Krishi Jagran Kannada
Menu Close Menu

ಕೃಷಿ ಜೊತೆಗೆ ಕೋಳಿ ಸಾಕಾಣಿಕೆ ಮಾಡಿ ಯಶಸ್ವಿ ರೈತನಾದ ಲಕ್ಷಿಕಾಂತ ಹಿಬಾರೆ

Wednesday, 24 June 2020 03:58 PM
Laxmikant-Hibra

ಕೃಷಿಯಲ್ಲಿ ನಷ್ಟವಾದರೂ  ಕೃಷಿಯ ಉಪ ಕಸುಬಾಗಿ ರೈತರ ಜೀವನ ನಿರ್ವಹಣೆಗೆ ಕಂಡುಕೊಂಡಿದ್ದ ಉಪಾಯ ಇಂದು ಲಕ್ಷಿಕಾಂತ್ ಹಿಬಾರೆಯವರ ಕೈ ಹಿಡಿದಿದೆ. ಕಲಬುರಗಿ ತಾಲೂಕಿನ ಹಾಗರಗಾ ಗ್ರಾಮದ ಲಕ್ಷ್ಮೀಕಾಂತ್ ಹಿಬಾರೆ ತನ್ನ ಬೇಸಾಯದ ಜೊತೆಗೆ ಕೋಳಿ ಮೊಟ್ಟೆ ಮಾರಾಟ ಮಾಡಿ ತಿಂಗಳಿಗೆ 40 ಸಾವಿರ ರುಪಾಯಿ ನಿವ್ವಳ ಲಾಭ ಪಡೆಯುತ್ತಿರುವುದಲ್ಲದೆ ಅದರಲ್ಲಿ ಯಶಸ್ಸನ್ನೂಪಡೆದುಕೊಂಡಿದ್ದಾರೆ. ಅದು ಹೇಗೆ ಸಾಧ್ಯ ಅಂದುಕೊಂಡಿದ್ದೀರಾ......ಇಲ್ಲಿದೆ ಮಾಹಿತಿ.

ಕೇರಳದಲ್ಲಿ ಈಗಾಗಲೇ ಯಶಸ್ಸು ಕಂಡಿರುವ ಬಿವಿ -380 ತಳಿಯ ಮೊಟ್ಟೆ ಇಡುವ ಕೋಳಿಗಳನ್ನು ತಂದಿದ್ದಾರೆ.. ಇನ್ನೊಂದು ವಿಶೇಷತೆಯಂದರೆ ಈ ಕೋಳಿಗಳು ಪ್ರತಿ 25 ತಾಸಿಗೆ ಒಂದು ಮೊಟ್ಟೆಯಿಡುತ್ತವೆ.  ಫಾರ್ಮ್ ಕೋಳಿಗಳಿಗಿಂತ ಇವು ಭಿನ್ನವಾಗಿದ್ದು, ನೋಡಲು ಊರ ನಾಟಿ ಕೋಳಿಯಂತೆ ಕಾಣುತ್ತವೆ. ಇವರ ಫಾರ್ಮ್ಗೆ ಒಮ್ಮೆ ಭೇಟಿ ನೀಡಿದರೆ ಸಾಕು, ನೀವೇ ಆಶ್ಚರ್ಯರಾಗುತ್ತೀರಿ. ಹೀಗೆ ಒಂದು ಸುತ್ತು ಹಾಕಿದರೆ ಸಾಕು ಕ್ಷಣಾರ್ಧದಲ್ಲಿ ಕೋಳಿಗಳು ಮೊಟ್ಟೆ ಹಾಕಿದ್ದು ಕಾಣತ್ತವೆ

Chicken-Poultry

ಕೋಳಿಗೆ ಅತ್ಯಾಧುನಿಕ ವಿಶೇಷ ಶೆಡ್:

