ಮಲೆನಾಡನ್ನು ಮಳೆರಾಯ ಅಕ್ಷರಶಃ ಬಿಗಿದಪ್ಪಿಕೊಂಡಿದ್ದಾನೆ. ಪರಿಣಮ ಕಳೆದ 30 ಗಂಟೆಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಲೆನಾಡು ಮಾತ್ರವಲ್ಲದೆ ಬಯಲು ಸೀಮೆ ಜಿಲ್ಲೆಗಳಲ್ಲೂ 30 ತಾಸುಗಳಿಂದ ಒಂದು ನಿಮಿಷ ಕೂಡ ಬಿಡುವು ನೀಡದೆ ಮಳೆ ಧಾರಕಾರವಾಗಿ ಸುರಿಯುತ್ತಿದೆ. ಪರಿಣಾಮ ಬಯಲು ಸೀಮೆ ಜಿಲ್ಲೆಗಳಲ್ಲಿ ಮಲೆನಾಡಿನ ಮಳೆಯ ಅನುಭವವಾಗುತ್ತಿದೆ.
ಅತ್ತ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಾದ್ಯಂತ ಹಾಗೂ ಕುದುರೆಮುಖ, ಕಳಸ ಭಾಗದಲ್ಲಿ ವಿಪರೀತ ಮಳೆ ಸುರಿಯುತ್ತಿದೆ ಪರಿಣಾಮ ಮಧ್ಯ ಕರ್ನಾಟಕದ ಜೀವನಾಡಿಯಾಗಿರುವ ಭದ್ರಾ ಜಲಾಶಯಕ್ಕೆ ಯಥೇಚ್ಚ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈ ನಡುವೆ ಮಲೆನಾಡು ಹಾಗೂ ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಈ ಹಿಂದೆ ನಡೆದ ನೀರಾವರಿ ಸಹಲಾ ಸಿತಿ ಸಭೆಯಲ್ಲಿ ನಿರ್ಧರಿಸಿದ ಪ್ರಕಾರ ಜುಲೈ 23 ರಂದು ಮಧ್ಯರಾತ್ರಿ 12 ಗಂಟೆಗೆ ಭದ್ರಾ ಜಲಾಶಯದಿಂದ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ನೀರು ಹರಿಸಬೇಕಿತ್ತು. ಆದರೆ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಗುರುವಾರ ಮುಂಜಾನೆ ಆರಂಭವಾದ ಮಳೆ ಶುಕ್ರವಾರ ಕೂಡ ಬಿಟ್ಟೂ ಬಿಡದೆ ಸುರಿಯುತ್ತಿದೆ. ಹೀಗಾಗಿ ಭದ್ರಾ ಜಲಾನಯನಪ್ರದೇಶದ ವ್ಯಾಪ್ತಿಯ ಭತ್ತದ ಗದ್ದೆಗಳು, ಅಡಡಿಕೆ ಹಾಗೂ ತೆಂಗಿನ ತೋಟಗಳು, ಕಬ್ಬಿನ ಗದ್ದೆಗಳಲ್ಲಿ ನೀರು ಹರಿಯುತ್ತಿದೆ. ಇಂತಹ ಸಂದರ್ಭದಲ್ಲಿ ಕಾಲುವೆಗಳಿಗೆ ನೀರು ಹರಿಸಿದರೆ ಅದು ವ್ಯರ್ಥವಾಗಿ ಹರಿದುಹೋಗಲಿದೆ ಎಂಬ ಕಾರಣದಿಂದ ನೀರು ಹರಿಸುವ ಪ್ರಕ್ರಿಯೆಯನ್ನು ನಾಲ್ಕು ದಿನಗಳ ಕಾಲ ಮುಂದುಡಲಾಗಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ಕೆ.ಬಿ. ಅವರು, “ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಅತಿ ಹೆಚ್ಚಿನ ವರ್ಷಧಾರೆ ಆಗುತ್ತಿರುವ ಕಾರಣ ನಾಲೆಗಳಿಗೆ ನೀರು ಹರಿಸುವ ದಿನಾಂಕವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಎಡ ಮತ್ತು ಬಲದಂಡೆಗೆ ಒಳಪಡುವ ಆನವೇರಿ, ದಾವಣಗೆರೆ ಮತ್ತು ಮಲೆಬೆನ್ನೂರು ಶಾಖಾ ನಾಲೆ ಮತ್ತು ಹರಿಹರ ಶಾಖಾ ನಾಲೆಗಳಿಗೆ 2021-22 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳಿಗಾಗಿ ಜುಲೈ 23ರಿಂದ ನೀರು ಹರಿಸಲು ನಿರ್ಧರಿಸಲಾಗಿತ್ತು. ಇದರೊಂದಿಗೆ ಬೆಳೆ ಕ್ಷೇತ್ರವನ್ನು ಪ್ರಕಟಿಸುವ ಕುರಿತು ಇತ್ತೀಚೆಗೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ನಡೆದ 78ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ರೈತ ಮುಖಂಡರು ಹಾಗೂ ಭದ್ರಾ ಕಾಡಾ ನಿರ್ದೇಶಕರು ಸುಧೀರ್ಘವಾಗಿ ಚರ್ಚಿಸಿ ತಗೆದುಕೊಂಡ ಒಮ್ಮತದ ತೀರ್ಮಾನದಂತೆ ದಿನಾಂಕ ಜು.23ರ ಮಧ್ಯ ರಾತ್ರಿಯಿಂದ 120 ದಿನಗಳ ಕಾಲ ನಾಲೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿತ್ತು”.
“ಆದರೆ, ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಅತಿ ಹೆಚ್ಚಿನ ಪ್ರಮಾಣದ ಮಳೆಯಾಗುತ್ತಿರುವ ಕಾರಣ ಕೆರೆಗಳು, ಹಳ್ಳಗಳು, ನಾಲೆಗಳು ತುಂಬಿ ಹರಿಯುತ್ತಿವೆ. ಈ ಸಮಯದಲ್ಲಿ ನಾಲೆಗಳಿಗೆ ನೀರು ಹರಿಸಿದರೆ ರೈತರ ಜಮೀನುಗಳಿಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿ ಹಾಲಿ ಇರುವ ಬೆಳೆ ನಷ್ಟ ಸಂಭವಿಸುವ ಸಾಧ್ಯತೆ ಇರುವ ಕಾರಣ ಹಾಗೂ ಮುಂದಿನ ಬೇಸಿಗೆ ಬೆಳೆಗಳಿಗೆ ಅಚ್ಚುಕಟ್ಟು ಭಾಗದ ರೈತರಿಗೆ ಯಾವುದೇ ತೊಂದರೆಯಾಗದಂತೆ ನೀರು ಕೊಡುವ ಸುದುದ್ದೇಶದಿಂದ ಮಳೆಯ ಪ್ರಮಾಣ ಆಧರಿಸಿ ನಾಲೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿದೆ. ನಾಲೆಗಳಿಗೆ ನೀರು ಬಿಡುವ ಮುಂದಿನ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುವುದು,” ಎಂದು ಮಾಹಿತಿ ನೀಡಿದ್ದಾರೆ.
Share your comments