1. ಪಶುಸಂಗೋಪನೆ

ಮಳೆ ಬೀಳುವ ದಿನಗಳಲ್ಲಿ ದನಕರುಗಳ ಬಗ್ಗೆ ಇರಲಿ ಎಂದಿಗಿಂತ ಹೆಚ್ಚು ಕಾಳಜಿ

Basavaraja KG
Basavaraja KG

ಮಳೆಗಾಲ ಆರಂಭವಾದರೆ ರೈತರಿಗೆ ಎಲ್ಲಿಲ್ಲದ ಸಂಭ್ರಮ. ಮೊದಲ ಮಳೆ ಭೂಮಿಗೆ ಬೀಳುತ್ತಿದ್ದಂತೆ ಕೃಷಿ ಕ್ಷೇತ್ರದಲ್ಲಿ ಚಟುವಟಿಕೆಗಳು ಕುಡಿಯೊಡೆಯುತ್ತವೆ. ಒಂದೆಡೆ ಮಳೆಯಿಂದಾಗಿ ಕೃಷಿಕರು ಪುಳಕಿತರಾದರೆ, ಮತ್ತೊಂದೆಡೆ ಇದೇ ಮಳೆ ದನಕರುಗಳಲ್ಲಿ ನವ ಚೈತನ್ಯ ತುಂಬುತ್ತದೆ. ಮಳೆಯಾದರೆ ಬಯಲು, ಹೊಲದ ಬದು, ರಸ್ತೆ ಬದಿಗಳಲ್ಲಿ ಹುಲ್ಲು ಹುಲುಸಾಗಿ ಬೆಳೆಯುತ್ತದೆ ಎಂಬುದು ದನಕರುಗಳ ಖುಷಿಗೆ ಕಾರಣ.

ಆದರೆ ಮಳೆಗಾಲ ಜಾನುವಾರುಗಳಿಗೆ ಭರಪೂರ ಮೇವು ಒದಗಿಸುವ ಜೊತೆ ಜೊತೆಗೇ, ಮೂಕ ಪ್ರಾಣಿಗಳಿಗೆ ಹಲವು ಕಾಯಿಲೆಗಳನ್ನೂ ತಂದೊಡ್ಡುತ್ತದೆ. ಮನುಷ್ಯನಿಗೆ ಏನೇ ಅನಾರೋಗ್ಯ ತೊಂದರೆ ಕಂಡುಬAದರೂ ಆತ ಹೇಳಿಕೊಳ್ಳುತ್ತಾನೆ. ತನಗೆ ಇಂಥ ಭಾಗದಲ್ಲಿ ನೋವಿದೆ, ಆಯಾಸವಾಗುತ್ತಿದೆ, ಮೈ ಬಿಸಿಯಾಗಿದೆ ಎಂದು ಆತ ವಿವರಿಸಿ ಹೇಳಬಲ್ಲ. ಆದರೆ ಮಾತು ಬಾರದ ಜಾನುವಾರುಗಳಿಗೆ ಇದು ಸಾಧ್ಯವಾಗುವುದಿಲ್ಲ. ಹೀಗಾಗಿ ಮಳೆಗಾಲ ಆರಂಭವಾಗುತ್ತಿದ್ದAತೆ ಜಾನುವಾರುಗಳನ್ನು ಜತನ ಮಾಡುವಿಕೆ ಮತ್ತು ಅವುಗಳ ಕಾಳಜಿ ಮತ್ತಷ್ಟು ಚುರುಕಾಗಬೇಕು. ಹಿಂದೆಂದಿಗಿಂತಲೂ ಮಳೆಗಾಲದಲ್ಲಿ ಜಾನುವಾರುಗಳ ಮೇಲೆ, ಅವುಗಳ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು.

