1. ಅಗ್ರಿಪಿಡಿಯಾ

ಫಲವತ್ತಾದ ಮಣ್ಣು ಸಸ್ಯಗಳಿಗೆ ಎಲ್ಲಾ ಪೋಷಕಾಂಶಗಳನ್ನು ಪೂರೈಸಬಲ್ಲದು

ಮಣ್ಣು ಅತ್ಯಂತ ಮಹತ್ವಪೂರ್ಣವಾದ ನೈಸರ್ಗಿಕ ಸಂಪನ್ಮೂಲ. ಮಣ್ಣು ಮತ್ತು ನೀರಿನ ಸದ್ಬಳಕೆಯೇ ಕೃಷಿಯ ಒಳಗುಟ್ಟು. ಫಲವತ್ತಾದ ಮಣ್ಣು ಸಸ್ಯಗಳಿಗೆ ಎಲ್ಲಾ ಪೋಷಕಾಂಶಗಳನ್ನು ಪೂರೈಸಬಲ್ಲದು. ಇತ್ತೀಚಿನ ಸಮೀಕ್ಷೆಯ ಪ್ರಕಾರ ಸತತವಾಗಿ ರಾಸಾಯನಿಕ ಗೊಬ್ಬರಗಳನ್ನು ಉಪಯೋಗಿಸುವ ಭೂಮಿಯಲ್ಲಿ ಉತ್ತಮ ತಳಿ ಬೀಜ, ಸಮೃದ್ಧಿ ನೀರು ಮತ್ತು ರಾಸಾಯನಿಕ ಗೊಬ್ಬರಗಳನ್ನು ಒದಗಿಸಿದರೂ ಕೂಡ ಇಳುವರಿ ಕುಗ್ಗುತ್ತಿರುವ ನಿದರ್ಶನಗಳು ಕಂಡು ಬರುತ್ತಿದೆ. ರಾಸಾಯನಿಕ ಗೊಬ್ಬರಗಳ ಅಸಮರ್ಪಕ ಉಪಯೋಗದಿಂದಾಗಿ ಲಘು ಪೋಷಕಾಂಶಗಳ ಕೊರತೆ, ಕುಂಠಿತಗೊಂಡ ಜೈವಿಕ ಚಟುವಟಿಕೆ ಹಾಗೂ ಮಣ್ಣಿನ ಭೌತಿಕ ಸ್ಥಿತಿಗಳಲ್ಲಿ ಏರುಪೇರು ಉಂಟಾಗಿರುವುದುಕಂಡು ಬಂದಿದೆ.

ವೇಗವಾಗಿ ಬೆಳೆಯುವ ಹಾಗೂ ಕಡಿಮೆ ಅವಧಿಯಲ್ಲಿಯೇ ಹೆಚ್ಚು ಪೋಷಕಾಂಶಗಳನ್ನು ಬಯಸುವ ಬೆಳೆಗಳಿಗೆ ಪೋಷಕಾಂಶಗಳನ್ನು ಒದಗಿಸುವಲ್ಲಿ ರಸಗೊಬ್ಬರಗಳಿಗೆ ಹೋಲಿಸುವಲ್ಲಿ ಸಾವಯವ ಗೊಬ್ಬರಗಳು ಹಿಂದೆ ಬೀಳುತ್ತಿದೆ. ಆದರೆ ರಾಸಾಯನಿಕ ಗೊಬ್ಬರಗಳ ಜೊತೆಗೆ ಸಾವಯವ ಗೊಬ್ಬರಗಳಾದ ಕೊಟ್ಟಿಗೆಗೊಬ್ಬರ, ಕಾಂಪೋಸ್ಟ್ ಹಾಗೂ ಇತರ ಜೈವಿಕ ಗೊಬ್ಬರಗಳನ್ನು ನೀಡಿದಾಗ ರಸಗೊಬ್ಬರದಿಂದಾಗುವ ದುಷ್ಪರಿಣಾಮವನ್ನು ತಡೆಗಟ್ಟಿ ಮಣ್ಣಿನ ಉತ್ಪಾದಕತೆಯನ್ನು ಕಾಯ್ದುಕೊಳ್ಳಬಹುದು.

