ಹುಣಸೆ ಹಣ್ಣು ಎಲ್ಲರಿಗೂ ಇಷ್ಟವಾಗುವ ಮಸಾಲೆ ಪದಾರ್ಥ. ಇಂತ ಹುಣಸೆಹಣ್ಣಿನ ಕುರಿತು ರಾಮನಗರ ಜಿಲ್ಲೆ, ಮಾಗಡಿ ತಾಲ್ಲೂಕಿನ ಚಂದೂರಾಯನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಲತಾ ಆರ್. ಕುಲಕರ್ಣಿ, ಡಾ. ಸವಿತಾ ಎಸ್. ಮಂಗಾನವರ ಮತ್ತು ಕುಮಾರಿ ರಂಜೀತ ಆರ್. ಬರೆದ ಲೇಖನ ನಿಮ್ಮ ಓದಿಗೆ..
ಹುಣಸೆ ಹಣ್ಣು ಎಲ್ಲರಿಗೂ ಇಷ್ಟ ಹಾಗೂ ಹುಣಸೆ ಹಣ್ಣಿನ ಹೆಸರು ಕೇಳಿದರೆ ಬಾಯಲ್ಲಿ ನೀರು ಬರುತ್ತದೆ. ಈ ಹುಣಸೆ ಮರ ಮೂಲತಃ ಆಫ್ರಿಕಾ ಖಂಡದ ಪೂರ್ವ ಭಾಗದ್ದು, ಬಹಳ ಹಿಂದೆಯೇ ಇದು ಭಾರತಕ್ಕೆ ಪರಿಚಯಿಸಲ್ಪಟ್ಟಿದ್ದು, ಸಿಹಿ ಮತ್ತು ಕಟುವಾದ ಹುಣಸೆಹಣ್ಣು. ದಕ್ಷಿಣ ಏಷ್ಯಾದ ಪ್ರತಿ ಅಡುಗೆ ಮನೆಯಲ್ಲಿ ಹೆಚ್ಚಾಗಿ ಬಳಸಲಾಗುವ ಆಹಾರದ ವಸ್ತು ಹಾಗೂ ಎಲ್ಲರೂ ಬಳಕೆ ಮಾಡುವ ಚಿರಪರಿಚಿತವಿರುವ ಸಾಂಬಾರ ಪದಾರ್ಥ.
ಇದನ್ನೂ ಓದಿರಿ: ಕೃಷಿ ಭೂಮಿಯಲ್ಲಿ ಪಾರ್ಥೇನಿಯಂ ಮಹಾಮಾರಿ; ಇದರ ನಿರ್ವಹಣೆ, ಹತೋಟಿ ಕ್ರಮಗಳು..
ಇದು ಭಾರತದೆಲ್ಲೆಡೆ ರಸ್ತೆ ಬದಿಗಳಲ್ಲಿ ಸಾಲು ಮರಗಳಾಗಿ, ನೆಡುತೋಪುಗಳಾಗಿ, ಹೊಲಗಳ ಬದುಗಳ ಮೇಲೆ ಬೆಳೆಯಲಾಗುತ್ತಿದೆ. ಸಾಮಾನ್ಯವಾಗಿ ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಮತ್ತು ಬಂಜರು ಭೂಮಿಯಲ್ಲಿ ಬೆಳೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಇದರ ಪ್ರಾಮುಖ್ಯತೆ ಅರಿತು ಹೆಚ್ಚಿನ ಪ್ರದೇಶದಲ್ಲಿ ವಿಸ್ತರಿಸಲಾಗಿದೆ.
ಹುಣಸೆ ಮರವು ಫ್ಯಾಬೇಸಿಯ ಕುಟುಂಬಕ್ಕೆ ಸೇರಿದ ದೊಡ್ಡ ಉಷ್ಣವಲಯದ ಮರಗಳಲ್ಲಿ ಒಂದಾಗಿದೆ. ಇದರ ವೈಜ್ಞಾನಿಕ ಹೆಸರು ಟ್ಯಾಮರಿಂಡ್ ಇಂಡಿಕಾ. ಇದು ಹೆಚ್ಚಾಗಿ ಉಷ್ಣವಲಯದಲ್ಲಿ ಬೆಳೆಯುವ ಮರ.
