1. ಅಗ್ರಿಪಿಡಿಯಾ

ಮಣ್ಣಿನ ಹಂಗಿಲ್ಲದೆ ಅರಿಶಿಣ ಕೃಷಿಯಲ್ಲಿ ಕ್ರಾಂತಿಕಾರಿ ಯಶಸ್ಸು ಕಂಡ ನೌಕಾದಳದ ನಿವೃತ್ತ ಅಧಿಕಾರಿ!

ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಸಿ.ವಿ.ಪ್ರಕಾಶ್.

ದಶಕಗಳಿಂದ ಸಾಂಪ್ರದಾಯಿಕ ಕೃಷಿ ಪದ್ಧತಿ ಮೂಲಕ ಅರಿಶಿಣ ಬೆಳೆಯುತ್ತಿರುವ ಸಾವಿರಾರರು ರೈತರು ನಮ್ಮ ನಡುವೆ ಇದ್ದಾರೆ. ಅವರೆಲ್ಲರೂ ಒಂದು ಗಿಡದಿಂದ ಹೆಚ್ಚೆಂದರೆ 1 ಕೆ.ಜಿ ಅರಿಶಿಣ ಬೆಳೆದಿರಬಹುದು. ಆದರೆ ಇಲ್ಲೊಬ್ಬ ನಿವೃತ್ತ ಯೋಧ, ಒಂದು ಅರಿಶಿಣದ ಗಿಡದಿಂದ ಒಂದಲ್ಲ, ಎರಡಲ್ಲ, ಬರೋಬ್ಬರಿ 8 ಕೆ.ಜಿ ಅರಿಶಿಣ ಇಳುವರಿ ಪಡೆಯುತ್ತಿದ್ದಾರೆ. ಅದೂ ಕೂಡ ಮಣ್ಣು ಬಳಸದೆಯೇ!!

ನಂಬಲು ಅಸಾಧ್ಯ ಎನಿಸಿದರೂ ಇದು ಸತ್ಯ. ಹಾಗೇ ಇದನ್ನು ಸಾಧ್ಯವಾಗಿಸಿ ತೋರಿಸಿರುವುದು ಹುಟ್ಟಿದಾಗಿನಿಂದ ಕೃಷಿಯನ್ನೇ ಅನುಸರಿಸಿಕೊಂಡು ಬಂದಿರುವ ರೈತನಲ್ಲ, ಬದಲಿಗೆ ಭಾರತೀಯ ನೌಕಾ ಪಡೆಯ ನಿವೃತ್ತ ಅಧಿಕಾರಿ ಎಂದರೆ ನಿಮ್ಮ ಅಚ್ಚರಿ ಮತ್ತಷ್ಟು ಹೆಚ್ಚಾಗಬಹುದು. ಈಗೀಗ ಸಾಂಪ್ರದಾಯಿಕ ಕೃಷಿ ವಲಯ ಹಲವು ಕ್ರಾಂತಿಕಾರಿ ತಿರುವುಗಳನ್ನು ಪಡೆಯುತ್ತಿದೆ. ಉತ್ಸಾಹಿ, ಹೊಸ ಕೃಷಿಕರು ವಿನೂತನ ಪ್ರಯತ್ನ, ಪ್ರಯೋಗಗಳ ಮೂಲಕ ಕೃಷಿ ಕ್ಷೇತ್ರವನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತಿದ್ದಾರೆ. ಹಾಗೇ ಕೃಷಿಕರು ಸಹ ಅಧಿಕ ಆದಾಯ ಗಳಿಸಿ ಸಿರಿವಂತರಾಗಲು ದಾರಿ ತೋರಿಸಿಕೊಡುತ್ತಿದ್ದಾರೆ. ಅಂತಹ ಹೊಸತನದ ದಾರಿ ತೋರಿಸುತ್ತಿರುವವರಲ್ಲಿ ಒಬ್ಬರು ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಸಿ.ವಿ.ಪ್ರಕಾಶ್.

