1. ಸುದ್ದಿಗಳು

Siddheshwar Swamiji: ನಡೆದಾಡುವ ದೇವರು “ಸಿದ್ಧೇಶ್ವರ ಸ್ವಾಮೀಜಿ” ಅಸ್ತಂಗತ; ಕಂಬನಿ ಮಿಡಿದ ಕೋಟ್ಯಾಂತರ ಭಕ್ತರು

Hitesh
Hitesh
“Siddheshwar Swamiji”

ರಾಜ್ಯದಲ್ಲಿ ನಡೆದಾಡುವ ದೇವರು ಎಂದೇ ಖ್ಯಾತಿ ಗಳಿಸಿರುವ ಆಧ್ಯಾತ್ಮಿಕ ಚಿಂತಕ, ಪ್ರವಚನಕಾರ ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ (82) ಸೋಮವಾರ ಸಂಜೆ ಅಸ್ತಂಗತರಾಗಿದ್ದಾರೆ.  

ಇತ್ತೀಚಿಗೆ ಹಲವು ದಿನಗಳಿಂದ ಅವರು ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಮರಳಿ ಬಾರದ ಲೋಕಕ್ಕೆ ಅವರೀಗ ಪ್ರಯಾಣ ಬೆಳೆಸಿದ್ದು, ಅವರ ಕೋಟ್ಯಂತರ ಭಕ್ತರ ದುಃಖ ಮುಗಿಲು ಮುಟ್ಟಿದೆ.  

ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ಧೇಶ್ವರ ಶ್ರೀಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲು ಅವರನ್ನು ಖುದ್ದು ಭೇಟಿಯಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮನವೊಲಿಸಲು ಪ್ರಯತ್ನಿಸಿದರು. ಆದರೆ, ಶ್ರೀಗಳು ಒಪ್ಪದ ಕಾರಣ ಆಶ್ರಮದಲ್ಲೇ ಬಿಎಲ್‌ಡಿಇ ಆಸ್ಪತ್ರೆಯ ತಜ್ಞ ವೈದ್ಯರು ಚಿಕಿತ್ಸೆ ನೀಡಿದ್ದರು.

ಶ್ರೀಗಳಿಗೆ ಕಳೆದ ಎರಡು ದಿನಗಳಿಂದ ಉಸಿರಾಟಕ್ಕೆ ಆಮ್ಲಜನಕದ ವ್ಯವಸ್ಥೆ ಮಾಡಲಾಗಿತ್ತು. ಕಳೆದ 20 ದಿನಗಳಿಂದ ಆಹಾರ ತ್ಯಜಿಸಿದ್ದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ತಮ್ಮ ಫೋನ್‌ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂಪರ್ಕಿಸಿ ಶ್ರೀಗಳ ಜೊತೆ ಮಾತನಾಡಲು ಅನುವು ಮಾಡಿಕೊಟ್ಟಿದ್ದರು. ಪ್ರಧಾನಿ ಸಹ ಹೆಚ್ಚಿನ  ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರೂ ಶ್ರೀಗಳು ಕೈಮುಗಿಯುವ ಮೂಲಕ ಈ ಜೀವಕ್ಕೆ ಚಿಕಿತ್ಸೆ ಅಗತ್ಯವಿಲ್ಲ, ಸಹಜವಾಗಿ ತೆರಳಲು ಬಿಡಿ ಎಂದು ಕೈಸನ್ನೆಯ ಮೂಲಕ ತಿಳಿಸಿದ್ದರು. 

“Siddheshwar Swamiji”

ಶ್ರೀಗಳ ಪಾರ್ಥೀವ ಶರೀರದ ಅಂತಿಮ ದರ್ಶನ ವ್ಯವಸ್ಥೆಯನ್ನು ಮಂಗಳವಾರ ಬೆಳಿಗ್ಗೆ 5 ರಿಂದ ಸಂಜೆ 4ರ ವರೆಗೆ ವಿಜಯಪುರ ನಗರದ ಸೈನಿಕ ಶಾಲೆಯಲ್ಲಿ  ಕಲ್ಪಿಸಲಾಗಿದೆ. ಬಳಿಕ ಸಂಜೆ 5ಕ್ಕೆ ಅಂತಿಮ ಯಾತ್ರೆಯು ಸೈನಿಕ ಶಾಲೆಯಿಂದ ಆರಂಭಗೊಂಡು, ಶಿವಾಜಿ ವೃತ್ತ, ಗಾಂಧಿ ಚೌಕಿ, ಸಿದ್ಧೇಶ್ವರ ಗುಡಿ ಮೂಲಕವಾಗಿ ಸಾಗಿ ಆಶ್ರಮ ತಲುಪಲಿದೆ.  ಸಂಜೆ 6.5ಕ್ಕೆ ಸರ್ಕಾರದ ಸಕಲ ಗೌರವಗಳೊಂದಿಗೆ ಶ್ರೀಗಳ ಅಂತಿಮ ಸಂಸ್ಕಾರ ನಡೆಯಲಿದೆ.

