1. ಯಶೋಗಾಥೆ

ಸುವರ್ಣ ಕರ್ನಾಟಕದಲ್ಲಿ ಸಂಚಲನ ಮೂಡಿಸಿದ ಬಾಳೆಕಾಯಿ ಹುಡಿ ನವೋದ್ಯಮ!

ಬಾಕಾಹು ತಯಾರಿ ಮಾಡುತ್ತಿರುವ ಬೆಳಗಾವಿಯ ಅಜ್ಜಪ್ಪ ಮತ್ತು ಕುಟುಂಬ.

ಕರ್ನಾಟಕದಲ್ಲಿ ಬಾಳೆಕಾಯಿ ಹುಡಿ (ಬಾಕಾಹು) ಆಂದೋಲನ ಶುರುವಾಗಿ ಎರಡು ತಿಂಗಳು ಕಳೆದಿದೆ. ಅದಾಗಲೇ ಹತ್ತಾರು ಮಂದಿ ಬಾಕಾಹು ತಯಾರಿಸಿ, ಸಾಮಜಿಕ ಜಾಲತಾಣಗಳಾಗಿರುವ ಫೇಸ್‌ಬುಕ್, ವಾಟ್ಸಪ್ ಮತ್ತು ಆನ್‌ಲೈನ್ ಮೂಲಕ ಬಾಳೆ ಕಾಯಿ ಪುಡಿಯನ್ನು ಮಾರಾಟ ಮಾಡುತ್ತಿದ್ದಾರೆ. ಒಂದರ್ಥದಲ್ಲಿ ಬಾಕಾಹು ತಯಾರಿ ರಾಜ್ಯದಲ್ಲಿ ಒಂದು ನವೋದ್ಯಮದ ರೂಪ ಪಡೆದಿದೆ. ಜೊತೆಗೆ ಕೆಲಸದವರ ನೆರವಿಲ್ಲದೆ, ಮನೆಯ ಸದಸ್ಯರೇ ಸೇರಿಕೊಂಡು ಬಾಕಾಹು ತಯಾರಿಸಿ ಮಾರಾಟ ಮಾಡುವ ಮೂಲಕ ಇದೊಂದು ಗೃಹೋದ್ಯಮವಾಗಿ ಅಭಿವೃದ್ಧಿ ಹೊಂದುತ್ತಿದೆ.

ಅAದಹಾಗೆ, ಕರ್ನಾಟಕದಲ್ಲಿ ಮೊದಲು ಬಾಕಾಹು ಆನ್‌ಲೈನ್ ಮಾರಾಟ ಆರಂಭಿಸಿದವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಮೀಪದ ಕಾನಳ್ಳಿಯ ವಸುಂಧರಾ ಹೆಗಡೆ ಮತ್ತು ಪ್ರಭಾಕರ ಹೆಗಡೆ ದಂಪತಿ. ಆಗಿನ್ನೂ ಫೇಸ್‌ಬುಕ್ಕಿನಲ್ಲಿ ಬಾಕಾಹು ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿತ್ತು. ಈ ಚರ್ಚೆಯ ಅರಿವು ಹೆಗಡೆ ದಂಪತಿಗೆ ಇರಲಿಲ್ಲ. ಆದರೆ ಅವರಿಗೆ ಬಾಕಾಹು ಪರಿಚಯಿಸಿ, ಅದರ ಮಾರಾಟ ಶುರು ಮಾಡುವಂತೆ ಸಲಹೆ ನೀಡಿದವರು ಬಾಕಾಹು ಆಂದೋಲನದ ರೂವಾರಿ ಶ್ರೀ ಪಡ್ರೆ ಅವರು.

