1. ಅಗ್ರಿಪಿಡಿಯಾ

ಹಿಪ್ಪುನೇರಳೆ ಸೊಪ್ಪಿಗೆ ತಗಲುವ ಕೀಟಗಳ ನಿರ್ವಹಣೆ

Mulberry pest

ಹಿಪ್ಪುನೇರಳೆ ಸೊಪ್ಪು ರೇಷ್ಮೆ ಹುಳುವಿನ ಆಹಾರದ ಏಕೈಕ ಮೂಲ. ಆಳವಾಗಿ ಬೇರು ಬಿಡುವ, ಶೀಘ್ರವಾಗಿ ಬೆಳೆಯುವ ಹಾಗೂ ಬಹುವಾರ್ಷಿಕ ಸಸ್ಯವಾಗಿರುವ ಹಿಪ್ಪುನೇರಳೆಯು, ನೀಡುವ ಪೋಷಕಾಂಶಗಳಿಗೆ ಸ್ಪಂದಿಸಿ ಹೆಚ್ಚು ಸೊಪ್ಪಿನ ಇಳುವರಿ ನೀಡುತ್ತದೆ.

ಸೊಪ್ಪಿನ ಇಳುವರಿಯ ಪ್ರಮಾಣ ಮುಖ್ಯವಾಗಿ ಮೂರು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಅವುಗಳೆಂದರೆ ಹಿಪ್ಪುನೇರಳೆ ತಳಿ, ಅನುಸರಿಸಬೇಕಾದ ವ್ಯವಸಾಯಿಕ ಪದ್ಧತಿಗಳು ಮತ್ತು ಗಿಡಗಳಿಗೆ ತಗುಲುವ ರೋಗ ಹಾಗೂ ಕೀಟಗಳ ಸಮಗ್ರ ಹತೋಟಿ ಕ್ರಮಗಳು. ಅದೇ ರೀತಿ ಉತ್ತಮ ಗುಣಮಟ್ಟದ ಹಿಪ್ಪುನೇರಳೆ ಸೊಪ್ಪನ್ನು ಬೆಳೆಯಬೇಕಾದರೆ ಅದರಲ್ಲಿ ಬರುವ ವಿವಿಧ ಕೀಟಗಳ ನಿರ್ವಹಣೆಯು ಅತೀ ಮುಖ್ಯ, ಆದ್ದರಿಂದ ಕೆಲವು ಮುಖ್ಯ ಕೀಟಗಳ ಬಾಧೆಯ ಲಕ್ಷಣ ಹಾಗೂ ಅದರ ನಿರ್ವಹಣೆ ಮಾಡುವ ವಿಧಾನವನ್ನು ತಿಳಿಯೋಣ

ರಸಹೀರುವ ಕೀಟಗಳು : ನುಸಿ, ಜಾಸಿಡ್ಸ್, ಬಿಳಿನೊಣ, ಸ್ಕೇಲ್

ಕೀಟಬಾಧೆಯ ಲಕ್ಷಣಗಳು: ಈ ಕೀಟಗಳು ಚಿಗುರೆಲೆಯ ಭಾಗಗಳು, ಎಳೆಯ ಎಲೆಗಳು, ಹಳೆಯ ಎಲೆಗಳು ಹಾಗೂ ಚಿಗುರು ಭಾಗಗಳಿಂದ ರಸವನ್ನು ಹೀರುತ್ತವೆ. ಕೀಟಗಳ ತೀವ್ರತೆ ಹೆಚ್ಚಿದ್ದರೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಪ್ಪು ಸ್ಕೇಲ್ ಗಳು ಕಾಂಡದ ಮೇಲೆ ಹೆಚ್ಚಿಗೆ ಕಾಣಿಸುತ್ತವೆ.