ಉತ್ತಮವಾದ ಪಶು ಸಂಪತ್ತು ಸುಸ್ತಿರ ಕೃಷಿಗೆ ಪೂರಕ. ಪಶು ಸಂಗೋಪನೆಯು ಲಾಭದಾಯಕ ಕೃಷಿಗೆ ಮೂಲ ಆಧಾರವಾಗಿದೆ. ಹಾಗೆಯೇ ಆರೋಗ್ಯವಂತ ಪಶುಗಳು ಸಧೃಡ ಕೃಷಿಗೆ ಬೆನ್ನೆಲುಬು ಎನ್ನಬಹುದು. ಆದರೆ, ಹವಾಮಾನ ಬದಲಾವಣೆಯನ್ನು ಸಹಿಸಿಕೊಳ್ಳುವ ಶಕ್ತಿ ಜಾನುವಾರುಗಳಲ್ಲಿ ಕೊಂಚ ಕಡಿಮೆಯೇ ಎನ್ನಬಹುದು. ಹೀಗಾಗಿ ಅತಿಯಾದ ಬಿಸಿಲು, ಧೂಳು ಬೆಚ್ಚಗಿನ ವಾತಾವರಣದ ಬೇಸಿಗೆ ಕಾಲವು ಮರೆಯಾಗಿ, ಒಮ್ಮೆಲೆ ಮಳೆಗಾಲದ ತಂಪಾದ ವಾತಾವರಣಕ್ಕೆ ಹವಾಮಾನವು ಬದಲಾಗುವುದರಿಂದ ಜಾನುವಾರುಗಳು ಒತ್ತಡ ಅನುಭವಿಸುತ್ತವೆ. ಈ ಸಂದರ್ಭದಲ್ಲಿ ಅವುಗಳ ವರ್ತನೆಯಲ್ಲಿ ಬದಲಾವಣೆಗಳಾಗುತ್ತವೆ.  ಆದರೆ ಇದು ಬಹುತೇಕ ಸಂದರ್ಭಗಳಲ್ಲಿ ನಮ್ಮ ಗಮನಕ್ಕೆ ಬರುವುದಿಲ್ಲ.

ಮೊದಲನೆಯದಾಗಿ ಮಳೆಗಾಲದಲ್ಲಿ ಜಾನುವಾರುಗಳು ತಂಪಾದ ವಾತಾವರಣಕ್ಕೆ ತೆರೆದುಕೊಳ್ಳುತ್ತವೆ. ಇದರಿಂದಾಗಿ ಮನುಷ್ಯರಲ್ಲಿ ಆಗುವಂತೆ ಶೀತ, ನೆಗಡಿಯಂತಹ ಸಮಸ್ಯೆಗಳು ಜಾನುವಾರುಗಳಲ್ಲೂ ಕಾಣಿಸಿಕೊಳ್ಳುತ್ತವೆ. ಜೊತೆಗೆ, ರಸ್ತೆಗಳಲ್ಲಿನ ಗುಂಡಿಗಳಲ್ಲಿ ನಿಲ್ಲುವ, ಕೆರೆ-ಕುಂಟೆಗಳಲ್ಲಿ ಹಾಗೂ ಇತರ ನೀರಿನ ಮೂಲಗಳಲ್ಲಿ ನಿಲ್ಲುವ ಮಳೆ ನೀರು (ಅದರಲ್ಲೂ ಕೆಂಪು ಬಣ್ಣದ ನೀರು) ಜಾನುವಾರುಗಳ ಆರೋಗ್ಯದ ಮೇಲೆ ಹಲವು ವಿಧಗಳಲ್ಲಿ ಅಡ್ಡ ಪರಿಣಾಮಗಳನ್ನು ಬೀರುತ್ತದೆ. ಅಶುದ್ಧವಾದ ನೀರು ಸೇವೆಯಿಂದ ಗಂಟಲು ಬೇನೆಯಂತಹ ರೋಗಗಳಿಗೆ ಜಾನುವಾರುಗಳು ತುತ್ತಾಗುತ್ತವೆ.

ಆದರೆ, ಮಳೆಗಾಲದ ಸಂದರ್ಭದಲ್ಲಿ ರೈತರಿಗೆ ಹೆಚ್ಚು ಕೆಲಸಗಳಿರುತ್ತವೆ. ಭೂಮಿಯನ್ನು ಹಸನು ಮಾಡಿ, ಬಿತ್ತನೆ ತಯಾರಿಯಯಲ್ಲಿ ಕೃಷಿಕರು ತೊಡಗಿಕೊಳ್ಳುತ್ತಾರೆ. ಈ ಸಮಯದಲ್ಲಿ ಅತಿ ಹೆಚ್ಚು ಕೆಲಸಗಳು ಇರುವುದರಿಂದ ರೈತ ಕುಟುಂಬಗಳಲ್ಲಿ ಜಾನುವಾರುಗಳ ಆರೋಗ್ಯದ ಕಡೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲೇ ದನಕರುಗಳ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಜಾನುವಾರುಗಳ ಆರೋಗ್ಯ ಸಂರಕ್ಷಣೆ ಅತಿ ಅವಶ್ಯಕವಾಗಿದೆ. ಹೀಗಾಗಿ ಮಳೆಗಾಲದಲ್ಲಿ ರಾಸುಗಳ ಆರೋಗ್ಯ ನಿರ್ವಹಣೆಗೆ ಸಂಬಂಧಿಸಿದಂತೆ  ವಹಿಸಬೇಕಾದ ಕ್ರಮಗಳ ಕುರಿತು ಬೀದರ್‌ನ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾಗಿರುವ ಡಾ.ಸುನೀಲಕುಮಾರ ಎನ್.ಎಂ ಅವರು ‘ಕೃಷಿ ಜಾಗರಣ’ ಜೊತೆ ಮಾಹಿತಿ ಹಂಚಿಕೊAಡಿದ್ದಾರೆ.