ಈ ಮರದ ಹಣ್ಣನ್ನು ವಿವಿಧ ಅಡುಗೆ ಹಾಗೂ ಪಾಕಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತಿದೆ. ಇದನ್ನು ಪ್ರಪಂಚದಾದ್ಯAತ ಎಲ್ಲಾ ಕಡೆ ಬೆಳೆಯಲಾಗುತ್ತದೆ. ಇದೊಂದು ಸಿಹಿ ಹುಳಿ ಮಿಶ್ರಿತ ಹಣ್ಣು. ಇದರಲ್ಲಿರುವ ಟಾರ್ಟಾರಿಕ್ ಆಮ್ಲದಿಂದಾಗಿ ಹೆಚ್ಚಿನ ರುಚಿಯನ್ನು ಒದಗಿಸುತ್ತದೆ.
ಹುಣಸೆ ಹಣ್ಣಿನಲ್ಲಿರುವ ಜೀವಸತ್ವ ‘ಸಿ’, ‘ಇ’, ‘ಬಿ’, ಖನಿಜಾಂಶಗಳಾದ ಕಬ್ಬಿಣ, ಮೆಗ್ನೀಷಿಯಂ, ರಂಜಕ, ಪೊಟ್ಯಾಷಿಯಂ ಅಂಶವು ಆರೋಗ್ಯದ ದೃಷ್ಟಿಯಲ್ಲೂ ಮಹತ್ವದ ಸ್ಥಾನವನ್ನು ಪಡೆದಿದೆ. ಹುಣಸೆ ಹಣ್ಣು ಉತ್ತಮ ಆ್ಯಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿರುವುದರಿಂದ ಉತ್ತಮ ಆರೋಗ್ಯಕ್ಕೆ ಸಹಕಾರಿ.
"ಆರೋಗ್ಯ ವೃದ್ದಿಗೆ-ಪೌಷ್ಠಿಕ ಕೈತೋಟ"
ಹುಣಸೆ ಹಣ್ಣಿನ ಪೌಷ್ಠಿಕ ಮೌಲ್ಯ ಮತ್ತು ಔಷಧೀಯ ಗುಣಗಳು:
- ಹುಣಸೆ ಹಣ್ಣು ಶರ್ಕರಪಿಷ್ಟ, ನಾರಿನಾಂಶ, ಕೊಬ್ಬು, ಸಸಾರಜನಕ, ಜೀವಸತ್ವಗಳಾದ ಬಿ೬, ‘ಸಿ’, ‘ಕೆ’, ‘ಇ’, ಖನಿಜಂಶಗಳಾದ ಸುಣ್ಣ, ಕಬ್ಬಿಣ, ಮೆಗ್ನೀಷಿಯಂ, ಪೊಟ್ಯಾಷಿಯಂ, ಸೋಡಿಯಂ, ಸತು ಸೇರಿದಂತೆ ವಿವಿಧ ಅಗತ್ಯ ಪೋಷಕಾಂಶಗಳನ್ನು ಹೊಂದಿದೆ.
