ಅಂತಿಮ ಸೆಮಿಸ್ಟರ್/ವರ್ಷದ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಎಲ್ಲ ರೀತಿಯ ತಯಾರಿ ನಡೆದಿದ್ದು, ಇದರ ಜತೆಗೆ ಅವರ ಬ್ಯಾಕ್‌ಲಾಗ್ ವಿಷಯಗಳ ಪರೀಕ್ಷೆಗಳನ್ನೂ ನಡೆಸಲು ಎಲ್ಲ ವಿಶ್ವವಿದ್ಯಾಲಯಗಳಿಗೆ (Universities) ಸೂಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕೋವಿಡ್ ಕಾರಣದಿಂದಾಗಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗಷ್ಟೇ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಈ ಮಧ್ಯೆ, ವಿದ್ಯಾರ್ಥಿಗಳು ಬಾಕಿ ಉಳಿಸಿಕೊಂಡಿರುವ, ಅನುತ್ತೀರ್ಣರಾಗಿರುವ (Backlog) ಹಿಂದಿನ ಸೆಮಿಸ್ಟರ್‌ಗಳ ವಿಷಯಗಳ ಪರೀಕ್ಷೆ ನಡೆಸದಿರಲು ಕೆಲವು ವಿಶ್ವವಿದ್ಯಾಲಯಗಳು ತೀರ್ಮಾನಿಸಿರುವ ಸಂಗತಿ ಗಮನಕ್ಕೆ ಬಂದಿದೆ. ಇದು ಅಕ್ಷಮ್ಯ ಅಪರಾಧ ಎಂದರು.
‘ಅಂತಿಮ ವರ್ಷದ ವಿದ್ಯಾರ್ಥಿಗಳು ಪದವಿ ಮುಗಿಸಿಕೊಂಡು ಹೊರ ಹೋಗಬೇಕು ಎನ್ನುವುದು ನಮ್ಮ ಉದ್ದೇಶ. ಇಂಥ ಸನ್ನಿವೇಶದಲ್ಲಿ ಕೇವಲ ಅಂತಿಮ ವರ್ಷ (Semister) ಪರೀಕ್ಷೆ ನಡೆಸಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಬದಲಿಗೆ, ಹಿಂದಿನ ವರ್ಷಗಳ, ಅನುತ್ತೀರ್ಣಗೊಂಡಿರುವ ವಿಷಯಗಳ ಪರೀಕ್ಷೆಗಳಿಗೂ ಅವಕಾಶ ಮಾಡಿಕೊಡಬೇಕಾಗುತ್ತದೆ. ಈ ಕೆಲಸವನ್ನು ಎಲ್ಲ ವಿಶ್ವವಿದ್ಯಾಲಯಗಳು ಕಡ್ಡಾಯವಾಗಿ ಮಾಡಬೇಕು' ಎಂದು ಸೂಚಿಸಿದರು.
Share your comments