1. ಅಗ್ರಿಪಿಡಿಯಾ

ಕಾಂಗ್ರೆಸ್ ಹುಲ್ಲಿನಿಂದ ಗೊಬ್ಬರ ತಯಾರಿಸುವುದು ನಿಮಗೆ ಗೊತ್ತೆ? ಈ ಕೆಳಗಿನ ಮಾಹಿತಿ ಓದಿ...

Parthenium

ಪಾರ್ಥೇನಿಯಂ ಹಿಸ್ಟಿರೋಫೋರಸ್‍ನ್ನು ಸ್ಥಳೀಯವಾಗಿ ಕ್ಯಾರೆಟ್ ಹುಲ್ಲು, ಕಾಂಗ್ರೇಸ್ ಕಸ, ಚಟಕ್ ಚಾಂದನಿ, ನಕ್ಷತ್ರ ಕಳೆ ಅಥವಾ ಗರಜ್‍ಘಸ್ ಎಂದು ಕರೆಯಲಾಗುತ್ತದೆ. ಈ ಕಳೆಯು ಕೃಷಿ ಭೂಮಿ, ಕೃಷಿಯೇತ್ತರ ಭೂಮಿ, ರಸ್ತೆ ಬದಿ, ಆಟದ ಮೈದಾನ, ಶಾಲಾ-ಕಾಲೇಜು ಆವರಣ ಹಾಗೂ ಇತರೆ ಖಾಲಿ ಪ್ರದೇಶಗಳಲ್ಲಿ ಬೆಳೆಯುತ್ತದೆ. ಭಾರತ ದೇಶದಲ್ಲಿ ಈ ಕಳೆಯು ಸುಮಾರು 35 ಮಿಲಿಯನ್ ಹೆಕ್ಟೇರ್ ಪ್ರದೇಶಗಳನ್ನು ಆವರಿಸಿಕೊಂಡಿದೆ.

ಇತ್ತೀಚಿನ ದಿನಗಳಲ್ಲಿ ಅಧಿಕವಾಗಿ ರಸಗೊಬ್ಬರಗಳ ಬಳಕೆಯಿಂದ ಭೂಮಿಯ ಫಲವತ್ತತೆ ಕುಂಠಿತಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಕಾಂಪೋಸ್ಟ್ ಮತ್ತು ಜೈವಿಕ ಗೊಬ್ಬರದ ಬಳಕೆ ಭೂಮಿಯ ಫಲವತ್ತತೆಯನ್ನು ಕಾಪಾಡುವಲ್ಲಿ ಒಂದು ವರದಾನ ಎಂದೇ ಹೇಳಬಹದು. ನಮ್ಮ ಸುತ್ತ-ಮುತ್ತ ಹೇರಳವಾಗಿ ಸಿಗುವ ಪಾರ್ಥೇನಿಯಂನಿಂದ ನಾವು ಕಾಂಪೋಸ್ಟ್‍ನ್ನು ತಯಾರಿಸಬಹುದು ಈ ಕಳೆಯನ್ನು ಜಮೀನಿನಿಂದ ಕಿತ್ತು ಹಾಕಿದರೆ ಬೆಳೆಯ ಉತ್ಪಾದಕತೆ ಹೆಚ್ಚಿಸುವುದಲ್ಲದೇ ಇದರಿಂದ ಉತ್ತಮ ಗೊಬ್ಬರವನ್ನು ತಯಾರಿಸಿ ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳಬಹುದು.

ಪಾರ್ಥೇನಿಯಂ ಕಾಂಪೋಸ್ಟ್‍ನ ಬಗ್ಗೆ ರೈತರಿಗಿರುವ ಭಯ:

