1. ಅಗ್ರಿಪಿಡಿಯಾ

Insects ಪರಭಕ್ಷಕ ಮತ್ತು ಪರಾವಲಂಬಿ ಕೀಟಗಳ ಬಗ್ಗೆ ತಿಳಿಯಿರಿ…

Hitesh
Hitesh
ಪರಭಕ್ಷಕ ಹಾಗೂ ಪರಾವಲಂಬಿ ಕೀಟಗಳ ಬಗ್ಗೆ ತಿಳಿಯರಿ

ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ವಿವಿಧ ಹಂತಗಳಲ್ಲಿ ವಿಧ ವಿಧವಾದ ಪೀಡೆಗಳು ತೊಂದರೆ ಉಂಟು ಮಾಡುತ್ತವೆ.

ಅದರ ದುಷ್ಪರಿಣಾಮವಾಗಿ ಬೆಳೆಯ ಇಳುವರಿ ಕುಂಟಿತಗೊಳ್ಳುವುದರ ಜೊತೆಗೆ ಗುಣಮಟ್ಟದ ಮೇಲೆ ಪರಿಣಾಮ ಉಂಟುಮಾಡುತ್ತದೆ.

ಈ ಕೀಟಗಳನ್ನು ಹತೋಟಿ ಮಾಡಲು ಹಲವಾರು ವಿಧಾನಗಳಿವೆ. ಅವುಗಳೆಂದರೆ ಸಕಾಲದಲ್ಲಿ ಬಿತ್ತನೆ, ಬೆಳೆ ಪರಿವರ್ತನೆ, ಬೇಸಾಯ ಕ್ರಮಗಳಲ್ಲಿ

ಪರಿವರ್ತನೆ, ಬೇಸಿಗೆ ಕಾಲದಲ್ಲಿ ಭೂಮಿ ಉಳುಮೆ, ರಾಸಾಯನಿಕ ಕೀಟನಾಶಕಗಳ ಉಪಯೋಗ, ಜೈವಿಕ ನಿಯಂತ್ರಣ ಪದ್ಧತಿ

ಹಾಗೂ ಸಮಗ್ರ ಕೀಟ ಹತೋಟಿ ಕ್ರಮಗಳು. ರಾಸಾಯನಿಕ ಕೀಟನಾಶಕಗಳನ್ನು ಬಳಸಿದ ತಕ್ಷಣ ಕೀಟಗಳು ಸಾಯುವುದರಿಂದ

ರೈತರು ಹೆಚ್ಚಾಗಿ ಈ ವಿಧಾನವನ್ನೇ ಅನುಸರಿಸುತ್ತಾರೆ.

ಅನೇಕ ಬಾರಿ ನಿಗದಿಪಡಿಸಿದ ಪ್ರಮಾಣಕ್ಕಿಂತ ಎರಡರಿಂದ ಮೂರು ಪಟ್ಟು ಹೆಚ್ಚು ಕೀಟನಾಶಕ ಮಿಶ್ರಣ ಮಾಡಿ ಬೆಳೆಗೆ ಸಿಂಪಡಿಸುತ್ತಾರೆ.

ಈ ರೀತಿ ಮಾಡುವುದರಿಂದ ಕೀಡೆಗಳಲ್ಲಿ ಕೀಟನಾಶಕ ನಿಗ್ರಹ ಶಕ್ತಿ ಬೆಳೆದು ಅಧಿಕ ಸಂಖ್ಯೆಯಲ್ಲಿ ವೃದ್ಧಿಯಾಗಿ ಬೆಳೆಗಳಿಗೆ

ಹಾನಿ ಉಂಟು ಮಾಡುತ್ತವೆ. ಅದೇ ರೀತಿ ಅಧಿಕ ಪ್ರಮಾಣದ ಕೀಟನಾಶಕವು ಪರಿಸರದಲ್ಲಿರುವ ಪರೋಪಕಾರಿ

ಕೀಟಗಳಾದ ಪರಾವಲಂಬಿ ಮತ್ತು ಪರಭಕ್ಷಕ ಕೀಟಗಳನ್ನು ನಾಶಪಡಿಸಿ ಪೀಡೆಗಳು ವೃದ್ಧಿಯಾಗಲು ಸಹಾಯಮಾಡುತ್ತದೆ.