- ಹುಣಸೆ ಹಣ್ಣಿನಲ್ಲಿರುವ ತಿರುಳು ಪಿಷ್ಟರಹಿತ ಪಾಲಿಸ್ಯಾಕರೈಡ್ ಅಥವಾ ಹೆಮಿಸೆಲ್ಯುಲೋಸ್, ಮ್ಯೂಸಿಲೇಜ್, ಪೆಕ್ಟಿನ್ ಮತ್ತು ಟ್ಯಾನಿನ್‌ಗಳಂತಹ ಆಹಾರಗಳು ನಾರಿನ ಸಮೃದ್ಧ ಮೂಲವಾಗಿದೆ. ೧೦೦ ಗ್ರಾಂ. ಹಣ್ಣಿನ ತಿರುಳು ಹೆಚ್ಚು ನಾರಿನಾಂಶವನ್ನು ಒದಗಿಸುತ್ತದೆ. ಆಹಾರದಲ್ಲಿನ ನಾರಿನಾಂಶವು ಕರುಳಿನಲ್ಲಿ ಪಚನಕ್ರಿಯೆಯನ್ನು ಪ್ರಚೋದಿಸಿ ಚಲನೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಮಲಬದ್ಧತೆಯನ್ನು ತಡೆಯುತ್ತದೆ.
- ತಿರುಳಿನಲ್ಲಿರುವ ನಾರಿನಾಂಶವು ಕೊಲೆಸ್ಟಾçಲ್‌ನಿಂದ ಉತ್ಪತ್ತಿಯಾದ ಪಿತ್ತ ಲವಣಗಳನ್ನು ಬಂಧಿಸುತ್ತವೆ. ಇದರಿಂದ ಕೊಲೊನ್‌ನಲ್ಲಿ ಅವುಗಳ ಮರುಹೀರಿಕೆ ಕಡಿಮೆಯಾಗುತ್ತದೆ. ಆ ಮೂಲಕ ದೇಹದಿಂದ “ಕೆಟ್ಟ” ಅಥವಾ ಎಲ್‌ಡಿ.ಎಲ್. ಕೊಲೆಸ್ಟರಾಲ್ ಮಟ್ಟವನ್ನು ಹೊರಹಾಕಲು ಸಹಾಯ ಮಾಡುತ್ತದೆ.
- ನಿಂಬೆಯಲ್ಲಿ ಸಿಟ್ರಿಕ್ ಆಮ್ಲವಿದ್ದರೆ, ಹುಣಸೆಹಣ್ಣು ಟಾರ್ಟಾರಿಕ್ ಆಮ್ಲದಲ್ಲಿ ಸಮೃದ್ಧವಾಗಿದೆ. ಟಾರ್ಟಾರಿಕ್ ಆಮ್ಲವು ಆಹಾರಕ್ಕೆ ಹುಳಿ ರುಚಿಯನ್ನು ನೀಡುತ್ತದೆ ಮತ್ತು ಪ್ರಬಲವಾದ ಉತ್ಕರ್ಷಣ ನಿರೋಧಕವಾಗಿ ಕಾರ್ಯ ನಿರ್ವಹಿಸುತ್ತದೆ. ಹೀಗಾಗಿ, ದೇಹವನ್ನು ಹಾನಿಕಾರಕ ಫ್ರೀ ರಾಡಿಕಲ್ಸ್‌ಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
- ಹುಣಸೆ ಹಣ್ಣು ಲಿಮೋನೆನ್, ಜೆರೇನಿಯೊಲ್, ಸಫ್ರೋಲ್, ಸಿನಾಮಿಕ್ ಆಮ್ಲ, ಮಿಥೈಲ್ ಲಿಸಿಲೇಟ್, ಪಿರಜಿನ್ ಮತ್ತು ಆಲ್ಕೆöಲ್ದಿಯಾಜೋಲ್‌ಗಳಂತಹ ಅನೇಕ ಬಾಷ್ಪಶೀಲ ಫೈಟೊಕೆಮಿಕಲ್‌ಗಳನ್ನು ಒಳಗೊಂಡಿದೆ. ಈ ಸಂಯುಕ್ತಗಳು ಹುಣಸೆ ಹಣ್ಣಿನ ಔಷಧೀಯ ಗುಣಗಳಿಗೆ ಕಾರಣವಾಗಿದೆ.