ಅಂತಿಮ ದರ್ಶನಕ್ಕೆ 5 ಲಕ್ಷದಿಂದ 10 ಲಕ್ಷ ಭಕ್ತರು ಬರುವ ಸಾಧ್ಯತೆ

ಶ್ರೀಗಳ ಅಂತಿಮ ದರ್ಶನಕ್ಕೆ 5ರಿಂದ 10 ಲಕ್ಷ ಜನ ಭಕ್ತರು ಬರಬಹುದು ಎಂದು ನಿರೀಕ್ಷಿಸಲಾಗಿದೆ. ಶ್ರೀಗಳ ಆಶಯದಂತೆ ಗುಡಿ ಕಟ್ಟಬಾರದು, ಸಮಾಧಿ ಮಾಡಬಾರದು ಎಂಬ ಮಾತಿನಂತೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಅಂತಿಮ ಸಂಸ್ಕಾರ ನಡೆಸಲು ನಿರ್ಧರಿಸಲಾಗಿದೆ. ಇನ್ನು ಅಂತ್ಯಸಂಸ್ಕಾರ ಸಂದರ್ಭದಲ್ಲಿ   ಮಠಾಧೀಶರು, ಗಣ್ಯರು, ಮಾಧ್ಯಮದವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ತಿಳಿಸಿದ್ದಾರೆ.  

Siddheshwar Swamiji

ಸಂತರೆಂದರೆ ಹೀಗಿರಬೇಕು ಎನ್ನುವಂತೆ ಬದುಕಿ ಎಲ್ಲ ಶರಣ ಕುಲಕ್ಕೂ ಮಾದರಿಯಾಗಿ ಇಂದು ನಮ್ಮನ್ನೆಲ್ಲ ಅಗಲಿದ ಚೇತನ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು. ತಮ್ಮ ಪ್ರವಚನದಿಂದಲೇ ರಾಜ್ಯಾದ್ಯಂತ ಹೆಸರುವಾಸಿಯಾಗಿದ್ದವರು. ಸರಳ ನಡೆ ನುಡಿ, ಭಕ್ತಿ ಮಾರ್ಗ, ಜೇಬಿಲ್ಲದ ಅಂಗಿ ತೊಡುವ ಮೂಲಕ ಸಕಲ ಆಡಂಬರಗಳನ್ನು ತೊರೆದಿದ್ದವರು ಇವರು.

ಸಿದ್ದೇಶ್ವರ ಸ್ವಾಮಿಜಿಯವರು ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದವರು. ಸಾಮಾನ್ಯ ರೈತ ಕುಟುಂಬದಲ್ಲಿ 1941ರ ಅಕ್ಟೋಬರ್ 24 ರಂದು ಜನಿಸಿದ್ದರು. "ಸಿದ್ದಗೊಂಡಪ್ಪ" ಇವರ ಬಾಲ್ಯದ ಹೆಸರು.

ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿಯಲ್ಲಿಯೇ ನಾಲ್ಕನೇ ತರಗತಿವರೆಗೆ ವಿದ್ಯಾಬ್ಯಾಸ ಮಾಡಿದ್ದರು. 

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದ ಇವರು ತದನಂತರ ಕೊಲ್ಹಾಪುರ ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದಿದ್ದರು. ಸಿದ್ಧೇಶ್ವರ ಸ್ವಾಮೀಜಿ ಅವರು ತಮ್ಮ 14 ನೇ ವಯಸ್ಸಿನಲ್ಲಿ ಗದಗಿನ ಎಚ್.ಎಚ್. ಮಲ್ಲಿಕಾರ್ಜುನ ಸ್ವಾಮೀಜಿಯವರ ಶಿಷ್ಯರಾಗಿ ಸೇರಿದ್ದರು. ಗುರುಗಳ ಬಳಿಯೇ ಇದ್ದುಕೊಂಡು ತಮ್ಮ ವಿದ್ಯಾಭ್ಯಾಸವನ್ನೆಲ್ಲ ಮುಗಿಸಿದ್ದರು.