ಕೃಷಿ ವಲಯದತ್ತ ಒಲವು

ಬೆಂಗಳೂರಿನ ಚಿಕ್ಕಸಂದ್ರದಲ್ಲಿರುವ ಸಿ.ವಿ ಹೈಡ್ರೋ ಟ್ರೈನಿಂಗ್ ಸೆಂಟರ್‌ನಲ್ಲಿ ಅರಿಶಿಣ ಕ್ರಾಂತಿಯೇ ನಡೆಯುತ್ತಿದೆ. ಈ ಕ್ರಾಂತಿಯ ರೂವಾರಿ ಸಿ.ವಿ.ಪ್ರಕಾಶ್. ನೌಕಾಪಡೆಯ ಸೇವೆಯಿಂದ ನಿವೃತ್ತರಾದ ಬಳಿಕ ಪ್ರಕಾಶ್ ಅವರು ಕೃಷಿ ವಲಯದತ್ತ ಒಲವು ಬೆಳೆಸಿಕೊಂಡಿದ್ದಾರೆ. ಹಲವು ವರ್ಷಗಳಿಂದ ಅರಿಶಿಣ ಬೆಳೆಯುವ ವಿನೂತನ ವಿಧಾನಗಳ ಮೇಲೆ ಪ್ರಯೋಗಗಳನ್ನು ನಡೆಸುತ್ತಾ ಬಂದಿರುವ ಇವರು, ಮಣ್ಣಿನ ನೆರವಿಲ್ಲದೆ ಅರಿಶಿಣ ಬೆಳೆದು ತೋರಿಸಿದ್ದಾರೆ. ಮಣ್ಣಿನ ನೆರವಿಲ್ಲದೆ ಗಿಡವನ್ನೇನೋ ಬೆಳೆಸಬಹುದು ಆದರೆ ಪ್ರಕಾಶ್ ಅವರು ಮಾಡಿರುವ ಸಾಧನೆ. ಸಾಧಿಸಿರುವ ಯಶಸ್ಸು ಈ ಹಿಂದೆ ಯಾವೊಬ್ಬ ಅರಿಶಿಣ ಬೆಳೆಗಾರರಿಂದಲೂ ಸಾಧ್ಯವಾಗಿಲ್ಲ. ಅದೇನೆಂದರೆ, ಕೇವಲ ತೆಂಗಿನ ನಾರಿನ ಪುಡಿಯ ನೆರವಿನಿಂದ ಅರಿಶಿಣ ಕೃಷಿ ನಡೆಸುತ್ತಿರುವ ಪ್ರಕಾಶ್, ಒಂದು ಗಿಡದಿಂದ 8.5 ಕೆ.ಜಿ.ವರೆಗೆ ಅರಿಶಿಣದ ಇಳುವರಿ ಪಡೆಯುತ್ತಿದ್ದಾರೆ.

ಸಾವಿರಾರು ರೈತರಿಗೆ ತರಬೇತಿ

ಹಲವು ವರ್ಷಗಳಿಂದ ಪ್ರಯೋಗಗಳಲ್ಲಿ ನಿರತರಾಗಿ ಅದರಲ್ಲಿ ಯಶಸ್ಸು ಕಂಡ ಪ್ರಕಾಶ್, ಅರಿಶಿಣ ಕೃಷಿಯಲ್ಲಿ ತಾವು ಕಂಡ ಯಶಸ್ಸನ್ನು ಇತರರಿಗೂ ತಿಳಿಸಿಕೊಡಲು ಮುಂದಾಗಿ 2008ರಿಂದ ಇಲ್ಲಿಯವರೆಗೆ 12,000ಕ್ಕೂ ಹೆಚ್ಚು ಆಸಕ್ತ ರೈತರಿಗೆ ತರಬೇತಿ ನೀಡಿದ್ದಾರೆ. 2020ರಲ್ಲಿ ಲಾಕ್‌ಡೌನ್ ಜಾರಿಯಾದಂದಿನಿAದ ತಮ್ಮ ಬಿಡುವಿನ ಸಮಯವನ್ನು ಆಸಕ್ತ, ಉತ್ಸಾಹಿ ರೈತರಿಗೆ ತರಬೇತಿ ನೀಡಲು ಮೀಸಲಿಟ್ಟಿರುವ ಪ್ರಕಾಶ್, ಮಣ್ಣು ರಹಿತ ಕೃಷಿ ತಂತ್ರಜ್ಞಾನವಾಗಿರುವ ಹೈಡ್ರೋಪೋನಿಕ್ ಪದ್ಧತಿ ಮೂಲಕ ಲಾಭದಾಯಕ ಅರಿಶಿಣ ಕೃಷಿ ಕೈಗೊಳ್ಳುವ ಬಗ್ಗೆ ರೈತರಿಗೆ ತರಬೇತಿ ನೀಡುತ್ತಿದ್ದಾರೆ.

