1. ಸುದ್ದಿಗಳು

ಜುಲೈ 23ರಿಂದ 120 ದಿನ ಭದ್ರಾ ಎಡದಂಡೆ, ಬಲದಂಡೆ ಕಾಲುವೆಗಳಿಗೆ ನೀರು

ಮಲೆನಾಡಿನ ಚಿಕ್ಕಮಗಳೂರು, ಕುದುರೆಮುಖ ಮತ್ತಿತರ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾಡಿನ ಪ್ರಮಮುಖ ಜಲಾಶಯಗಳಲ್ಲಿ ಒಂದಾಗಿರುವ ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳನ್ನು ಬೆಳೆಯಲು ಅನುಕೂಲವಾಗುವಂತೆ ಭದ್ರಾ ಬಲದಂಡೆ ಮತ್ತು ಎಡದಂಡೆ ಕಾಲುವೆಗಳು ಹಾಗೂ ಶಾಖಾ ನಾಲೆಗಳಿಗೆ ಜುಲೈ 23ರ ಮಧ್ಯರಾತ್ರಿಯಿಂದ 120 ದಿನಗಳ ಕಾಲ ನೀರು ಹರಿಸಲಾಗುವುದು ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯ ತಿಳಿಸಿದರು.

ನಾಲೆಗಳಿಗೆ ನೀರು ಹರಿಸುವ ಸಂಬಂಧ ದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ, ನೀರಾವರಿ ಸಲಹಾ ಸಮಿತಿಯ ಸರ್ವ ಸದಸ್ಯರು ಹಾಗೂ ರೈತರೊಂದಿಗೆ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಅವರು, ಜುಲೈ 23ರಿಂದ ಭದ್ರಾ ಬಲದಂಡೆ, ಎಡದಂಡೆ ನಾಲೆ, ಆನವೇರಿ, ದಾವಣಗೆರೆ, ಮಲೆಬೆನ್ನೂರು ಮತ್ತು ಹರಿಹರ ಶಾಖಾ ನಾಲೆಗಳಲ್ಲಿ ನೀರು ಹರಿಸಲು ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಜುಲೈ 21ರಂದು ಬೆಳಗ್ಗೆ 6 ಗಂಟೆಗೆ ಬಂದಿರುವ ವರದಿಯ ಪ್ರಕಾರ ಜಲಾಶಯದಲ್ಲಿ 166 ಅಡಿ 8 ಇಂಚುಗಳಷ್ಟು ನೀರು ಸಂಗ್ರಹವಿದೆ. ಈ ಮಟ್ಟಕ್ಕೆ ನೀರಿದ್ದಾಗ ಜಲಾಶಯದಲ್ಲಿ ಒಟ್ಟು 40.914 ಟಿಎಂಸಿ ನೀರು ಸಂಗ್ರಹವಾಗಿರುತ್ತದೆ. ಇದರಲ್ಲಿ 8.50 ಟಿಎಂಸಿ ಬಳಕೆಗೆ ಬಾರದ (ಡೆಡ್ ಸ್ಟೋರೇಜ್) ಪ್ರಮಾಣವಾಗಿದ್ದು, 26.652 ಟಿಎಂಸಿ ಮಾತ್ರ ಬಳಕೆಗೆ ಬರುವ ನೀರಾಗಿದೆ. ಭದ್ರಾ ಬಲದಂಡೆ ಕಾಲುವೆಗೆ ಪ್ರತಿ ದಿನ ಸರಾಸರಿ 3050 ಕ್ಯೂಸೆಕ್ ಮತ್ತು ಭದ್ರಾ ಎಡದಂಡೆ ಕಾಲುವೆಗೆ 490 ಕ್ಯೂಸೆಕ್ ಸೇರಿ ಒಟ್ಟು 3540 ಕ್ಯೂಸೆಕ್ ನೀರಿಗೆ ಬೇಡಿಕೆ ಇದೆ ಎಂದು ಅಧ್ಯಕಕ್ಷರು ಮಾಹಿತಿ ನೀಡಿದರು.

49.13 ಟಿಎಂಸಿ ನೀರಿನ ಅವಶ್ಯಕತೆ

ಪ್ರಸ್ತುತ ಭದ್ರಾ ಜಲಾಶಯದಲ್ಲಿ 26.652 ಟಿಎಂಸಿ ನೀರು ಕೃಷಿ, ಮತ್ತಿತರ ಬಳಕೆಗೆ ಲಭ್ಯವಿದ್ದು, ಮುಂಗಾರು ಅವಧಿಗೆ 49.13 ಟಿಎಂಸಿ ನೀರು ಬೇಕಾಗುತ್ತದೆ. ಇದೆ. ಜುಲೈ 14ರಂದು ಸಂಗ್ರಹವಾಗಿದ್ದ ನೀರಿನ ಪ್ರಮಾಣದ ಪ್ರಕಾರ ಕೊರತೆಯಿರುವ ನೀರಿನ ಪ್ರಮಾಣ 22.478 ಟಿಎಂಸಿ ಆಗಿದ್ದು ಈ ಪ್ರಮಾಣದ ಆಧಾರದಲ್ಲಿ ಸದಸ್ಯರೆಲ್ಲ ಚರ್ಚಿಸಿ ಜುಲೈ 23ರಿಂದ ಕಾಲವೆಗಳಿಗೆ ನೀರು ಹರಿಸಲು ನಿರ್ಧರಿಸಿದ್ದೇವೆ ಎಂದರು.

