ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿರುವ ಬೆನ್ನಲ್ಲೇ ಜಾನುವಾರು ಸಂರಕ್ಷಿಸಲು ಪ್ರತಿ ಜಿಲ್ಲೆಯಲ್ಲೂ ಗೋಶಾಲೆ ಸ್ಥಾಪಿಸುವುದಾಗಿ ಸರ್ಕಾರ ಪ್ರಕಟಿಸಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಂಡಿಸಿದ ಬಜೆಟ್ನಲ್ಲಿ ಪ್ರತಿ ಜಿಲ್ಲೆಗೊಂದರಂತೆ ಗೋಶಾಲೆ ಆರಂಭಿಸಲಾಗುವುದು ಎಂದು ಘೋಷಿಸಿದ್ದಾರೆ.
ದೇಶೀಯ ಜಾನುವಾರುಗಳ, ಕುರಿ, ಮೇಕೆ, ಕುಕ್ಕುಟ ತಳಿಗಳ ಶಾಶ್ವತ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ನೀಡಲು ಬೆಂಗಳೂರಿನ ಹೆಸರಘಟ್ಟದಲ್ಲಿ 100 ಎಕರೆಯಲ್ಲಿ ಖಾಸಗಿ ಸಹಭಾಗಿತ್ವದ ಥೀಮ್ ಪಾರ್ಕ್ ಸ್ಥಾಪನೆ ಮಾಡಲಾಗುವುದು.
ರಾಜ್ಯದಲ್ಲಿ ಹೆಚ್ಚಿನ ಮಾಂಸ ಉತ್ಪಾದನೆ ಮತ್ತು ಅಧಿಕ ಮರಿಗಳನ್ನು ನೀಡುವ ನಂದಿದುರ್ಗ ಮೇಕೆ ತಳಿಗಳನ್ನು ಅಭಿವೃದ್ಧಿಪಡಿಸಿ ಉತ್ಕೃಷ್ಟ ದರ್ಜೆಯ ಹೋತಗಳನ್ನು ರೈತರಿಗೆ ವಿತರಿಸಲು ಹೊಸ ಯೋಜನೆ. ಹೊರ ರಾಜ್ಯದ ದೇಶಿ ತಳಿಗಳಾದ ಗಿರ್, ಸಾಹಿವಾಲ್, ಒಂಗೋಲ್, ಥಾರ್‌ಪಾರ್ಕ್ ಮತ್ತು ದೇವಣಿ ತಳಿಗಳನ್ನು ಅಭಿವೃದ್ಧಿಪಡಿಸಿ ರೈತರಿಗೆ ಪರಿಚಯಿಸಲು ‘ಸಮಗ್ರ ಗೋಸಂಕುಲ ಸಮೃದ್ಧಿ’ ಯೋಜನೆ ಜಾರಿ. ಆಕಸ್ಮಿಕವಾಗಿ ಕುರಿ ಮತ್ತು ಮೇಕೆಗಳು ಸತ್ತಾಗ ಪರಿಹಾರ ಧನ ನೀಡುವ ‘ಅನುಗ್ರಹ’ ಕಾರ್ಯಕ್ರಮ ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ.
ಕೊಪ್ಪಳದಲ್ಲಿ ನಾರಿ ಸುವರ್ಣ ಕುರಿ ತಳಿಯ ಸಂವರ್ಧನಾ ಕೇಂದ್ರ ಸ್ಥಾಪನೆ ಮಾಡುವುದನ್ನು ಘೋಷಿಸಿದ್ದಾರೆ. ಪಶು ವೈದ್ಯಕೀಯ ವಿಜ್ಞಾನದಲ್ಲಿ ಆಯುರ್ವೇದ ಔಷಧಿಗಳ ಅಳವಡಿಕೆ ಉತ್ತೇಜಿಸಲು ಶಿವಮೊಗ್ಗದ ಪಶುವೈದ್ಯಕೀಯ ಕಾಲೇಜಿನಲ್ಲಿ ಹೊಸದಾಗಿ ಸಂಶೋಧನಾ ಕೇಂದ್ರ ಸ್ಥಾಪಿಸಲು 2 ಕೋಟಿ ಅನುದಾನ ಘೋಷಿಸಿದ್ದಾರೆ.
Share your comments