- ಹುಣಸೆ ಹಣ್ಣು ತಾಮ್ರ, ಪೊಟ್ಯಾಷಿಯಂ, ಸುಣ್ಣ, ಕಬ್ಬಿಣ, ಸೆಲೆನಿಯಮ್, ಸತು ಮತ್ತು ಮೆಗ್ನೀಷಿಯಂನಂತಹ ಖನಿಜಗಳ ಉತ್ತಮ ಮೂಲವಾಗಿದೆ. ಪೊಟ್ಯಾಷಿಯಂ ಜೀವಕೋಶ ಮತ್ತು ದೇಹದ ದ್ರವಗಳ ಒಂದು ಪ್ರಮುಖ ಅಂಶವಾಗಿದ್ದು, ಅದು ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೆಂಪು ರಕ್ತ ಕಣಗಳ ಉತ್ಪಾದನೆಗೆ ಕಬ್ಬಿಣವು ಅವಶ್ಯಕವಾಗಿದೆ ಮತ್ತು ಸೈಟೋಕ್ರೋಮ್ ಆಕ್ಸಿಡೇಸ್ ಕಿಣ್ವಗಳಿಗೆ ಸಹ-ಅಂಶವಾಗಿದೆ.
- ಹುಣಸೆ ಹಣ್ಣಿನಲ್ಲಿ ಥಯಾಮಿನ್, ಜೀವಸತ್ವ ‘ಎ’, ಪೋಲಿಕ್ ಆಮ್ಲ, ರೈಬೋಫ್ಲೇವಿನ್, ನಿಯಾಸಿನ್ ಮತ್ತು ಜೀವಸತ್ವ ‘ಸಿ’ ಸೇರಿದಂತೆ ಹಲವು ಪ್ರಮುಖ ಜೀವಸತ್ವಗಳು ಸಮೃದ್ಧವಾಗಿದೆ. ಈ ಜೀವಸತ್ವಗಳಲ್ಲಿ ಹೆಚ್ಚಿನವು ಮಾನವನ ದೇಹದಲ್ಲಿನ ಕಿಣ್ವ ಚಯಾಪಚಯ ಕ್ರಿಯೆಗೆ ಉತ್ಕರ್ಷಣ ನಿರೋಧಕ ಮತ್ತು ಸಹ-ಅಂಶದ ಕಾರ್ಯಗಳನ್ನು ನಿರ್ವಹಿಸುತ್ತವೆ.
- ಹುಣಸೆ ಹಣ್ಣಿನಲ್ಲಿ ಹೈಡ್ರೋಕ್ಸಿ ಸಿಟ್ರಿಕ್ ಆಸಿಡ್ (ಹೆಚ್.ಸಿ.ಎ.) ಅಧಿಕವಾಗಿದೆ. ಈ ಅಂಶವು ಕೊಬ್ಬಿನ ಉತ್ಪಾದನೆಯನ್ನು ನಿಧಾನಗೊಳಿಸುತ್ತದೆ. ಈ ಆಮ್ಲವು ಸಿಟ್ರಿಕ್ ಆಮ್ಲವನ್ನು ಹೋಲುತ್ತದೆ. ಈ ಗುಣವು ವಿವಿಧ ಸಸ್ಯಗಳಲ್ಲಿ ಇರುವುದನ್ನು ನಾವು ಗಮನಿಸಬಹುದು, ಆದರೆ ಹುಣಸೆ ಹಣ್ಣಿನಲ್ಲಿ ಇದು ಸಮೃದ್ಧವಾಗಿರುವುದನ್ನು ಕಾಣಬಹುದು. ಹೈಡ್ರೋಕ್ಸಿ ಸಿಟ್ರಿಕ್ ಆಮ್ಲ ದೇಹದಲ್ಲಿ ಇರುವ ಕಿಣ್ವಗಳನ್ನು ಪ್ರತಿಬಂಧಿಸುತ್ತದೆ. ಕೊಬ್ಬನ್ನು ಉತ್ತೇಜಿಸುವ ಕಿಣ್ವಗಳನ್ನು ನಿಯಂತ್ರಿಸುವುದು. ಸೆರೊಟೋನಿನ್ ನರಸಂವಾಹಕ ಮಟ್ಟವನ್ನು ಹೆಚ್ಚಿಸುವುದರ ಮೂಲಕ ಹೈಡ್ರೋಕ್ಸಿ ಸಿಟ್ರಿಕ್ ಆಮ್ಲವು ಹಸಿವನ್ನು ನಿಗ್ರಹಿಸುವುದು. ದೀರ್ಘಕಾಲದ ವ್ಯಾಯಾಮದ ಸಮಯದಲ್ಲಿ ಇದು ಕೊಬ್ಬನ್ನು ಕೂಡ ಕರಗಿಸುತ್ತದೆ.