ಮಣ್ಣು ವಿಶ್ಲೇಷಣೆ ಮತ್ತು ಮಹತ್ವ:

ಮಣ್ಣಿನಲ್ಲಿ ಸವುಳು, ಜವುಳು, ಆಮ್ಲ ಮತ್ತು ಕ್ಷಾರಮಯವಾದ ಫಲವತ್ತಾದ ಮಣ್ಣಿನಲ್ಲಿ ಕೂಡ ಬೆಳೆಗಳ ಉತ್ಪಾದನೆ ಕುಂಠಿತವಾಗಬಹುದು. ಆದ್ದರಿಂದ ಮಣ್ಣಿನ ಪರೀಕ್ಷೆ ಆಧರಿಸಿ ರಸಗೊಬ್ಬರಗಳನ್ನು ಬಳಸಿದಾಗ ಕೃಷಿ ಉತ್ಪಾದನೆ ಹೆಚ್ಚಿಸಬಹುದಲ್ಲದೆ ಉತ್ಪಾದನಾ ಖರ್ಚಿನಲ್ಲಿ ಕಡಿತ ಮಾಡಬಹುದು ಮತ್ತು ಪರಿಸರ ಮಾಲಿನ್ಯ ತಡೆಗಟ್ಟಬಹುದು.

ಬೆಳೆಯನ್ನು ಬಿತ್ತುವ ಮೊದಲೇ ಮಣ್ಣನ್ನು ಸಂಗ್ರಹಿಸಿ ಅದರಲ್ಲಿರುವ ವಿವಿಧ ಪೋಷಕಾಂಶಗಳ ಪ್ರಮಾಣವನ್ನು ಅರಿತುಕೊಂಡರೆ ಕೊರತೆ ಕಂಡುಬಂದ ಪೋಷಕಾಂಶಗಳನ್ನು ಪ್ರಾರಂಭದಲ್ಲಿಯೇ ಪೂರೈಸಲು ಸಾಧ್ಯವಾಗುತ್ತದೆ. ಪರೀಕ್ಷೆಗೆ ಅರ್ಧಕಿ.ಗ್ರಾಂ.ನಷ್ಟು ಮಣ್ಣುಬೇಕಾಗುತ್ತದೆ. ಈ ಮಣ್ಣು 2-3 ಹೆಕ್ಟೇರ್ ಭೂಕ್ಷೇತ್ರವನ್ನು ಪ್ರತಿನಿಧಿಸುತ್ತದೆ (40-60 ಲಕ್ಷ ಕಿ.ಗ್ರಾಂ. ಮಣ್ಣನ್ನು ಅರ್ಧ ಕಿ.ಗ್ರಾಂ. ಪ್ರತಿನಿಧಿಸುತ್ತದೆ).ಆದ್ದರಿಂದ ಮಣ್ಣನ್ನು ಸಂಗ್ರಹಿಸುವಾಗ ಮಣ್ಣಿನ ಮಾದರಿಯನ್ನು ವೈಜ್ಞಾನಿಕವಾಗಿ ಶಿಫಾರಸ್ಸು ಮಾಡಿದ ಪ್ರಕಾರ ಸಂಗ್ರಹಿಸಬೇಕು.

ಮಣ್ಣು ಪರೀಕ್ಷೆ ಮತ್ತು ವಿಶ್ಲೇಷಣೆಯನ್ನು ಮೂರು ಹಂತಗಳಾಗಿ ವಿಂಗಡಿಸಲಾಗಿದೆ.

  1. ಮಣ್ಣು ಮಾದರಿ ಸಂಗ್ರಹಣೆ
  2. ಮಣ್ಣು ವಿಶ್ಲೇಷಣೆ
  3. ಮಣ್ಣಿನ ವಿಶ್ಲೇಷಣಾ ವರದಿ ಆಧಾರದ ಮೇಲೆ ರಸಗೊಬ್ಬರಗಳ ಶಿಫಾರಸ್ಸು.