ಲಕ್ಷಾಂತರ ಜನರ ಜೀವನ ಬದಲಾಯಿಸಿದ ಶ್ರೀಗಳ ಪ್ರವಚನ!

ಹೌದು, ನೂರಾರು ಗೊಂದಲಗಳಲ್ಲಿ ಬದುಕುವ ಸಾಕಷ್ಟು ಜನರ ಗೊಂದಲ ಬಗೆಹರಿಸಿ, ನೆಮ್ಮದಿಯ ಜೀವನಕ್ಕೆ ಬುನಾದಿ ಹಾಕಿಕೊಟ್ಟವರು ಸಿದ್ದೇಶ್ವರ ಸ್ವಾಮೀಜಿಗಳು.

ಜೀವನದಲ್ಲಿ ಸಂತೃಪ್ತಿ ಮತ್ತು ಸಂತೋಷದ ಬಗ್ಗೆ ಪ್ರಾಯೋಗಿಕ ಪಾಠಗಳನ್ನು ಜನರು ತುಂಬ ಮೆಚ್ಚಿಕೊಂಡಿದ್ದರು. ಅಷ್ಟೇ ಅಲ್ಲದೇ ಸಿದ್ದೇಶ್ವರ ಸ್ವಾಮೀಜಿಯವರು ಅಲ್ಲಮ ಪ್ರಭುವಿನ ವಚನಗಳ ಮೇಲೆ ಅಧಿಕೃತವಾಗಿ ಮಾತನಾಡಬಲ್ಲ ಭಾಷಣಕಾರರಾಗಿದ್ದರು.

ಐದು ಭಾಷೆಗಳಲ್ಲಿ ಹಿಡಿತ ಸಾಧಿಸಿದ ಸಂತರು!

ಸಿದ್ದೇಶ್ವರ ಸ್ವಾಮೀಜಿಗಳ ಬಾಯಲ್ಲಿ ಕನ್ನಡವನ್ನು ನಾವೆಲ್ಲ ಕೇಳಿದ್ದೇವೆ. ಸರಳ ಸುಮಧುರ ಕನ್ನಡವನ್ನು ಜನರ ಮನಮುಟ್ಟುವಂತೆ ಮಾತನಾಡುತ್ತಿದ್ದವರು ಶ್ರೀಗಳು.  ಕನ್ನಡವನ್ನು ಎಷ್ಟು ಸ್ಪುಟವಾಗಿ ಮಾತನಾಡುತ್ತಿದ್ದರೋ ಅಷ್ಟೇ ಸ್ಪುಟವಾಗಿ

ಇನ್ನೂ ನಾಲ್ಕು ಭಾಷೆಗಳನ್ನು ಸ್ವಾಮೀಜಿಗಳು ಮಾತನಾಡುತ್ತಿದ್ದರು ಗೊತ್ತೆ? ಹೌದು, ಸಿದ್ಧೇಶ್ವರ ಸ್ವಾಮಿಜಿಯವರು ಪಂಚ ಭಾಷೆಗಳ ಮೇಲೆ ಹಿಡಿತ ಸಾಧಿಸಿದ್ದರು. ಕನ್ನಡವೂ ಸೇರಿದಂತೆ ಸಂಸ್ಕೃತ, ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಪರಿಣಿತಿ ಹೊಂದಿದ್ದರು̤ ಹೀಗೆ ಇಷ್ಟು ದಿನಗಳ ಕಾಲ ನಮ್ಮ ನಡುವೆ ನಮ್ಮಂತೆಯೇ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕಿದ್ದ ಸಂತ, ನಡೆದಾಡುವ ದೇವರು, ಜೇಬಿಲ್ಲದ ಅಂಗಿ ತೊಟ್ಟ ಸಂತ, ಸರಳ ಸಜ್ಜನ ಸಂತ, ಜನಸಾಮಾನ್ಯರ ಸಂತ, ಜನಮಾನಸದಲ್ಲಿ ನೆಲೆನಿಂತ ಸಂತ ಶಾಋರಿಕವಾಗಿ ಮಾತ್ರ ನಮ್ಮನ್ನು ಅಗಲಿದ್ದಾರೆ ಎಂದಷ್ಟೇ ಹೇಳಬಹುದು… 

Published On: 03 January 2023, 10:58 AM English Summary: Walking God “Siddheshwar Swamiji” is immortal Millions of devotees who have joined Kambani

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.