- ಹುಣಸೆ ಹಣ್ಣಿನಲ್ಲಿರುವ ನಾರಿನಾಂಶ ಮತ್ತು ‘ಬಿ’ಜೀವಸತ್ವಗಳು ಜೀರ್ಣಕ್ರಿಯೆಯನ್ನು ಉತ್ತಮವಾಗಿರಿಸಲು ತುಂಬಾ ಸಹಕಾರಿಯಾಗಿವೆ.
- ಹುಣಸೆ ಹಣ್ಣಿನ ಸೇವನೆಯು ಹಸಿವನ್ನು ನಿಯಂತ್ರಣದಲ್ಲಿಡಲು ಹಾಗೂ ದೇಹದ ತೂಕ ಕಡಿಮೆಗೊಳಿಸಲು ಸಹಕಾರಿಯಾಗಿದೆ.
- ಹುಣಸೆ ಹಣ್ಣಿನಲ್ಲಿ ಅಲ್ಫಾ-ಅಮೈಲೇಸ್ ಇನ್‌ಹಿಬಿಟರ್ ಇದ್ದು, ಇದು ದೇಹದಲ್ಲಿ ಕಾರ್ಬೋಹೈಡ್ರೇಟ್ ಕರಗುವಿಕೆಯನ್ನು ತಡೆಯುತ್ತದೆ. ಇದರಿಂದ ಕಾರ್ಬೋಹೈಡ್ರೇಟ್ ಕರಗಿ ಸಕ್ಕರೆಯಾಗಿ ಪರಿವರ್ತನೆಯಾಗದಂತೆ ತಡೆಯುತ್ತದೆ. ಆದ್ದರಿಂದ ದೇಹದಲ್ಲಿ ಸಕ್ಕರೆ ಪ್ರಮಾಣವು ಹಿಡಿತದಲ್ಲಿರುವಂತೆ ಮಾಡುತ್ತದೆ. ಹುಣಸೆ ಹಣ್ಣನ್ನು ಸೇವಿಸುವುದರಿಂದ ದೇಹದ ತೂಕ ನಿಯಂತ್ರಣದಲ್ಲಿಡುವುದಲ್ಲದೇ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟು ಮಧುಮೇಹವನ್ನು ಸಹ ನಿಯಂತ್ರಿಸುತ್ತದೆ.
- ಹುಣಸೆ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಪೊಟ್ಯಾಷಿಯಂ, ನಾರಿನಂಶ ಹಾಗೂ ಆ್ಯಂಟಿ ಆಕ್ಸಿಡೆಂಟ್‌ಗಳು ಹೃದಯದ ಆರೋಗ್ಯವನ್ನು ಕಾಪಾಡುತ್ತವೆ. ಇದರಲ್ಲಿರುವ ನಾರಿನಾಂಶವು ದೇಹದಲ್ಲಿರುವ ಕೊಲೆಸ್ಟರಾಲ್‌ನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಹಾಗೆಯೇ ಇದರಲ್ಲಿನ ಆ್ಯಂಟಿ ಆಕ್ಸಿಡೆಂಟ್‌ಗಳು ದೇಹದಲ್ಲಿರುವ ಫ್ರೀ ರ‍್ಯಾಡಿಕಲ್‌ಗಳನ್ನು ನಿಯಂತ್ರಣದಲ್ಲಿಡುತ್ತವೆ.