ಜೈವಿಕ ನಿಯಂತ್ರಣ ಪದ್ಧತಿಯು ಸಮಗ್ರ ಕೀಟ ಹತೋಟಿ ಕ್ರಮದ ಒಂದು ಭಾಗವಾಗಿದೆ.

ರೈತರು ಕೀಟನಾಶಕ ಬಳಸುವುದನ್ನು ಕಡಿಮೆ ಮಾಡಿ, ಪರಿಸರಕ್ಕೆ ಹೊಂದಿಕೊಂಡು ಹೋಗುವಂತಹ ಇತರ ವಿಧಾನಗಳಿಂದ

ಅಂದರೆ ಪರಭಕ್ಷಕ ಕೀಟ, ಪರಾವಲಂಬಿಕ ಕೀಟ ಮತ್ತು ಕೀಟ ರೋಗಾಣುಗಳನ್ನು ಉಪಯೋಗಿಸಿ ಪೀಡೆಗಳನ್ನು ನಿಗ್ರಹಿಸುವ ವಿಧಾನಕ್ಕೆ “ಜೈವಿಕ ನಿಯಂತ್ರಣ” ಎನ್ನುತ್ತಾರೆ.

ಪರಭಕ್ಷಕ ಕೀಟಗಳು

ಕೀಟಗಳು ತಮ್ಮ ವೈರಿ ಕೀಟಗಳನ್ನು ತಕ್ಷಣ ಸಾಯಿಸಿ ತಿನ್ನುತ್ತವೆ. ಅಂತಹ ಕೀಟಗಳು ವೈರಿ ಕೀಟಗಳನ್ನು ಬೇಟೆಯಾಡಲು

ಸೂಕ್ತವಾದ ಅಂಗಾಂಗಗಳನ್ನು ಹೊಂದಿರುತ್ತವೆ. ಇವುಗಳು ವೈರಿ ಪೀಡೆಗಳ ವಿವಿಧ ಹಂತಗಳಾದ ಮೊಟ್ಟೆ, ಮರಿಹುಳು, ಕೋಶ ಮತ್ತು ಪ್ರೌಢ

ಕೀಟಾವಸ್ಥೆಯನ್ನು ಭಕ್ಷಿಸುತ್ತವೆ. ಈ ಪರಭಕ್ಷಕ ಕೀಟ, ಪೀಡೆಗಳು ಹಾನಿ ಮಾಡದಂತೆ ತಕ್ಷಣ ಸಾಯಿಸುವುದರಿಂದ

ಪರಾವಲಂಬಿ ಕೀಟಗಳಿಗಿಂತ ಉತ್ತಮ. ಉದಾಹರಣೆಗೆ ಗುಲಗಂಜಿ ದುಂಬಿ, ಸಿರ್ಪಿಡ್‍ಗಳು ಮತ್ತು ಸಿರಿಟೋರೈನಸ್.

ಪರಾವಲಂಬಿ ಕೀಟಗಳು

ಕೀಟದ ಜೀವನಾವಸ್ಥೆಯಲ್ಲಿ ಪ್ರಮುಖವಾಗಿ ನಾಲ್ಕು ಹಂತಗಳಿದ್ದು ಅವುಗಳನ್ನು ಮೊಟ್ಟೆ, ಮರಿಹುಳು, ಕೋಶ ಮತ್ತು ಪ್ರೌಢಾವಸ್ಥೆ ಎಂದು ವಿಂಗಡಿಸಲಾಗಿದೆ.

ಇವುಗಳಲ್ಲಿ ಮರಿಹುಳು ಮತ್ತು ಪ್ರೌಢಾವಸ್ಥೆಯಲ್ಲಿ ಕೀಟವು ಬೆಳೆಗಳನ್ನು ತಿಂದು ನಾಶಪಡಿಸುತ್ತವೆ.

ಆದರೆ, ಮೊಟ್ಟೆ ಮತ್ತು ಕೋಶಾವಸ್ಥೆ ಹಂತಗಳಲ್ಲಿ ಆಹಾರವನ್ನು ಸೇವಿಸುವುದಿಲ್ಲ.

ಪರಾವಲಂಬಿ ಕೀಟಗಳು ವಿವಿಧ ಹಂತದ ಕೀಟಾವಸ್ಥೆಯ ಮೇಲೆ ದಾಳಿ ಮಾಡುತ್ತವೆ.

