ಬಿಳಿ ಬಂಗಾರ (ವೈಟ್ ಗೋಲ್ಡ್) ಎಂದು ಕರೆಸಿಕೊಳ್ಳುವ ಹತ್ತಿ, ಕರ್ನಾಟಕ ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಾಜ್ಯದ 4 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ. ಸಾಮಾನ್ಯವಾಗಿ ಮೇ-ಜೂನ್ ತಿಂಗಳ ಅವಧಿಯಲ್ಲಿ ಹತ್ತಿ ಬಿತ್ತನೆ ಮಾಡಲಾಗುತ್ತದೆ. ಆದರೆ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆಯ ಅಸಮತೋಲನದಿಂದಾಗಿ ಕೆಲವೆಡೆ ಮೇ ಆರಂಭದಲ್ಲೇ ಬಿತ್ತನೆ ಕಾರ್ಯ ಕಯಗೊಂಡಿದ್ದರೆ, ಇನ್ನೂ ಕೆಲವೆಡೆ ಜೂನ್ ಅಂತ್ಯ ಮತ್ತು ಜುಲೈ ಆರಂಭದ ವಾರಗಳಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ.
ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರವೆನಿಸಿರುವ ದಾವಣಗೆರೆ ನಗರದಲ್ಲಿ ಹಿಂದೆ ಹತ್ತಿ ಗಿರಣಿ ಸಕ್ರಿಯವಾಗಿದ್ದ ಸಂದರ್ಭದಲ್ಲಿ ದಾವಣಗೆರೆಯನ್ನು ‘ಕಾಟನ್ ಸಿಟಿ’ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಆಗ ಜಿಲ್ಲೆಯ ಸುಮಾರು 1.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆಯಾಗುತ್ತಿತ್ತು. ಈ ಮುಲಕ ಜಿಲ್ಲೆಯು ರಾಜ್ಯದಲ್ಲೇ ಅತಿ ಹೆಚ್ಚು ಹತ್ತಿ ಬೆಳೆಯುವ ಜಿಲ್ಲೆಯಾಗಿ ಗುರುತಿಸಿಕೊಂಡಿತ್ತು. ಅದರಂತೆ ಅಕ್ಕಪಕ್ಕದ ಜಿಲ್ಲೆಗಳಾಗಿರುವ ಚಿತ್ರದುರ್ಗ, ಬಳ್ಳಾರಿ, ಹಾವೇರಿ, ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳಲ್ಲೂ ಹತ್ತಿ ಬೆಳೆಯಲಾಗುತ್ತಿತ್ತು. ಈಗಲೂ ಈ ಎಲ್ಲಾ ಜಿಲ್ಲೆಗಳಲ್ಲಿ ಹತ್ತಿ ಬೆಳೆಯುವ ರೈತರಿದ್ದಾರೆ. ಆದರೆ ಬಿತ್ತನೆ ಪ್ರಮಾಣ ಮೊದಲಿನಷ್ಟಿಲ್ಲ. ದಾವಣಗೆರೆ ಜಿಲ್ಲೆಯಲ್ಲಿ ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಇದ್ದ ಹತ್ತಿ ಬಿತ್ತನೆ ಪ್ರದೇಶ ಈಗ ಕೇವಲ 10 ಸಾವಿರ ಹೆಕ್ಟೇರ್‌ಗೆ ಬಂದು ತಲುಪಿದೆ. ಇನ್ನು ಹಾವೇರಿ ಜಿಲ್ಲೆಯಲ್ಲಿ ಪ್ರಸಕ್ತ ಸಲಿನಲ್ಲಿ 44 ಸಾವಿರ ಹೆಕ್ಟೇರ್‌ನಲ್ಲಿ ಹತ್ತಿ ಬಿತ್ತನೆಯಾಗಿದೆ.