1)  ಮಣ್ಣು ಮಾದರಿ ಸಂಗ್ರಹಣೆ :

ಬೆಳೆ ಕಟಾವು ಆದನಂತರ ಗೊಬ್ಬರ ಹಾಕುವ ಮೊದಲೇ ಮಣ್ಣಿನ ಮಾದರಿಯನ್ನು ತೆಗೆಯಬೇಕು. ಒಂದೇ ಗುಣವಿರುವ ಮಣ್ಣಾಗಿದ್ದರೆ ಸಾಧಾರಣ ಎಕರೆಗೆ ಒಂದು ಮಣ್ಣಿನ ಮಾದರಿಗೆ ಕನಿಷ್ಟ 8 ರಿಂದ10 ಉಪ ಮಾದರಿಗಳನ್ನು ಸಂಗ್ರಹಿಸಬೇಕು. ಹಟ್ಟಿ, ಕೊಟ್ಟಿಗೆ, ಬಾವಿ, ಕಾಲುವೆ, ಬದು, ತಿರುಗಾಡುವದಾರಿ, ಮರಗಳ ಕೆಳಗೆ ಮಣ್ಣಿನ ಉಪ ಮಾದರಿಗಳನ್ನು ಸಂಗ್ರಹಿಸಬಾರದು. ಮಾದರಿ ಸಂಗ್ರಹಿಸುವಾಗ ಮಣ್ಣಿನಲ್ಲಿ ತೇವಾಂಶ ಕಡಿಮೆಯಿದ್ದರೆ ಉತ್ತಮ.

ಹೊಲ ಬೆಳೆಗಳಿಗೆ 15 ರಿಂದ 25 ಸೆಂ.ಮೀ. ಆಳದವರೆಗಿನ ಮಾದರಿಗಳನ್ನು ಸಲಕೆ, ಗುದ್ದಲಿಯಿಂದ ತೆಗೆಯಬೇಕು. ತೋಟದ ಬೆಳೆಗಳಿಗೆ 90 ಸೆಂ.ಮೀ. ಆಳದವರೆಗಿನ ಮಣ್ಣಿನ ಮಾದರಿಯನ್ನು (3 ಹಂತಗಳಲ್ಲಿ ಅಂದರೆ 30 ಸೆಂ.ಮೀ., 30 ರಿಂದ 60 ಸೆಂ.ಮೀ. ಮತ್ತು 60 ರಿಂದ 90 ಸೆಂ.ಮೀ. ಆಳಗಳಿಂದ) ಸಂಗ್ರಹಿಸಬೇಕು.

ಜಮೀನಿನಿಂದ ಸಂಗ್ರಹಿಸುವ ಉಪ ಮಾದರಿಗಳು ಆ ಪ್ರದೇಶವನ್ನು ಪ್ರತಿನಿಧಿಸುವ ಮಣ್ಣಾಗಿರಬೇಕು. ಉಪಮಾದರಿಯನ್ನು ತೆಗೆಯುವ ಪ್ರತಿಯೊಂದು ಸ್ಥಳವನ್ನು ಗುರುತಿಸಿ, ಮೇಲ್ಭಾಗವನ್ನು ಶುಚಿಗೊಳಿಸಬೇಕು. ಈ ಜಾಗದಲ್ಲಿ 23 ಸೆಂ.ಮೀ. ಘನ ಆಕೃತಿ ಹೊಂಡ ಅಥವಾ ‘ವಿ’ ಆಕೃತಿಯ ಹೊಂಡ ತೆಗೆದು ಮೇಲ್ಪದರದಿಂದ ಕೆಳಪದರದವರೆಗಿನ ಮಣ್ಣನ್ನು ಒಂದೇ ಸಮನಾಗಿ ತೆಳುವಾಗಿ ಕೆರೆದು ಮಣ್ಣು ಸಂಗ್ರಹಿಸಬೇಕು.

