ಹೊಸದಿಲ್ಲಿ,ಫೆ.20:ಮಂಗಳವಾರ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಸೌದಿ ಅರೇಬಿಯಾದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರನ್ನು ಖುದ್ದಾಗಿ ಸ್ವಾಗತಿಸಲು ಶಿಷ್ಟಾಚಾರವನ್ನು ಮುರಿದಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಗುರುವಾರ ಟೀಕಿಸಿದೆ.
ಪಾಕಿಸ್ತಾನದ ಜೊತೆಗೆ 20 ಶತಕೋಟಿ ಡಾ.ಗಳ ಒಪ್ಪಂದಗಳಿಗೆ ಸಹಿ ಹಾಕಿದ ದಿನವೇ ಸಲ್ಮಾನ್ ಅವರು ಭಾರತಕ್ಕೆ ಆಗಮಿಸಿದ್ದು,ಪುಲ್ವಾಮಾ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳು ಹದಗೆಟ್ಟಿರುವುದರಿಂದ ಈ ಒಪ್ಪಂದಗಳು ವಿವಾದಕ್ಕೆ ಗುರಿಯಾಗಿವೆ.
ಸಲ್ಮಾನ್ ಅವರು ಪಾಕಿಸ್ತಾನಕ್ಕೆ ಬಿಲಿಯಗಟ್ಟಲೆ ಡಾ.ಗಳ ಭರವಸೆ ನೀಡಿದ ಕೆಲವೇ ಗಂಟೆಗಳಲ್ಲಿ ಶಿಷ್ಟಾಚಾರವನ್ನು ಮುರಿದು ಅವರನ್ನು ಸ್ವಾಗತಿಸುವ ಮೂಲಕ ಪ್ರಧಾನಿ ಮೋದಿಯವರು ಯೋಧರ ಸೇವೆ ಮತ್ತು ಅವರ ತ್ಯಾಗದ ಬಗ್ಗೆ ತನ್ನ ಚಿಂತನೆ ಏನು ಎನ್ನುವುದನ್ನು ದೇಶಕ್ಕೆ, ಹುತಾತ್ಮರಿಗೆ ಮತ್ತು ಪ್ರತಿಯೋರ್ವ ಯೋಧನಿಗೆ ತೋರಿಸಿದ್ದಾರೆ ಎಂದು ಕಾಂಗ್ರೆಸ್ ಬುಧವಾರ ಟ್ವೀಟಿಸಿದೆ.
ಸಾಮಾನ್ಯವಾಗಿ ವಿಮಾನ ನಿಲ್ದಾಣಗಳಲ್ಲಿ ವಿದೇಶಿ ಗಣ್ಯರನ್ನು ಪ್ರಧಾನಿಗಳು ಸ್ವಾಗತಿಸುವುದಿಲ್ಲ,ಬದಲಿಗೆ ಕಿರಿಯ ಸಚಿವರನ್ನೋ ಅಧಿಕಾರಿಗಳನ್ನೋ ಕಳುಹಿಸುತ್ತಾರೆ. ಸಲ್ಮಾನ್ ಅವರನ್ನು ಬರಮಾಡಿಕೊಳ್ಳಲು ಮೋದಿಯವರು ಶಿಷ್ಟಾಚಾರವನ್ನು ಮುರಿದಿದ್ದರ ಕುರಿತು ಮಂಗಳವಾರ ಟ್ವೀಟಿಸಿದ್ದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ ಕುಮಾರ್ ಅವರು,ಅದನ್ನು 'ದ್ವಿಪಕ್ಷೀಯ ಸಂಬಂಧಗಳಲ್ಲಿ ಹೊಸ ಅಧ್ಯಾಯ' ಎಂದು ಬಣ್ಣಿಸಿದ್ದರು.
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮತ್ತು ಸಲ್ಮಾನ್ ಅವರು ಹೊರಡಿಸಿರುವ ಜಂಟಿ ಹೇಳಿಕೆಯು ಪುಲ್ವಾಮಾದಲ್ಲಿನ ಭಯೋತ್ಪಾದಕ ದಾಳಿಯನ್ನು ಖಂಡಿಸಲು ವಿಫಲಗೊಂಡಿದೆ,ಬದಲಿಗೆ ಪಾಕಿಸ್ತಾನದ 'ಭೀತಿವಾದ ನಿಗ್ರಹ ' ಪ್ರಯತ್ನಗಳನ್ನು ಹೊಗಳಿದೆ ಎಂದಿರುವ ಕಾಂಗ್ರೆಸ್,ಇದು ಜೈಶೆ ಮುಹಮ್ಮದ್‌ನ್ನು ಜಾಗತಿಕ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಬೇಕೆನ್ನುವ ಭಾರತದ ಬೇಡಿಕೆಯನ್ನು ಕಡೆಗಣಿಸಿದೆ ಎಂದು ಹೇಳಿದೆ.
ಪಾಕ್ ಗೆ ಬಹಕೋಟಿ ಡಾಲರ್ ನೀಡಿದ ಸೌದಿ ದೊರೆಯ ಸ್ವಾಗತಿಸಿದ ಮೋದಿ: ಕಾಂಗ್ರೆಸ್ ತರಾಟೆ
Published On: 20 February 2019, 09:04 PM
English Summary: ಪಾಕ್ ಗೆ ಬಹಕೋಟಿ ಡಾಲರ್ ನೀಡಿದ ಸೌದಿ ದೊರೆಯ ಸ್ವಾಗತಿಸಿದ ಮೋದಿ: ಕಾಂಗ್ರೆಸ್ ತರಾಟೆ
Share your comments