ಸಾವಯ ಕೃಷಿಕರಿಗೆ ದೊಡ್ಡ ಪ್ರಮಾಣದಲ್ಲಿ ಸಾವಯವ ಗೊಬ್ಬರ ತಯಾರಿಸಿಕೊಳ್ಳುವುದು ಒಂದು ಸವಾಲಿನ ಕೆಲಸವಾಗಿದೆ. ಸಣ್ಣರೈತರಿಗೆ ತೊಂದರೆಯಾಗುವುದಿಲ್ಲ. ಆದರೆ ದೊಡ್ಡ ಹಿಡುವಳಿದಾರರಿಗೆ ಟನ್ ಗಟ್ಟಲೆ ಗೊಬ್ಬರ ಬೇಕಾಗಿರುತ್ತದೆ. ಅವರಿಗೆ ಗೊಬ್ಬರ ತಯಾರಿಸಲು ತುಂಬಾ ಸಮಯ ಹಾಗೂ ಸಮಸ್ಯೆಯಾಗುವುದನ್ನು ಗಮನಿಸಿ ವೇಸ್ಟ್ ಡಿಕಂಪೋಸರ್ ಎಂಬ ಸೂಕ್ಷ್ಮಾಣುಜೀವಿ ದ್ರಾವಣವನ್ನು ಅಭಿವೃದ್ಧಿಪಡಿಸಲಾಗಿದೆ. ಹಾಗಾದರೆ ವೇಸ್ಟ್ ಡಿಕಂಪೋಸರ್ ಅನ್ನು ಸಾವಯುವ ಕೃಷಿಯಲ್ಲಿ ಹೇಗೆ ಉಪಯೋಗಿಸಬಹುದು ಎಂಬುದರ ಬಗ್ಗೆ ತಿಳಿಯುವವರಿಗೆ ಇಲ್ಲಿದೆ ಮಾಹಿತಿ.
ಇಂದಿನ ದಿನಗಳಲ್ಲಿ ನಾವು ಅತಿಯಾಗಿ ಬಳಸುವ ರಾಸಾಯನಿಕದಿಂದ ತಿನ್ನುವ ಆಹಾರವೆಲ್ಲ ವಿಷಯುಕ್ತವಾಗಿದೆ. ಇಂದು ನಾವೆಲ್ಲ ನಮ್ಮ ದೇಸಿ ಕೃಷಿಯನ್ನು ಮರೆತು ರಾಸಾಯನಿಕದ ಮೇಲೆ ತುಂಬಾ ಅವಲಂಬಿತವಾಗಿದ್ದೇವೆ. ಅತಿಯಾದರೆ ಅಮೃತವೂ ವಿಷಯವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದ ಸಂಗತಿಯಾಗಿದ್ದರಿಂದ ಇಂದು ರಾಸಾಯನಿಕದಿಂದ ಬೇಸತ್ತು ನಾವು ಮತ್ತೊಮ್ಮೆ ಸಾವಯುವ ಕೃಷಿಯತ್ತ ಮುನ್ನುಗ್ಗುತ್ತಿದ್ದೇವೆ ಎಂಬುದು ಸತ್ಯ ಸಂಗತಿ.
ವೇಸ್ಟ್ ಡಿಕಂಪೋಸೋರ್ ಎಂದರೇನು?
ವೇಸ್ಟ್ ಡಿಕಂಪೋಸರ್ ಜೈವಿಕ ಗೊಬ್ಬರ, ಬಯೋಕಂಟ್ರೋಲ್ ಮತ್ತು ಮಣ್ಣಿನ ಆರೋಗ್ಯ ಪುನರುಜ್ಜೀವನವಾಗಿ ಕಾರ್ಯನಿರ್ವಹಿಸುತ್ತದೆ. ಇದು ಸಸ್ಯ ಸಂರಕ್ಷಣಾ ಪ್ರತಿನಿಧಿಯಾಗಿ ಎಲ್ಲಾ ರೀತಿಯ ಮಣ್ಣಿನಿಂದ ಹರಡುವ, ಎಲೆಗಳ ರೋಗಗಳು, ಕೀಟಗಳನ್ನು ನಿಯಂತ್ರಿಸಬಹುದು.ಹಾಗೂ ಇದು ಮುಖ್ಯವಾಗಿ ವಿಭಜನೆ /ಡಿಕಂಪೋಸಿಷನ್ ವೇಗವನ್ನು ಹೆಚ್ಚಿಸುತ್ತದೆ.
ದೇಸಿ ಹಸುವಿನ ಸಗಣಿಯಲ್ಲಿರುವಂತಹ ಸೂಕ್ಷ್ಮ ಜೀವಿಗಳಿಂದ ತಯಾರಿಸಿದ ಒಂದು ಅದ್ಭುತವಾದ ಸಂಶೋಧನೆ ಎಂದೇ ಹೇಳಬಹುದು. ಇದನ್ನು ನ್ಯಾಷನಲ್ ಸೆಂಟರ್ ಆಫ್ ಆರ್ಗ್ಯಾನಿಕ್ ಫಾರ್ಮಿಂಗ್(NCOF)ಘಾಜಿಯಾಬಾದ್ ಬಿಡುಗಡೆ ಮಾಡಿದೆ. ಇದನ್ನು ICAR ಕೂಡ ಬಳಕೆಗಾಗಿ ಅನುಮೋದಿಸಿದೆ.
ಎಲ್ಲಿ ಸಿಗುತ್ತೆ ವೇಸ್ಟ್ ಡಿಕಂಪೋಸರ್?
