1. ಅಗ್ರಿಪಿಡಿಯಾ

ಎರೆಹುಳು ಸಾಕಾಣಿಕೆ ಮಾಡಿ ಭೂಮಿಯ ಫಲವತ್ತತೆ ಹೆಚ್ಚಿಸಿ, ಕೈತುಂಬಾ ಆದಾಯವೂ ಗಳಿಸಿ

ಹೊಲದಲ್ಲಿ ಏನಾದರೂ ಕೆಲಸ ಮಾಡುವಾಗ, ಉಳುಮೆ ಮಾಡುವಾಗ ಎರೆಹುಳು ಕಾಣಿಸಿಕೊಂಡರೆ ನಿಮ್ಮ ಜಮೀನು ಆರೋಗ್ಯವಾಗಿದೆಯೆಂದರ್ಥ. ಹಾಗಾದರೆ ಎರೆಹುಳು ಗೊಬ್ಬರ ಅಷ್ಟೇಕೆ ಮಹತ್ವ ಪಡೆದುಕೊಂಡಿದೆ ಅಂದುಕೊಂಡಿದ್ದೀರಾ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಈಗಿನ ಕಾಲದಲ್ಲಿ ಹೆಚ್ಚು ಇಳುವರಿ ಪಡೆಯುವ ಧಾವಂತದಲ್ಲಿ ರಾಸಾಯನಿಕ ಗೊಬ್ಬರ, ಕ್ರಿಮಿಕೀಟನಾಶಕಗಳನ್ನು ಬಳಸಿ ಬಳಸಿ ಭೂಮಿಯನ್ನು ರೋಗಗ್ರಸ್ಥವನ್ನಾಗಿ ಮಾಡಲಾಗುತ್ತಿದೆ. ರಾಸಾಯನಿಕ ಗೊಬ್ಬರ ಹಾಕಿ ಜಮೀನು ಕಾಂಕ್ರಿಟ್ ನಂತಾಗಿರುತ್ತದೆ. ಕೈ ಹಾಕಿ ಹಿಡಿಮಣ್ಣು ತೆಗೆದುಕೊಳ್ಳಲು ಆಗಲ್ಲ, ಏನಾದರೊಂದು ಸಲಕರಣೆಯಿಂದ ಅಗೆದು ತೆಗೆದುಕೊಳ್ಳಬೇಕಷ್ಟೆ. ಉಸಿರೇ ಆಡದ, ನೀರೇ ಇಳಿಯದ ಇಂತಹ ಜಮೀನಿನಲ್ಲಿ ಲಾಭದಾಯಕ ಕೃಷಿ ಮಾಡಲು ಸಾಧ್ಯವೇ ಎಲ್ಲ ಎನ್ನುತ್ತಾರೆ ಕೃಷಿ ತಜ್ಞರು.

ಎರೆಹುಳುವನ್ನು ರೈತನ ಮಿತ್ರ, ರೈತನ ಬಂಧು, ಭೂನಾಗ, ಪ್ರಕೃತಿಯ ನೇಗಿಲು ಹೀಗೆ ಹತ್ತು ಹಲವಾರು ಹೆಸರುಗಳಿಂದ ಕರೆಯಲ್ಪಡುವ ಎರೆಹುಳುಗಳು ರೈತನ ಹಾಗೆ ಹಗಲುರಾತ್ರಿಯೆನ್ನದೆ ನಿರಂತರವಾಗಿ ಭೂಮಿಯಲ್ಲಿ ದುಡಿಯುತ್ತಿರುತ್ತವೆ. ಕೆಳಭಾಗದ ಭೂಮಿಯ ಮಣ್ಣನ್ನು ಮೇಲಕ್ಕೆ ತಂದು ಭೂಮಿಯ ಫಲವತ್ತತೆಯನ್ನು ಕಾಪಾಡಲು ಸಹಕರಿಸುತ್ತದೆ. ಕಸಕಡ್ಡಿಗಳನ್ನು ತಿಂದು ಜೀರ್ಣಿಸಿಕೊಂಡು ಕೃಷಿ ತ್ಯಾಜ್ಯಗಳನ್ನೇ ಗೊಬ್ಬರವನ್ನಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿದೆ.