                ಸಾಮಾನ್ಯವಾಗಿ ಪಾರ್ಥೇನಿಯಂನಿಂದ ಗೊಬ್ಬರ ತಯಾರು ಮಾಡಿ ಅದನ್ನು ಜಮೀನಿಗೆ ಹಾಕಿದರೆ ಅದರಲ್ಲಿರುವ ಕಳೆಯ ಬೀಜಗಳು ಮತ್ತೆ ಹುಟ್ಟುತ್ತವೆಯೆಂಬ ಭಯ ರೈತರಲ್ಲಿ ಇದ್ದೇ ಇರುತ್ತದೆ. ರೈತರು ಅವೈಜ್ಞಾನಿಕವಾಗಿ ಕಾಂಪೋಸ್ಟ್ ತಯಾರಿಸುವುದರಿಂದ ಕಾಂಪೋಸ್ಟ್ ಬಗ್ಗೆಯ ಗೊಂದಲ ರೈತರಲ್ಲಿ ಹೆಚ್ಚಾಗುತ್ತಿದೆ. ವಾಸ್ತವದಲ್ಲಿ ಹೂ ಬಂದಂತಹ ಪಾರ್ಥೇನಿಯಂನಿಂದ ಅವೈಜ್ಞಾನಿಕವಾಗಿ ಕಾಂಪೋಸ್ಟ್ ತಯಾರಿಸುವುದರಿಂದ ರೈತರ ಜಮೀನಿನಲ್ಲಿ ಹೆಚ್ಚು ಸಮಸ್ಯೆ ಉಂಟಾಗುತ್ತದೆ. ಜಬಲ್ಪುರ್‍ನಲ್ಲಿರುವ ಸಂಶೋಧನಾ ನಿರ್ದೇಶನಾಲಯದ ಅಧ್ಯಯನದ ಪ್ರಕಾರ ನಾಡೆಪ್ ಅಥವಾ ತೆರೆದ ಗುಂಡಿ ಅಥವಾ ರಾಶಿ/ಗುಡ್ಡೆ ಹಾಕುವ ಪದ್ಧತಿಯ ಮುಖಾಂತರ (ಹೂ ಬಂದಂತಹ ಪಾರ್ಥೇನಿಯಂನಿಂದ) ಕಾಂಪೋಸ್ಟ್ ತಯಾರಿಸಿದರೆ ಹೆಚ್ಚು ಬೀಜಗಳು ಜೀವಂತವಾಗಿರುವುದು ಕಂಡುಬಂದಿದೆ. ಈ ಅಧ್ಯಯನದ ಪ್ರಕಾರ ನಾಡೆಪ್ ಅಥವಾ ತೆರೆದ ಗುಂಡಿಯಿಂದ ತಯಾರಾದ 300 ಗ್ರಾಂ. ಕಾಂಪೋಸ್ಟ್ ಗೊಬ್ಬರದಿಂದ ಸುಮಾರು 350 ರಿಂದ 500 ಪಾರ್ಥೇನಿಯಂ ಬೀಜಗಳು ಮೊಳಕೆಯೊಡೆಯುತ್ತವೆ. ವೈಜ್ಞಾನಿಕವಾಗಿ ತಯಾರಿಸಿದ ಕಾಂಪೋಸ್ಟ್‍ನಲ್ಲಿ ಬೀಜಗಳು ಮೊಳಕೆಯೊಡೆಯುವುದಿಲ್ಲ. ಆದ್ದರಿಂದ ರೈತರು ಇದನ್ನು ಸುರಕ್ಷಿತವಾಗಿ ಉಪಯೋಗಿಸಬಹುದು. ಆದ್ದರಿಂದ ಮಣ್ಣಿನ ಆರೋಗ್ಯಕ್ಕೆ ಮತ್ತು ಬೆಳೆಯ ಉತ್ಪಾದಕತೆಗೆ ಇದು ಹೆಚ್ಚು ಸಹಕಾರಿಯಾಗಿರುತ್ತದೆ.