ಇವುಗಳಲ್ಲಿ ಮೊಟ್ಟೆ, ಮೊಟ್ಟೆ-ಮರಿಹುಳು, ಮರಿಹುಳು, ಮರಿಹುಳು-ಕೋಶ, ಕೋಶ, ಕೋಶ-ಪ್ರೌಢ ಮತ್ತು ಪ್ರೌಢ ಕೀಟದ

ಪರಾವಲಂಬಿ ಎಂಬ ವಿವಿಧ ಪರಾವಲಂಬಿ ಕೀಟಗಳನ್ನು ಗುರುತಿಸಲಾಗಿದೆ.

ಮೊಟ್ಟೆ ಪರಾವಲಂಬಿಯು ಇತರ ಕೀಟಗಳ ಮೊಟ್ಟೆಯಲ್ಲಿ ತಮ್ಮ ಜೀವನ ಸಂಪೂರ್ಣಗೊಳಿಸುತ್ತದೆ.

ಪರಾವಲಂಬಿ ಪೀಡಿತ ಪೀಡೆಗಳ ಮೊಟ್ಟೆಯಿಂದ, ಈ ಮೊಟ್ಟೆಯ ಮರಿ ಬೆಳೆಯದೆ ಪರಾವಲಂಬಿ ಕೀಟದ ಮರಿ ಬೆಳೆದು,

ಪೀಡೆ ಕೀಟದ ಮರಿ ಬೆಳೆಯದಂತೆ ಮಾಡುತ್ತದೆ. ಪ್ರಮುಖ ಮೊಟ್ಟೆ ಪರಾವಲಂಬಿಗಳೆಂದರೆ ಟ್ರೈಕೋಗ್ರಾಮ ಮತ್ತು ಟೆಲಿನೊಮಸ್ ಮೊಟ್ಟೆ ಜೀವಿ.

ಮರಿ ಹಂತದ ಪರಾವಲಂಬಿ ಜೀವಿಗಳು ಕೀಟದ ಮರಿ ಹಂತದಲ್ಲಿ ಅವುಗಳ ದೇಹದ ಒಳಗೆ ಅಥವಾ ದೇಹಕ್ಕೆ ಅಂಟಿಕೊಂಡು ಬೆಳೆಯುತ್ತವೆ

ಮರಿಯ ದೇಹದ ರಕ್ತವನ್ನು ಕುಡಿದು ಬೆಳೆಯುವ ಈ ಜೀವಿಗಳು ಪೂರ್ತಿ ಬೆಳೆದಾದ ಮೇಲೆ ಮರಿಯನ್ನು ಸಾಯಿಸುತ್ತವೆ.

ತಾವು ಬೆಳೆಯುವವರೆಗೆ ಮರಿಯ ಅವಶ್ಯಕತೆ ಇರುವುದರಿಂದ, ಈ ಮರಿ ಹುಳುವಿನ ಪರಾವಲಂಬಿ ಜೀವಿಗಳು, ಪೀಡೆ ಕೀಟದ ಮರಿಗಳನ್ನು

ತಕ್ಷಣ ಸಾಯಿಸುವುದಿಲ್ಲ, ಆದ್ದರಿಂದ ಪೀಡೆ ಕೀಟದ ಮರಿಹುಳು ಬೆಳೆಗೆ ಹಾನಿಯನ್ನು ಉಂಟು ಮಾಡುತ್ತವೆ.

ಇವುಗಳಲ್ಲಿ ವಿವಿಧ ಜಾತಿಗಳಿವೆ ಪ್ರಮುಖವಾಗಿ ಬ್ರೇಕಾನ್, ಕೊಟೇಸಿಯಾ, ಅಪೆಂಟಿಲಸ್, ಇತ್ಯಾದಿ.

ಕೋಶವಸ್ಥೆಯ ಪರಾವಲಂಬಿ ಜೀವಿಗಳು ಪೀಡೆ ಕೀಟಗಳ ಕೋಶಾವಸ್ಥೆಯ ಒಳಗೆ ಬೆಳೆದು ಕೋಶವನ್ನು ನಾಶಪಡಿಸುತ್ತವೆ.

ಇವುಗಳಲ್ಲಿ ಪ್ರಮುಖವಾದವು ಎಲಾಸ್ಮಸ್, ಬ್ರಾಚಿಮೇರಿಯಾ, ಟ್ರೈಕೋಸ್ಟೈಲಸ್ ಮತ್ತು ಟೆಟ್ರಾಸ್ಟಿಕಸ್.

