1. ಯಶೋಗಾಥೆ

ಬದುಕು ಬದಲಿಸಿದ ಮೊಲ ಸಾಕಾಣಿಕೆ....ಉಪನ್ಯಾಸಕ ಮಾಡಿದ ಮೋಡಿ ಇದು

ಚಿಕ್ಕಮಗಳೂರಿನ ಕಡೂರಿನವರಾದ ಶಶಿಕಿರಣ್ ಅವರಿಗೆ ಬಾಲ್ಯದಿಂದಲೂ ಉಪನ್ಯಾಸಕನಾಗಬೇಕೆಂಬ ಬಯಕೆ. ಅದಕ್ಕಾಗಿಯೇ ಎಂ.ಎ, ಬಿಎಡ್ ಮುಗಿಸಿದ್ದರು ಶಶಿಕಿರಣ್. ಇಚ್ಛೆಯಂತೆ ಉಪನ್ಯಾಸಕ ವೃತ್ತಿನೂ ಸಿಕ್ತು. ಆದ್ರೆ ಸಂಬಳ ತಿಂಗಳಿಗೆ ಕೇವಲ ಮೂರು ಸಾವಿರ ರೂಪಾಯಿ. ಇಷ್ಟೆಲ್ಲಾ ಓದಿ ತಿಂಗಳಿಗೆ ಕೇವಲ ಮೂರು ಸಾವಿರ ರೂಪಾಯಿ ಪಡೆಯಲು ಮನಸ್ಸೇಕೋ ಒಪ್ಪಲಿಲ್ಲ. ಕೆಲಸಕ್ಕೆ ವಿದಾಯ ಹೇಳಿ ಮಾಯಾನಗರಿ ಬೆಂಗಳೂರಿಗೆ ಕಾಲಿಟ್ರು.

ಬೆಂಗಳೂರಿಗೆ ಬಂದ್ರೂ ಶಶಿಕಿರಣ್ ಅವರಿಗೆ ಮನಸ್ಸಿಗೆ ನೆಮ್ಮದಿ ಸಿಗೋವಂತ ಕೆಲಸವಂತೂ ಸಿಗಲಿಲ್ಲ. ಕೊನೆಗೆ ಸಿಲಿಕಾನ್ ಸಿಟಿಯ ಸಹವಾಸನೇ ಬೇಡ ಅಂತಾ ಊರಿಗೆ ತೆರಳಲು ನಿರ್ಧರಿಸಿದ್ರು. ಇದರ ಮಧ್ಯೆ ಹೇಸರಘಟ್ಟದಲ್ಲಿ ಮೊಲ ಸಾಕಾಣಿಕೆ ಬಗ್ಗೆ ತರಬೇತಿ ನೀಡುತ್ತಾರೆ ಅನ್ನು ಬಗ್ಗೆ ಗೆಳೆಯನಿಂದ ಮಾಹಿತಿ ಸಿಕ್ತು. ಅದರಂತೆ ತರಬೇತಿ ಪಡೆದುಕೊಂಡ್ರು ಶಶಿಕಿರಣ್. ಬಳಿಕ ಸ್ವಉದ್ಯೋಗ ಮಾಡಬೇಕೆಂದು ಊರಿನ ಬಸ್ ಹತ್ತಿದ್ರು. ಆದರೆ ಎರಡು ವರ್ಷಗಳ ಕಾಲ ಶಶಿಕಿರಣ್ ಅವರಿಗೆ ಹಣಕಾಸು ಸಮಸ್ಯೆಯಿಂದಾಗಿ ಸ್ವಂತ ಉದ್ಯೋಗ ಆರಂಭಿಸಲು ಸಾಧ್ಯವಾಗಲಿಲ್ಲ. ಎರಡು ವರ್ಷಗಳ ನಿರಂತರ ಪ್ರಯತ್ನದ ಫಲವಾಗಿ ಕೊನೆಗೂ 2011ರಲ್ಲಿ ಕ್ವಾಲಿಟಿ ಮೊಲದ ಫಾರಂ ಆರಂಭಿಸಿಯೇ ಬಿಟ್ರು ಶಶಿಕಿರಣ್.

ಕ್ವಾಲಿಟಿ ರ್ಯಾಬಿಟ್ ಫಾರಂನಿಂದಾಗಿ ಒಂದು ಕಾಲದಲ್ಲಿ 3 ಸಾವಿರ ರೂಪಾಯಿಗೆ ಬೇರೆಯವರ ಕೈ ಕೆಳಗೆ ದುಡಿಯುತ್ತಿದ್ದ ಶಶಿಕಿರಣ್ ಇವತ್ತು ಸ್ವಉದೋಗ್ಯದ ಮೂಲಕ ಖುಷಿ ಕಂಡುಕೊಂಡಿದ್ದಾರೆ. ತಮ್ಮ 27ರ ಹರೆಯದಲ್ಲಿಯೇ ಶಶಿಕಿರಣ್ ಅವರು ನೂರಾರು ಜನರಿಗೆ ಕೆಲಸ ಕೊಟ್ಟಿದ್ದಾರೆ. ಅಲ್ಲದೇ ರಾಜ್ಯದಾದ್ಯಂತ 56 ಮೊಲ ಸಾಕಾಣಿಕಾ ಕೇಂದ್ರಗಳನ್ನು ಆರಂಭಿಸಿದ್ದಾರೆ. ಚಿಕ್ಕಮಗಳೂರು, ಶಿವಮೊಗ್ಗ, ಮಂಡ್ಯ, ಮೈಸೂರು, ಹಾಸನ, ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಶಶಿಕಿರಣ್ ಅವರ ಮೊಲ ಸಾಕಾಣಿಕಾ ಕೇಂದ್ರಗಳಿವೆ. ಇನ್ನೆರಡು ಮೂರು ತಿಂಗಳಲ್ಲಿ ಇನ್ನೂ 25 ಮೊಲಸಾಕಾಣಿಕಾ ಕೇಂದ್ರಗಳನ್ನು ಆರಂಭಿಸುವ ಪ್ಲಾನ್ ನಲ್ಲಿದ್ದಾರೆ ಶಶಿಕಿರಣ್.