ಪಾರ್ಥೇನಿಯಂನಿಂದ ಕಾಂಪೋಸ್ಟ್ ತಯಾರಿಸುವ ಪದ್ಧತಿ:

                ನಾಡೆಪ್ ಅಥವಾ ತೆರೆದ ಗುಂಡಿಯ ಪದ್ಧತಿಯಲ್ಲಿ ಕಾಂಪೋಸ್ಟ್ ಮಾಡಲು ಹೂ ಬಿಡುವ ಮುಂಚಿತಾವಾಗಿಯೇ ಪಾರ್ಥೇನಿಯಂ ಗಿಡಗಳನ್ನು ಸಂಗ್ರಹಿಸಬೇಕು. ಆದರೆ ಹೂ ಬಿಡದ ಪಾರ್ಥೇನಿಯಂ ಗಿಡಗಳು ಒಂದೇ ಸಮಯದಲ್ಲಿ ಲಭ್ಯವಾಗುವುದು ಕಷ್ಟ. ಏಕೆಂದರೆ ಪಾರ್ಥೇನಿಯಂ ಬೀಜವು ನೀರಿನ ಲಭ್ಯತೆಗನುಗುಣವಾಗಿ ವರ್ಷದ ಎಲ್ಲಾ ಕಾಲದಲ್ಲಿಯೂ ಮೊಳಕೆಯೊಡೆಯುವ ಸಾಮಥ್ರ್ಯವನ್ನು ಹೊಂದಿರುತ್ತದೆ. ಆದ್ದರಿಂದ ರೈತರು ಕಾಲಕಾಲಕ್ಕೆ ಪಾರ್ಥೇನಿಯಂ ಗಿಡಗಳನ್ನು ಬೇರು ಸಮೇತ ಕಿತ್ತು ಹಾಕುತ್ತಿರಬೇಕು. ಪಾರ್ಥೇನಿಯಂನಿಂದ ಕಾಂಪೋಸ್ಟ್ ತಯಾರಿಸಲು ಕೆಳಗಿನ ವಿಧಾನವನ್ನು ಅನುಸರಿಸಬಹುದು.

ನೀರು ನಿಲ್ಲದ ಸ್ಥಳದಲ್ಲಿ 3 x 6 x 10 ಅಡಿ (ಆಳ x ಅಗಲ x ಉದ್ದ) ಯ ಗುಂಡಿಯನ್ನು ಮಾಡಬೇಕು. ಗುಂಡಿಯ ಆಳದಲ್ಲಿ ಯಾವುದೇ ಬದಲಾವಣೆಯಿಲ್ಲದೆ ಗುಂಡಿಯ ಅಳತೆಯನ್ನು ಹೆಚ್ಚು ಅಥವಾ ಕಡಿಮೆ ಮಾಡಿಕೊಳ್ಳಬಹದು.

ಸಾಧ್ಯವಾದರೆ ಗುಂಡಿಯ ಸುತ್ತಲೂ ಚಪ್ಪಟೆ ಕಲ್ಲಿನಿಂದ ಹೊದಿಸಬೇಕು. ಇದರಿಂದ ಕಾಂಪೋಸ್ಟ್‍ನಿಂದ ಪೋಷಕಾಂಶಗಳು ಪೋಲಾಗುವುದನ್ನು ತಡೆಗಟ್ಟಬಹದು.

ಚಪ್ಪಟೆ ಕಲ್ಲುಗಳು ಸಿಗದಿದ್ದರೆ, ಗುಂಡಿಯ ಮೇಲ್ಮೈಯನ್ನು ಮಣ್ಣಿನಿಂದ ಗಟ್ಟಿಯಾಗಿಸಬಹುದು.

ಗುಂಡಿಯ ಪಕ್ಕದಲ್ಲಿ 100 ಕೆ.ಜಿ. ಸಗಣಿ, 10 ಕೆ.ಜಿ. ಯೂರಿಯಾ ಅಥವಾ ರಾಕ್ ಫಾಸ್ಪೇಟ್, ಮಣ್ಣು (1-2 ಕ್ವಿಂಟಾಲ್) ಮತ್ತು ಒಂದು ಡ್ರಮ್‍ನಲ್ಲಿ ನೀರಿನ ವ್ಯವಸ್ಥೆ ಮಾಡಬೇಕು.

ಜಮೀನಿನಲ್ಲಿರುವ ಮತ್ತು ನಮ್ಮ ಸುತ್ತ ಮುತ್ತಲು ಸಿಗುವ ಪಾರ್ಥೇನಿಯಂ ಗಿಡಗಳನ್ನು ಸಂಗ್ರಹಿಸಬೇಕು.