ಮಣ್ಣಿಲ್ಲದ ಕೃಷಿ ಕ್ರಾಂತಿ!

ಚಿಕ್ಕಸAದ್ರದಲ್ಲಿರುವ ಸಿ.ವಿ ಹೈಡ್ರೋ ಟ್ರೈನಿಂಗ್ ಕೇಂದ್ರದಲ್ಲಿ 2020ರ ಮೇ ತಿಂಗಳಿನಿAದ 2021ರ ಜನವರಿವರೆಗೆ ಹೈಡ್ರೋಪೋನಿಕ್ ಪದ್ಧತಿ ಮೂಲಕ ಸೇಲಂ ತಳಿಯ ಅರಿಶಿಣ ಬೆಳೆಯುವ ಪ್ರಯೋಗ ಆರಂಭಿಸಿದ ಪ್ರಕಾಶ್, ಅಚ್ಚರಿಯ ಫಲಿತಾಂಶಗಳನ್ನು ಪಡೆದರು. ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಳೆಯುವ ಅರಿಶಿಣದಲ್ಲಿ ಕರ್ಕ್ಯುಮಿನ್ (ಅರಿಶಿಣದ ಬಣ್ಣ ಹಾಗೂ ಸುವಾಸನೆಯನ್ನು ಹೆಚ್ಚಿಸುವ ಮತ್ತು ಅರಿಶಿಣ ಪುಡಿಯಲ್ಲಿ ಇರಬೇಕಾಗಿರುವ ಪ್ರಮುಖ ಅಂಶವಾಗಿರುವ ಹಳದಿ ಫೀನಾಲಿಕ್ ಸಂಯುಕ್ತ) ಅಂಶದ ಪ್ರಮಾಣ ಶೇ.3ರಷ್ಟಿದ್ದರೆ, ಪ್ರಕಾಶ್ ಅವರು ಬೆಳೆದ ಅರಿಶಿಣದಲ್ಲಿ ಇದರ ಪ್ರಮಾಣ ಶೇ.5.91ರಷ್ಟಿತ್ತು. ಇದರೊಂದಿಗೆ ಪ್ಯಾಕೆಟ್‌ನಲ್ಲಿ ಬೆಳೆಸಿದ ಒಂದು ಸಸಿಯಿಂದ ಪ್ರಕಾಶ್ ಬರೋಬ್ಬರಿ 8.17 ಕೆ.ಜಿ ಅರಿಶಿಣ ಇಳುವರಿ ಪಡೆದಿದ್ದರು. ‘ತಮಿಳುನಾಡು, ಕರ್ನಾಟಕ ಸೇರಿ ವಿವಿಧೆಡೆ ಅರಿಶಿಣ ಬೆಳೆಯುವ ರೈತರು ಒಂದು ಗಿಡದಿಂದ 500-700 ಗ್ರಾಂ. ಇಳುವರಿ ಪಡೆಯುತ್ತಾರೆ. ಅತ್ಯಂತ ಕಟ್ಟುನಿಟ್ಟಾಗಿ ಕೃಷಿ ಮಾಡುವ ರೈತರು ಹೆಚ್ಚೆಂದರೆ 1 ಕೆ.ಜಿ ಅರಿಶಿಣ ಬೆಳೆಯಬಹುದು’ ಎನ್ನುತ್ತಾರೆ ಸಿ.ವಿ.ಪ್ರಕಾಶ್.