ರೈತರಿಗೆ ಲಾಭಗಳು:

ಎರೆಹುಳುಗಳು ಮಣ್ಣಿನ ಫಲವತ್ತತೆ ಹೆಚ್ಚಿಸುತ್ತದೆ. ಕಡಿಮೆ ನೀರಿನಲ್ಲಿ ಹೆಚ್ಚಿನ ಇಳುವರಿಯನ್ನು ಪಡೆಯಬಹುದು. ಮಣ್ಣಿನಲ್ಲಿ ತೇವಾಂಶ, ನೆರಳು ಮತ್ತು ಸಾವಯವ ಅಂಶ ಈ ಜೀವಿಗೆ ಬಹಳ ಇಷ್ವವಾದ್ದರಿಂದ ತೇವಾಂಶ ನೆರಳು ಮತ್ತ ಸಾವಯವ ಅಂಶ ಒದಗಿಸುತ್ತದೆ. ಕೀಟಗಳ ಬಾಧೆಯಿಂದ ರಕ್ಷಣೆ ಹಾಗೂ ಬೆಳೆಗಳಿಗೆ ನಷ್ಟವನ್ನು ಕಡಿಮೆ ಮಾಡುತ್ತದೆ. ಬೆಳೆಗಳ ಉತ್ಪನ್ನಗಳು ಅತೀ ಉತ್ತಮ ಹಾಗೂ ಯೋಗ್ಯವಾಗಿದ್ದು, ಹೆಚ್ಚಿನ ರುಚಿ ಹೊಂದಿರುತ್ತವೆ. ಬೆಳೆಗಳು ಉತ್ತಮವಾಗಿದ್ದು ಹೆಚ್ಚಿನ ಬೆಲೆ ಪಡೆಯುತ್ತವೆ.

ಎರೆಹುಳುಗಳ ಪ್ರಕಾರ:

ಎರೆಹುಳುಗಳಲ್ಲಿ ಸಾಮಾನ್ಯವಾಗಿ ರೆಡ್ ವಿಗ್ಲರ್ (ಕೆಂಪು ಹುಳು), ವೈಟ್ ವಿಗ್ಲರ್ (ಬಿಳಿ ಹುಳಗಳು) ಎಂಬ ಜಾತಿಗಳಿರುತ್ತವೆ. ಸಿಪ್ಪೆ, ರವದಿ, ಹುಲ್ಲು, ಕಳೆ ಸಸ್ಯಗಳಲ್ಲದೇ ಕೊಳೆತ ತರಕಾರಿ ಅಥವಾ ಆಹಾರ ತ್ಯಾಜ್ಯಗಳನ್ನು ಒಂದೆಡೆ ಸಂಗ್ರಹಿಸಿ, ಅದಕ್ಕೆ ಎರೆಹುಳುಗಳನ್ನು ಬಿಟ್ಟರೆ ಅವು ಕೊಳೆತ ವಸ್ತುಗಳನ್ನು ತಿಂದು, ಮಲ ವಿಸರ್ಜಿಸಿ, ಎಲ್ಲವನ್ನೂ ಕಳಿಸಿ ತಂತಾನೇ ಗೊಬ್ಬರ ಸಿದ್ಧಗೊಳಿಸುತ್ತವೆ.. ಗುಂಡಿಗಳಲ್ಲಿ ತ್ಯಾಜ್ಯ ಸಂಗ್ರಹಿಸಿ, ಇಲ್ಲವೇ ಪ್ರತ್ಯೇಕ ಎರೆಹುಳು ತೊಟ್ಟಿಗಳನ್ನು ನಿರ್ಮಿಸಿಕೊಂಡರೆ ಹೆಚ್ಚು ಉಪಯುಕ್ತ. ಇಲ್ಲದಿದ್ದರೆ ತಂಪನ್ನರಸಿ ಹುಳುಗಳು ಬೇರೆಡೆಗೆ ಹೋಗಿಬಿಡುವ ಇಲ್ಲವೇ ಸತ್ತು ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.