ಒಂದೂವರೆ ಕ್ವಿಂಟಾಲ್ ಬಾಕಾಹು ಮಾರಾಟ

‘ಶ್ರೀ ಪಡ್ರೆ ಸರ್ ನಮಗೆ ಫೋನ್ ಮಾಡಿ ಬಾಕಾಹು ಬಗ್ಗೆ ತಿಳಿಸಿದರು. ಜೊತೆಗೆ, ಬಾಳೆ ಹಾಯಿ ಹುಡಿ ಮಾರಾಟವನ್ನೇಕೆ ಪ್ರಾರಂಭಿಸಬಾರದು ಎಂದು ಸಲಹೆ ನೀಡಿದರು. ಅದರಂತೆ ನಾನು ಮತ್ತು ನಮ್ಮ ಮನೆಯವರು ಸೇರಿಕೊಂಡು ಬಾಕಾಹು ತಯಾರಿ ಶುರು ಮಾಡಿದೆವು. ನಮ್ಮಲ್ಲಿ ಆಗಲೇ ಡ್ರೆöÊಯರ್ ಇದ್ದ ಕಾರಣ ಒಂದೇ ದಿನದಲ್ಲಿ ಬಾಳೆ ಕಾಹಿ ಪುಡಿ ತಯಾರಿಸಲು ಸಾಧ್ಯವಾಯಿತು. ಹಾಗೇ ಶ್ರೀ ಪಡ್ರೆ ಅವರು ಮಾಡಿದ ಒಂದು ಫೇಸ್‌ಬುಕ್ ಪೋಸ್ಟ್ ಮುಖೇನ ಸಿಕ್ಕ ಪ್ರಚಾರದಿಂದಾಗಿ ನಮಗೆ ಸಾಕಷ್ಟು ಆರ್ಡರ್‌ಗಳು ಬಂದವು. ಕರ್ನಾಟಕದ ಮೂಲೆ ಮೂಲೆಯಿಂದ ಜನ ವಾಟ್ಸಪ್ ಮಲಕ ತಮ್ಮ ವಿವರ ಕಳಿಸಿ ಬಾಕಾಹು ತರಿಸಿಕೊಳ್ಳಲು ಆರಂಭಿಸಿದರು. ಕ್ರಮೇಣ ಬೇಡಿಕೆ ಕೂಡ ಹೆಚ್ಚಾಯಿತು. ನಾವು ಬಾಕಾಹು ತಯಾರಿ ಆರಂಭಿಸಿ 40 ದಿನ ಕಳೆದಿದೆ. ಈಗಾಗಲೇ 150 ಕೆ.ಜಿಯಷ್ಟು ಬಾಳೆಕಾಯಿ ಹಿಟ್ಟನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೆ ತಲುಪಿಸಿದ್ದೇವೆ,’ ಎನ್ನುತ್ತಾರೆ ವಸುಂಧರಾ ಪ್ರಭಾಕರ ಹೆಗಡೆ ಅವರು.

ಬಾಕಾಹು ಪ್ಯಾಕಿಂಗ್ ಮಾಡುತ್ತಿರುವ ವಸುಂಧರಾ, ಪ್ರಭಾಕರ ಹೆಗಡೆ ದಂಪತಿ.

ಮೊದಲ ಬಾರಿ ಕೊರೊನಾ ಲಾಕ್‌ಡೌನ್ ಜಾರಿಯಾದ ಸಂದರ್ಭದಲ್ಲಿ ವಸುಂಧರಾ ಹೆಗಡೆ ದಂಪತಿ ಗೃಹೋತ್ಪನ್ನಗಳನ್ನು ಮಾರಾಟ ಮಾಡಲೆಂದೇ ‘ಮಂಜುಶ್ರೀ ಹೋಂ ಪ್ರೋಡಕ್ಟ್÷್ಸ’ ಎಂಬ ಬ್ರಾಂಡ್ ಹುಟ್ಟುಹಾಕಿದ್ದರು. ಈಗ ಅದೇ ಬ್ರಾಂಡ್ ಅಡಿಯಲ್ಲಿ ಬಾಕಾಹು ಮಾರಾಟ ಮಾಡುವ ಮೂಲಕ ಬಾಕಾಹು ಮಾರಾಟಕ್ಕೆ ಶ್ರೀಕಾರ ಹಾಡಿದ್ದಾರೆ. ಸಂಪರ್ಕ ಸಂಖ್ಯೆ: ವಾಟ್ಸಪ್ - 99009 27988, ಕರೆಗಾಗಿ - 78991 61434