ಸುಮಾರು 50 ರಿಂದ 100 ಕೆ.ಜಿ. ಪಾರ್ಥೇನಿಯಂನ್ನು ಗುಂಡಿಯಲ್ಲಿ ಹರಡಬೇಕು.

ಇದರ ಮೇಲೆ 500 ಗ್ರಾಂ. ಯೂರಿಯಾ ಅಥವಾ 3 ಕೆ.ಜಿ. ರಾಕ್ ಫಾಸ್ಟೇಟ್‍ನ್ನು ಸಿಂಪಡಿಸಬೇಕು. ಸಾಧ್ಯವಾದರೆ ಪ್ರತಿ ಪದರದ ಮೇಲೆ 50 ಗ್ರಾಂ. ನಷ್ಟು ಟ್ರೈಕೋಡರ್ಮಾ ವಿರಿಡೆ ಅಥವಾ ಟ್ರೈಕೋಡರ್ಮಾ ಹರ್ಜಿಯಾನಾ ಪುಡಿಯನ್ನು ಸೇರಿಸಬಹುದು.

ಮೇಲಿನ ಎಲ್ಲಾ ಘಟಕಗಳು ಸೇರಿ ಒಂದು ಪದರವಾಗುತ್ತದೆ.

ಮೊದಲನೆಯ ಪದರದ ರೀತಿಯಲ್ಲಿಯೇ ಭೂಮಿಯಿಂದ ಒಂದು ಅಡಿ ಎತ್ತರವಾಗುವಷ್ಟು ಅನೇಕ ಪದರಗಳನ್ನು ತುಂಬುತ್ತಾ ಬರಬೇಕು.

ಗೋಲಾಕಾರದಲ್ಲಿ ಗುಂಡಿಯನ್ನು ತುಂಬಬೇಕು.

ಗುಂಡಿಯನ್ನು ತುಂಬಬೇಕಾದರೆ ಪ್ರತಿ ಪದರನ್ನು ಕಾಲಿನಿಂದ ತುಳಿಯಬೇಕು. ಹೀಗೆ ಮಾಡುವುದರಿಂದ ಪದರಗಳು ಗುಂಡಿಯಲ್ಲಿ ಗಟ್ಟಿಯಾಗಿ ಕೂರುತ್ತದೆ.

ಪಾರ್ಥೇನಿಯಂನ ಬೇರಿನಲ್ಲಿ ಯಾವುದೇ ರೀತಿಯ ಮಣ್ಣು ಇಲ್ಲದಿದ್ದರೆ ಪ್ರತಿ ಪದರದ ನಂತರ ತೆಳುವಾಗಿ (10-12 ಕೆ.ಜಿ.) ಮಣ್ಣನ್ನು ಹರಡಬೇಕು.

ಗುಂಡಿಯು ತುಂಬಿದ ನಂತರ, ಅದರ ಮೇಲ್ಮೈಯನ್ನು ಸಗಣಿ, ಮಣ್ಣು ಮತ್ತು ಹೊಟ್ಟಿನಿಂದ ಮುಚ್ಚಬೇಕು.

ಸುಮಾರು 4 ರಿಂದ 5 ತಿಂಗಳ ನಂತರ ಚೆನ್ನಾಗಿ ಕೊಳೆತ ಕಾಂಪೋಸ್ಟ್ ತಯಾರಾಗುತ್ತದೆ.

ಸುಮಾರು 100 ಕೆ.ಜಿ. ಪಾರ್ಥೇನಿಯಂ ಗಿಡದಿಂದ 37 - 45 ಕೆ.ಜಿ. ಕಾಂಪೋಸ್ಟ್ ಗೊಬ್ಬರ ತಯಾರಾಗುತ್ತದೆ.