ನಿರ್ವಹಣೆ: ನೀರು ನಿರ್ವಹಣೆ ಬಹಳ ಮುಖ್ಯ. ಶಿಫಾರಸ್ಸು ಮಾಡಿದಷ್ಟು ಮಾತ್ರ ಸಾರಜನಕವನ್ನು ಹಾಕಬೇಕು. ಶೇಕಡಾ 0.15-0.2  ಡಿಡಿವಿಪಿ ದ್ರಾವಣವನ್ನು ಸಿಂಪಡಿಸಬೇಕು. ಕೀಟದ ಹಾವಳಿ ಹೆಚ್ಚಿದ್ದಲ್ಲಿ 10 ದಿನಗಳ ಅಂತರದಲ್ಲಿ ಮತ್ತೊಮ್ಮೆ ಕೀಟನಾಶಕ ಸಿಂಪಡಿಸಬಹುದು.

ಸುರಕ್ಷಾ ಅವಧಿ: ಡಿಡಿವಿಪಿ ಕೀಟನಾಶಕ ಸಿಂಪಡಿಸಿದ 15 ದಿನಗಳ ನಂತರ ಹಿಪ್ಪುನೇರಳೆ ಸೊಪ್ಪನ್ನು ರೇಷ್ಮೆ ಹುಳುಗಳ ಸಾಕಣೆಗೆ ಬಳಸಬಹುದು.

 ಬಿಹಾರ್ ಕಂಬಳಿಹುಳು

ಕೀಟಬಾಧೆಯ ಲಕ್ಷಣಗಳು:

ಹೆಣ್ಣು ಕೀಟಗಳು ಎಲೆಯ ಕೆಳಗೆ ಗುಂಪಾಗಿ ಮೊಟ್ಟೆ ಇಡುವುದರಿಂದ, ಮರಿಹುಳುಗಳು ಗುಂಪಿನಲ್ಲಿ ಎಲೆಗಳ ಮೃದು ಭಾಗವನ್ನು ತಿಂದು ಜಾಳು ಮಾಡುತ್ತವೆ. ಬೆಳೆದ ಹುಳುಗಳು ಹೆಚ್ಚಾಗಿ ಸೊಪ್ಪನ್ನು ತಿನ್ನುತ್ತವೆ, ಆದ್ದರಿಂದ ಹಿಪ್ಪುನೇರಳೆ ಸೊಪ್ಪಿನ  ಇಳುವರಿ ಕುಂಠಿತಗೊಳ್ಳುತ್ತದೆ.

 ನಿರ್ವಹಣೆ:

 ಶೇಕಡ 0.15ರ ಡಿಡಿವಿಪಿಯನ್ನು  ತೀವ್ರತೆಗೆ ಅನುಗುಣವಾಗಿ ಸಿಂಪಡಿಸಬೇಕು. ಎಲೆಯ ಸಮೇತ ಗುಂಪಾಗಿರುವ ಮರಿ ಹುಳುಗಳನ್ನು ಕಿತ್ತು ನಾಶಪಡಿಸಬೇಕು. ಪರತಂತ್ರ ಕೀಟವಾದ ಟ್ರೈಕೋಗ್ರಾಮ ಖೈಲೋನಿಸನ್ನು  ಎಕರೆಗೆ 5 ಟ್ರೈಕೋ ಕಾರ್ಡ್ ಗಳಂತೆ 7 ದಿನಗಳ ಅಂತರದಲ್ಲಿ, 5 ಸಮಕಂತುಗಳಲ್ಲಿ ,ಕಟಾವು ಮಾಡಿದ 11 ದಿನಗಳ ನಂತರದಲ್ಲಿ ಬಿಡಬೇಕು.

ಸುರಕ್ಷಾ ಅವಧಿ:

ಡಿಡಿವಿಪಿ ಕೀಟನಾಶಕ ಸಿಂಪಡಿಸಿದ 15 ದಿನಗಳ ನಂತರ ಹಿಪ್ಪುನೇರಳೆ ಸೊಪ್ಪನ್ನು ರೇಷ್ಮೆ ಹುಳುಗಳ ಸಾಕಣೆಗೆ ಬಳಸಬಹುದು .