ಪ್ರಕಾಶ್ ಅವರು ಬೆಳೆದ ಅರಿಶಿಣವು ಅತಿ ಹೆಚ್ಚು ಕರ್ಕ್ಯುಮಿನ್ ಅಂಶ ಹಾಗೂ ಅಧಿಕ ಇಳುವರಿಯ ಹೊರತಾಗಿ ಹಲವು ವಿಶೇಷಗಳನ್ನು ಹೊಂದಿದೆ. ಬೆಂಗಳೂರಿನ ಯೂರೋಫಿನ್ಸ್ ಪ್ರಯೋಗಾಲಯದಲ್ಲಿ ನಡೆದ ಪರೀಕ್ಷೆಗಳ ಫಲಿತಾಂಶದ ಪ್ರಕಾರ, ಈ ಅರಿಶಿಣದಲ್ಲಿ ಹಾನಿಕಾರಕ ರಾಸಾಯನಿಕ ಲೋಹದ ಸಣ್ಣ ಕುರುಹು ಕೂಡ ಇಲ್ಲ. ಕಾರಣ ಪ್ರಕಾಶ್ ಅವರು ಅರಿಶಿಣ ಬೆಳೆಯಲು ಯಾವುದೇ ರೀತಿಯ ರಾಸಾಯನಿಕ ಬಳಸಿಲ್ಲ. ಹಾಗೇ, ಅರಿಶಿಣದಲ್ಲಿ ಯಾವುದೇ ಹಾನಿಕಾರಕ ಜೀವಾಣುಗಳು (ಬ್ಯಾಕ್ಟೀರಿಯಾ, ಯೀಸ್ಟ್, ವೈರಸ್, ಶಿಲಿಂದ್ರ, ಪ್ರಿಯಾನ್, ಪ್ರೋಟೋಜೋವಾ ಅಥವಾ ಅವುಗಳ ವಿಶಕಾರಿ ಜೀವಾಣುಗಳು) ಕಂಡುಬAದಿಲ್ಲ. ಹೀಗಾಗಿ ಪ್ರಕಾಶ್ ಅವರು ಬೆಳೆದ ಅರಿಶಿಣವು ಶೇ.100ರಷ್ಟು ಸುರಕ್ಷಿತವಾಗಿದೆ.

ಪಾಲಿಥಿಲೀನ್ ಬ್ಯಾಗ್ ಬಳಕೆ

ಪ್ರಕಾಶ್ ಅವರು ಅರಿಶಿಣ ಬೆಳೆಯಲು ಪಾಲಿಥಿಲೀನ್ (ಪಾಲಿಥಿನ್) ಬ್ಯಾಗ್ ಬಳಸುತ್ತಾರೆ. ಸಾಮಾನ್ಯವಾಗಿ ಗಿಡ ಬೆಳೆಸುವಾಗ ಈ ಚೀಲಗಳ ಒಳಗೆ ಮಣ್ಣು ಹಾಕಲಾಗುತ್ತದೆ ಆದರೆ ಪ್ರಕಾಶ್, ಇದರೊಳಗೆ ಮಣ್ಣಿನ ಬದಲಿಗೆ ತೆಂಗಿನ ನಾರಿನ ಪುಡಿ (ಕೊಕೊ ಪೀಟ್) ಹಾಕಿ ಅದರಲ್ಲಿ ಗಿಡ ಬೆಳೆಸುತ್ತಾರೆ. ಹೀಗೆ ಸಾವಿರಾರು ಪಾಲಿಥಿಲೀನ್ ಬ್ಯಾಗ್‌ಗಳನ್ನ ನೀಟಾಗಿ ಜೋಡಿಸಿಟ್ಟು ಅವುಗಳ ಸುತ್ತ ನೆಟ್ ಹೌಸ್ ನಿರ್ಮಿಸುತ್ತಾರೆ. ಅರಿಶಿಣ ಬೆಳೆಯು ನೆರಳನ್ನು ಬಯಸುವುದರಿಂದ ನೆಟ್ ಹೌಸ್‌ನಲ್ಲಿ ಈ ಗಿಡಗಳು ಸೊಂಪಾಗಿ ಬೆಳೆಯುತ್ತವೆ. ಈ ಪ್ರಯೋಗಕ್ಕೆ ಮುಂದಾದಾಗ ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಅರಿಶಿಣ ಬೆಳೆದಿದ್ದ ಪ್ರಕಾಶ್ ಅವರ ಸ್ನೇಹಿತರೊಬ್ಬರು ಸುಮಾರು 8 ಕೆ.ಜಿಯಷ್ಟು ಅರಿಶಿಣದ ಬೀಜ (ಕೊಂಬು) ಗಳನ್ನು ತಂದು ಕೊಟ್ಟರು. ಪ್ರತಿ ಬ್ಯಾಗ್‌ಗೆ 60 ಗ್ರಾಂ. ಬೀಜ ಊರಿದ ಪ್ರಕಾಶ್, ಆರಂಭದಲ್ಲಿ 100 ಬ್ಯಾಗ್‌ಗಳಲ್ಲಿ ಅರಿಶಿಣ ಬೆಳೆದು ಯಾರೂ ನಿರೀಕ್ಷಿಸಿರದಷ್ಟು ಇಳುವರಿ ಪಡೆದರು.

