1. ಯಶೋಗಾಥೆ

ಬರೀ 24 ಗುಂಟೆ ಪೇರಲ ಬೆಳೆದು ವರ್ಷಕ್ಕೆ 25 ಲಕ್ಷ ಆದಾಯ ಗಳಿಸುತ್ತಿರುವ ಯವ ರೈತ!

ತೈವಾನ್ ಪೇರಲೆ ತೋಟದಲ್ಲಿ ಯ್ಯುವ ರೈತ ಸಂತೋಷ್.

ಓದಿದ್ದು ಮೆಕ್ಯಾನಿಕಲ್ ಎಂಜಿನಿಯರಿಂಗ್ ಆದರೂ ಮಾಡುತ್ತಿರುವುದು ಕೃಷಿ ಕಾಯಕ. ಊರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಗುಡ್ಡದನಾಯಕನಹಳ್ಳಿ. ಇರುವುದು ಒಟ್ಟು 6 ಎಕರೆ ಕೃಷಿ ಭೂಮಿ. ಆದರೆ, ಕೇವಲ 24 ಗುಂಟೆ ಹೊಲದಲ್ಲಿ ಸೀಬೆ/ಪೇರಲ ಬೆಳೆದು 25 ಲಕ್ಷ ರೂ. ಆದಾಯ ಗಳಿಸುತ್ತಿರುವುದು ಈ ಯುವ ಕೃಷಿಕನ ಸಾಧನೆ.

ಈ ಯುವ ಕೃಷಿ ಸಾಧಕನ ಹೆಸರು ಸಂತೋಷ್ ಎಸ್. 2013ರಲ್ಲಿ ಬೆಂಗಳೂರಿನ ಕಾಲೇಜೊಂದರಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದ ಸಂತೋಷ್, ಆರಂಭದಲ್ಲಿ ಒಂದೆರಡು ವರ್ಷ ಸಂಬಳಕ್ಕೆ ದುಡಿದರು. ಆಗ ಮನೆ ಕಡೆ ಆರ್ಥಿಕ ಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ತಾವು ತಿಂಗಳಿಗೆ ಪದೆಯುತ್ತಿದ್ದ 18,000 ರೂಪಾಯಿ ಪಗಾರ ಯಾವುದಕ್ಕೂ ಸಾಲುತ್ತಿರಲಿಲ್ಲ. ಜೊತೆಗೆ ಅಲ್ಲಿ ಇರುವಷ್ಟೂ ಕಾಲ ಕಂಪನಿಗಾಗಿ ಜೀತ ಮಾಡಬೇಕು, ಇದರಿಂದ ತನ್ನ ಅಭಿವೃದ್ಧಿ ಸಾಧ್ಯವಿಲ್ಲ ಎಂದರಿತ ಸಂತೋಷ್, ಕೃಷಿಯಲ್ಲಿ ತೊಡಗುವ ನಿರ್ಧಾರ ಕೈಗೊಂಡರು. ಮಗ ಸಂಬಳದ ಕೆಲಸ ತೊರೆದು ಲಾಭವಿಲ್ಲದ ವ್ಯವಸಾಯಕ್ಕೆ ಬಂದ ಬಗ್ಗೆ ತಂದೆಗೆ ಬೇಸರವಾಯಿತು. ಆದರೆ, ದಾಳಿಂಬೆ ಬೆಳೆದ ಮಗ, ಮೊದಲ ಬೆಳೆಯಲ್ಲೇ ಅಧಿಕ ಆದಾಯ ಗಳಿಸಿದಾಗ ಆದ ಸಂತೋಷದ ಅಲೆಯಲ್ಲಿ ಅವರ ಬೇಸರವೆಲ್ಲಾ ಕೊಚ್ಚಿ ಹೋಯಿತು.