ಅದೇ ರೀತಿ ಪ್ರೌಢ ಪರಾವಲಂಬಿ ಕೀಟಗಳು ಪ್ರೌಢಾವಸ್ಥೆಯ ಪೀಡೆ ಕೀಟಗಳ ದೇಹದೊಳಗಿ ಸೇರಿ ಅಥವಾ ದೇಹಕ್ಕೆ

ಅಂಟಿಕೊಂಡು ರಕ್ತ ಹೀರಿ ಪ್ರೌಢ ಪೀಡೆಯನ್ನು ಸಾಯಿಸುತ್ತವೆ. ಪರಾವಲಂಬಿ ಕೀಟಗಳು ಆಸರೆ ಕೀಟಗಳನ್ನು

ತಕ್ಷಣ ಸಾಯಿಸುವುದಿಲ್ಲ, ಬದಲಿಗೆ ಅವುಗಳ ಜೊತೆಗೆ ತಾವು ಸಹ ಬೆಳೆದು ತಾವು ಪೂರ್ತಿ ಬೆಳೆದ ನಂತರ ಆಸರೆ ಕೀಟಗಳನ್ನು ಸಾಯಿಸುತ್ತವೆ.

ವಿವಿಧ ಬೆಳೆಗಳಲ್ಲಿ ಪೀಡೆಗಳ ಜೈವಿಕ ನಿಯಂತ್ರಣ

ಕಬ್ಬು: ಕಬ್ಬಿನಲ್ಲಿ ಬರುವ ಕಾಂಡಕೋರಕ ಕೀಟದ ಹತೋಟಿಗೆ ಟ್ರೈಕೋಗ್ರಾಮ ಮೊಟ್ಟೆ ಪರಾವಲಂಬಿ ಕೀಟವನ್ನು ರೈತರು ಹೆಚ್ಚಾಗಿ ಬಳಸುತ್ತಿದ್ದಾರೆ.

ಅದೇ ರೀತಿ ಐಸೋಟಿಮಾ, ಸ್ಟರ್ಮಿಯಾಪ್ಸಿಸ್ ಮತ್ತು ಸ್ಟಿನೋಬ್ರೇಕಾನ್ ಎಂಬ ಪರಾವಲಂಬಿ ಜೀವಿಗಳನ್ನು ಬಳಸುತ್ತಿದ್ದಾರೆ.

ಪೈರಿಲ್ಲಾ ಹುಳುವಿನ ಹತೋಟಿಗೆ ಎಪಿರಿಕೆನಿಯಾ ಮೆಲನೋಲ್ಯೂಕಾ, ಕಬ್ಬಿನ ಶಲ್ಕ ಕೀಟದ ಹತೋಟಿಗೆ ಕೈಲೋಕೊರಿಸ್ ನೈಗ್ರಿಟಾ ಉಪಯೋಗಿಸಬಹುದು.

ಭತ್ತ: ಭತ್ತದಲ್ಲಿ ಬರುವ ಜಿಗಿ ಹುಳು ನಿಯಂತ್ರಣಕ್ಕೆ ಸಿರಿಟೋರೈನಸ್ ಲಿವಿಡಿಪೆನ್ನಿಸ್, ಭತ್ತದ ಬೆಂಕಿ ಹುಳುವಿಗೆ ಪ್ಲಾಟಿಗೆಸ್ಟರ್ ಒರೈಜೆ, ಕಾಂಡಕೊರಕಕ್ಕೆ

ಮೊಟ್ಟೆ ಪರಾವಲಂಬಿ ಟ್ರೈಕೋಗ್ರಾಮ ಜಪೊನಿಕಂ ಮತ್ತು ಎಲೆ ಮಡಚುವ ಕೀಡೆಯ ಹತೋಟಿಗೆ ಮೊಟ್ಟೆ ಪರಾವಲಂಬಿ ಟ್ರೈಕೋಗ್ರಾಮ ಚಿಲೋನಿಸ್ ಬಳಸಬಹುದು.

ಹತ್ತಿ: ಹತ್ತಿಯಲ್ಲಿ ಬರುವ ಗುಲಾಬಿ ಕಾಯಿ ಕೊರಕ ನಿರ್ವಹಣೆಗೆ ಮೊಟ್ಟೆ ಪರಾವಲಂಬಿ ಹುಳು ಟ್ರೈಕೋಗ್ರಾಮೆಟೊಯ್ಡಿಯಾ ಬ್ಯಾಕ್ಟ್ರೆಯನ್ನು ಬಳಸಬಹುದಾಗಿದೆ.