ರಾಜ್ಯದಲ್ಲಿ ಶೇ.80ರಷ್ಟು ಹತ್ತಿ ಬೆಳೆಯುವ ಪ್ರದೇಶದಲ್ಲಿ ಬಿತ್ತನೆಯಾಗುವುದು ಬಿಟಿ ಹತ್ತಿ. ಬೆಳೆಯ ತಳಿ ಹಾಗೂ ಇಳುವರಿ ಸುಧಾರಣೆ ನಿಟ್ಟಿನಲ್ಲಿ ನಡೆದ ನಿರಂತರ ಸಂಶೋಧನೆಗಳಿAದಾಗಿ ಇಂದು ಬೆಳೆಗೆ ತಗುಲುವ ರೋಗಗಳ ಪ್ರಮಾಣ ಕೊಂಚಮಟ್ಟಿಗೆ ತಗ್ಗಿದೆ. ಹಾಗೇ ಇಳುವರಿ ಕೂಡ ಹೆಚ್ಚಾಗಿದೆ. ಸಾಮಾನ್ಯವಾಗಿ ರಾಜ್ಯದ ಹತ್ತಿ ಬೆಳೆಗಾರರು ಹೆಕ್ಟೇರ್ ಒಂದರಲ್ಲಿ 20-25 ಕ್ವಿಂಟಾಲ್ ಹತ್ತಿ ಬೆಳೆಯುತ್ತಾರೆ. ಇಳುವರಿ ಪ್ರಮಾಣವು ನೀರಾವರಿ ಮುತ್ತು ಖುಷ್ಕಿ ಭೂಮಿಯಲ್ಲಿ ಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ನೀರಾವರಿ ಭೂಮಿಯಲ್ಲಿ ಹೆಚ್ಚು ಇಳುವರಿ ಕಂಡುಬರುತ್ತಿದೆ.
ಆದರೆ, ಹತ್ತಿ ಬೆಳೆಗೆ ಸಮರ್ಪಕ ಪ್ರಮಾಣದ ಪೋಷಕಾಂಶಗಳನ್ನು ನೀಡಿದರೆ ಖುಷ್ಕಿ ಭೂಮಿಯಲ್ಲೂ 30 ಕ್ವಿಂಟಾಲ್‌ವರೆಗೆ ಇಳುವರಿ ತೆಗೆಯಬಹುದು ಎಂಬುದನ್ನು ಈಗಾಗಲೇ ಹಲವು ರೈತರು ಸಾಧಿಸಿ ತೋರಿಸಿದ್ದಾರೆ. ರಾಜ್ಯದ ಬಹುತೇಕ ಹತ್ತಿ ಬೆಳೆಯುವ ಜಿಲ್ಲೆಗಳಲ್ಲಿ ಬೆಳೆಯು ಈಗ 40ರಿಂದ 65 ದಿನಗಳ ಅಂತರದ್ದಾಗಿದ್ದು, ಈ ಹಂತದಲ್ಲಿ ಅಗತ್ಯ ಪೋಷಕಾಂಶಗಳನ್ನು ನೀಡುವುದು ಅತಿ ಮುಖ್ಯವಾಗಿದೆ. ಇದರಿಂದ ಬೆಳೆ ಉತ್ತಮವಾಗಿ ಬೆಳೆದು ಇಳುವರಿ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಹತ್ತಿ ಬೆಳೆಗೆ ನೀಡಬೇಕಿರುವ ಪೋಷಕಾಂಶಗಳ ಕುರಿತ ಸಲಹೆಗಳು ಇಲ್ಲಿವೆ.
* ಬೆಳೆಯ ಹಂತ, ಮಣ್ಣಿನ ತೇವಾಂಶ, ಮಳೆಯ ಸಂಭವನೀಯತೆ ಸೇರಿ ವಿವಿಧ ಅಂಶಗಳನ್ನು ಗಮನಿಸಿ ಪೋಷಕಾಂಶಗಳನ್ನು ನೀಡಬೇಕಾಗುತ್ತದೆ.
* ಸಾಮಾನ್ಯವಾಗಿ ಪ್ರತಿ ಒಂದು ಲೀಟರ್ ನೀರಿಗೆ ಪ್ರಧಾನ ಪೋಷಕಾಂಶಗಳ ಮಿಶ್ರಣ ಪ್ರಮಾಣವು 3 ಗ್ರಾಂ. 5, 8 ಅಥವಾ 10 ಗ್ರಾಂ. (ಬೆಳೆ ಹಂತಕ್ಕೆ ಅನುಗುಣವಾಗಿ) ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ ತಜ್ಞರ ಸಲಹೆ ಪಡೆಯುವುದು ಸುಕ್ತ.