ಇದೇ ವೇಳೆ ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸುವ ಕುರಿತು ಸಭೆಯಲ್ಲಿ ಮತ್ತೊಮ್ಮೆ ಆಕ್ಷೇಪ ವ್ಯಕ್ತವಾಯಿತು. ಈ ವೇಳೆ ಸದಸ್ಯರಾದ ಷಡಾಕ್ಷರಪ್ಪ ಅವರು ಮಾತನಾಡಿ, ನೀರಾವರಿ ಸಲಹಾ ಸಮಿತಿಯ ಸಭೆ ಕರೆಯದೆ, ಚರ್ಚೆ ಮಾಡದೇ ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆಗೆ ಅಧಿಕಾರಿಗಳೇ ನೀರು ಬಿಡುವುದಾದರೆ ಸಮಿತಿಯು ಇದ್ದೂ ಉಪಯೋಗವೇನು? ಜುಲೈ 6ರ ಸರ್ಕಾರಿ ಆದೇಶದ ಪ್ರಕಾರ ಜಲೈ 7ರಿಂದ (ಅಕ್ಟೋಬರ್ 15 ರವರಗೆ) ಪ್ರತಿ ದಿನ ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯ ಮುಖಾಂತರ ವಾಣಿ ವಿಲಾಸ ಸಾಗರಕ್ಕೆ ನೀರನ್ನು ಹರಿಸಲಾಗುತ್ತಿದೆ. ಮಳೆಯ ಅಭಾವದಿಂದ ಜಲಾಶಯದಲ್ಲಿ ಒಳಹರಿವಿನ ಪ್ರಮಾಣ ಕಡಿಮೆ ಇದ್ದು, ಎಡದಂಡೆ ಮತ್ತು ಬಲದಂಡೆ ಭಾಗದ ರೈತರೇ ನೀರಿಗಾಗಿ ಕಷ್ಟಪಡುತ್ತಿದ್ದಾರೆ. ಹೀಗಿರುವಾಗ ಏಕಾಏಕಿ ಅಧೀಕ್ಷಕ ಅಭಿಯಂತರರೇ ನೀರು ಹರಿಸುತ್ತಿರುವುದು ಸೂಕ್ತವಲ್ಲ ಎಂದು ದೂರಿದರು.

ಮೇಲ್ದಂಡೆ ಕಾಲುವೆಗೆ ನೀರು ಹರಿಸುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಇತರೆ ಸದಸ್ಯರು, ಸರ್ಕಾರಿ ಆದೇಶದಲ್ಲಿ ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ ಹರಿಸಬೇಕು ಎಂದಿದೆ. ನೀರು ಕಡಿಮೆ ಇದ್ದರೆ ನೀರು ಕೊಡುವ ಅವಶ್ಯಕತೆ ಇಲ್ಲ. ನೀರು ಕೊಡಬೇಕೋ ಬೇಡವೋ ಎಂಬ ಬಗ್ಗೆ ನೀರಾವರಿ ಸಲಹಾ ಸಮಿತಿಯ ತುರ್ತು ಸಭೆ ಕರೆಯದೇ ಅಧಿಕಾರಿಗಳೇ ನೀರು ಹರಿಸಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ತ್ಯಾವಣಿಗಿ ಉಪವಿಭಾಗದ ಸದಸ್ಯರಾದ ತೇಜಸ್ವಿ ಪಟೇಲ್ ಮಾತನಾಡಿ, ಯಾವುದೇ ಯೋಜನೆಗಳಿಗೆ ನೀರು ಹರಿಸಲು ಸಮಿತಿ ತೀರ್ಮಾನವೇ ಅಂತಿಮ. ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸುವ ಮುನ್ನ ಭದ್ರಾ ಅಚ್ಚುಕಟ್ಟು ಪ್ರದೇಶ ನಿರ್ವಹಣೆಗೆ ಬೇಕಾದ ನೀರಿನ ಪ್ರಮಾಣ ಎಷ್ಟು ಎಂಬ ಆಧಾರದಲ್ಲಿ ಚರ್ಚೆ ಆಗಬೇಕು. ನೀರು ಉಳಿದರೆ ಮೇಲ್ದಂಡೆ ಯೋಜನೆಗೆ ಹರಿಸಬಹುದು ಎಂದು ಸಲಹೆ ನೀಡಿದರು.

ಸಭೆಯಲ್ಲಿ ನೀರಾವರಿ ಸಲಹಾ ಸಮಿತಿ ಸದಸ್ಯರಾದ ರುದ್ರಮೂರ್ತಿ, ಸದಾಶಿವಪ್ಪ ಗೌಡ, ರಾಜಪ್ಪ, ಹನುಮಂತಪ್ಪ, ದ್ಯಾಮಪ್ಪ ಕರ್ನಾಟಕ ನೀರಾವರಿ ನಿಗಮ ನಿಯಮಿತದ ಮುಖ್ಯ ಎಂಜಿನಿಯರ್ ಯತೀಶ್ಚಂದ್ರ, ಮುಖ್ಯ ಆಡಳಿತಾಧಿಕಾರಿ ಕೃಷ್ಣಮೂರ್ತಿ ಬಿ. ಕುಲಕರ್ಣಿ, ಭದ್ರಾ ಯೋಜನಾ ವೃತ್ತ ಅಧೀಕ್ಷಕ ಅಭಿಯಂತರ ಚಂದ್ರಹಾಸ್, ಇತರೆ ಸದಸ್ಯರು, ರೈತರು, ಅಧಿಕಾರಿಗಳು ಭಾಗವಹಿಸಿದ್ದರು.

Published On: 21 July 2021, 08:52 PM English Summary: water for bhadra left and right bank canals from july 23

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.