1. ಯಶೋಗಾಥೆ

ಬಹುಬೆಳೆಯಲ್ಲಿ ಬದುಕು ಕಟ್ಟಿಕೊಂಡ ರಾಜೇಗೌಡ ಬಿದರಕಟ್ಟೆ

ಇನ್ನೊಬ್ಬರ ಕೈಕೆಳಗೆ ಆಳಾಗಿ ದುಡಿಯುವುದಕ್ಕಿಂತ ಸ್ವಂತ ಭೂಮಿಯಲ್ಲಿ  ಆಳಾಗಿ ದುಡಿದು ರಾಜನಂತೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಮಂಡ್ಯ ತಾಲೂಕಿನ ಬಿ.ವಿ ರಾಜೇಗೌಡ ಬಿದರಕಟ್ಟೆ (Rajegowda Bidarakatte).

ಸ್ವಂತ ಹೊಲದಲ್ಲಿ ದುಡಿದು ಗಳಿಸುವುದರಲ್ಲಿ ಸಿಗುವ ಖುಷಿಯೇ ಬೇರೆಯಿರುತ್ತದೆ ಎಂಬ ನಂಬಿಕೆಯಿಂದ ಇದ್ದ ಭೂಮಿಯಲ್ಲಿ ಕೈತುಂಬಾ ಸಂಪಾದನೆ ಮಾಡಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಮಾದರಿ(Ideal)ಯಾಗಿದ್ದಾರೆ.

ಬೆಂಗಳೂರಿಗೆ ಹೋಗಿ ಹೆಚ್ಚು ಸಂಪಾದನೆ ಮಾಡಿ ಐಷರಾಮೀ ಜೀವನ ನಡೆಸಬೇಕೆಂದು ಹೋಗಿದ್ದ ಪದವೀಧರ ಬಿ.ವಿ ರಾಜೇಗೌಡರಿಗೆ ಯಾಕೋ ಕೆಲವು ದಿನಗಳ ನಂತರ ಇನ್ನೊಬ್ಬರ ಆಳಾಗಿ ದುಡಿಯುವುದು ಇಷ್ಟಬರಲಿಲ್ಲ. ಎಸಿಯಲ್ಲಿ ಕುಳಿತು ಕೆಲಸ ಮಾಡಿ ಆರೋಗ್ಯ ಹಾಳು ಮಾಡಿಕೊಳ್ಳುವುದರ ಬದಲು ಇದೇ ಎಂಟತ್ತು ಗಂಟೆಗಳ ಕಾಲ ಸ್ವಂತ ಹೊಲದಲ್ಲಿ ದುಡಿದು ಇದಕ್ಕಿಂತ ಹೆಚ್ಚು ಸಂಪಾದನೆ ಮಾಡಿ ಶೂಟು ಬೂಟು ಹಾಕಿಕೊಂಡು ಕಾರ್ಪೋರೆಟ್ ಕಂಪನಿಗಳ ಅಧಿಕಾರಿಗಳಂತೆ ತಿರುಗಬಹುದು ಎಂದು ನಿರ್ಧಾರ ಮಾಡಿಯೇ ಬಿಟ್ಟ. ಬೆಂಗಳೂರು ಬಿಟ್ಟು ವ್ಯವಸಾಯದಲ್ಲಿ ತೊಡಗಿಕೊಂಡಾಗ ನೆರೆಹೊರೆಯವರು ಆಡಿಕೊಳ್ಳುವ ವ್ಯಂಗ್ಯ ಮಾತುಗಳಿಗೆ ತಲೆಕೆಡಿಸಿಕೊಳ್ಳದೆ ಕಾಯಕಕ್ಕೆ ಮಹತ್ವ ಕೊಟ್ಟು ದುಡಿಯಲು ಆರಂಭಿಸಿದರು.