ಎಳೆಯ ಹುಲ್ಲು ಹಾಕಬೇಡಿ

ಮಳೆಗಾಲ ಆರಂಭವಾದ ನಂತರ ಎಮ್ಮೆಗಳಿಗೆ ಗಂಟಲು ಬೇನೆ ರೋಗದ ವಿರುದ್ಧ ಲಸಿಕೆ, ಹಸುಗಳಿಗೆ ಹಾಗೂ ಕರುಗಳಿಗೆ ಚಪ್ಪೆ ರೋಗದ ವಿರುದ್ಧ ಲಸಿಕೆ ಹಾಕಿಸಬೇಕು. ಹಾಗೇ ಮಳೆಗಾಲದಲ್ಲಿ ಸಂಗ್ರಹವಾಗುವ ಕೆಂಪು ನೀರನ್ನು ಯಾವುದೇ ಕಾರಣಕ್ಕೂ ಜಾನುವಾರುಗಳಿಗೆ ಕುಡಿಸಬಾರದು, ಈ ನೀರಿನಿಂದಾಗಿ ನೆಗಡಿ, ಭೇದಿ ಸೇರಿದಂತೆ ಚಪ್ಪೆ ರೋಗ ಹರಡುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ಎಳೆಯ ಹುಲ್ಲನ್ನು ಹಸು ಹಾಗೂ ಎಮ್ಮೆಗಳಿಗೆ ತಿನ್ನಲು ಹಾಕಬಾರದು. ಕುಡಿಯಲು ಶುದ್ಧವಾದ ನೀರನ್ನು ಕೊಡಬೇಕು ಮತ್ತು ಹಸಿ ಮೇವಿನೊಂದಿಗೆ ಒಣ ಮೇವು ಮಿಶ್ರಣ ಮಾಡಿ ಹಾಕುವುದ ಕಾಯಿಲೆಗಳನ್ನು ತಡೆಯುವ ಜೊತೆಗೆ ಅಧಿಕ ಹಾಲು ಪಡೆಯಬಹುದಾಗಿದೆ.

ಎತ್ತುಗಳ ಪಾಲನೆ

ಮಳೆಗಾಲ ಆರಂಭವಾದ ಕೂಡಲೆ ಎತ್ತುಗಳಿಗೆ ಜಂತುನಾಶಕ ಔಷಧಿಯನ್ನು ಕುಡಿಸಬೇಕು. ರೋಗ ಹರಡುವಂತಹ ಪ್ರದೇಶಗಳಲ್ಲಿ ಮಳೆಗಾಲ ಆರಂಭಕ್ಕೆ ಮುನ್ನವೇ ಚಪ್ಪೆ ರೋಗದ ವಿರುದ್ಧ ಲಸಿಕೆ ಹಾಕಿಸುವುದು ಸೂಕ್ತ. ಮಳೆ ಬರುವಾಗ ಎತ್ತುಗಳನ್ನು ಹೊಲದಲ್ಲಿ ಕೆಲಸಕ್ಕೆ ಬಳಸಬಾರದು ಹಾಗೂ ಹೊಲಗಳಲ್ಲಿ ಮೇಯಲು ಬಿಡಬಾರದು. ಬಿತ್ತನೆಯ ಸಮಯದಲ್ಲಿ ಪ್ರತಿದಿನ 1 ಕಿ.ಗ್ರಾಂ ಗಿಂತಲೂ ಹೆಚ್ಚು ಚುನ್ನಿ ಮಿಶ್ರಣವನ್ನು ಕೊಡಬಾರದು. ಬಿತ್ತನೆಯ ದಿನಗಳಲ್ಲಿ ಎತ್ತುಗಳಿಗೆ ಅತಿಯಾದ ಕೆಲಸದ ಒತ್ತಡ ಇರತ್ತದೆ. ಇಂತಹ ಸಂದರ್ಭದಲ್ಲಿ ಎತ್ತುಗಳು ದುಡಿದು ಮನೆಗೆ ಬಂದ ಬಳಿಕ, ಸಂಜೆ ಅವಧಿಯಲ್ಲಿ 250 ರಿಂದ 300 ಗ್ರಾಂ ಬೆಲ್ಲವನ್ನು ತಿನ್ನಿಸಬೇಕು. ಇದರಿಂದ ಎತ್ತುಗಳ ಆಯಾಸ ಕಡಿಮೆಯಾಗುವುದು.