ದೊಡ್ಡ ಮಟ್ಟದ ಪ್ರಯತ್ನ

ಇನ್ನೊಂದೆಡೆ ರಾಜ್ಯದಲ್ಲಿ ಮೊದಲ ಬಾರಿ ಬಾಕಾಹು ತಯಾರಿಸಿದ ಕೀರ್ತಿಗೆ ಪಾತ್ರರಾಗಿರುವ ತುಮಕೂರಿನ ನಯನಾ ಆನಂದ್ ಕೂಡ ಇತ್ತೀಚೆಗೆ ಬಾಕಾಹು ಉತ್ಪಾದನೆ ಆರಂಭಿಸಿದ್ದು, ಮೊನ್ನೆಯಷ್ಟೇ ಮೊದಲ ಆರ್ಡರ್‌ನ 13 ಕೆ.ಜಿ ಬಾಕಾಹು ಪ್ಯಾಕೇಜ್ ಅನ್ನು ಗ್ರಾಹಕರಿಗೆ ಕೊರಿಯಯಲ್ ಮಾಡಿದ್ದಾರೆ. ಈಗಾಗಲೇ ಹಿಟ್ಟು ಮಾಡುವ ಯಂತ್ರ ಹಂದಿರುವ ನಯನಾ ಅವರು, ಬಾಳೆ ಕಾಯಿ ಒಣಗಿಸಲೆಂದೇ ಡ್ರೆöÊಯರ್ ಕೂಡ ಖರೀದಿಸಿದ್ದಾರೆ. ತಮ್ಮದೇ ಬ್ರಾಂಡ್ ಆರಂಭಿಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಅನುಮತಿ ಪಡೆಯುವ ಪ್ರಯತ್ನದಲ್ಲಿದ್ದು, ದೊಡ್ಡ ಮಟ್ಟದಲ್ಲಿ ಬಾಕಾಹು ಮಾರಾಟ ಆರಂಭಿಸುವ ಗುರಿ ಹೊಂದಿದ್ದಾರೆ.

‘ಬಾಕಾಹುವಿಗೆ ಒಳ್ಳೆಯ ಮಾರುಕಟ್ಟೆ ಸೃಷ್ಟಿಯಾಗುತ್ತಿದೆ. ಹೀಗಾಗಿ ನಮಗೆ ಬರುವ ಆರ್ಡರ್‌ಗಳನ್ನು ಗಮನಿಸಿ ಮುಂದೆ ದೊಡ್ಡಮಟ್ಟದಲ್ಲಿ ವ್ಯಾಪಾರ ವಹಿವಾಟು ವಿಸ್ತರಿಸುವ ಉದ್ದೇಶ ಹೊಂದಿದ್ದೇವೆ. ಈ ಸಂಬAಧ ಈಗಾಗಲೇ ಎಲ್ಲಾ ತಯಾರಿ ನಡೆಸಿದ್ದು, ಕಾನೂನು ರೀತಿ ಅಗತ್ಯವಿರುವ ಅನುಮತಿ ಪಡೆಯುವ ಪ್ರಯತ್ನದಲ್ಲಿದ್ದೇವೆ. ಬಾಕಾಹು ತಯಾರಿ ಆರಂಭಿಸಿ ಒಂದು ವಾರ ಆಗಿದ್ದು, ಈಗಾಗಲೇ ಆರ್ಡರ್‌ಗಳು ಬರಲಾರಂಭಿಸಿವೆ,’ ಎನ್ನುತ್ತಾರೆ ನಯನಾ ಆನಂದ್. ಸಂಪರ್ಕ ಸಂಖ್ಯೆ: 91417 66536

