1 - ಭೂಮಿಯಲ್ಲಿ ಸಮಾಧಿ ಮಾಡಿಕೊಳ್ಳುವ ಮೂಲಕ ರೈತರೊಬ್ಬರ ವಿಶಿಷ್ಟ ಪ್ರತಿಭಟನೆ
2 - ತೊಗರಿ ಬೆಳೆಗೆ ನೆಟೆರೋಗ: ವಿಶೇಷ ಪ್ಯಾಕೇಜ್‌ಗೆ ಆಗ್ರಹಿಸಿ ಜನವರಿ 17ಕ್ಕೆ ಕಲಬುರಗಿ ಬಂದ್‌ಗೆ ಕರೆ
3 - ರಾಗಿ ಕಟಾವು ಯಂತ್ರದ ಬಾಡಿಗೆ ದರ ನಿಗದಿ
4 - ಮಹದಾಯಿ ನದಿ ತಿರುವು ಯೋಜನೆಯಲ್ಲಿ ದಿಕ್ಕು ತಪ್ಪಿಸುವ ಕೆಲಸ: ರೈತ ಹೋರಾಟ ಸಮಿತಿ ಆಕ್ರೋಶ
5 - ಆಧಾರ್ ಕಾರ್ಡ್‌ನಲ್ಲಿ ಹೊಸ ಅಪ್‌ಡೇಟ್: ಕುಟುಂಬದ ಮುಖ್ಯಸ್ಥರ ಒಪ್ಪಿಗೆಯೊಂದಿಗೆ ವಿಳಾಸ ಬದಲಾವಣೆಗೆ ಅವಕಾಶ
6 - ಶ್ರೀಗಂಧದ ಮರ ಕಳವು ತಡೆಗೆ ಸರ್ಕಾರದಿಂದ ಮಾಸ್ಟರ್ ಪ್ಲಾನ್!
7 - ರಾಜ್ಯದ ಜನತೆಗೆ ಸಿಎಂ ಬೊಮ್ಮಾಯಿ ಸಿಹಿಸುದ್ದಿ: ಪಡಿತರದಲ್ಲಿ ಅಕ್ಕಿ ಹೆಚ್ಚಳ
8 - ಹುಬ್ಬಳ್ಳಿಯಲ್ಲಿ ನಡೆಯಲಿರುವ ಮಹಾದಾಯಿ ಸಮಾವೇಶಕ್ಕೆ ಟ್ರ್ಯಾಕ್ಟರ್ ಮೂಲಕ ರ‍್ಯಾಲಿ
9 - ರಾಜ್ಯದಲ್ಲಿ ಮಾನವ-ಪ್ರಾಣಿ ಸಂಘರ್ಷ ಹೆಚ್ಚಳ: ಅಧಿಕಾರಿಗಳ ವರ್ಗಾವಣೆ
10 - ಬಯೋಫ್ಲಾಕ್ ಘಟಕಗಳಿಗೆ ಅಧಿಕಾರಿಗಳ ಭೇಟಿ
1-one
ಭೂಮಿಯಲ್ಲಿ ತಮ್ಮನ್ನು ತಾವೇ ಸಮಾಧಿ ಮಾಡಿಕೊಳ್ಳುವ ಮೂಲಕ ರೈತರೊಬ್ಬರ ವಿಶಿಷ್ಟ ಪ್ರತಿಭಟನೆ ನಡೆಸಿದ್ದಾರೆ.
ಮಹಾರಾಷ್ಟ್ರದ ಔರಂಗಾಬಾದ್ ವಿಭಾಗದ ಜಲ್ನಾ ಜಿಲ್ಲೆಯಲ್ಲಿ ಸುನಿಲ್ ಜಾಧವ್ ಎಂಬ ರೈತ ಈ ಪ್ರತಿಭಟನೆ ಮಾಡಿದ ರೈತ.
ಸರ್ಕಾರದ ವಿರುದ್ಧ ಹಲವು ತರದಲ್ಲಿ ಪ್ರತಿಭಟಿಸಿದ್ದನ್ನು ನಾವೆಲ್ಲ ಕೇಳಿದ್ದೇವೆ.