ಬೆಳೆ ಆಯ್ಕೆಯಲ್ಲಿ ಜಾಣತನ

‘ದಾಳಿಂಬೆ ಬೆಳೆಯ ಮೊದಲ ಫಸಲು ಮಾರಿದ ಹಣವನ್ನು ಅಪ್ಪನ ಕೈಗಿಟ್ಟಾಗ ಆನಂದದಿAದ ಅವರ ಮುಖ ಅರಳಿದ ಆ ಕ್ಷಣ ಈಗಲೂ ನನ್ನ ಕಣ್ಣ ಮುಂದಿದೆ’ ಎನ್ನುವ ಸಂತೋಷ್, ಬೆಳೆ ಆಯ್ಕೆಯಲ್ಲಿ ಮೊದಲಿನಿಂದಲೂ ತಮ್ಮದೇ ಜಾಣ ಸೂತ್ರಗಳನ್ನು ಅನುಸರಿಸುತ್ತಾ ಬಂದಿದ್ದಾರೆ. 2015-16ರ ಸಮಯದಲ್ಲಿ ಬೆಂಗಳೂರು ಸುತ್ತಮುತ್ತ ದಾಳಿಂಬೆ ಬೆಳೆ ಪರಿಚಯ ಅಷ್ಟಾಗಿ ಇರಲಿಲ್ಲ. ರೈತರೆಲ್ಲಾ ತರಕಾರಿ ಬೆಳೆಗಳಿಗೆ ಮಾರು ಹೋಗಿದ್ದರು. ಇಂತಹ ಸಮಯದಲ್ಲಿ ಸಂತೋಷ್ ಆಯ್ಕೆ ಮಾಡಿದ್ದು ದಾಳಿಂಬೆ ಕೃಷಿ. ಯಾರಾದರೂ ಹೊಸ ಪ್ರಯೋಗ ಮಾಡಿದಾಗ ಜನ ಆಡಿಕೊಂಡು ನಗುವುದು ಮಾಮೂಲು. ಸಂತೋಷ್ ಅವರು, ದಾಳಿಂಬೆ ಸಸಿಗಳನ್ನು ತಂದು ನೆಡುವಾಗ ಸುತ್ತ ಇದ್ದ ಜನರೆಲ್ಲಾ ‘ಅಯ್ಯೋ ದಾಳಿಂಬೆ ಬೆಳಿತಾನಂತೆ’ ಎಂದು ನಗಾಡಿದ್ದರು. ಆದರೆ, ಮೊದಲ ಪ್ರಯತ್ನದಲ್ಲೇ ಉತ್ತಮ ಫಸಲು, ಆದಾಯ ಗಳಿಸಿದ ಸಂತೋಷ್, ಆಡಿಕೊಳ್ಳುವವರ ಬಾಯಿ ಮುಚ್ಚಿಸಿದರು.

ತೈವಾನ್ ಟು ದೇವನಹಳ್ಳಿ!

ಇತ್ತೀಚೆಗೆ ಬೆಂಗಳೂರು ಸುತ್ತ ಮಾತ್ರವಲ್ಲದೆ ರಾಜ್ಯದಾದ್ಯಂತ ದಾಳಿಂಬೆ ಬೆಳೆಯುವವರ ಸಂಖ್ಯೆ ಹೆಚ್ಚಾಗಿದೆ. ಪರಿಣಾಮ, ಬೇಡಿಕೆ ಕುಸಿದು ದಾಳಿಂಬೆ ಬೆಲೆ ಕಡಿಮೆಯಾಗಿದೆ. ಜೊತೆಗೆ ರೋಗಗಳು, ನಿರ್ವಹಣೆ ವೆಚ್ಚ ಕೂಡ ಅಧಿಕ. ಹೀಗಾಗಿ ದಾಳಿಂಬೆ ಬಿಟ್ಟು ಬೇರೆ ಬೆಳೆ ಬೆಳೆಯಲು ಯೋಚಿಸಿದ ಸಂತೋಷ್‌ಗೆ ಸಿಕ್ಕಿದ್ದು ತೈವಾನ್ ಗುವಾ (ತೈವಾನ್ ಪೇರಲ). ಗುಜರಾತ್‌ಗೆ ಹೋಗಿ ಅಲ್ಲಿ ತೈವಾನ್ ಪೇರಲೆ ಬೆಳೆಯುತ್ತಿದ್ದ ತೋಟಗಳಿಗೆ ಭೇಟಿ ನೀಡಿದ ಸಂತೋಷ್, ಅಲ್ಲಿಂದಲೇ ಸಸಿಗಳನ್ನು ತರಿಸಿಕೊಳ್ಳಲು ನಿರ್ಧರಿಸಿದರು.

‘ಸಾಮಾನ್ಯವಾಗಿ ಎಲ್ಲರೂ ಪಿಂಕ್ (ಕೆಂಪು) ತಿರುಳಿನ ಪೇರಲೆ ಹಣ್ಣು ಬೆಳೆಯುತ್ತಾರೆ. ವಾಸ್ತವವಾಗಿ ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆ ಮತ್ತು ಬೆಲೆ ಇರುವುದು ಬಿಳಿ ತಿರುಳಿನ ತೈವಾನ್ ಪೇರಲೆ ಹಣ್ಣಿಗೆ. ಆದರೆ,  ಕೆಂಪು ತಿರುಳಿನ ಪೇರಲೆ ಸಸಿಗಳು ಸುಲಭವಾಗಿ ಮತ್ತು ಕಡಿಮೆ ಬೆಲೆಗೆ (30 ರೂ. ಒಂದು ಸಸಿ) ಸಿಗುವುದರಿಂದ ಹೆಚ್ಚಿನ ರೈತರು ಅವುಗಳನ್ನೇ ಬೆಳೆಯುತ್ತಾರೆ. ಗುಜರಾತ್ ಭೇಟಿ ವೇಳೆ ಅನುಭವಿ ರೈತರು ನೀಡಿದ ಸಲಹೆಯಂತೆ ನಾನು ಬಿಳಿ ತಿರುಳಿನ ತೈವಾನ್ ಪೇರಲ ಬೆಳೆಯಲು ನಿರ್ಧರಿಸಿ ಅಲ್ಲಿಂದಲೇ ಸಸಿಗಳನ್ನು ತರಿಸಿಕೊಂಡೆ. ಹೊಸ ತಳಿಯಾದ್ದರಿಂದ ಪ್ರಾಯೋಗಿಕವಾಗಿ 24 ಗುಂಟೆಯಲ್ಲಿ 450 ಪೇರಲ ಗಿಡಗಳನ್ನು ನಾಟಿ ಮಾಡಿದೆ. ಮೊದಲ ಕಟಾವಿನಲ್ಲೇ ಒಂದು ಗಿಡದಿಂದ 30 ಕೆ.ಜಿ. ಇಳುವರಿ ಪಡೆದೆ’.