ಬೆಳಗಾವಿಯಲ್ಲೂ ಬಾಕಾಹು

ಬೆಳಗಾವಿ ಜಿಲ್ಲೆಯ ಯುವ ಸಾವಯವ ಕೃಷಿಕ ಅಜ್ಜಪ್ಪ ಕುಲಗೋಡು ಬಾಳೆ ಬೆಳೆಗಾರರು. ಆದರೆ, ಕೊರೊನಾ ಕಾಲದಲ್ಲಿ ಬಾಳೆ ಕೊಳ್ಳುವವರಿಲ್ಲದೆ ಸಂಕಟಕ್ಕೆ ಸಿಲುಕಿದ ಅಜ್ಜಪ್ಪ, ಬಾಳೆ ಕಾಯಿ ಪುಡಿ ಮಾಡಲು ನಿರ್ಧರಿಸಿದರು. ಗೆಳೆಯರು ಕೊಟ್ಟ ಬಾಳೆಗೊನೆಗಳಿಂದ ಆರಂಭಿಸಿದ ಇವರ ಕುಟುಂಬ, ಕಳೆದ ಒಂದು ವರ್ಷದಲ್ಲಿ ಹಲವು ಬಾರಿ ಬಾಕಾಹು ತಯಾರಿಸಿದೆ. ವಿಶೇಷ ಏನೆಂದರೆ ಅಜ್ಜಪ್ಪ ಅವರ ಬಾಕಾಹು ಕಂಪನಿಗೆ ಅವರ ಅವ್ವನೇ ಮಾರ್ಕೆಟಿಂಗ್ ಮ್ಯಾನೇಜರ್!

ಬಾಕಾಹು ಪೊಟ್ಟಣಗಳೊಂದಿಗೆ ನಯನಾ ಆನಂದ್.

ಡ್ರೆöಯರ್, ದೊಡ್ಡ ಪ್ರಮಾಣದ ಪುಡಿ ಮಾಡುವ ಯಂತ್ರ ಇಲ್ಲದೆ, ತಾರಸಿಯ ಬಿಸಿಲಲ್ಲಿ ಬಾಳೆ ಕಾಯಿ ಒಣಗಿಸಿ, ಗಿರಣಿಯಲ್ಲಿ ಪುಡಿ ಮಾಡಿದ ಬಾಳೆ ಕಾಯಿ ಹಿಟ್ಟನ್ನು ತಾಯಿ ಪಾರ್ವತವ್ವ ನೇಕಾರರ ಪೇಟೆಗೆ ಕೊಂಡೊಯ್ದು, ತರಕಾರಿ ಜೊತೆ ಬುಟ್ಟಿಯಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಾರೆ. ಜೊತೆಗೆ ಖಾಯಂ ಗ್ರಾಹಕರ ಮನೆ ಬಾಗಿಲಿಗೂ ತಲುಪಿಸುತ್ತಾರೆ. ಸಂಪರ್ಕ ಸಂಖ್ಯೆ: 90089 77319.