ಆದರೆ, ಈ ರೈತ ನೆಲದಲ್ಲಿ ಹೂತುಕೊಂಡು ಪ್ರತಿಭಟನೆ ಮಾಡುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2-Two
ತೊಗರಿ ಬೆಳೆಯಲ್ಲಿ ನೆಟೆರೋಗ ಕಾಣಿಸಿಕೊಂಡಿದ್ದು, ಪರಿಹಾರ ನೀಡುವಂತೆ ರೈತರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಇದುವರೆಗೂ ಸರ್ಕಾರದಿಂದ ಯಾವುದೇ ಸೂಕ್ತ ನಿರ್ಧಾರ ಪ್ರಕಟವಾಗಿಲ್ಲ. ಇದೀಗ ನೆಟೆ ರೋಗ ಹಾನಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಹಾಗೂ ಕೃಷಿ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ರೈತಪರ, ಕನ್ನಡಪರ ಹಾಗೂ ದಲಿತ ಸಂಘಟನೆಗಳು ಜನವರಿ 17ರಂದು ಕಲಬುರಗಿ ಬಂದ್‌ಗೆ ಕರೆ ನೀಡಿದ್ದಾರೆ.
ಸೋಮವಾರ ಅಖಿಲ ಭಾರತ ಕಿಸಾನ್ ಸಭಾ, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ರಾಜ್ಯ ರೈತ ಸಂಘ(ಹಸಿರು ಸೇನೆ), ನವಕರ್ನಾಟಕ ಸ್ವಾಭಿಮಾನ ವೇದಿಕೆ, ವೀರಕನ್ನಡಿಗರ ಸೈನ್ಯ, ಕರ್ನಾಟಕ ಬೀದಿ ವ್ಯಾಪಾರಿಗಳ ಸಂಘ, ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ, ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಸಭೆ ನಡೆಸಿದ್ದು,
ಕಲಬುರಗಿ ಬಂದ್ ಮಾಡಲು ತೀರ್ಮಾನಿಸಲಾಗಿದೆ. ಸದನದಲ್ಲಿ ಈ ಭಾಗದಲ್ಲಿ ಉಂಟಾಗಿರುವ ನೆಟೆ ರೋಗದ ಬಗ್ಗೆ ಚರ್ಚೆ ಆಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈ ಕುರಿತು ಯಾವುದೇ ಚರ್ಚೆಗಳು ನಡೆದಿಲ್ಲ. ಕಲ್ಯಾಣ ಕರ್ನಾಟಕ ಭಾಗದ ಜನಪ್ರತಿನಿಧಿಗಳು ಸದನದಲ್ಲಿ ತೊಗರಿ ಬೆಳೆಗಾರರ ರೈತರ ಪರವಾಗಿ ಧ್ವನಿ ಎತ್ತಿಲ್ಲ. ರೈತರ ಬದುಕಿನ ಪ್ರಶ್ನೆಯಾದ ತೊಗರಿ ಬೆಳೆಯು ನೆಟೆ ರೋಗದಿಂದ ನಾಶವಾಗಿದೆ.
ತೊಗರಿ ಬೆಳೆಗಾರರಿಗೆ ಪರಿಹಾರ ಕೊಡಿಸುವಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಸೋತಿವೆ. ಹೀಗಾಗಿ ಕಲಬುರಗಿ ಬಂದ್‌ಗೆ ಕರೆ ನೀಡಿದ್ದೇವೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
ನೆಟೆ ರೋಗ ಹಾನಿಗೆ ವಿಶೇಷ ಪ್ಯಾಕೇಜ್ ಘೋಷಿಸಿ, ಬೆಳೆ ಕಳೆದುಕೊಂಡ ರೈತರ ಪ್ರತಿ ಎಕರೆಗೆ 25 ಸಾವಿರ ಪರಿಹಾರ ಕೊಡಬೇಕು. ಬೆಳೆ ವಿಮೆಯಲ್ಲಿನ ಮೋಸವನ್ನು ತಡೆಗಟ್ಟಿ ಸೂಕ್ತ ವಿಮಾ ಹಣ ಪಾವತಿ ಹಾಗೂ ಕೃಷಿಕರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
3-Three
ಬೆಂಗಳೂರು ನಗರ ಜಿಲ್ಲೆಯಾದ್ಯಂತ ಮುಂಗಾರು ಹಂಗಾಮಿನ ರಾಗಿ ಬೆಳೆಯು 18 ಸಾವಿರ ಹೆಕ್ಟೆರ್ ಪ್ರದೇಶದಲ್ಲಿದ್ದು ಬಹುತೇಕ ರಾಗಿ ಬೆಳೆಯು ಕಟಾವಿನ ಹಂತದಲ್ಲಿರುತ್ತದೆ. ಈ ಹಿನ್ನಲೆಯಲ್ಲಿ ರೈತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ರಾಗಿ ಬೆಳೆ ಕಟಾವು ಯಂತ್ರಗಳ ಬಳಕೆಗೆ ಪ್ರಸ್ತುತ ದರ ನಿಗದಿ ಮಾಡಲಾಗಿದೆ.