ಆರೇಂಜ್ ರೆವಲ್ಯೂಷನ್

ಆರಂಭಿಕ ಹಂತದಲ್ಲೇ ದೊರೆತ ಯಶಸ್ಸಿನಿಂದ ಉತ್ತೇಜಿತರಾದ ಪ್ರಕಾಶ್, 2021ರ ಜನವರಿ ಕೊನೆಯ ವಾರದಲ್ಲಿ ಮಿಷನ್ ಟರ್ಮರಿಕ್ ಆರಂಭಿಸಿ, ಅದರ ಅಡಿಯಲ್ಲೇ ‘ಆರೇಂಜ್ ರೆವಲ್ಯೂಷನ್’ ಅನ್ನೂ ಘೋಷಿಸಿದರು. ಈ ಕ್ರಾಂತಿ ಅಡಿಯಲ್ಲಿ ಪ್ರಕಾಶ್ ಅವರು, ಪಾಲಿಥಿಲೀನ್ ಚೀಲಗಳು ಹಾಗೂ ತೆಂಗಿನ ನಾರಿನ ಪುಡಿ ಬಳಸಿಕೊಂಡು ಮಣ್ಣು ರಹಿತ ಅರಿಶಿಣ ಕೃಷಿ ಮಾಡುವುದು ಮತ್ತು ಅದರಿಂದ ಹೆಚ್ಚು ಇಳುವರಿ ಪಡೆದು ಅಧಿಕ ಲಾಭ ಗಳಿಸುವುದು ಹೇಗೆ ಎಂಬ ಕುರಿತು ಆಸಕ್ತ ರೈತರು ಹಾಗೂ ವಿವಿಧ ಕ್ಷೇತ್ರಗಳ ಆಸಕ್ತ ಜನರಿಗೆ ತರಬೇತಿ, ಮಾರ್ಗದರ್ಶನ ನೀಡುತ್ತಾರೆ.

ಕೃಷಿ ಎಂದರೆ ತಮಾಷೆ ಅಲ್ಲ ಎಂದು ಹೇಳುವ ಪ್ರಕಾಶ್, ದಿನದ 11 ತಾಸು ಸಮಯವನ್ನು ಕೃಷಿಗೆ ಮೀಸಲಿಟ್ಟಿದ್ದಾರೆ. ಹಾಗೇ, ತಮ್ಮಿಂದ ತರಬೇತಿ ಪಡೆಯಲು ಇಚ್ಛಿಸುವವರು ಕೂಡ ಕೃಷಿ ಮತ್ತು ಮಣ್ಣು ರಹಿತ ಹೈಡ್ರೋಪೋನಿಕ್ ಪದ್ಧತಿಯ ಕೃಷಿ ಬಗ್ಗೆ ಅತೀವ ಆಸಕ್ತಿ ಹೊಂದಿರಬೇಕು ಎಂದು ಬಯಸುತ್ತಾರೆ. ತರಬೇತಿ ಶುಲ್ಕ ಹಾಗೂ ಇತರ ಮಾಹಿತಿಗಾಗಿ https://eduversity.cvhydro.in/ ಗೆ ಭೇಟಿ ನೀಡಿ.

Published On: 18 August 2021, 01:45 PM English Summary: retired navy officer who has revolutionized turmeric farming without soil

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.