ಸಾಮಾನ್ಯವಾಗಿ ಎಲ್ಲಾ ರೈತರು ಜಿಪ್ಸಂ ಬಗ್ಗೆ ಕೇಳಿರುತ್ತಾರೆ. ಏಕಂದರೆ ರೈತ ಸಂಪರ್ಕ ಕೇಂದ್ರದಲ್ಲಿ ಶೇಂಗಾ ಬೀಜ ಕೊಳ್ಳಲು ಹೋದಾಗ ರೈತ ಸಂಪರ್ಕ ಅಧಿಕಾರಿ ಜಿಪ್ಸಂ ಕಡ್ಡಾಯವಾಗಿ ಬಳಸಿ ಎಂಬುದನ್ನು ಕೇಳಿರುತ್ತಾರೆ. ಅಧಿಕಾರಿಗಳೂ ಜಿಪ್ಸಂ ಖರೀದಿಸಿ ಎಂದು ಸಲಹೆಯನ್ನೂ ನೀಡಿರುತ್ತಾರೆ. ಆದರೆ ಇದೇನು ಪ್ರಯೋಜನವೆಂದು ನಿರ್ಲಕ್ಷ ಮಾಡಿರಬಹುದು. ಆದರೆ ಜಿಪ್ಸಂ ನಿಮ್ಮ ಬೆಳೆಯಲ್ಲಿ ಇಳುವರಿ ಹೆಚ್ಚಿಸಲು ಮಹತ್ವದ ಪಾತ್ರ ವಹಿಸುತ್ತದೆ.
ಹೌದು, ಕೃಷಿ ಭೂಮಿಯಲ್ಲಿನ ಬೆಳೆಗಳಿಗೆ ಇದು ಕ್ಯಾಲ್ಸಿಯಂ ಮತ್ತು ಗಂಧಕದ ಸಂಪೂರ್ಣ ಅವಶ್ಯಕತೆಗಳನ್ನು ಒದಗಿಸುತ್ತದೆ. ಬೆಳೆಯ ಬೇರುಗಳ ಸಾಮಾನ್ಯ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ಸಹಾಯ ಮಾಡುತ್ತದೆ. ಜಿಪ್ಸಂನ್ನು ಬಳಕೆ ಮಾಡಿದರೆ ಮಣ್ಣಿನಲ್ಲಿ ಲಭ್ಯವಿರುವ ಪೋಷಕಾಂಶಗಳನ್ನು ಸಾಮಾನ್ಯವಾಗಿ ಸಾರಜನಕ, ರಂಜಕ , ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಗಂಧಕದ ಲಭ್ಯತೆಯನ್ನು ಹೆಚ್ಚಿಸುತ್ತದೆ. ಜಿಪ್ಸಮ್ ಮಣ್ಣಿನಲ್ಲಿ ಗಟ್ಟಿಯಾದ ಪದರದ ರಚನೆಯನ್ನು ತಡೆಯುತ್ತದೆ ಮತ್ತು ಮಣ್ಣಿನಲ್ಲಿ ನೀರಿನ ಇಂಗುವಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಜಿಪ್ಸಂ ಉಪಯೋಗದ ಲಾಭ:
ನೆಲಗಡಲೆ ಬೆಳೆಗೆ ಜಿಪ್ಸಂ ಉಪಯೋಗಿಸುವುದರಿದ ಮಣ್ಣು ಸಡಿಲಗೊಳ್ಳುವುದು. ಕಾಯಿಯ ಹೊಟ್ಟು ಗಟ್ಟಿಯಾಗುವುದು. ಬೇರು ಆಳಕ್ಕೆ ಹೋಗಿ ಕಾಯಯ ತೂಕ, ಕಾಯಿಯ ಎಣ್ಣೆಯ ಅಂಶ ಹೆಚ್ಚಿಸುವುದು. ಶೇಂಗಾ ಸದೃಢವಾಗಿ ಇಳುವರಿ ಹೆಚ್ಚುತ್ತದೆ. ಜಿಪ್ಸಂ ಸರಿಯಾದ ಪ್ರಮಾಣದಲ್ಲಿ ಹಾಕಿದರೆ ಒಂದಲ್ಲ ಪಲ್ಲದ ಚೀಲಕ್ಕೆ ಸರಿಸುಮಾರು 50-60 ಕೆಜಿ ತೂಕ ಬರುತ್ತದೆ. ಇಲ್ಲವಾದರೆ 25-30 ಕೆಜಿ ತೂಕವೂ ಬರುವುದಿಲ್ಲ. ಇಳಿವರಿ ಕುಸಿತದ ಜೊತೆಗೆ ಬೆಲೆಯೂ ಬರುವುದಿಲ್ಲ. ಜಿಪ್ಸಂ ಒಂದು ಕೆಜಿಗೆ 100 ರೂಪಾಯಿಯವರಗೆ ಸಿಗುತ್ತದೆ.