ಕಾಂಪೋಸ್ಟ್‍ನ್ನು ಸೋಸುವುದು (ಜರಡಿ ಹಿಡಿಯುವುದು):

                ಕಾಂಪೋಸ್ಟ್‍ನ್ನು ಗುಂಡಿಯಿಂದ ತೆಗೆದಮೇಲೆ ಪಾರ್ಥೇನಿಯಂ ಗಿಡದ ಕಡ್ಡಿಗಳನ್ನು ನೋಡಿ ಪಾರ್ಥೇನಿಯಂ ಗಿಡಗಳು ಸರಿಯಾಗಿ ಕೊಳೆತಿಲ್ಲವೆಂದು ನಮಗೆ ಅನಿಸುತ್ತದೆ. ಆದರೆ ವಾಸ್ತವದಲ್ಲಿ ಅದು ಚೆನ್ನಾಗಿಯೇ ಕೊಳೆತಿರುತ್ತದೆ. ಇದಾದರೂ ಸಹ ದಪ್ಪಗಿರುವ ಪಾರ್ಥೇನಿಯಂ ಕಡ್ಡಿಗಳು ಇದ್ದರೆ ಅದನ್ನು ಒಂದು ಕೋಲಿನಿಂದ ಹೊಡೆದರೆ ಅದು ಚೂರು ಚೂರಾಗುತ್ತದೆ. ಈ ಕಾಂಪೋಸ್ಟ್‍ನ್ನು 2 x 2 ಸೆಂ. ಮೀ. ಅಳತೆಯ ಜಾಲರಿಯಿಂದ ಸೋಸಬೇಕು. ಕಾಂಪೋಸ್ಟ್‍ನ್ನು ಮಾರಾಟ ಮಾಡಲು 1, 2, 3, 5 ಕೆ.ಜಿ.ಯ ಪ್ಯಾಕೆಟ್‍ಗಳನ್ನಾಗಿ ಮಾಡಬೇಕು. ಈ ರೀತಿ ಪ್ಯಾಕೆಟ್ ಮಾಡಿದ ಕಾಂಪೋಸ್ಟ್ ಗೊಬ್ಬರವನ್ನು ಕೈತೋಟಕ್ಕೆ ಉಪಯೋಗಿಸಬಹುದು. ಅದೇ ರೀತಿ ಕ್ಷೇತ್ರ ಬೆಳೆಗಳಿಗೆ ಮತ್ತು ತೋಟಗಾರಿಕಾ ಬೆಳೆಗಳಿಗೆ 25-50 ಕೆ.ಜಿ. ಕಾಂಪೋಸ್ಟ್‍ನ್ನು ಉಪಯೋಗಿಸಬಹುದು.

ಪಾರ್ಥೇನಿಯಂ ಕಾಂಪೋಸ್ಟ್‍ನಲ್ಲಿ ಪೋಷಕಾಂಶಗಳ ಸಂಯೋಜನೆ:

 ಅಧ್ಯಯನದ ಪ್ರಕಾರ ಸಾಮಾನ್ಯ ಕಾಂಪೋಸ್ಟ್ ಗೊಬ್ಬರಕ್ಕಿಂತ ಪಾರ್ಥೇನಿಯಂ ಕಾಂಪೋಸ್ಟ್ ಗೊಬ್ಬರದಲ್ಲಿ ಪೋಷಕಾಂಶಗಳು ಎರಡು ಪಟ್ಟು ಹೆಚ್ಚಾಗಿರುತ್ತದೆ. ಪಾರ್ಥೇನಿಯಂ ಕಾಂಪೋಸ್ಟ್‍ನಲ್ಲಿರುವ ಪೋಷಕಾಂಶಗಳು ಎರೆಹುಳು ಗೊಬ್ಬರದಲ್ಲಿರುವ ಪೋಷಕಾಂಶಗಳಿಗೆ ಸಮನಾಗಿರುತ್ತದೆ.

ಗೊಬ್ಬರ ಪೋಷಕಾಂಶ (%)

                                   ಸಾರಜನಕ        ರಂಜಕ            ಪೋಟ್ಯಾಷ್       ಕ್ಯಾಲ್ಸಿಯಂ        ಮೆಗ್ನೀಷಿಯಂ     

ಪಾರ್ಥೇನಿಯಂ ಕಾಂಪೋಸ್ಟ್         1.05                  0.84                  1.11                  0.90                  0.55       

ಎರೆಹುಳು ಗೊಬ್ಬರ                    1.61                  0.68                  1.31                  0.65                  0.43       

ಕೊಟ್ಟಿಗೆ ಗೊಬ್ಬರ            0.45                  0.30                  0.54                  0.59                  0.28       

ಮುನ್ನೆಚ್ಚರಿಕಾ ಕ್ರಮಗಳು:

ಪಾರ್ಥೇನಿಯಂ ಕಾಂಪೋಸ್ಟ್ ತಯಾರು ಮಾಡಬೇಕಾದರೆ ಕೆಳಗಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು.