25 *50 ಅಳತೆಯ 10 ಶೆಡ್ ಗಳನ್ನು 3 ಲಕ್ಷ ಖರ್ಚು ಮಾಡಿ ಅದರಲ್ಲಿ ಪ್ರತ್ಯೇಕವಾಗಿ ಕೋಳಿಗೆ ಒಂದೊಂದು ಗೂಡು ನಿರ್ಮಿಸಿದ್ದಾರೆ. ಗೂಡಿನ ಹೊರ ಬಾಗದಲ್ಲಿ ಕೋಳಿಗೆ ಆಹಾರ ಹಾಕಲು ಒಂದು ಅರ್ಧಚಂದ್ರಾಕೃತಿಯ ಪೈಪ್ ನಂತಹ ಟ್ರೇ ಅಳವಡಿಸಿದ್ದಾರೆ. ಗೂಡಿನ ಮೇಲ್ಭಾಗದಲ್ಲಿ ಒಂದು ಚಿಕ್ಕ ನೀರು ಸಂಗ್ರಹದ ಟ್ಯಾಂಕ್ ಅಳವಡಿಸಲಾಗಿದ್ದು, ಇದರಿಂದ ಗೂಡಿನ ಒಳಬಾಗಕ್ಕೆ ಪೈಪ್ ಮೂಲಕ ಸಂಪರ್ಕಿಸಿ ಒಂದು ನಾಬ್ ಅಳವಡಿಸಿದ್ದಾರೆ. ಕೋಳಿ ತನಗೆ ಬೇಕಾದಾಗ ಈ ನಾಬ್ ಮೂಲಕ ನೀರು ಕುಡಿಯುತ್ತದೆ.  ಕೋಳಿ ಮೊಟ್ಟೆ ಇಟ್ಟ ನಂತರ ಈ ಮೊಟ್ಟೆ ಗೂಡಿನಲ್ಲಿ ಅಳವಡಿಸಲಾಗಿದ್ದ ಪ್ರತ್ಯೇಕವಾದ ಟ್ರೇಗೆ ಬಂದು ಬೀಳುತ್ತದೆ.  ಇದರಿಂದ ಮೊಟ್ಟೆ ಒಡೆದು ಹೋಗುವುದು ತಪ್ಪುತ್ತದೆ. ಕೋಳಿಯ ಮಲ ನೇರವಾಗಿ ನೆಲಕ್ಕೆ ಬೀಳುವಂತೆ ಈ ಘಟಕವನ್ನು ತಯಾರಿಸಿದ್ದಾರೆ.

ಬಿವಿ- 380 ತಳಿಯ ಕೋಳಿ ಮೊಟ್ಟೆಗಳು ಸಾವಯವ ಗುಣಮಟ್ಟವನ್ನು ಹೊಂದಿರುವ ಮೊಟ್ಟೆಗಳಾಗಿವೆ. ಮಾತ್ರವಲ್ಲದೆ ರೋಗ ರುಜಿನಗಳಿಂದ ಮುಕ್ತವಾದ ಮತ್ತು ಹಾನಿಕಾರಕ ಹಾರ್ಮೋನ್ಸ್ ಗಳನ್ನು ಹೊಂದಿರದ ಮೊಟ್ಟೆಗಳಾಗಿವೆ. ಕೋಳಿಗಳಿಗೆ ಬಿಸಿಲು ತಾಗದಂತೆ, ಝಳ ಬರದಂತೆ ಅತ್ಯಾಧುನಿಕ ಶೆಡ್ ನಿರ್ಮಾಣ ಮಾಡಿ  ತಿನ್ನಲು ಶೇಂಗಾ, ಮೆಕ್ಕೆಜೋಳಾ, ಸೋಯಾಬಿನ್ ಹಿಂಡಿಯನ್ನು ಆಹಾರವಾಗಿ ನೀಡುವ ಮೂಲಕ ಕೋಳಿಗಳ ಪೋಷಣೆ ಮಾಡುತ್ತಿದ್ದಾರೆ.

Chicken-Poultry

ಪ್ರತಿ ತಿಂಗಳಿಂಗೆ 40 ಸಾವಿರ ನಿವ್ವಳ ಲಾಭ:

ಒಂದು ಕೋಳಿ ಪ್ರತಿದಿನ 4 ರುಪಾಯಿಯ ಆಹಾರ ತಿನ್ನುತ್ತದೆ. 500 ಕೋಳಿಗಳು ಪ್ರತಿದಿನ 2 ಸಾವಿರ ರುಪಾಯಿ ಆಹಾರ ತಿನ್ನುತ್ತವೆ. ಪ್ರತಿತಿಂಗಳಿಗೆ 60 ಸಾವಿರ ರುಪಾಯಿ ಖರ್ಚು. 500 ಕೋಳಿಗೆಳು ತಿಂಗಳಿಗೆ ಕನಿಷ್ಟ 12500 ತತ್ತಿಗಳನ್ನುಡುತ್ತವೆ. ಒಂದು ತತ್ತಿಗೆ 8 ರುಪಾಯಿಯಂತೆ ಮಾರಿದರೆ 1 ಲಕ್ಷ ರುಪಾಯಿ ಆದಾಯ ಬರುತ್ತದೆ. ಕೋಳಿಯ ಆಹಾರದ ಹಣ ತೆಗೆದರೆ 40 ಸಾವಿರ ರೂಪಾಯಿ ತಿಂಗಳಿಗೆ ನಿವ್ವಳ ಲಾಭಪಡೆಯುತ್ತಾರೆ. ಎಲ್ಲೋ ಹೋಗಿ ಸರ್ಕಾರಿ ನೌಕರಿ ಮಾಡುವ ಅಗತ್ಯವಿಲ್ಲ. ವ್ಯವಸಾಯದೊಂದಿಗೆ ಇದನ್ನೂ ಮಾಡಿ ಸುಖವಾಗಿ ಜೀವಿಸಬಹುದು ಎಂಬುದು ಈ ರೈತನ ಅಭಿಪ್ರಾಯ. ಕೋಳಿಯ ಸತ್ವಯುತ ಗೊಬ್ಬರ ತನ್ನ ವ್ಯವಸಾಯಕ್ಕೆ ಹೆಚ್ಚಿನ ಇಳುವರಿ ಪಡೆಯುತ್ತಾರೆ. ಹೊರಗಿನಿಂದ ಗೊಬ್ಬರ ಖರೀದಿಸುವ ಅವಶ್ಯಕತೆಯೇ ಇಲ್ಲ ಎನ್ನುತ್ತಾರೆ ರೈತ ಲಕ್ಷ್ಮೀಕಾಂತ ಹಿಬಾರೆ