* ಹತ್ತಿ ಬೆಳೆಯು 45-120 ದಿನಗಳ ಹಂತದಲ್ಲಿರುವಾಗ ಪೋಷಕಾಂಶಗಳನ್ನು ಬೇಡುತ್ತದೆ. ಹೀಗಾಗಿ ಅಗತ್ಯ ಪ್ರಮಾಣದ ಸಾರಜನಕ, ರಂಜಕ ಮತ್ತು ಪೋಟ್ಯಾಶ್ ನೀಡುವುದು ಸೂಕ್ತ.
* ಮಳೆ ಆಶ್ರಿತ ಪ್ರದೇಶದಲ್ಲಿ ಬಿಟಿ ಹತ್ತಿ ಬೆಳೆಯುವವರು ಪ್ರತಿ ಹೆಕ್ಟೇರ್‌ಗೆ ತಲಾ 75 ಕಿ.ಗ್ರಾಂ ರಂಜಕ ಮತ್ತು ಪೊಟ್ಯಾಶ್, 100 ಕಿ.ಗ್ರಾಂ. ಸಾರಜನಕ (ನೀರಾವರಿಯಲ್ಲಿ 120-150 ಕಿ.ಗ್ರಾಂ) ನೀಡಬೇಕು.
* ಉತ್ತಮ ಮಳೆಯಾಗುವ ಅರೆಮಲೆನಾಡು ಪ್ರದೇಶದಲ್ಲಿ ಅರ್ಧದಷ್ಟು ಸಾರಜನಕ, ಪೂರ್ತಿ ಪ್ರಮಾಣದ ರಂಜಕ ಮತ್ತು ಪೋಟ್ಯಾಷ್ ರಸಗೊಬ್ಬರಗಳನ್ನು ಬಿತ್ತುವಾಗ ಹಾಕಬೇಕು. ಉಳಿದ ಶೇ. 50ರ ಸಾರಜಕನಕವನ್ನು ಬಿತ್ತನೆಯಾದ 60 ದಿನಗಳ ನಂತರ ಮೇಲು ಗೊಬ್ಬರವಾಗಿ ನೀಡಬೇಕು.
* ಕಳೆ ಹತೋಟಿ ಮಾಡಿದ ನಂತರವೇ ಪೋಷಕಾಂಶಗಳನ್ನು ನೀಡಬೇಕು. ನೀರಾವರಿ ಹತ್ತಿಯಲ್ಲಿ ಶೇ.50ರಷ್ಟು ಸಾರಜನಕ, ಪೂರ್ತಿ ಪ್ರಮಾಣದ ರಂಜಕ ಮತ್ತು ಪೋಟ್ಯಾಷ್ ರಸಗೊಬ್ಬರಗಳನ್ನು ಬಿತ್ತುವಾಗ ಹಾಕಬೇಕು. ಉಳಿದ ಶೇ.50ರ ಸಾರಜನಕವನ್ನು ಮೂರು ಸಮಭಾಗಗಳಲ್ಲಿ ಕ್ರಮವಾಗಿ ಬಿತ್ತನೆಯಾದ 50, 80 ಮತ್ತು 110 ದಿನಗಳಲ್ಲಿ ಮೇಲು ಗೊಬ್ಬರವಾಗಿ ಹಾಕಬೇಕು.
* ಮಳೆ ಆಶ್ರಿತ ಬೆಳೆಯಲ್ಲಿ ಸಾರಜನಕ, ರಂಜಕ, ಪೋಟ್ಯಾಷ್ ರಸಗೊಬ್ಬರಗಳನ್ನು 3 ಸಮಭಾಗಗಳಲ್ಲಿ ಕ್ರಮವಾಗಿ ಬಿತ್ತುವಾಗ, ಬಿತ್ತನೆಯಾದ ನಂತರ 60 ಮತ್ತು 90 ದಿನಳ ಅಂತರದಲ್ಲಿ ಕೊಡಬೇಕು.
* ಬೀಜದಿಂದ ಬೀಜಕ್ಕೆ ಕಡಿಮೆ ಅಂತರವಿರುವಾಗ ಬೀಜದ ಸುತ್ತ 5 ಸೆಂ.ಮೀ. ದೂರ ಮತ್ತು ಅಷ್ಟೇ ಆಳದಲ್ಲಿ ರಸಗೊಬ್ಬರ ಹಾಕಬೇಕು. ಹೀಗೆ ಮಾಡಿದರೆ ರಸಗೊಬ್ಬರ ಸಸ್ಯಗಳಿಗೆ ಸದ್ಬಳಕೆಯಾಗುತ್ತದೆ.