ಇಂದಿನ ದಿನಗಳಲ್ಲಿ ಕಾರ್ಮಿಕರ ಕೂಲಿ ವೆಚ್ಚ ಹೆಚ್ಚಾಗಿದ್ದು ಹಾಗೂ ಇತರೆ ನಿರ್ವಹಣೆ ವೆಚ್ಚವೂ ಹೆಚ್ಚಾಗಿರುವುದರಿಂದ ಕಟಾವು ಮಾಡಲು ಯಂತ್ರಕ್ಕೆ ಪ್ರತಿ ಗಂಟೆಗೆ ನ್ಯೂ ಹಾಲೆಂಡ್/ ಜಾನ್ ಡೀರ್ ದೊಡ್ಡ ಕಟಾವು ಯಂತ್ರಕ್ಕೆ 3350 ರೂ. ಹಾಗೂ ಎಸಿಸಿ ಕಂಪನಿಯ ಕಟಾವು ಯಂತ್ರಕ್ಕೆ 2,700 ರೂಪಾಯಿ ಮೀರದಂತೆ ಬಾಡಿಗೆಯನ್ನು ನಿಗದಿಪಡಿಸಲಾಗಿದೆ.
ನಿಗದಿ ಪಡಿಸಿದ್ದಕ್ಕಿಂತ ಹೆಚ್ಚಿನ ದರವನ್ನು ಪಡೆದಲ್ಲಿ ರಾಗಿ ಕಟಾವು ಯಂತ್ರದ ಮಾಲೀಕರ ವಿರುದ್ಧ "ವಿಪತ್ತು ನಿರ್ವಹಣೆ ಕಾಯ್ದೆ 2005" ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆಂದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
4- Four
ಮಹದಾಯಿ ನದಿ ನೀರು ತಿರುವು ಯೋಜನೆ ವಿಚಾರದಲ್ಲಿ ಸರ್ಕಾರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಕರ್ನಾಟಕ ಕಳಸಾ-ಬಂಡೂರಿ ರೈತ ಹೋರಾಟ ಸಮಿತಿ ಆರೋಪ ಮಾಡಿದೆ.
ಅಲ್ಲದೇ ಯೋಜನೆಗೆ ಅನುಮೋದನೆ ನೀಡುವ ವಿಚಾರದಲ್ಲಿ ಸಿಎಂ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೋರಾಟಗಾರರು ಹಾಗೂ ಸಾರ್ವಜನಿಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.
ಸರ್ಕಾರ ಈಗಾಗಲೇ ನೀಡಿರುವ ಭರವಸೆಯಂತೆ ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ವಿಫಲವಾದರೆ, ಪುನಃ ಆಂದೋಲನವನ್ನು ಪ್ರಾರಂಭಿಸಲಾಗುವುದು. ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪನವರು 2018ರ ವಿಧಾನಸಭಾ ಚುನಾವಣೆಯ ಮೊದಲು ಯೋಜನೆಯನ್ನು ಶೀಘ್ರವಾಗಿ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದರು.
ಆದರೆ, ಭರವಸೆ ಈಡೇರಿಸಲಿಲ್ಲ. ಅಧಿಕಾರಕ್ಕೆ ಬಂದ ನಂತರ ಏನನ್ನೂ ಮಾಡಲಿಲ್ಲ. ಬೊಮ್ಮಾಯಿ-ಜೋಶಿ ಜೋಡಿಯಲ್ಲೂ ಇದೇ ಮೋಸದ ಆಟ ನಡೆಯುತ್ತಿದೆ ಎಂದು ಸಮಿತಿ ಮುಖಂಡ ಕುಮಾರ ಹಕಾರಿ ಅವರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಯೋಜನೆ ಅನುಷ್ಠಾನದ ಬಗ್ಗೆ ಬಿಜೆಪಿ ನಾಯಕರು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಈ ಬಾರಿ ಜನರನ್ನು ಯಾಮಾರಿಸಲು ಸಾಧ್ಯವಿಲ್ಲ ಎಂದರು. 2018ರಲ್ಲಿಯೇ ನ್ಯಾಯಮಂಡಳಿಯು ಮಹದಾಯಿ ನದಿ ನೀರಿನಲ್ಲಿ ರಾಜ್ಯದ ಪಾಲನ್ನು ನೀಡಿತ್ತು.