ಗೃಹೋದ್ಯಮಿಗಳಿಗೆ ಒಕ್ಕೂಟದ ನೆರವು

ಶಿರಸಿಯಲ್ಲಿರುವ ಉತ್ತರ ಕನ್ನಡ ಸಾವಯವ ಒಕ್ಕೂಟ ಕೂಡ ಬಾಕಾಹು ಮಾರಾಟ ಆರಂಭಿಸಿದೆ. ಒಕ್ಕೂಟದ ಸದಸ್ಯರು ಹಾಗೂ ರೈತರು ತಮ್ಮ ಮನೆಗಳಲ್ಲಿ ತಯಾರಿಸಿದ ಬಾಳೆ ಕಾಯಿ ಪುಡಿಯನ್ನು ಮಾರಾಟ ಮಾಡುವ ಜವಾಬ್ದಾರಿಯನ್ನು ಒಕ್ಕೂಟ ತೆಗೆದುಕೊಂಡಿದೆ. ಜೊತೆಗೆ ಒಕ್ಕೂಟದ ಕಟ್ಟದಲ್ಲಿ ಧಾನ್ಯ ಪುಡಿ ಮಾಡುವ ಯಂತ್ರವಿದ್ದು, ರೈತರು, ಸದಸ್ಯರು ಒಣಗಿಸಿದ ಬಾಳೆಕಾಯಿ ಚಿಪ್ಸ್ ತಂದರೆ ಅತಿ ಕಡಿಮೆ ದರದಲ್ಲಿ ಬಾಳೆ ಕಾಹಿ ಹಿಟ್ಟು ಮಾಡಿಕೊಡುವುದಾಗಿ ಒಕ್ಕೂಟದ ಕಾರ್ಯನಿರ್ವಾಹಕ ಅಧಿಕಾರಿ ವಿಕಾಸ ಹೆಗಡೆ ಅವರು ‘ಕೃಷಿ ಜಾಗರಣ’ಕ್ಕೆ ಮಾಹಿತಿ ನೀಡಿದ್ದಾರೆ. ಉಕ ಸಾವಯವ ಒಕ್ಕೂಟವು ತನ್ನ ‘ನೆಲಸಿರಿ’ ಬ್ರಾಂಡ್ ಅಡಿಯಲ್ಲಿ ಬಾಕಾಹು ಮಾರಾಟ ಮಾಡುತ್ತಿದೆ. ಸಂಪರ್ಕ ಸಂಖ್ಯೆ: 82772 27228.

ಬೆಲೆ ಎಷ್ಟಿದೆ?

ವಸುಂಧರಾ ಹೆಗಡೆ ಅವರು ಬಾಳೆ ಕಾಯಿಯ ಒಣಗಿಸಿದ ಚಿಪ್ಸ್, ಬಾಳೆ ಕಾಯಿ ರವೆ ಮತ್ತು ಬಾಳೆ ಕಾಯಿಯ ಸಿಪ್ಪೆ ತೆಗೆದು ಒಣಗಿಸಿ ಪುಡಿ ಮಾಡಿದ ಒಂದು ಕೆ.ಜಿ. ಬಾಕಾಹುಗೆ 200 ರೂ. ಬೆಲೆ ನಿಗದಿ ಮಾಡಿದ್ದಾರೆ. ಇನ್ನು ನಯನಾ ಆನಂದ್ ಅವರು ಸಿಪ್ಪೆ ತೆಗೆದು ಹಿಟ್ಟು ಮಾಡಿದ ಕೆ.ಜಿ. ಬಾಕಾಹು ಬೆಲೆ 280 ರೂ., ಸಿಪ್ಪೆ ತೆಗೆಯದೇ ಒಣಗಿಸಿ ಮಾಡಿದ ಪುಡಿಗೆ 200 ರೂ. ನಿಗದಿ ಮಾಡಿದ್ದಾರೆ. ಉಕ ಸಾವಯವ ಒಕ್ಕೂಟವು 230 ರೂ.ಗೆ ಒಂದು ಕೆ.ಜಿ ಬಾಕಾಹು ಮಾರಾಟ ಮಾಡುತ್ತಿದೆ. 5 ಕೆಜಿ ಬಾಳೆಕಾಯಿ ಕೆತ್ತರಿಸಿ ಒಣಗಿಸಿದರೆ ಒಂದು ಕೆ.ಜಿ ಪುಡಿ ಬರುತ್ತದೆ. ಹೀಗಾಗಿ ಬಾಕಾಹೂವಿನ ಬೆಲೆ ಸ್ವಲ್ಪ ಜಾಸ್ತಿ.

Published On: 03 August 2021, 03:31 PM English Summary: bakahu-banana powder marketing creates sensation in karnataka

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.