* ಹತ್ತಿಯು ಹೂ ಬಿಡುವಾಗ ಮತ್ತು ಹೂವುಗಳು ಪೂರ್ತಿ ಅರಳಿದಾಗ ಪ್ರತಿ ಲೀಟರ್ ನೀರಿಗೆ 0.25 ಮಿ.ಲೀ ಪ್ಲಾನೋಫಿಕ್ಸ್ ಬೆರೆಸಿ ಸಿಂಪಡಿಸಬೇಕು. ಪ್ರತಿ ಹೆಕ್ಟೇರಿಗೆ 800ರಿಂದ 1000 ಲೀ. ದ್ರಾವಣ ಬಳಸಬೇಕು. ಇದರಿಂದ ಮೊಗ್ಗು, ಹೂವು, ಕಾಯಿ ಉದುರುವಿಕೆ ಕಡಿಮೆಯಾಗುತ್ತದೆ.
* ಇತರೆ ಪೋಷಕಾಂಶಗಳ ಜೊತೆಗೂ ಪ್ಲಾನೋಫಿಕ್ಸ್ ಬೆರೆಸಿ ಸಿಂಪಡಿಸಬಹುದು. ಖುಷ್ಕಿ ಬೆಳೆಯಲ್ಲಿ ಬಿತ್ತನೆ ಮಾಡಿದ 65 ದಿನಗಳ ನಂತರ ಶೇ.10ರ ಮಿಥೆನಾಲ್ ಸಿಂಪಡಣೆ ಮಾಡಿದರೆ ಇಳುವರಿ ಹೆಚ್ಚಾಗುತ್ತದೆ.
* ಈ ನಡುವೆ ಬೆಳೆಯು ಹಳದಿ ಅಥವಾ ತಿಳಿ ಹಸಿರು ಬಣ್ಣದಲ್ಲಿದ್ದಾಗ ಎರಡು ಬಾರಿ ಜಿಂಕ್, ಮೆಗ್ನೇಶಿಯಂ, ಕಬ್ಬಿಣ (ಎರೆ ಜಮೀನಿನಲ್ಲಿ), ಬೋರಾನ್ ಸಿಂಪರಣೆ ಮಾಡಬಹುದು.
* ಹೂವಾಡುವ ಹಂತದಲ್ಲಿ ಮಳೆ ಬೀಳುತ್ತಿದ್ದರೆ ಹೆಕ್ಸಾಕೊನಾಜೋಲ್, ಕಾರ್ಬೆಂಡೆಜಿA, ಬ್ಲೆಟಾಕ್ಸ್ ಸಿಂಪಡಿಸಿ.
* ಗುಲಾಬಿ ಕಾಯಿ ಕೊರಕ ಬಾಧೆ ಹತೋಟಿಗೆ 45-90 ದಿನಗಳ ಹಂತದಲ್ಲಿ ಕೀಟನಾಶಕ ಸಿಂಪಡಿಸಬೇಕು. ಕಾಯಿಕೊರಕ ಕೀಟಗಳ ಸಮೀಕ್ಷೆ ಮಾಡಲು 40 ದಿನದ ಬೆಳೆಯಲ್ಲಿ ಪ್ರತಿ ಹೆಕ್ಟೇರಿಗೆ ಐದು ಮೋಹಕ ಬಲೆಗಳನ್ನು 50 ಮೀಟರ್ ಅಂತರದಲ್ಲಿ ನೆಡಬೇಕು.
* ಕಾಯಿಕೊರಕ ಹುಳುವಿನ ತತ್ತಿ ಸಂಖ್ಯೆ ಆಧರಿಸಿ ತತ್ತಿ ನಾಶಕಗಳಾದ ಪ್ರೋಫೆನ್‌ಫಾಸ್ 50 ಇ.ಸಿ 2.0 ಮಿ.ಲೀ. ಅಥವಾ ಥೈಯೋಡಿಕಾರ್ಬ್ 75 ಡಬ್ಲೂಪಿ 1.0 ಗ್ರಾಂ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು. ನೀರಾವರಿ ಹತ್ತಿಯಲ್ಲಿ 0.6 ಗ್ರಾಂ. ಮಿಥೋಮಿಲ್ 40 ಎಸ್.ಪಿ ಯನ್ನು ಪ್ರತಿ ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬಹುದು.
Share your comments