ಅದೇ ರೀತಿ ರಸ ಹೀರುವ ಕೀಟಗಳ ನಿರ್ವಹಣೆಗೆ ಕ್ರೈಸೋಪರ್ಲಾ ಪರಭಕ್ಷಕ ಕೀಟಗಳನ್ನು ಉಪಯೋಗಿಸಬಹುದಾಗಿದೆ.

ತೆಂಗು: ತೆಂಗಿನಲ್ಲಿ ಬರುವ ಎಲೆ ತಿನ್ನುವ ಕಪ್ಪು ತಲೆ ಹುಳುವಿನ ಹತೋಟಿಗೆ ಗೋನಿಯೋಜಸ್ ನಿಫಾಂಟಡಿಸ್, ಎಲಾಸ್ಮಸ್

ನಿಫಾಂಟಡಿಸ್, ಬ್ರಾಚಿಮೇರಿಯಾ ನಸೊಟಿ, ಬ್ರೇಕಾನ್ ಬ್ರೆವಿಕಾರ್ನಿಸ್ ಮತ್ತು ಟೆಟ್ರಾಸ್ಟಿಕಸ್ ಇಸ್ರೇಲಿ ಮುಂತಾದ ಪರಾವಲಂಬಿ ಜೀವಿಗಳನ್ನು ಉಪಯೋಗಿಸಬಹುದು.

ಹಣ್ಣಿನ ಬೆಳೆಗಳು: ಹಣ್ಣಿನ ಗಿಡಗಳಿಗೆ ಹಾನಿ ಮಾಡುವ ಮೇಣದ ಜಿಗಿ ಹುಳು (ಮೀಲಿ ಬಗ್ಸ್) ಹತೋಟಿಗೆ ಕ್ರಿಪ್ಟೋಲಿಮಸ್

ಎಂಬ ಪರಭಕ್ಷಕ ಕೀಟ ಪರಿಣಾಮಕಾರಿಯಾಗಿದೆ. 

ತರಕಾರಿ ಬೆಳೆಗಳು: ಮೊಟ್ಟೆ ಪರಾವಲಂಬಿಯಾದ ಟ್ರೈಕೋಗ್ರಾಮವನ್ನು ಸ್ಪೊಡೋಪ್ಟೆರಾ, ಹೆಲಿಕೊವರ್ಪ ಹಾಗೂ ಮತ್ತಿತರ

ಎಲೆ ಅಥವಾ ಹಣ್ಣು ತಿನ್ನುವ ಪತಂಗ ಕೀಟಗಳ ನಿರ್ವಹಣೆಗೆ ಬಳಸಬಹುದು.

ಎಲೆಕೋಸು ಮತ್ತು ಹೂಕೋಸಿನಲ್ಲಿ ಬರುವ ವಜ್ರ ಬೆನ್ನಿನ ಪತಂಗದ ನಿರ್ವಹಣೆಗೆ ಕೊಟೇಸಿಯಾ ಪ್ಲೂಟೆಲ್ಲಾ ಎಂಬ ಪರಾವಲಂಬಿ ಕೀಟವು ಪರಿಣಾಮಕಾರಿಯಾಗಿದೆ.

ಲೇಖಕರು:  ಡಾ. ಎಸ್. ಎಸ್. ಉಡಿಕೇರಿ, ಪ್ರಾಧ್ಯಾಪಕರು ಕೃಷಿ ಕೀಟಶಾಸ್ತ್ರ ವಿಭಾಗ, ಕೃಷಿ ವಿಶ್ವವಿದ್ಯಾಲಯ, ಧಾರವಾಡ-580005

ಎಸ್. ರಾಖೇಶ್, ಪಿಹೆಚ್. ಡಿ. ವಿದ್ಯಾರ್ಥಿ ಕೃಷಿ ಕೀಟಶಾಸ್ತ್ರ ವಿಭಾಗ, ಕೃಷಿ ವಿಶ್ವವಿದ್ಯಾಲಯ, ಧಾರವಾಡ-580005 

Published On: 31 January 2024, 12:25 PM English Summary: Learn about predators and parasitic insects…

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.