ಸತತ ಪ್ರಯತ್ನದಲ್ಲಿ ಪಾಸಾದ:

ಇದ್ದ ಒಂದುವರೆ ಎಕರೆಯಲ್ಲಿ ಹೊಸ ಹೊಸ ಪ್ರಯೋಗಕ್ಕೆ ಮುಂದಾಗಲು ಬೊರವೆಲ್ ಕೊರೆಯಿಸಿದ. ಆದರೆ ಅದೃಷ್ಟ ಕೂಡಿ ಬರಲಿಲ್ಲ. ಆರು ಬೋರವೆಲ್ ಫೇಲ್ ಆದವು. ಭೂ ತಾಯಿಯನ್ನು ನಂಬಿದರೆ  ಎಂದೂ ಕೈಬಿಡಲ್ಲ ಎಂಬ ತಂದೆಯ ಮಾತಿಗೆ  ಬೆಲೆಕೊಟ್ಟು ಮತ್ತೆ ಬೋರವೆಲ್ ಹಾಕಿಸಿದ. ಸತತ ಪ್ರಯತ್ನಿಸಿದರ ಫಲವಾಗಿ ಭೂತಾಯಿ ಕೊನೆಗೆ ಕೈಹಿಡಿದಳು. ಇಲ್ಲಿಂದ ರಾಜೇಗೌಡರ ಕುಟುಂಬದಲ್ಲಿ ಹೊಸ ಹುರುಪು ಶುರುವಾಯಿತು. ತಾವಂದುಕೊಂಡಂತೆ ವ್ಯವಸಾಯದಲ್ಲಿ ಹೊಸ ಹೊಸ ಪ್ರಯೋಗ ಮಾಡಿ ಸುತ್ತಮುತ್ತಲಿನ ಅನೇಕ ಕೃಷಿಕರಿಗೆ ಆದರ್ಶವಾಗಿದ್ದಾರೆ. ಅಲ್ಲದೆ ಅನೇಕ ಕಾರ್ಪೋರೇಟರ್ ಉದ್ಯೋಗಿಗಳಿಗೆ ಕೃಷಿಯತ್ತ ಮರಳಲು ಪ್ರೇರಣೆ ನೀಡುತ್ತಿದ್ದಾರೆ.

ಇರುವುದು ಒಂದುವರೆ ಎಕರೆ ಭೂಮಿ, ಬೆಳೆದದ್ದು ಬಹುಬೆಳೆ:

ಅಕ್ಷರ ಜ್ಞಾನದೊಂದಿಗೆ ಕೃಷಿ ಅನುಭವ (Agri experience) ಪಡೆಯಲು ಹೊಲಕ್ಕೆ ಇಳಿದ ಯುವರೈತ ರಾಜೇಗೌಡರು ಏಕ ಬೆಳೆ ನಂಬಲಿಲ್ಲ. ಬಹು ಬೆಳೆಯಲ್ಲಿ ಭದ್ರತೆ ಕಂಡಿದ್ದಾರೆ.ವ್ಯಾಪಾರಿಗಳಂತೆ ರೈತರ ಕೈಯಲ್ಲಿಯೂ ಸದ ದುಡ್ಡಿರಬೇಕು ಎಂಬ ನಂಬಿಕೆಯಿಟ್ಟು ಇವರು ಇದ್ದ ಭೂಮಿಯಲ್ಲಿ ಬಹುಬೆಳೆಗೆ ಮೊರೆಹೋದರು. ಆಗಲೂ ನೆರೆಹೊರೆಯವರು ಯಾವುದೋ ಒಂದು ಛಂದ್ ಬೆಳೆ ತೆಗೆದ್ ಬಿಟ್ಟು ಏನೋ ಮಾಡಕ್ ಹೊರಟರ್ ನೋಡ್, ಇದು ವ್ಯವಸಾಯ. ತರಕಾರಿ ವ್ಯಾಪಾರವಲ್ಲವೆಂದು ಆಡಿಕೊಂಡರು. ಆಗಲೂ ತಲೆ ಕೆಡಿಸಿಕೊಳ್ಳದೆ ವ್ಯಂಗ್ಯ ನುಡಿಗಳನ್ನೇ ಸವಾಲಾಗಿ ತೆಗೆದುಕೊಂಡರು. ಜಮೀನಿನ ಬದುಗಳ ಮೇಲೆ 60ಕ್ಕೂ ಹೆಚ್ಚು ತೆಂಗಿನ ಸಸಿಗಳನ್ನು ನೆಟ್ಟರು. ಇದರೊಳಗೆ ಮಿಶ್ರ ಬೆಳೆಗೆ ಕೈಹಾಕಿದರು. ಟೊಮ್ಯಾಟೋ (Tomato), ಮೆಣಸಿನಕಾಯಿ (Chilly), ಬೀನ್ಸ್, ಭತ್ತ, ಸೌತೆಕಾಯಿ (Cucumber), ಅವರೆ, ರಾಗಿ ಸೇರಿದಂತೆ ನಾನಾ ಬಗೆಯ ಸೊಪ್ಪೆ ಬೆಳೆದರು. ಸೇವಂತಿಯಲ್ಲಿ ಬರುವ ವಿವಿಧ ಜಾತಿಯ ಜೂಲಾ ಸೇವಂತಿ, ಪಚ್ಚೆ ಸೇವಂತಿ, ಕರ್ನಲ್ ಸೇವಂತಿ, ಚಾಂದಿನಿ ಸೇವಂತಿ, ಮ್ಯಾರಿಗೋಲ್ಡ್ ಹೀಗೆ ಹತ್ತು ಹಲವಾರು ಹೂವುಗಳನ್ನು ಬೆಳೆಸಿದರು.  ಪ್ರತಿ 10 ಗುಂಟೆ ಜಮೀನಿನಲ್ಲಿ ಪ್ರತ್ಯೇಕ ಬೆಳೆಗಳನ್ನು ಬೆಳೆದ ನಂತರ ಯಾರು ಇವರಿಗೆ ಟೀಕೆ ಮಾಡುತ್ತಿದ್ದರೋ ಅವರೇ ಹೊಲದತ್ತ ಬಂದು  ಮೆಚ್ಚುಗೆ ವ್ಯಕ್ತಪಡಿಸುವಂತೆ ಮಾಡಿ ತೋರಿಸಿದರು.

ಕೃಷಿಕನಲ್ಲದೆ ವ್ಯಾಪಾರಿಯಾದ (Merchant) ರಾಜೇಗೌಡ:

ರೈತರು ವ್ಯವಸಾಯದೊಂದಿಗೆ ವ್ಯಾಪಾರಿಯಾಗಬೇಕು. ಗ್ರಾಹಕರಿಗೆ ನೇರ ಮಾರಾಟ ಮಾಡಿದರೆ ಲಾಭ ಗಳಿಸಲು ಸಾಧ್ಯ ಎಂಬುದು ಗೌಡರ ಗುಟ್ಟು. ರೈತರಿಗಿಂತ ವ್ಯಾಪಾರಸ್ಥರೇ ಹೆಚ್ಚು ಕುಳಿತು ಲಾಭ ಗಳಿಸುತ್ತಾರೆ. ಅದೇ ಕೆಲಸವನ್ನು ನಾವ್ಯಾಕೆ ಮಾಡಬಾರದೆಂದು ತಾನು ವ್ಯಾಪಾರಿಯೂ ಆದ. ತಾನು ಬೆಳೆದ ಎಲ್ಲಾ ಬೆಳೆಗಳನ್ನು ಸ್ವತ ಅವರೇ ಹತ್ತಿರದ ಬಸರಾಳು, ಕೊಪ್ಪ, ಕೌಡ್ಲೆಗೆ ಕೊಂಡೊಯ್ದು ಮಾರಾಟ ಮಾಡುತ್ತಾರೆ. ಸ್ಥಳೀಯ ಮಾರುಕಟ್ಟೆ ಸಂತೆಗಳಲ್ಲೂ ಮಾರಾಟ ಮಾಡುತ್ತಾರೆ.  ವ್ಯವಸಾಯದೊಂದಿಗೆ ವ್ಯಾಪಾರ ಮಾಡುವುದರಿಂದ ವಾರ್ಷಿಕವಾಗಿ 2 ಲಕ್ಷಕ್ಕೂ ಹೆಚ್ಚು ನಿವ್ವಳ ಲಾಭ ಪಡೆಯುತ್ತಾರೆ.