ಈ ರೀತಿ ಸಂಗ್ರಹಿಸಿದ ಉಪಮಾದರಿಗಳನ್ನು ಒಟ್ಟು ಸೇರಿಸಿ, ಕಸ ಕಡ್ಡಿ ಬೇರುಗಳನ್ನು ತೆಗೆದು ಹೆಂಟೆ ಪುಡಿ ಮಾಡಿ ಶುದ್ಧ ಮಾಡಿದ ಮಣ್ಣನ್ನು ಚೆನ್ನಾಗಿ ಮಿಶ್ರ ಮಾಡಿ ಒಂದು ದಪ್ಪಕಾಗದ ಅಥವಾ ಬಟ್ಟೆಯ ಮೇಲೆ ವೃತ್ತಾಕಾರವಾಗಿ ಹರಡಿ ನಾಲ್ಕು ಸಮ ಭಾಗವಾಗಿ ವಿಭಜಿಸಿ ಎರಡು ವಿರುದ್ಧ ದಿಕ್ಕಿನ ಭಾಗದ ಮಣ್ಣನ್ನುತೆಗೆಯಬೇಕು (ಕ್ವಾಟರಿಂಗ್ ವಿಧಾನ), ಉಳಿದ ಭಾಗದ ಮಣ್ಣನ್ನು ಪುನಃ ಕ್ವಾಟರಿಂಗ್ ವಿಧಾನ ಮೂಲಕ ಅರ್ಧ ಕಿ.ಗ್ರಾಂ.ನಷ್ಟು ಮಣ್ಣಿನ ಮಾದರಿಯನ್ನು ಒಂದು ಬಟ್ಟೆ ಅಥವಾ ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಬೇಕು.

ಮಣ್ಣಿನ ಮಾದರಿಯೊಂದಿಗೆ ರೈತನ ಹೆಸರು, ವಿಳಾಸ, ಜಮೀನಿನ ಸರ್ವೆ ನಂಬರ್, ಗ್ರಾಮ, ತಾಲ್ಲೂಕು, ಬೆಳೆದಿದ್ದ ಬೆಳೆ, ಮುಂದೆ ಬೆಳೆಯುವ ಬೆಳೆ ಇತ್ಯಾದಿ ವಿವರಗಳನ್ನೊಳಗೊಂಡ ಮಾಹಿತಿ ಪತ್ರವನ್ನು ಕಳುಹಿಸಬೇಕು.

2) ಮಣ್ಣು ವಿಶ್ಲೇಷಣೆ :

 ಸಂಗ್ರಹಿಸಿದ ಮಣ್ಣು ಮಾದರಿಯಲ್ಲಿ ಲಭ್ಯವಿರುವ ಪೋಷಕಾಂಶಗಳು, ಮಣ್ಣಿನ ರಸಸಾರ, ಆಮ್ಲೀಯತೆ, ಕ್ಷಾರತೆ, ಕರಗಿರುವ ಲವಣಗಳು, ಹಾನಿಕಾರಕ ಲವಣಗಳು, ಪ್ರಥಮ, ಮಧ್ಯಮ ಮತ್ತು ಲಘು ಪೋಷಕಾಂಶಗಳ ವಿವರಗಳನ್ನೂ ತಿಳಿದುಕೊಳ್ಳಬಹುದು. ಮಣ್ಣಿನ ವಿಶ್ಲೇಷಣಾ ಫಲಿತಾಂಶವನ್ನು “ಮಣ್ಣು ಆರೋಗ್ಯ ಚೀಟಿ” ಎಂಬ ಕಾರ್ಡ್ ಮೂಲಕ ತಿಳಿದುಕೊಳ್ಳಬಹುದು.