ಕರುಗಳಿಗೆ ಸ್ವಲ್ಪ ಹೆಚ್ಚು ಹಾಲು ಕುಡಿಸಿ

ಹೊರಗೆ ಆಟವಾಡಲು ಬಿಟ್ಟ ಕರುಗಳು ಮಳೆಯ ನೀರಿನಲ್ಲಿ ನೆನೆಯದಂತೆ ನೋಡಿಕೊಳ್ಳಬೇಕು. ತಂಪಾದ ವಾತಾವರಣದಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಹಾಲು ಕುಡಿಸಬೇಕು. ಮೂರು ತಿಂಗಳ ಹಾಗೂ ಅದಕ್ಕೂ ಮೇಲ್ಪಟ್ಟ ಕರುಗಳಿಗೆ ಜಂತುನಾಶಕ ಔಷಧಿ ಕುಡಿಸಬೇಕು. ಆರು ತಿಂಗಳು ಮೇಲ್ಪಟ್ಟ ಕರುಗಳಿಗೆ ಚಪ್ಪೆ ಬೇನೆ ಹಾಗೂ ಗಂಟಲು ಬೇನೆ ರೋಗದ ವಿರುದ್ಧ ಲಸಿಕೆ ಹಾಕಿಸಬೇಕು.

;

ಕುರಿ ಹಾಗೂ ಆಡುಗಳಿಗೆ  ಲಸಿಕೆ

ಮಳೆಗಾಲ ಆರಂಭವಾದ ನಂತರ ಕುರಿ ಹಾಗೂ ಆಡುಗಳಿಗೆ ಜಂತುನಾಶಕ ಔಷಧಿಯನ್ನು ಕುಡಿಸಬೇಕು. ನಂತರ ಒಂದು ವಾರದ ಬಳಿಕ ಹಿರೇಬೇನೆ (ಪಿಪಿಆರ್) ರೋಗದ ವಿರುದ್ಧ ಲಸಿಕೆ ಹಾಕಿಸಬೇಕು. ಒಂದು ತಿಂಗಳ ಬಳಿಕ ಕರಳು ಬೇನೆ (ಇ.ಟಿ) ರೋಗದ ವಿರುದ್ಧ ಲಸಿಕೆ ಹಾಕಿಸಬೇಕು. ಮಳೆಗಾಲದಲ್ಲಿ ಕುರಿಗಳ ಉಣ್ಣೆಯನ್ನು ಕತ್ತರಿಸಬಾರದು. ಮಳೆಗಾಲದಲ್ಲಿ ಕುರಿ ಹಾಗೂ ಆಡುಗಳಿಗೆ ಗೊರಸಿನ ಹುಣ್ಣಿನ ತೊಂದರೆ ಕಂಡುಬರುತ್ತದೆ. ಆದ್ದರಿಂದ ಕುರಿ ಹಾಗೂ ಆಡುಗಳನ್ನು ಕೆಸರಿನಲ್ಲಿ ಬೀಡಬಾರದು. ದಟ್ಟವಾದ ಕಪ್ಪನೆಯ ಮೋಡ ಕಂಡುಬಂದರೆ ಕುರಿಗಾಹಿಗಳು ತಮ್ಮ ಪ್ರಾಣಿಗಳೊಂದಿಗೆ ಸುರಕ್ಷಿತವಾದ ಪ್ರದೇಶಗಳಿಗೆ ಹೋಗಬೇಕು.

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.