ಕಾಂಪೋಸ್ಟ್ ತಯಾರಿಸುವ ಗುಂಡಿಯು ತೆರೆದಿರಬೇಕು ಮತ್ತು ಎತ್ತರ ಪ್ರದೇಶದಲ್ಲಿ ನೆರಳಿನಲ್ಲಿ ಇರಬೇಕು.

ಕಾಂಪೋಸ್ಟ್ ಗುಂಡಿಯನ್ನು ಮಣ್ಣು, ಸಗಣಿ ಮತ್ತು ಹೊಟ್ಟಿನ ಮಿಶ್ರಣದಿಂದ ಮುಚ್ಚಬೇಕು.

ಗುಂಡಿಗೆ ತುಂಬಲು ಪಾರ್ಥೇನಿಯಂನ್ನು ಸಂಗ್ರಹಣೆ ಮಾಡಿದ ಸ್ಥಳದಲ್ಲಿ ಪಾರ್ಥೇನಿಯಂ ಬೀಜಗಳಿದ್ದರೆ ಅವುಗಳು ಮೊಳಕೆಯೊಡೆದು, ಬೆಳೆದು ಹೂ ಬಿಟ್ಟ ನಂತರ ಕಾಂಪೋಸ್ಟ್ ಗುಣಮಟ್ಟವನ್ನು ಹಾಳು ಮಾಡುತ್ತದೆ. ಆದ್ದರಿಂದ ಗುಂಡಿಯ ಪಕ್ಕದಲ್ಲಿ ಬೀಜಗಳಿದ್ದರೆ ಅವುಗಳನ್ನು ನಾಶ ಮಾಡಬೇಕು.

ಕಾಂಪೋಸ್ಟ್‍ನಲ್ಲಿರುವ ತೇವಾಂಶದ ಪ್ರಮಾಣವನ್ನು ಆಗಾಗ್ಗೆ ನೋಡಿಕೊಳ್ಳುತ್ತಿರಬೇಕು. ಕಾಂಪೋಸ್ಟ್ ಗುಂಡಿಯಲ್ಲಿ ತೇವಾಂಶದ ಕೊರತೆ ಕಂಡುಬಂದರೆ ಅದರಲ್ಲಿ ಸಣ್ಣ ತೂತುಗಳನ್ನು ಮಾಡಿ ಆ ತೂತುಗಳಲ್ಲಿ ನೀರು ಹಾಕಿ ತದನಂತರ ತೂತುಗಳನ್ನು ಮುಚ್ಚಬೇಕು.

ಕಾಂಪೋಸ್ಟ್ ಗೊಬ್ಬರವು ತಯಾರಾಗುವ ಸಮಯದಲ್ಲಿ ಗುಂಡಿಯಲ್ಲಿ ಉಷ್ಣಾಂಶವು 60 – 70o ಸೆಂ. ರಷ್ಟು ಏರಿಕೆಯಾಗುತ್ತದೆ. ಇದರಿಂದ ಪಾರ್ಥೇನಿಯಂನ ಬೀಜಗಳು ನಾಶವಾಗುತ್ತದೆ.

ಉಷ್ಣಾಂಶ ವಲಯಗಳಲ್ಲಿ ಈ ರೀತಿ ಕಾಂಪೋಸ್ಟ್ ತಯಾರಿಕೆಗೆ ನಾಲ್ಕರಿಂದ ಐದು ತಿಂಗಳುಗಳು ಬೇಕು. ಆದರೆ ಶೀತ ವಲಯಗಳಲ್ಲಿ ಇನ್ನೂ ಹೆಚ್ಚು ಕಾಲ ಬೇಕಾಗುತ್ತದೆ.