ಅರಸಿಕೊಂಡು ಬಂದ ಪ್ರಶಸ್ತಿಗಳು:

ರಾಜೇಗೌಡರ ಬಹುಬೆಳೆ ಪದ್ದತಿಯು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಮನೆಮಾತಾಯಿತು. ನಂತರ ಕೃಷಿ ಅಧಿಕಾರಿಗಳ ಕಿವಿಗೆ ಬಿದ್ದನಂತರ ಇವರ ಹೊಲದತ್ತ ಧಾವಿಸಿದರು. ಇವರ ಸಾಧನೆಯನ್ನು ಗುರುತಿಸಿ ಕೃಷಿ ವಿಶ್ವವಿದ್ಯಾಲಯ ಬೆಂಗಳೂರು ಉತ್ತಮ ತಾಲೂಕು ಮಟ್ಟದ  ಪ್ರಶಸ್ತಿಯನ್ನು ನೀಡಿ ಗೌರವಿಸಿತು. 2017-18ನೇ ಸಾಲಿನ ಆತ್ಮ ಯೋಜನೆಯಡಿ ಸಮಗ್ರ ಕೃಷಿ ಪದ್ಧತಿ ವಿಭಾಗದಲ್ಲಿ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ ತೋಟಗಾರಿಕೆ ಮೇಳದಲ್ಲಿ ಶ್ರೇಷ್ಠ ತೋಟಗಾರಿಕೆ ರೈತ ಪ್ರಶಸ್ತಿ ಲಭಿಸಿತು ಸಂಘ ಸಂಸ್ಥೆಗಳೂ ಸಹ ಇವರನ್ನು ಹುಡುಕುಕೊಂಡು ಬಂದು ಪ್ರಶಸ್ತಿ ಸನ್ಮಾನಗಳು ಮಾಡಿವೆ.

-----------

ಹರಕು ಬಟ್ಟೆ, ಪಂಜೆ, ಹೆಗಲ ಮೇಲೆ ಟಾವೆಲ್ ಹಾಕಿಕೊಂಡರೆ ಮಾತ್ರ ರೈತನ ಸಂಕೇತಗಳಲ್ಲ. ರೈತರೂ ಸಹ ಶೂಟು ಬೂಟು ಹಾಕಿಕೊಂಡು ಅಧಿಕಾರಿಗಳಂತೆ ತಿರುಗಬಹುದು. ಹೊಲದಲ್ಲಿ ಆಳಾಗಿ ದುಡಿದು ಹೊರಗೆ ರಾಜನಂತೆ ತಿರುಗಬೇಕೆಂಬುದು ನನ್ನ ವಿಚಾರ. ಏಕಬೆಳೆ ರೈತನನ್ನು ಬಿಡಬಹುದು. ಬಹುಬೆಳೆ ಬದುಕು ಕಟ್ಟಿಕೊಡುತ್ತದೆ. ಇದಕ್ಕೆ ಕುಟುಂಬದ ಎಲ್ಲಾ ಸದಸ್ಯರು ದುಡಿಯಬೇಕು.

ರಾಜೇಗೌಡ ಬಿದರಿಕಟ್ಟೆ (Rajegowda Bidarikatte)

ಪ್ರಗತಿಪರ ರೈತ, ಮಂಡ್ಯ ತಾಲೂಕು

ಮಂಡ್ಯ ತಾಲೂಕು

ಮೊ.9449425391

ಬಾಳೆ ಬೆಳೆದು ಶೈನ್ (Shine) ಆದ ಸೋಮಶೇಖರ

Published On: 05 July 2020, 07:43 PM English Summary: Successful story of Rajegouda Bidarkatte

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.