ಮಣ್ಣಿನ ಆರೋಗ್ಯ ಕಾರ್ಡನ್ನು ಈ ಕೆಳಗಿನಂತೆ ಉಪಯೋಗಿಸುವುದು

  • ಮಣ್ಣಿನ ರಸಸಾರ (PH) 5-7.5 ಇದ್ದರೆ ಯಾವುದೇ ಕ್ರಮದ ಅವಶ್ಯಕತೆ ಇಲ್ಲ.
  • ರಸಸಾರ 5 ಕ್ಕಿಂತ ಕಡಿಮೆಯಿದ್ದರೆ ಸುಟ್ಟ ಸುಣ್ಣವನ್ನು ಭೂಮಿಗೆ ನಿರ್ಧಿಷ್ಟ ಶಿಫಾರಸ್ಸಿನಂತೆ ಬೆರೆಸಬೇಕು.
  • ರಸಸಾರ 5-8.5 ಇದ್ದು, ಇದುಕ್ಯಾಲ್ಷಿಯಂ ಹೆಚ್ಚಳದಿಂದ ಉಂಟಾಗಿದ್ದರೆ ಉತ್ತಮ ನೀರಿನಿಂದ ಹೆಚ್ಚಿನ ಕ್ಯಾಲ್ಷಿಯಂ ಭೂಮಿಯಿಂದ ಹೊರತೆಗೆದು ಬಸಿದು ಹೋಗುವಂತೆ ಮಾಡಬೇಕು.
  • ಮಣ್ಣಿನ ರಸಸಾರ 5ಗೂ ಹೆಚ್ಚಿದ್ದು, ಸೋಡಿಯಂ ಉಪ್ಪು ಜಾಸ್ತಿ ಇದ್ದಲ್ಲಿ ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಜಿಪ್ಸಂ ಅನ್ನು ಮಣ್ಣಿಗೆ ಸೇರಿಸಿ ಉತ್ತಮ ನೀರು ಬಳಸಿ ಉಪ್ಪು ಬಸಿದು ಹೋಗುವಂತೆ ಮಾಡಬೇಕು.
  • ಪ್ರಥಮ ಪೋಷಕಾಂಶಗಳ (NPK) ಪ್ರಮಾಣ ಕಡಿಮೆ ಇದ್ದಲ್ಲಿ ಯಾವುದೇ ಒಂದು ಬೆಳೆಗೆ ನಿರ್ಧಿಷ್ಟವಾಗಿ ಶಿಫಾರಸ್ಸು ಮಾಡಿದ ಪ್ರಮಾಣಕ್ಕಿಂತ ಶೇಕಡಾ 25 ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಕೊಡಬೇಕು. ಅದೇ ರೀತಿ ಪ್ರಮಾಣ ಹೆಚ್ಚು ಇದ್ದರೆ, ಶೇಕಡಾ 25 ರಷ್ಟುಕಡಿಮೆ ಹಾಕಬೇಕು.
  • ಜೈವಿಕ ಗೊಬ್ಬರಗಳಾದ ರೈಜೋಬಿಯಂ, ಅಜಟೋಬ್ಯಾಕ್ಟರ್, ಮೈಕೊರೈಜಾಅಥವ ಮೈಕ್ರೋಬಿಯಲ್ ಕಾನ್ಸಾರ್ಷಿಯಂ ಮುಂತಾದವುಗಳನ್ನು ಉಪಯೋಗಿಸುವುದರಿಂದ ಭೂಮಿಯಲ್ಲಿ ಸಹಜವಾಗಿ ಇರುವ ಪೋಷಕಾಂಶಗಳನ್ನು ಬೆಳೆಗೆ ಸಿಗುವಂತೆ ಮಾಡಬಹುದು.
  • ಕ್ಯಾಲ್ಷಿಯಂ ಕಡಿಮೆ ಇರುವ ಭೂಮಿಗೆ ಸಾರಜನಕ ಗೊಬ್ಬರವನ್ನು ಕ್ಯಾಲ್ಸಿಯಂ ಅಮೋನಿಯಂ ಸಲ್ಫೇಟ್ ರೂಪದಲ್ಲಿ ಒದಗಿಸಬೇಕು. ಜಿಪ್ಸಂ ಕೂಡ ಕ್ಯಾಲ್ಷಿಯಂ ಒದಗಿಸುತ್ತದೆ.
  • ಮೆಗ್ನೀಶಿಯಂ ಕಡಿಮೆ ಇರುವ ಭೂಮಿಗೆ ಮೆಗ್ನೀಶಿಯಂ ಸಲ್ಫೇಟ್ ಗೊಬ್ಬರವನ್ನು ಪ್ರತಿ ಹೆಕ್ಟೇರಿಗೆ 405 ಕಿ.ಗ್ರಾಂ. ಒದಗಿಸಬೇಕು. ಬಹುವಾರ್ಷಿಕ ತೋಟಗಾರಿಕಾ ಬೆಳೆಗಳಾದರೆ ಪ್ರತಿಗಿಡಕ್ಕೆ 150-200 ಗ್ರಾಂ. ಮೆಗ್ನೀಶಿಯಂ ಸಲ್ಫೇಟ್ ಒದಗಿಸಬೇಕು.
  • ಗಂಧಕದ ಲಭ್ಯ ತೆಕಡಿಮೆ ಇರುವ ಆಮ್ಲೀಯ ಭೂಮಿಗೆ (ಹೆಚ್ಚು ಮಳೆ ಬೀಳುವ ಹಾಗೂ ಕೆಂಪು, ಮಣ್ಣಿನ ಪ್ರದೇಶಗಳಲ್ಲಿ) ರಂಜಕವನ್ನು ಎಸ್.ಎಸ್.ಪಿ. ರೂಪದಲ್ಲಿ ಹಾಗೂ ಗಂಧಕ ಮಿಶ್ರಿತ ಯೂರಿಯಾವನ್ನು ಬೆಳೆಗಳಿಗೆ ಒದಗಿಸುವುದು ಸೂಕ್ತ.