- ಹುಣಸೆ ಹಣ್ಣಿನ ಇತರೆ ಪ್ರಯೋಜನಗಳೆಂದರೆ, ಹುಣಸೆ ಹಣ್ಣು ಗಂಟಲು ನೋವು ಅಥವಾ ಗಂಟಲು ಹುಣ್ಣನ್ನು ನಿವಾರಿಸುವುದು. ಹುಣಸೆ ಹಣ್ಣಿನಲ್ಲಿ ವಿಟಮಿನ್ ‘ಸಿ’ ಸಮೃದ್ಧವಾಗಿರುವುದರಿಂದ ವಿಟಮಿನ್ ‘ಸಿ’ ಕೊರತೆಯ ಕಾಯಿಲೆಗಳಿಗೆ ರಾಮಬಾಣ. ಹುಣಸೆ ಹಣ್ಣಿನ ರಸವು ಸಂಧು ನೋವು, ಮೊಣಕಾಲು ನೋವು ಸೇರಿದಂತೆ ಇನ್ನಿತರ ಸಂದು ನೋವುಗಳನ್ನು ನಿಯಂತ್ರಿಸುವುದು. ತ್ವಚೆಯ ಮೇಲೆ ಉಂಟಾಗುವ ಸುಟ್ಟ ಗಾಯಕ್ಕೆ ಹುಣಸೆ ಹಣ್ಣಿನ ಲೇಪನ ಮಾಡುವುದರಿಂದ ಬಹುಬೇಗ ಗುಣಮುಖವಾಗುವುದು.
ಆದ್ದರಿಂದ ದಿನನಿತ್ಯದ ಆಹಾರದಲ್ಲಿ ಹುಣಸೆ ಹಣ್ಣನ್ನು ಬಳಕೆ ಮಾಡಬೇಕು. ಸಾಂಬಾರು, ಪಲ್ಯ, ಗೊಜ್ಜು, ಚಟ್ನಿ ಇತ್ಯಾದಿಗಳಲ್ಲಿ ಬಳಕೆ ಮಾಡಬಹುದು ಹಾಗೂ ಆರೋಗ್ಯಕರ ಶರಬತ್ ಕೂಡ ತಯಾರಿಸಬಹುದು. ಯಥೇಚ್ಛವಾಗಿ ಬೆಳೆಯುವ ಕಡೆ ಇದರಿಂದ ಅನೇಕ ಮೌಲ್ಯವರ್ಧಿತ ಉತ್ಪನ್ನಗಳಾದ ತೊಕ್ಕು, ಗೊಜ್ಜು, ಕ್ಯಾಂಡಿ, ಹುಣಸೆ ಹಣ್ಣಿನ ಲಾಲಿಪಾಪ್, ಹುಣಸೆ ಹಣ್ಣು ಉಪಯೋಗಿಸಲು ಸಿದ್ದವಿರುವ ಪೇಸ್ಟ್, ಪೌಡರ್ ಮತ್ತು ಉಪ್ಪಿನಕಾಯಿಗಳನ್ನು ತಯಾರಿಸಿ ಅಧಿಕ ಆದಾಯ ಗಳಿಸಬಹುದು ಮತ್ತು ನಿರಂತರ ಉದ್ಯೋಗವನ್ನು ಪಡೆಯಬಹುದು.
ಡಾ. ಲತಾ ಆರ್. ಕುಲಕರ್ಣಿ, ಡಾ. ಸವಿತಾ ಎಸ್. ಮಂಗಾನವರ ಮತ್ತು ಕುಮಾರಿ ರಂಜೀತ ಆರ್.
ವಿಜ್ಞಾನಿಗಳು, ಕೃಷಿ ವಿಜ್ಞಾನ ಕೇಂದ್ರ, ಚಂದೂರಾಯನಹಳ್ಳಿ, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ
Share your comments