ವಾರದ ಆದಾಯ 45 ಸವಿರ ರೂ.!

ತೈವಾನ್ ಗುವಾ ಗಿಡಗಳು ವರ್ಷದ ಎಲ್ಲಾ ತಿಂಗಳಲ್ಲೂ ಹಣ್ಣು ಬಿಡುತ್ತವೆ. ಹೀಗಾಗಿ 12 ತಿಂಗಳು ಸಹ ಆದಾಯ ನಿರೀಕ್ಷಿಸಬಹುದು. ಆರಂಭದಲ್ಲಿ ಒಂದು ಗಿಡದಿಂದ 30 ಕೆ.ಜಿ. ಇಳುವರಿ ಪಡೆದಿದ್ದ ಸಂತೋಷ್, ಪ್ರಸ್ತುತ ಒಂದು ಗಿಡದಿಂದ ಕನಿಷ್ಠ 50 ಕೆ.ಜಿ ಇಳುವರಿ ಪಡೆಯುತ್ತಿದ್ದಾರೆ. ಈಗ ಮಾರುಕಟ್ಟೆಯಲ್ಲಿ ಒಂದು ಕೆ.ಜಿ ತೈವಾನ್ ವೈಟ್ ಪೇರಲ ಹಣ್ಣಿಗೆ 85 ರೂ. ಬೆಲೆ ಇದೆ. ವಾರ ಒಂದರಲ್ಲಿ ಕನಿಷ್ಠ 500 ಕೆ.ಜಿ ಪೇರಲ ಹಣ್ಣು ಮಾರಾಟ ಮಾಡುವ ಸಂತೋಷ್ ಕನಿಷ್ಠ 42,500 ರೂ. ಗಳಿಸುತ್ತಾರೆ. ಅಂದರೆ, ಒಂದು ತಿಂಗಳಿಗೆ ಕನಿಷ್ಠ 1,70,000 ರೂ. ಆದಾಯ. ಯಾವ ಐಟಿ ಉದ್ಯೋಗಿಯೂ ಮಾನಸಿಕ ಒತ್ತಡವಿಲ್ಲದೆ ಇಷ್ಟು ಹಣ ಗಳಿಸಲು ಸಾಧ್ಯವಿಲ್ಲ.

ತೈವಾನ್ ಪೇರಲೆ

ಮಾರುಕಟ್ಟೆ ಹೇಗೆ?

‘ಸ್ಥಳೀಯವಾಗಿ ಮಾರಾಟ ಮಾಡಿದರೆ ಅಥವಾ ದಲ್ಲಾಳಿಗಳ ಮೂಲಕ ಮಾರಾಟ ಮಾಡಿದರೆ ಸಹಜವಾಗೇ ಬೆಲೆ ಕಡಿಮೆಯಾಗುತ್ತದೆ. ಹೀಗಾಗಿ ನಾನು ನೇರವಾಗಿ ಸಪರ್ ಮಾರ್ಕೆಟ್, ಶಾಪಿಂಗ್ ಮಾಲ್‌ಗಳಿಗೆ ಹಣ್ಣು ಸರಬರಾಜು ಮಾಡುತ್ತೇನೆ. ಇದರಿಂದ ನನಗೆ ಒಂದು ಕೆ.ಜಿ ಹಣ್ಣಿಗೆ 85 ರೂ. ಸಿಗುತ್ತದೆ. ಇತ್ತೀಚೆಗೆ ಕೊರೊನಾ ಕಾರಣದಿಂದ ಹೆಚ್ಚಿನ ಸಂಖ್ಯೆಯ ಜನ ಬೆಂಗಳೂರು ತೊರೆದಿದ್ದಾರೆ. ಹೀಗಾಗಿ ಮೊದಲಿನಷ್ಟು ಬೇಡಿಕೆ ಇಲ್ಲ. ಮತ್ತೆ ಬಡಿಕೆ ಬಂದರೆ ಒಂದು ಕೆ.ಜಿ ಹಣ್ಣಿಗೆ 95ರಿಂದ 100 ರೂ. ಬೆಲೆ ಸಿಗುತ್ತದೆ. ಆಗ ಆದಾಯ ಕೂಡ ಹೆಚ್ಚಾಗುತ್ತದೆ’ ಎನ್ನುತ್ತಾರೆ ಸಂತೋಷ್.

