಚ್ಚಾಗುವ ಸಾಧ್ಯತೆ ಇದೆ. ಕಾರಣ ಉಪಹಾರ ತ್ಯಜಿಸಿದ್ದಕ್ಕಾಗಿ ದಿನವಿಡೀ ಅನೇಕ ಕರಿದ ಅಥವಾ ಜಂಕ್ ಫುಡ್ ತಿನ್ನುವ ಸಾಧ್ಯತೆಯೇ ಹೆಚ್ಚು. ಬೆಳಗಿನ ಉಪಹಾರ ತ್ಯಜಿಸುವುದರಿಂದ ಮಾನಸಿಕ ತಳಮಳ, ಕೆಲಸದಲ್ಲಿ ಆಸಕ್ತಿ ಇಲ್ಲದಿರುವುದು, ಸುಸ್ತು, ಬೊಜ್ಜು ಬರುವ ಸಾಧ್ಯತೆ ಹೆಚ್ಚು. ಹೃದಯ ಕಾಯಿಲೆಯ ಅಪಾಯ ಹೆಚ್ಚಿಸುತ್ತದೆ. ಕಾರಣವೇನೆಂದರೆ ದೀರ್ಘಕಾಲದವರೆಗೆ ದೇಹವು ಉಪವಾಸವಿದ್ದಾಗ, ದೇಹಕ್ಕೆ ಮತ್ತಷ್ಟು ಒತ್ತಡ ಹೇರುತ್ತದೆ ಹಾಗೂ ಕಠಿಣ ಕೆಲಸ ಮಾಡುವಂತೆ ಮಾಡಿ, ಚಯಾಪಚಯದಲ್ಲಿ ವ್ಯತ್ಯಯ ಉಂಟು ಮಾಡುತ್ತದೆ ಹಾಗೂ ಹೃದಯಾಘಾತದ ಸಮಸ್ಯೆಗೆ ಕಾರಣವಾಗುತ್ತದೆ. ಮಧುಮೇಹಿಗಳು ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ದಿನನಿತ್ಯದ ಒಟ್ಟು ಆಹಾರವನ್ನು ಒಂದೇ ಬಾರಿಗೆ ಸೇವಿಸುವ ಬದಲು ಸ್ವಲ್ಪ ಸ್ವಲ್ಪವಾಗಿ ಸೇವಿಸಬೇಕು. ಅವರು ದಿನದ ಉಪಹಾರ ತ್ಯಜಿಸಿ, ಒಮ್ಮೇಲೆ ಊಟ ಮಾಡಿದಾಗ, ಹೆಚ್ಚಿನ ಪ್ರಮಾಣದ ಆಹಾರವನ್ನು ಒಂದೇ ಬಾರಿಗೆ ಸೇವಿಸಿದಾಗ, ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿ ಅಪಾಯ ತಂದೊಡ್ಡುತ್ತದೆ ಹಾಗೂ ಉಪವಾಸವಿದ್ದಾಗ, ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿ, ಅದೂ ಕೂಡ ಅಪಾಯ ತಂದೊಡ್ಡುತ್ತದೆ. ಅಸಮತೋಲನದಿಂದಾಗಿ ಇನ್ಸುಲಿನ್ ಅಸಹಿಷ್ಣುತೆ ಉಂಟಾಗಬಹುದು.

ಆದ್ದರಿಂದ ಬೆಳಗಿನ ಉಪಹಾರ ಅತೀ ಅವಶ್ಯಕವಿದ್ದು, ಅಗತ್ಯ ಪೋಷಕಾಂಶಗಳನ್ನು ಒದಗಿಸುವಂತಿರಬೇಕು. ಜಾಣ್ಮೆಯಿಂದ ಬೆಳಗಿನ ಉಪಹಾರವನ್ನು ಪ್ಲಾನ್ ಮಾಡಿ, ಆಹಾರ ತಯಾರಿಕೆಯ ಪದ್ದತಿಯಲ್ಲಿಯೂ ಕೂಡ ಕಾಳಜಿವಹಿಸಿ, ಶುಚಿತ್ವದೊಂದಿಗೆ ರುಚಿಕರವಾಗಿ ತಯಾರಿಸಿ ಸೇವಿಸುವದರಿಂದ  ಉತ್ತಮ ಆರೋಗ್ಯವನ್ನು ಪಡೆಯಬಹುದು.

ಲೇಖನ: ಡಾ. ಲತಾ ಆರ್. ಕುಲಕರ್ಣಿ, ಡಾ. ಸವಿತಾ ಎಸ್. ಮಂಗಾನವರ, ಶ್ರೀಮತಿ. ಪ್ರೀತು, ಡಿ. ಸಿ. ಮತ್ತು ರಂಗನಾಥ, ಎಸ್. ಸಿ.  ಭಾ.ಕೃ.ಅನು.ಪ.-ಕೃಷಿ ವಿಜ್ಞಾನ ಕೇಂದ್ರ, ಚಂದೂರಾಯನಹಳ್ಳಿ, ಕಲ್ಯಾ ಪೋಸ್ಟ್, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ

Published On: 08 July 2021, 10:11 PM English Summary: breakfast special

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.