ಲಾಭಗಳು:

ಪಾರ್ಥೇನಿಯಂನಿಂದ ತಯಾರಿಸಿದ ಕಾಂಪೋಸ್ಟ್ ಗೊಬ್ಬರವು ಬೆಳೆಗಳ ಮೇಲೆ, ಮಾನವನ ಆರೋಗ್ಯದ ಮೇಲೆ ಮತ್ತು ಪರಿಸರದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಬೀರುವುದಿಲ್ಲ.

ಪಾರ್ಥೇನಿಯಂ ಗಿಡದಲ್ಲಿರುವ ವಿಷಕಾರಿ ಅಂಶವಾದ “ಪಾರ್ಥೇನಿನ್” ಕಾಂಪೋಸ್ಟ್ ಗೊಬ್ಬರ ತಯಾರಾಗುವ ಸಮಯದಲ್ಲಿ ಸಂಪೂರ್ಣವಾಗಿ ನಾಶವಾಗುತ್ತದೆ.

ಕೊಟ್ಟಿಗೆ ಗೊಬ್ಬರಕ್ಕೆ ಹೋಲಿಸಿದರೆ ಪಾರ್ಥೇನಿಯಂನಿಂದ ತಯಾರಾದ ಕಾಂಪೋಸ್ಟ್‍ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾರಜನಕ, ರಂಜಕ ಮತ್ತು ಪೋಟ್ಯಾಷ್ ಅಂಶಗಳು ಸಮತೋಲನದಲ್ಲಿ ಇರುತ್ತದೆ. ಇದರ ಜೊತೆಗೆ ಅಗತ್ಯವಾದ ಲಘು ಪೋಷಕಾಂಶಗಳೂ ಸಹ ಇರುತ್ತದೆ.

ಅತೀ ಕಡಿಮೆ ಖರ್ಚಿನಲ್ಲಿ ಪಾರ್ಥೇನಿಯಂನಿಂದ ಕಾಂಪೋಸ್ಟ್ ತಯಾರಾಗುವುದಲ್ಲದೆ ಇದು ಪರಿಸರ ಸ್ನೇಹಿಯೂ ಕೂಡ, ಜೊತೆಗೆ ಮಣ್ಣಿನ ಫಲವತ್ತತೆಯನ್ನು ಅಭಿವೃದ್ಧಿಗೊಳಿಸುತ್ತದೆ.

ಉಪಯೋಗಿಸುವ ಪ್ರಮಾಣ:

ಬಿತ್ತುವಾಗ ಒಂದು ಹೆಕ್ಟೇರಿಗೆ 2.5 – 3.00 ಟನ್ ಕಾಂಪೋಸ್ಟ್‍ನ್ನು ಉಪಯೋಗಿಸಬಹುದು.

ತರಕಾರಿ ಬೆಳೆಗಳಿಗೆ ಒಂದು ಹೆಕ್ಟೇರಿಗೆ 4-5 ಟನ್ ಉಪಯೋಗಿಸಬಹುದು.

ಲೇಖನದ ಉಲ್ಲೇಖ: ಕಾಂಪೋಸ್ಟ್ ಮೇಕಿಂಗ್ ಫ್ರಮ್ ಪಾರ್ಥೇನಿಯಂ, ಎಕ್ಸ್‍ಟೆನ್‍ಷನ್ ಬುಲೆಟಿನ್, ಐ.ಸಿ.ಎ.ಆರ್ – ಕಳೆ ಸಂಶೋಧನಾ ನಿರ್ದೇಶನಾಲಯ, ಜಬಲ್‍ಪುರ (ಮಧ್ಯಪ್ರದೇಶ)

ಲೇಖನ: ಪ್ರಿಯ ಪಿ*. ಮತ್ತು ಬಸವರಾಜಪ್ಪ ಆರ್. ಕೃಷಿ ಮಹಾವಿದ್ಯಾಲಯ, ಹನುಮನಮಟ್ಟಿ Mail:  prponnuswamy@gmail.com    

Published On: 15 January 2021, 12:22 AM English Summary: Compost from Parthenium

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.