ಗುಲಾಬಿ ಹಿಟ್ಟು ತಿಗಣೆ( ತುಕ್ರ, ತುಪ್ಪಳ)

ಕೀಟಬಾಧೆಯ ಲಕ್ಷಣಗಳು:

ಕೀಟಬಾಧೆ ವರ್ಷಪೂರ್ತಿ ಕಂಡುಬಂದರೂ ಬೇಸಿಗೆಯಲ್ಲಿ ಈ ಕೀಟದ ಬಾಧೆ ಹೆಚ್ಚು. ಈ ಬಿಳಿಯ ಹತ್ತಿಯಂತಹ ತಿಗಣೆಗಳು ಸಸ್ಯದ ತುದಿಗಳಲ್ಲಿ ಸೇರಿ ರಸವನ್ನು ಹೀರುತ್ತವೆ. ಕುಡಿಯ ಎಲೆಗಳು ಸುಕ್ಕುಗಟ್ಟಿ ಸೊಪ್ಪಿನ ಇಳುವರಿ ಕಡಿತಗೊಳ್ಳುತ್ತದೆ.

ನಿರ್ವಹಣೆ: ಕೀಟ ಇರುವ ಕುಡಿಗಳನ್ನು ಕಿತ್ತು ನಾಶಪಡಿಸಬೇಕು. ಫಿಶ್ ಆಯಿಲ್ ರಿಸಿನ್ ಸೋಪನ್ನು 40 ಗ್ರಾಂ ಪ್ರತಿ

ಲೀಟರ್ ಗೆ ಬೆರೆಸಿ ಸಿಂಪರಣೆ ಮಾಡಬೇಕು. ಶೇಕಡ 0.15ರ ಡಿಡಿವಿಪಿಯನ್ನು ತೀವ್ರತೆಗೆ ಅನುಗುಣವಾಗಿ 10 ದಿನಗಳ ಅಂತರದಲ್ಲಿ ಎರಡು ಬಾರಿ ಸಿಂಪಡಿಸಬೇಕು. ತುಕ್ರ ಇರುವ ತೋಟದಲ್ಲಿ ಪರಭಕ್ಷಕ ಗುಲಗಂಜಿ ದುಂಬಿ ಕ್ರಿಪ್ಟೋಲಿಮಸ್ ಮಾಂಟ್ರೋಜಿಯರಿ ಅನ್ನು ಎಕರೆಗೆ 250 ಪ್ರೌಢ ಕೀಟಗಳಂತೆ 2 ಸಮಕಂತುಗಳಲ್ಲಿ ಆಗಸ್ಟ್ ಸೆಪ್ಟೆಂಬರ್ ಮತ್ತು ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ಬಿಡಬೇಕು. ಶೇಕಡಾ 0.5 ಬೇವಿನ ಬೀಜದ ಕಷಾಯವನ್ನು ಸಿಂಪಡಿಸುವುದರಿಂದ ನಿರ್ವಹಣೆ ಮಾಡಬಹುದು.

ಸುರಕ್ಷಾ ಅವಧಿ: ಡಿಡಿವಿಪಿ ಕೀಟನಾಶಕ ಸಿಂಪಡಿಸಿದ 15 ದಿನಗಳ ನಂತರ ಹಿಪ್ಪುನೇರಳೆ ಸೊಪ್ಪನ್ನು ರೇಷ್ಮೆ ಹುಳುಗಳ ಸಾಕಣೆಗೆ ಬಳಸಬಹುದು.

 ಎಲೆ ಸುರುಳಿ ಕೀಟ

ಕೀಟಬಾಧೆಯ ಲಕ್ಷಣಗಳು:

ಮರಿಹುಳುಗಳು ಗಿಡದ ಎಲೆಗಳನ್ನು ಸುರುಳಿಯಾಕಾರದಲ್ಲಿ ಒಳಭಾಗದಲ್ಲಿ ಸೇರಿಕೊಂಡು ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತದೆ. ಜೊತೆಗೆ ಸಸ್ಯದ ಕುಡಿ ಭಾಗವನ್ನು ಹಾಳು ಮಾಡುವುದರಿಂದ ಸಸ್ಯದ ಬೆಳವಣಿಗೆ ಕುಂಠಿತಗೊಳ್ಳುತ್ತದೆ.