ತನ್ನಂತೆಯೇ ಸ್ವಉದ್ಯೋಗ ಆರಂಭಿಸಬೇಕು ಅನ್ನೋ ಬಯಕೆ ಹೊಂದಿರುವವರಿಗೆ ಶಶಿಕಿರಣ್ ಮೊಲ ಸಾಕಾಣಿಕೆಗೆ ನೆರವಾಗುತ್ತಿದ್ದಾರೆ. ಶಶಿಕಿರಣ್ ಅವರ ಕೆಲ ಮೊಲ ಸಾಕಾಣಿಕಾ ಕೇಂದ್ರಗಳನ್ನು ಇವರ ಸ್ನೇಹಿತರೇ ನೋಡಿಕೊಳ್ಳುತ್ತಿದ್ದಾರೆ. ಮೊಲ ಸಾಕಾಣಿಕೆಯಿಂದಲೇ ಶಶಿಕಿರಣ್ ಸದ್ಯ ತಿಂಗಳಿಗೆ ಮೂರರಿಂದ ನಾಲ್ಕು ಲಕ್ಷದವರೆಗೂ ಲಾಭ ಪಡೆಯುತ್ತಿದ್ದಾರೆ.

ಮೊಲ ಸಾಕೋದು ಸುಲಭ ಅನ್ನುವ ಶಶಿಕಿರಣ್ ಮೊಲಗಳಿಗಾಗಿ ದಿನವೊಂದಕ್ಕೆ ಎರಡು ಗಂಟೆಗಳನ್ನು ಮೀಸಲಿಟ್ಟರೆ ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸಬಹುದು ಅಲ್ಲದೇ ಉತ್ತಮವಾದ ನೀರಿನ ಸೌಲಭ್ಯ ಹಾಗೂ ಹಸಿರು ಹುಲ್ಲಿದ್ರೆ ಯಾರೂ ಬೇಕಾದ್ರೂ ಮೊಲ ಸಾಕಬಹುದು ಅನ್ನುತ್ತಾರೆ. ಅಲ್ಲದೇ ಬಯಸಿದವರಿಗೆ ತರಬೇತಿ ಕೂಡ ನೀಡ್ತಾರೆ. ಇನ್ನು ಶಶಿಕಿರಣ್ ಅವರು ಸಾಕಿದ ಮೊಲಗಳು ಮಾಂಸ, ಲ್ಯಾಬೋರೆಟರಿಗಳಲ್ಲಿ ಪ್ರಯೋಗಗಳು ಹಾಗೂ ಔಷಧಿ ತಯಾರಿಕೆಗಾಗಿ ವಿವಿಧೆಡೆಗೆ ಸರಬರಾಜಾಗ್ತವೆ. ಇನ್ನು ಗೋವಾ, ತಮಿಳುನಾಡು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಪಂಚತಾರಾ ಹೋಟೆಲ್ ಗಳಿಗೂ ರವಾನೆಯಾಗ್ತವೆ. ಅಲ್ಲದೇ ಇದರ ಮಲ ಹಾಗೂ ಮೂತ್ರ ಉತ್ತಮ ಗೊಬ್ಬರವಾದ್ದರಿಂದ ಗೊಬ್ಬರದಿಂದಲೂ ಶಶಿಕಿರಣ್ ಅವರಿಗೆ ಉತ್ತಮ ಆದಾಯ ಬರುತ್ತಿದೆ.

ಸದ್ಯ ಮೊಲ ಸಾಕಾಣಿಕೆಯಲ್ಲಿ ಸುಂದರವಾದ ಬದುಕು ಕಟ್ಟಿಕೊಂಡಿರುವ ಶಶಿಕಿರಣ್ ಮುಂದೆ ತಮ್ಮ ಉದ್ಯಮವನ್ನು ಇನ್ನಷ್ಟು ವಿಸ್ತರಿಸುವ ಯೋಜನೆಯಲ್ಲಿದ್ದಾರೆ. ಇದಕ್ಕಾಗಿಯೇ ತಮ್ಮದೇ ಆದ ಸಂಸ್ಥೆಯೊಂದನ್ನು ಸ್ಥಾಪಿಸುವ ಪ್ಲಾನ್ ನಲ್ಲಿದ್ದಾರೆ. ಜೊತೆಗೆ ನಿರುದ್ಯೋಗಿಗಳಾಗಿ ಬದುಕು ರೂಪಿಸಿಕೊಳ್ಳಲು ಪರದಾಡುತ್ತಿರುವ ಯುವಕರು ಕೂಡ ತನ್ನಂತೆಯೇ ಸ್ವಉದ್ಯೋಗ ಮಾಡಿಕೊಂಡು ಸುಂದರವಾದ ಜೀವನ ರೂಪಿಸಿಕೊಳ್ಳಲಿ ಅನ್ನೋದು ಶಶಿಕಿರಣ್ ಅವರ ಆಶಯ.

Published On: 30 September 2018, 05:27 PM English Summary: Rabbit Farming - This is a charm made by the lecturer who changed the life of Rabbit

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.