ಎರಡು ಮುಖ್ಯ ವಿಧಾನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಎರೆಹುಳುಗಳನ್ನು ಸಾಕಬಹುದು. ಎರಡು ಪ್ರತ್ಯೇಕ ಬೃಹತ್ ತೊಟ್ಟಿಗಳನ್ನು ನೆರಳಿನಲ್ಲಿ ನಿರ್ಮಿಸಿಕೊಳ್ಳಬೇಕು. ಹುಳುಗಳು ಹೊರಕ್ಕೆ ಹೋಗುವ ಅವಕಾಶವೂ ಇರುವುದಿಲ್ಲ. ತೊಟ್ಟಿಗಳ ಅಡಿಭಾಗದಲ್ಲಿ ಹುಳುಗಳ ಸಂಚಾರಕ್ಕೆ ಅಗತ್ಯ ರಂಧ್ರಗಳನ್ನು ನಿರ್ಮಿಸಿರಬೇಕು. ಒಂದು ತೊಟ್ಟಿ ತುಂಬಿ, ಹುಳುಗಳು ಅದನ್ನು ಕಳಿಸುತ್ತಿದ್ದಂತೆಯೇ ಇನ್ನೊಂದರಲ್ಲಿ ಕಸ ಸಂಗ್ರಹಿಸಿ, ಹುಳುಗಳು ಅದಕ್ಕೆ ದಾಟುವಂತೆ ಮಾರ್ಪಾಟು ಮಾಡಬಹುದು. ಪರಭಕ್ಷಕ ಹುಳುಗಳಿಂದ ಹಾಗೂ ಉಷ್ಣಾಂಶದಿಂದ ಎರೆಹುಳುಗಳನ್ನು ರಕ್ಷಿಸುವುದು ಅತ್ಯಂತ ಮುಖ್ಯ. ಇದಲ್ಲದೇ, ಮನೆಯಲ್ಲೇ ಸಣ್ಣ ಪ್ರಮಾಣದಲ್ಲಿ ಎರೆಹುಳು ಗೊಬ್ಬರ ತಯಾರಿಸಿಕೊಳ್ಳಲು ಬಹಳಷ್ಟು ವಿಭಿನ್ನ ಮಾದರಿಯ ಬಿನ್ ಅಥವಾ ಡಬ್ಬಗಳೂ ಮಾರುಕಟ್ಟೆಯಲ್ಲಿ ಲಭ್ಯ.

ಎರೆಹುಳು ಸಾಕಣೆಗೆ 15-25 ಡಿಗ್ರಿ ಸೆಲ್ಷಿಯಸ್ ತಾಪಮಾನ ಉತ್ತಮ. 30 ಡಿಗ್ರಿಗಿಂತ ಹೆಚ್ಚು ತಾಪಮಾನದಲ್ಲಿ ಹುಳುಗಳು ಸಾಯುತ್ತವೆ. ಜತೆಗೆ ಎರೆಹುಳಗಳು ಜೈವಿಕ ತ್ಯಾಜ್ಯಗಳನ್ನು ಕೊಳೆಸುವಾಗ ಶಾಖವನ್ನು ಉತ್ಪತ್ತಿ ಮಾಡುತ್ತದೆ. ಎರೆಹುಳು ತೊಟ್ಟಿಯನ್ನು ನೇರ ಬಿಸಿಲಿನಿಂದ ದೂರವಿಡಬೇಕು ಹಾಗೂ ಚಳಿ-ಮಳೆಗಾಲದಲ್ಲಿ ಮಂಜು-ನೀರು ಒಳಗೆ ಬೀಳದಂತೆ ನೋಡಿಕೊಳ್ಳಬೇಕು. ತಾಪಮಾನವನ್ನು ನಿಯಂತ್ರಣ ಅತಿಮುಖ್ಯ ಅಂಶ.