ನಿರ್ವಹಣೆ: ಶೇಕಡಾ 0.15 ಡಿಡಿವಿಪಿ ಕೀಟನಾಶಕವನ್ನು ಸಸ್ಯದ ತುದಿ ಭಾಗವು ಪೂರ್ಣ ಒದ್ದೆಯಾಗುವಂತೆ ಸಿಂಪಡಿಸಬೇಕು. ಪರತಂತ್ರ ದಿಟವಾದ ಟ್ರೈಕೋಗ್ರಾಮ ಖೈಲೋನಿಸ್ಸನ್ನು ಎಕರೆಗೆ 5 ಟ್ರೈಕೋಕಾರ್ಡ್ ನಂತೆ 7 ದಿನಗಳ ಅಂತರದಲ್ಲಿ 5 ಸಮಕಂತುಗಳಲ್ಲಿ, ಕಟಾವು ಮಾಡಿದ 11 ದಿನಗಳ ನಂತರ ಬಿಡುಗಡೆಗೊಳಿಸಬೇಕು. ಬಾಧೆಗೊಳಗಾದ ಗಿಡದ ಭಾಗವನ್ನು ಅಥವಾ ಸಸ್ಯದ ಕುಡಿ ಭಾಗವನ್ನು ಕಿತ್ತು ನಾಶಪಡಿಸಬೇಕು.

ಸುರಕ್ಷಾ ಅವಧಿ: ಡಿಡಿವಿಪಿ ಕೀಟನಾಶಕ ಸಿಂಪಡಿಸಿದ 15 ದಿನಗಳ ನಂತರ ಹಿಪ್ಪುನೇರಳೆ ಸೊಪ್ಪನ್ನು ರೇಷ್ಮೆ ಹುಳುಗಳ ಸಾಕಣೆಗೆ ಬಳಸಬಹುದು.

ಉತ್ತಮ ಗುಣಮಟ್ಟದ ಗೂಡು ಉತ್ಪಾದಿಸಲು ಸೋಂಕು ನಿವಾರಣೆ ತಳಹದಿಯಾಗಿ, ಉತ್ತಮ ಗುಣಮಟ್ಟದ ಹಿಪ್ಪುನೇರಳೆ ಸೊಪ್ಪು, ಆರೋಗ್ಯವಂತ  ಮತ್ತು ಪ್ರೌಢ ಹುಳು, ಹುಳು ಸಾಕಾಣಿಕೆ ವಾತಾವರಣ, ಹಣ್ಣು ಹುಳುಗಳು ಹಾಗೂ ಚಂದ್ರಿಕೆಗಳ ನಿರ್ವಹಣೆ ಇವೆಲ್ಲವೂ ರೇಷ್ಮೆ ಬೆಳೆಯ ಅಧಿಕ ಇಳುವರಿ ಹಾಗೂ ಅಧಿಕ ಆದಾಯ ಪಡೆಯುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ. ಅದೇ ರೀತಿ ಉತ್ತಮ ಗುಣಮಟ್ಟದ ಹಿಪ್ಪುನೇರಳೆ ಸೊಪ್ಪನ್ನು ಬೆಳೆಯಬೇಕಾದರೆ ಅದರಲ್ಲಿ ಬರುವ ವಿವಿಧ ಕೀಟಗಳ ನಿರ್ವಹಣೆಯು ಅತೀ ಮುಖ್ಯ.

ಲೇಖನ: ಮಹಾಂತೇಶ್ ಎಸ್ ಟೊಣ್ಣೆ ಮತ್ತು ರಾಖೇಶ್.ಎಸ್, ಎಂ.ಎಸ್ಸಿ(ಕೃಷಿ), ಕೃಷಿ ಕೀಟಶಾಸ್ತ್ರ ವಿಭಾಗ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು-584104.

Published On: 25 December 2020, 08:32 PM English Summary: mulberry pest management

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.