ಆದರೆ, ಸುದೀರ್ಘ ನಾಲ್ಕು ವರ್ಷಗಳ ಕಾಲ ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ನಾಲ್ಕು ವರ್ಷಗಳ ಕಾಲ ನಿದ್ರೆ ಮಾಡುತ್ತಿದ್ದವು.
ಇದೀಗ ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಎಚ್ಚರಗೊಂಡಿದ್ದಾರೆ. ನಾವು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿಲ್ಲ, ಆದರೆ, ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಬೇಕೆಂಬುದನ್ನು ಬಯಸುತ್ತಿದ್ದೇವೆಂದು ಎಂದು ಸಿದ್ದು ತೇಜಿ ಟೀಕಿಸಿದ್ದಾರೆ.
ಯೋಜನೆಯ ಅನುಷ್ಠಾನ ಪ್ರಾರಂಭಿಸಲು ರಾಜ್ಯ ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡಲಾಗುವುದು. ಈ ಅವಧಿಯ ಒಳಗಾಗಿ ಯೋಜನೆ ಜಾರಿ ಮಾಡಬೇಕು. ಇಲ್ಲದಿದ್ದರೆ, ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
5- Five
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಕುಟುಂಬದ ಮುಖ್ಯಸ್ಥರ ಒಪ್ಪಿಗೆಯೊಂದಿಗೆ ಆನ್‌ಲೈನ್‌ನಲ್ಲಿ ಆಧಾರ್‌ನಲ್ಲಿ ತಮ್ಮ ವಿಳಾಸವನ್ನು ಬದಲಾಯಿಸುವ ವ್ಯವಸ್ಥೆಯನ್ನು ಪರಿಚಯಿಸಿದೆ.
ಈ ಹೊಸ ವ್ಯವಸ್ಥೆಯು ತಮ್ಮ ಹೆಸರಿನಲ್ಲಿ ದಾಖಲೆಗಳನ್ನು ಹೊಂದಿರದ ನಿವಾಸಿಗಳ ಸಂಬಂಧಿಕರಿಗೆ ಆಧಾರ್ ಕಾರ್ಡ್‌ನಲ್ಲಿ ತಮ್ಮ ವಿಳಾಸವನ್ನು ಬದಲಾಯಿಸಲು ತುಂಬಾ ಉಪಯುಕ್ತವಾಗಿದೆ.
ಅರ್ಜಿದಾರರು ಮತ್ತು ಕುಟುಂಬದ ಮುಖ್ಯಸ್ಥರ ನಡುವಿನ ಸಂಬಂಧವನ್ನು ನಮೂದಿಸಿ ಮತ್ತವರ ಹೆಸರುಗಳು, ಪಡಿತರ ಚೀಟಿ, ಅಂಕಗಳ ಪ್ರಮಾಣಪತ್ರ, ವಿವಾಹ ಪ್ರಮಾಣಪತ್ರ, ಪಾಸ್‌ಪೋರ್ಟ್ ಇತ್ಯಾದಿ ದಾಖಲೆಗಳನ್ನು ಸಲ್ಲಿಸುವ ಮೂಲಕ ನೀವು ಅರ್ಜಿ ಸಲ್ಲಿಸಬಹುದು.
ಮೇಲಿನ ಸಂಬಂಧದ ಪುರಾವೆಯ ಅನುಪಸ್ಥಿತಿಯಲ್ಲಿ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ನೀಡಿದ ನಿರ್ದಿಷ್ಟ ಸ್ವರೂಪದಲ್ಲಿ ಕುಟುಂಬದ ಮುಖ್ಯಸ್ಥರು ಅನುಮೋದಿಸಿದ ಸ್ವಯಂ-ಪ್ರಮಾಣಪತ್ರವನ್ನು ಬಳಸಬಹುದು.
18 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿಯನ್ನು ಮನೆಯ ಮುಖ್ಯಸ್ಥ ಎಂದು ಪರಿಗಣಿಸಬಹುದು ಮತ್ತು ಈ ಉದ್ದೇಶಕ್ಕಾಗಿ ಅವರ ವಿಳಾಸವನ್ನು ಸಂಬಂಧಿಕರೊಂದಿಗೆ ಹಂಚಿಕೊಳ್ಳಬಹುದು ಎಂದು ತಿಳಿಸಿದೆ.