ಜಿಪ್ಸಂ ಮಹತ್ವ:
ಜಿಪ್ಸಂ (Gypsum) ಬಿಳಿ ಅಥವಾ ಬೂದು ಬಣ್ಣದಲ್ಲಿ ದೊರೆಯುವ ಖನಿಜ. ಶುದ್ಧ ಜಿಪ್ಸಂನಲ್ಲಿ 23% ಕ್ಯಾಲ್ಸಿಯಂ ಇದ್ರೆ 19% ನಷ್ಟು ಸಲ್ಫರ್ ಇರುತ್ತದೆ. ಇವೆರಡೂ ಅಂಶಗಳು ಬೆಳೆಗಳ ಆರೋಗ್ಯಕ್ಕೆ ಬೇಕೇಬೇಕು. ನೀರಿನಲ್ಲಿ ಸುಲಭವಾಗಿ ಕರಗುವ ಇದು, ಮಣ್ಣಿನಲ್ಲಿರುವ ಸೋಡಿಯಂ ಅಂಶವನ್ನು ಕಡಿಮೆಗೊಳಿಸಿ, ಗಿಡಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ.
ನೀವು ಶೇಂಗಾ ಬೆಳೆಗೆ ಇದನ್ನು ಹಾಕಿದಾಗ ಭೂಮಿ ಮೃದುವಾಗಿ ಶೇಂಗಾ ಆಗುವಂಥ ಭಾಗ ಭೂಮಿಗೆ ಸರಾಗವಾಗಿ ಇಳಿಯುತ್ತದೆ, ಅಲ್ಲಿ ಆರೋಗ್ಯಕರವಾದ ಶೇಂಗಾ ಬೆಳೆಯುತ್ತದೆ. ಇಲ್ಲದಿದ್ದರೆ ಬಿರುಸಾದ ಭೂಮಿಯಲ್ಲಿ ಇಳಿಯದೆ ಆ ಭಾಗ ಹಾಗೇ ಭೂಮಿಯ ಹೊರಭಾಗ ಉಳಿದುಬಿಡುತ್ತದೆ.
ಜೊತೆಗೆ ಎಣ್ಣೆ ಕಾಳಿನ ಬೆಳೆಗಳಿಗೆ ಜಿಪ್ಸಂ ಹಾಕುವುದರಿಂದ ಕಾಳು ಜೊಳ್ಳಾಗುವುದು ಕಮ್ಮಿಯಾಗುತ್ತದೆ ಹಾಗೂ ಕಾಳಿನಲ್ಲಿ ಎಣ್ಣೆ ಅಂಶ ಹೆಚ್ಚಾಗುತ್ತದೆ. ಇದರಿಂದ ಕಾಳಿನ ತೂಕವೂ ಜಾಸ್ತಿಯಾಗಿ ಇಳುವರಿ ಹೆಚ್ಚುತ್ತದೆ. ಒಂಥರಾ ಅತಿ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯುವ ಮಾರ್ಗಗಳಲ್ಲಿ ಇದೂ ಒಂದು.
ಆಕಾಲಿಕ ಹೂವು ಮೊಗ್ಗು ಹಣ್ಣು ಉದುರುವುದು, ಕಾಂಡದ ಬಲಹೀನತೆ ತಡೆಯುತ್ತದೆ. ಇನ್ನೂ ಜಿಪ್ಸಂನಲ್ಲಿರುವ ಸಲ್ಫರ್ ಬೆಳೆಗಳಿಗೆ ಸಸಾರಜನಕ ಹಾಗೂ ಅಮೈನೋ ಆಮ್ಲಗಳ ಉತ್ಪತ್ತಿಗೆ ಸಹಾಯಕವಾಗುತ್ತದೆ.
ಮಣ್ಣಿನ ಸವಕಳಿ ಹೊಂದಿದ ಜಮೀನುಗಳಿಗೆ ಜಿಪ್ಸಂ ಅನ್ನು ಸ್ವಲ್ಪ ಪ್ರಮಾಣದ ಸುಣ್ಣ ಹಾಗೂ ಸಾವಯವ ಗೊಬ್ಬರದೊಟ್ಟಿಗೆ ಕಲೆಸಿ ಕೊಡಬೇಕು. ಕಲುಷಿತ ನೀರಿನಿಂದ ಮಣ್ಣಿಗೆ ಸೇರಿರಬಹುದಾದ ವಿಷಕಾರಿ ಖನಿಜಗಳು ಗಿಡಗಳನ್ನು ಸೇರುವುದನ್ನು ತಡೆಯುತ್ತದೆ.
ಬಳಕೆ ಪ್ರಮಾಣ:
ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಹೆಚ್ಚಿನ ಪ್ರಮಾಣದಲ್ಲಿ ಮಣ್ಣಿಗೆ ಸೇರಿಸಬಾರದು. ಅತಿಯಾದ ಪ್ರಮಾಣ ಗಿಡಗಳ ಆರೋಗ್ಯಕ್ಕೂ ಹಾನಿಕರ, ಹಾಗೇಯೆ ಹತ್ತಿರದ ನೀರಿನ ಸಂಪನ್ಮೂಲಕ್ಕೂ ಹಾನಿ. ನಿಗದಿತ ಪ್ರಮಾಣವನ್ನು ಮಣ್ಣಿಗೆ ಸೇರಿಸಿದರೆ ಮಣ್ಣಿನ ಗಟ್ಟಿತನ ಹಗುರಾಗಿಸಿ ಎರೆಹುಳುವಿನ ಸಾಗಾಟಕ್ಕೆ ಅನುವು ಮಾಡಿಕೊಡುತ್ತದೆ. ಇದರಿಂದ ಬೆರಳುಗಳಿಗೆ ಗಾಳಿ ನೀರು ಪರಿಚಲಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕಚೇರಿಗೆ ಸಂಪರ್ಕಿಸಿ.
Share your comments