ವೇಸ್ಟ್ ಡಿಕಂಪೋಸರ್ 30ಗ್ರಾಂ ಡಬ್ಬಿಯಲ್ಲಿ ಬರುತ್ತದೆ ಹಾಗೂ ಇದರ ಬೆಲೆ ಕೇವಲ 20 ರೂಪಾಯಿ.ಇದನ್ನು ನಾವು ಇ -ಕಾಮರ್ಸ್ ವೆಬ್ಸೈಟ್ಗಳಾದ ಫ್ಲಿಪ್ಕಾರ್ಟ್ ಹಾಗೂ ಅಮೆಜಾನ್ ನಿಂದ ಖರೀದಿಸಬಹುದು.
ಹೇಗೆ ಬಳಸುವುದು?
ಇದರಲ್ಲಿ ಲಕ್ಷಾಂತರ ಸೂಕ್ಷ್ಮಾಣು ಜೀವಿಗಳು ಇರುತ್ತವೆ. ಮೊದಲಿಗೆ 200 ಲೀಟರ್ ಬ್ಯಾರೆಲ್ ನಲ್ಲಿ ನೀರನ್ನು ತೆಗೆದುಕೊಂಡು ಇದಕ್ಕೆ 2ಕೆಜಿ ಬೆಲ್ಲವನ್ನು ಹಾಕಿ ಕಲಸಬೇಕು. ಅನಂತರ ಇದಕ್ಕೆ 30ಗ್ರಾಂ ವೇಸ್ಟ್ ಡಿಕಂಪೋಸರ್ ಅನ್ನು ಕಟ್ಟಿಗೆಯಿಂದ ಹಾಕಬೇಕು, ನಮ್ಮ ಕೈಯಿಂದ ಹಾಕಿದರೆ ಸೂಕ್ಷ್ಮಾಣು ಜೀವಿಗಳಿಗೆ ಹಾನಿಯಾಗುತ್ತದೆ. ಹಾಗಾಗಿ ಇದನ್ನು ಕಟ್ಟಿಗೆಯಿಂದ ಹಾಕಬೇಕು. ಇದಾದ ನಂತರ ಇದನ್ನು ಕಟ್ಟಿಗೆಯಿಂದ ಒಂದೇ ದಿಕ್ಕಿನಲ್ಲಿ ತಿರುಗಿಸಬೇಕು, ಮೊದಲ ಬಾರಿ ತಯಾರಿಸುವಾಗ 10 ದಿನಗಳ ವರೆಗೆ ತಿರುಗಿಸಿದ ನಂತರ ಕ್ರೀಮಿ ಬ್ರೌನ್ ಬಣ್ಣ ಬಂದರೆ ನಾವು ಮಾಡಿದಂತ ಕೆಲಸ ಪಕ್ಕ ಆದಂತೆ, ಹಾಗೂ ನಾವು ಎರಡನೇ ಬಾರಿ ಮಾಡುವಾಗ ಮೊದಲ ಬಾರಿ ಮಾಡಿದಂತ 10% ಅಂದರೆ 200 ಲೀಟರ್ ಗೆ 20 ಲೀಟರ್ ಉಳಿಸಿ ಅದಕ್ಕೆ ಮತ್ತೆ 200 ಲೀಟರ್ ನೀರು+2 ಕೆಜಿ ಬೆಲ್ಲವನ್ನು ಹಾಕಿ 8 ದಿನಗಳವರೆಗೆ ಒಂದೇ ದಿಕ್ಕಿನಲ್ಲಿ ತಿರಿಗಿಸಿದರೆ ನಮ್ಮ ಅದ್ಬುತ ವೇಸ್ಟ್ ಡಿಕಂಪೋಸರ್ ತಯಾರಾಗುತ್ತದೆ. ಅಥವಾ ನಮಗೆ ಅದನ್ನು ಖರೀದಿ ಮಾಡುವ ಬದಲು ನಮ್ಮ ಊರಲ್ಲಿ ಯಾರಾದರೂ ಮಾಡಿದ್ದರೆ ಅದರಿಂದ 20 ಲೀಟರ್ ತಂದರೆ ಅದರಿಂದ ನಾವು ಬೆಳಸಬಹುದು.
ಉಪಯೋಗಿಸುವುದು ಹೇಗೆ?
ಇದನ್ನು ನಾವು ತ್ಯಾಜ್ಯವನ್ನು ಕರಗಿಸಲು ಅದರ ಮೇಲೆ ಸಿಂಪರಣೆ ಮಾಡಬಹುದು, ಬೆಳೆಗಳಿಗೆ ಸಿಂಪರಣೆ ಮಾಡುವುದರಿಂದ ರೋಗ, ಕೀಟಗಳಿಂದ ರಕ್ಷಿಸಬಹುದು ಹಾಗೂ ಇದನ್ನು ಮಣ್ಣಿಗೆ ಸಿಂಪರಣೆ ಮಾಡುವುದರಿಂದ ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳನ್ನು ಹೆಚ್ಚಿಸಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಬಹುದು.
ಒಂದೇ ಮಾತಿನಲ್ಲಿ ಹೇಳಬೇಕಂದರೆ ಡಿಕಂಪೋಸರ್ ಒಳ್ಳೆಯ ಆಲ್ ರೌಂಡರ್ ಇದ್ದ ಹಾಗೆ. ಹಾಗೂ ಸಾವಯುವ ಕೃಷಿಯ ಮುಖ್ಯ ಅಂಶ ಎಂದೇ ಹೇಳಬಹುದು.
ಲೇಖಕರು: ಚಿನ್ನಪ್ಪ ಎಸ್. ಅಂಗಡಿ
Share your comments