6- Six
ರಾಜ್ಯದಲ್ಲಿ ಶ್ರೀಗಂಧ ಮರಗಳ ಸಂರಕ್ಷಣೆಗೆ ಸರ್ಕಾರ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಈ ಮರಗಳ ಮೇಲೆ ಕಣ್ಗಾವಲಿಡುವ ಉದ್ದೇಶದಿಂದ ಸಿಸಿಟಿವಿ ಅಳವಡಿಕೆ ಹಾಗೂ ಭದ್ರತಾ ಸಿಬ್ಬಂದಿ ನಿಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ.
ಈಗಾಗಲೇ ಶ್ರೀಗಂಧದ ಮರಗಳ ರಕ್ಷಣೆಗೆ ಸರ್ಕಾರ ಹಲವು ಸುಧಾರಣಾ ಕ್ರಮಗಳನ್ನು ಅನುಸರಿಸಿದೆ. ಅಲ್ಲದೇ ಮರಗಳ ಸಂಖ್ಯೆಯನ್ನು ಹೆಚ್ಚಿಸಲು ಹಾಗೂ ಕಳ್ಳರಿಂದ ಮರಗಳ ರಕ್ಷಿಸಲು ಹಲವು ಮುಂಜಾಗ್ರತಾ ಕ್ರಮ ಕೈಗೊಂಡಿದೆ.
ರಾಜ್ಯ ಸರ್ಕಾರವು 100 ಹೆಕ್ಟೇರ್ ಪ್ರದೇಶಗಳಲ್ಲಿ ಬೆಳೆಯುವ ಶ್ರೀಗಂಧದ ಮರಗಳಿಗೆ ರಕ್ಷಣೆ ಒದಗಿಸಲಾಗುತ್ತದೆ. ಈ ಪ್ರದೇಶಗಳು ಶೂನ್ಯ ಸಹಿಷ್ಣು ವಲಯಗಳಾಗಿ ಮಾರ್ಪಡಿಸಲಾಗುತ್ತದೆ.
ವಿಶೇಷ ಭದ್ರತೆ, ಶ್ವಾನದಳ ಮತ್ತು ಸಿಸಿಟಿವಿಗಳೊಂದಿಗೆ 24 ಗಂಟೆಗಳ ಕಾಲ ಈ ಪ್ರದೇಶಗಳಲ್ಲಿ ನಿಗಾವಹಿಸಲಾಗುತ್ತದೆ. ಕೇರಳದ ಮರಯೂರಿನಲ್ಲಿರುವ ಶ್ರೀಗಂಧದ ಮರಗಳಿಗೆ ಈ ಮಾದರಿಯ ರಕ್ಷಣೆ ನೀಡಲಾಗಿದೆ.
ಇದೇ ರೀತಿಯ ರಕ್ಷಣೆಯನ್ನು ಇಲ್ಲಿಯ ಮರಗಳಿಗೂ ನೀಡುವ ಕುರಿತು ಚಿಂತನೆ ನಡೆದಿವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
7- Seven
ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಈ ತಿಂಗಳಿನಿಂದ ಅನ್ವಯವಾಗುವಂತೆ ಹೆಚ್ಚುವರಿಯಾಗಿ 1 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲು ಆದೇಶಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
5 ಕೆಜಿ ಅಕ್ಕಿ ಜತೆಗೆ ಹೆಚ್ಚುವರಿ ಒಂದು ಕೆಜಿ ಅಕ್ಕಿ ನೀಡಲು ಆದೇಶಿಸಲಾಗಿದೆ. ಈ ತಿಂಗಳಿಂದಲೇ ಹೆಚ್ಚುವರಿ ಅಕ್ಕಿ ಪಡಿತರ ಚೀಟಿದಾರರಿಗೆ ದೊರೆಯಲಿದೆ.
ಈ ಸಂಬಂಧ ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಇಲಾಖೆ ಆದೇಶ ಹೊರಡಿಸಿದೆ. 2022-23 ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವಂತೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ವಯ
ಸಾರ್ವಜನಿಕ ವಿತರಣಾ ಪದ್ಧತಿಯಡಿ ಪಡಿತರ ಚೀಟಿದಾರರಿಗೆ 5 ಕೆಜಿ ಆಹಾರ ಧಾನ್ಯ ವಿತರಿಸಲಾಗುತ್ತಿದೆ. ಈ ಧಾನ್ಯದೊಂದಿಗೆ ಪ್ರತಿ ತಿಂಗಳು 1 ಕೆಜಿ ಅಕ್ಕಿಯನ್ನು ಹೆಚ್ಚುವರಿಯಾಗಿ ವಿತರಿಸಲು ಆದೇಶಿಸಲಾಗಿದೆ.