ರೈತರು ವ್ಯಾಪಾರಿ ಮನೋಭಾವ ಬೆಳೆಸಿಕೊಳ್ಳಬೇಕು: ಲಕ್ಷ್ಮೀಕಾಂತ ಹಿಬಾರೆ.

ಭಾರತದಲ್ಲಿ ಕೃಷಿ ಎಂದರೆ ಜೀವನೋಪಾಯ, ಹೊಟ್ಟೆಪಾಡು ಎಂಬಂತಾಗಿದೆ. ಈ ಮನೋಭಾವ ಬಿಟ್ಟು ರೈತರು ವ್ಯಾಪಾರಿ ಮನೋಭಾವ ಬೆಳೆಸಿಕೊಳ್ಳಬೇಕು. ಭೂಮಿಯ ಫಲವತ್ತತೆ ಕಾಪಾಡಿಕೊಂಡು ವೈಜ್ಞಾನಿಕ ಸ್ಪರ್ಶದೊಂದಿಗೆ ದುಡಿದರೆ ಯಶಸ್ಸು ನಿಶ್ಚಿತ. ನೌಕರಿಯಲ್ಲಿ ದಿನಾಲೂ 8 ತಾಸು ಕೆಲಸ ಮಾಡುವಂತೆ ಇಲ್ಲಿಯೂ ಸಹ ದಿನಾಲು ಕೆಲಸ ಮಾಡಬೇಕು. ಅಂದಾಗ ಮಾತ್ರ ಲಾಭ ಸಿಗುತ್ತದೆ. ಕೃಷಿಯಲ್ಲಿ ತಾಳ್ಮೆ ಇಲ್ಲದಿದ್ದರೆ ಯಶಸ್ಸು ಗಳಿಸಲು ಸಾಧ್ಯವಿಲ್ಲ. ಇಂದುಶೇ.25 ರೈತರು ಮಾತ್ರ ಜಮೀನಿನಲ್ಲಿರುತ್ತಾರೆ. ಶೇ.75ರಷ್ಟು ರೈತರು ಊರಿನ ಕಟ್ಟೆಗಳ ಮೇಲೆ ಕುಳಿತಿರುತ್ತಾರೆ ಅಥವಾ ಯಾವುದೋ ರಾಜಕಾರಣಿಗಳ ಹಿಂದೆ ಸುತ್ತುತ್ತಿರುತ್ತಾರೆ. ನಾವು ಮಾಡಿದ ಕೆಲಸಕ್ಕೆ ನಾವೇ ಬೆಲೆ ನಿರ್ಧಾರ ಮಾಡಿ ಹೆಮ್ಮೆಯಿಂದ ಬದುಕುವುದನ್ನು ಕಲಿಯಬೇಕು. ಬರೀ ಕೃಷಿಯನ್ನೇ ನೆಚ್ಚಿಕೊಂಡು ಜೀವನ ಸಾಗಿಸುವುದಕ್ಕಿಂತ ಕೋಳಿ, ಕುರಿ ಸಾಕಾಣಿಕೆಯಂತಹ ಉಪ ಕಸುಬು ಮಾಡಿದರೆ ದಿನಾಲು ಲಾಭ ಗಳಿಸಬಹುದು.

ಲಕ್ಷ್ಮೀಕಾಂತ ಹಿಬಾರೆ
ಪ್ರಗತಿಪರ ರೈತ ಹಾಗರಗಾ, ಕಲಬುರಗಿ ತಾಲೂಕು

Share your comments

Krishi Jagran Kannada Subscription

CopyRight - 2020 Krishi Jagran Media Group. All Rights Reserved.