ಕಡಿಮೆ ವೆಚ್ಚದ ಕೃಷಿ

‘ತೈವಾನ್ ಸೀಬೆ ಅಥವಾ ಪೇರಲ ಹಣ್ಣು ಬೆಳೆಯಲು ಹೆಚ್ಚು ಹೂಡಿಕೆ ಅಥವಾ ನಿರ್ವಹಣಾ ವೆಚ್ಚ ಬೇಕಾಗುವುದಿಲ್ಲ. ಆರಂಭದಲ್ಲಿ ಗುಜರಾತ್‌ನಿಂದ ಸಸಿ ತರಿಸಲು (ಡಿಲೆವರಿ ಸೇರಿ) ಒಂದು ಸಸಿಗೆ 82 ರೂ. ನಂತೆ 450 ಸಸಿಗೆ 37,000 ರೂ. ವೆಚ್ಚವಾಗಿತ್ತು. ಆ ಬಳಿಕ ಗುಣಿ ಮಾಡಿಸಿ, ಮೂಲ ಗೊಬ್ಬರ ಹಾಕಿ ಗಿಡ ನೆಡುವ ವೇಳೆಗೆ ಒಟ್ಟು 3 ಲಕ್ಷ ರೂ. ಖರ್ಚಾಗಿದೆ. ಅದು ಬಿಟ್ಟರೆ ಪ್ರತಿ ವರ್ಷ ಹಣ್ಣುಗಳನ್ನು ಕೀಟ ಬಾಧೆಯಿಂದ ರಕ್ಷಿಸಲು ಕಟ್ಟುವ ಕವರ್, ಕಾರ್ಮಿಕರ ಕೂಲಿ ಸೇರಿ ತಿಂಗಳಿಗೆ 15 ಸಾವಿರ ರೂ. ಖರ್ಚಾಗುತ್ತದೆ. ಇಷ್ಟು ಬಿಟ್ಟರೆ ಉಳಿದದ್ದೆಲ್ಲವೂ ಲಾಭವೇ’ ಎನ್ನುವುದು ಸಂತೋಷ್ ಅವರ ಅನುಭವದ ಮಾತು.

ಯಾವ ಬೆಳೆಗೆ ಬೇಡಿಕೆ ಎಷ್ಟಿದೆ ಎಂಬುದನ್ನು ಅರಿತು, ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವಂತಹ ಹಣ್ಣು, ತರಕಾರಿ ಅಥವಾ ಇತರ ಬೆಳೆಗಳನ್ನು ಬೆಳೆದರೆ ರೈತರು ಹೆಚ್ಚು ಲಾಭ ಗಳಿಸಬಹುದು. ಕಂಪನಿಗಳಲ್ಲಿ ಕೆಲಸ ಮಾಡಿ ಪಡೆಯುವ ಸಂಬಳ ಆ ತಿಂಗಳ ನಿರ್ವಹಣೆಗೆ ಸರಿ ಹೋಗುತ್ತದೆ. ಆದರೆ, ಕಂಪನಿ ಕೆಲಸಕ್ಕೆ ಮೀಸಲಿಡುವ ಸಮಯವನ್ನೇ ಕೃಷಿಗೆ ವಿನಿಯೋಗಿಸಿದರೆ ಆ ಸಂಬಳಕ್ಕಿಂತ ಹತ್ತುಪಟ್ಟು ಆದಾಯ ಗಳಿಸಬಹುದು. ಆದರೆ, ಕಲಿಯುವ ಆಸಕ್ತಿ, ಶ್ರಮದ ವಿನಿಯೋಗ, ತಾಳ್ಮೆ, ಶ್ರದ್ಧೆ ಮತ್ತು ಬತ್ತದ ಉತ್ಸಾಹ ಬೇಕೇ ಬೇಕು ಎನ್ನುವುದಕ್ಕೆ ಸಂತೋಷ್ ಸಾಕ್ಷಿ. ಸಂತೋಷ್ ಅವರ ಸಂಪರ್ಕ ಸಂಖ್ಯೆ: 96633 99826.

Published On: 19 August 2021, 03:05 PM English Summary: this young farmer earns 25 lacks a year by growing taiwan white guava

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.