ಅಡುಗೆಮನೆಯ ತ್ಯಾಜ್ಯ, ಕೈ ತೋಟದ ತ್ಯಾಜ್ಯ, ಕೊಳೆತ ಹಣ್ಣು - ತರಕಾರಿಗಳು (ಸಿಟ್ರಸ್, ಶುಂಠಿ, ಈರುಳ್ಳಿ, ಬೆಳ್ಳುಳ್ಳಿ ಹೊರತುಪಡಿಸಿ) ಮತ್ತದರ ಸಿಪ್ಪೆ ಟೀ ಹಾಗೂ ಕಾಫಿ ಪುಡಿ ತ್ಯಾಜ್ಯ, , ಒಣಗಿದ ಎಲೆಗಳು ಮತ್ತು ಹುಲ್ಲನ್ನು ಸಹ ಎರೆಹುಳು ತೊಟ್ಟಿಗೆ ಹಾಕಬಹುದು.

ಒಮ್ಮೆ ಹುಳುಗಳ ಜೈವಿಕ ಕ್ರಿಯೆ ಆರಂಭವಾಗುತ್ತಿದ್ದಂತೆ ಅವು ಅಲ್ಲೇ ಮೊಟ್ಟೆಗಳನ್ನು ಇಟ್ಟು ಸಂತಾನೋತ್ಪತ್ತಿ ಆರಂಭಿಸುತ್ತವೆ. ಅವನ್ನು ಎಚ್ಚರಿಕೆಯಿಂದ ತೆಗೆದು ಮತ್ತೊಂದು ತೊಟ್ಟಿಗೆ ಸ್ಥಳಾಂತರಿಸಬಹುದು. ಅವುಗಳ ಮೊಟ್ಟೆಗಳು ಸಣ್ಣದಾಗಿ, ಹಳದಿ ಬಣ್ಣದಲ್ಲಿರುತ್ತವೆ. ಸುಲಭವಾಗಿ ಬರಿಗಣ್ಣಿಗೆ ಕಾಣಿಸುತ್ತವೆ. ತೊಟ್ಟಿಗಳಿಗೆ ದೀಪದ ವ್ಯವಸ್ಥೆ ಮಾಡಿದರೆ ಹುಳುಗಳು ರಂಧ್ರದ ಮೂಲಕ ಹೊರಕ್ಕೆ ಹೋಗುವುದನ್ನು ತಡೆಯಬಹುದು. ನೊಣ ಹಾಗೂ ಇರುವೆಗಳಿಂದ ಹುಳುಗಳನ್ನು ಜೋಪಾನ ಮಾಡುವುದು ಮುಖ್ಯ.

ಇತ್ತೀಚೆಗೆ ಮಾರುಕಟ್ಟೆಯಲ್ಲಿ ಎರೆಹುಳ ಗೊಬ್ಬರದ ಬೇಡಿಕೆಯೂ ಹೆಚ್ಚಾಗಿದೆ. ಕಡಿಮೆ ಖರ್ಚಿಯಲ್ಲಿ ನಿಮ್ಮ ಸುತ್ತಮುತ್ತಲಿನ ಕಸಕಡ್ಡಿಗಳನ್ನು ಮನೆಯ ಪಕ್ಕದಲ್ಲೇ ಎರೆಹುಳು ಘಟಕ ನಿರ್ಮಿಸಿ ಕೈತುಂಬಾ ಆದಯವೂ ಗಳಿಸಬಹುದು. ನಿಮ್ಮ ಹೊಲದಲ್ಲಿ ಎರೆಹುಳು ಗೊಬ್ಬರ ಹಾಕಿ ಫಲವತ್ತತೆಯನ್ನು ಹೆಚ್ಚಿಸಬಹುದು. ಇದರೊಂದಿಗೆ ವ್ಯಾಪಾರವೂ ಮಾಡಿ ಕೈತುಂಬಾ ಆದಾಯ ಗಳಿಸಬಹುದು.

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.