ಕಡಿಮೆ ಇರುವ ಪೋಷಕಾಂಶ

            ಕೈಗೊಳ್ಳಬೇಕಾದ ಕ್ರಮ (ಒಂದು ಎಕರೆಗೆ)

ಕಬ್ಬಿಣ(Fe)

ಫೆರಸ್ ಸಲ್ಪೇಟ್ 30-50 ಕೆ.ಜಿ. ಮಣ್ಣಿಗೆ ಹಾಕುವುದು. ಬೆಳೆಗಳಿಗೆ 3-5 ಗ್ರಾಂ. ಪ್ರತಿ ಲೀಟರ್ ನೀರಿಗೆ 2-3 ಬಾರಿ ಸಿಂಪರಣೆ

 

ಸತು(Zn)

ಸತುವಿನ ಸಲ್ಪೇಟ್ 10-25 ಕೆ.ಜಿ. ಮಣ್ಣಿಗೆ ಹಾಕುವುದು. ಬೆಳೆಗಳಿಗೆ 3-5 ಗ್ರಾಂ. ಪ್ರತಿ ಲೀಟರ್ ನೀರಿಗೆ 2-3 ಬಾರಿ ಸಿಂಪರಣೆ

 

ತಾಮ್ರ(Cu)

ತಾಮ್ರದ ಸಲ್ಪೇಟ್ 5-10 ಕೆ.ಜಿ. ಮಣ್ಣಿಗೆ ಹಾಕುವುದು. ಬೆಳೆಗಳಿಗೆ 3-5 ಗ್ರಾಂ. ಪ್ರತಿ ಲೀಟರ್ ನೀರಿಗೆ 2-3 ಬಾರಿ ಸಿಂಪರಣೆ

 

ಬೋರಾನ್(B)

ಬೋರಾಕ್ಸ್ 8-10 ಕೆ.ಜಿ. ಮಣ್ಣಿಗೆ ಹಾಕುವುದು. ಬೆಳೆಗಳಿಗೆ 1 ಗ್ರಾಂ. / ಪ್ರತಿ ಲೀಟರ್ ನೀರಿಗೆ 2-3 ಸಿಂಪರಣೆ

 

ಮಾಲಿಬ್ಬನಮ್(Mb)

ಅಮೋನಿಯಂ ಮಾಲಿಬ್ಬನಮ್ 200-250 ಗ್ರಾಂ. ಮಣ್ಣಿಗೆ ಹಾಕುವುದು. ಬೆಳೆಗಳಿಗೆ 1 ಗ್ರಾಂ. / ಪ್ರತಿ ಲೀಟರ್ ನೀರಿಗೆ 2-3 ಸಿಂಪರಣೆ

 

ಪ್ರತಿ 2 ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಮಾಡಿಸಬೇಕು ಮತ್ತು ಸೂಕ್ತ ಬದಲಾವಣೆ ಮಾಡಬೇಕು.

 

ಲೇಖಕರು:

ಪ್ರೀತು, ಡಿ.ಸಿ., ಸವಿತಾ ಎಸ್. ಎಂ., ದಿನೇಶ ಎಂ.ಎಸ್. ಮತ್ತು ರಾಜೇಂದ್ರಪ್ರಸಾದ್ ಬಿ.ಎಸ್.

ಕೃಷಿ ವಿಜ್ಞಾನ ಕೇಂದ್ರ, ರಾಮನಗರ

Published On: 13 September 2020, 09:19 PM English Summary: Soil Sampling

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.