8- Eight
ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಡೆಯಲಿರುವ "ಮಹಾದಾಯಿ ಜಲ ಜನ ಬೃಹತ್ ಸಮಾವೇಶಕ್ಕೆ" ನವಲಗುಂದ ಕ್ಷೇತ್ರದಿಂದ ಟ್ರ್ಯಾಕ್ಟರ್ ಮೂಲಕ ರೈತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ತೆರಳುತ್ತಿರುವ ಹಿನ್ನೆಲೆ ನವಲಗುಂದ ಪಟ್ಟಣದ ವೀರಗಲ್ಲಿಗೆ ಮಾಲಾರ್ಪಣೆ ಮಾಡುವ ಮೂಲಕ ರ‍್ಯಾಲಿಗೆ ಚಾಲನೆ ನೀಡಲಾಯಿತು.
ರೈತರ ಸಮಸ್ಯೆಗಳ ಬಗ್ಗೆ ಹುಬ್ಬಳ್ಳಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಬೃಹತ್ ಪ್ರತಿಭಟನಾ ಸಭೆಗೆ ನವಲಗುಂದದಿಂದ 43ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳಲ್ಲಿ ರೈತರು ತೆರಳಿದರು.
ಉತ್ತರ ಕರ್ನಾಟಕದ ಮಹತ್ವದ ಯೋಜನೆಯಾದ ಮಹದಾಯಿ ಕಳಸಾ-ಬಂಡೂರಿ ಯೋಜನೆ ಜಾರಿ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಳಂಬ ಧೋರಣೆ ತೋರುತ್ತಿವೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ನವಲಗುಂದ ಪಟ್ಟಣದಲ್ಲಿ ಮಾಜಿ ಶಾಸಕ ಎನ್. ಹೆಚ್ ಕೋನರಡ್ಡಿ, ವಿನೋದ ಅಸೂಟಿ ಹಾಗೂ ಮಾಜಿ ಸಚಿವ ಕೆ.ಎನ್. ಗಡ್ಡಿ ಅವರ ನೇತೃತ್ವದಲ್ಲಿ ನೂರಾರು ರೈತರು ರ‍್ಯಾಲಿಗೆ ತೆರಳಿದರು. ಇದಕ್ಕೂ ಮುನ್ನ ರೈತ ಹುತಾತ್ಮ ವೀರಗಲ್ಲು ಹಾಗೂ ಲಿಂಗರಾಜ ಒಡೆಯರ ಪುತಳಿಗೆ ಮಾಲಾರ್ಪಣೆ ಮಾಡಿ, ನಂತರ ರ‍್ಯಾಲಿ ರಾಷ್ಟ್ರೀಯ ಹೆದ್ದಾರಿ ಮೂಲಕ ಹುಬ್ಬಳ್ಳಿ ಕಡೆಗೆ ತೆರಳಿತು.
9- Nine
ರಾಜ್ಯದಾದ್ಯಂತ ವನ್ಯಜೀವಿ ಮತ್ತು ಮಾನವ ಸಂಘರ್ಷಣೆಯ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬೆಂಗಳೂರಿನ ಕಚೇರಿ ಬಿಟ್ಟು ಕಾಡಿಗೆ ಭೇಟಿ ನೀಡುತ್ತಿಲ್ಲ ಎಂಬ ಕಾರಣಕ್ಕೆ 9 ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳನ್ನು ರಾಜ್ಯದ ವಿವಿಧೆಡೆಗೆ ವರ್ಗಾಯಿಸಲಾಗಿದೆ.
ಜನವಸತಿ ಪ್ರದೇಶಕ್ಕೆ ನುಗ್ಗಿದ ಹಿನ್ನೆಲೆಯಲ್ಲಿ ಕಳೆದ 10 ದಿನಗಳಲ್ಲಿ ರಾಜ್ಯದಲ್ಲಿ ಎಂಟು ಆನೆಗಳನ್ನು ಸೆರೆ ಹಿಡಿಯಲಾಗಿದೆ. ಚಿರತೆ ದಾಳಿಯಿಂದ ಕೆಲವೆಡೆ ಜೀವಗಳು ಬಲಿಯಾಗಿವೆ.
ಆನೆ ಹಿಂಡಿನಿಂದ ಬೆಳೆಹಾನಿ ಆಗುತ್ತಿರುವ ಕುರಿತು ಮುಖ್ಯಮಂತ್ರಿ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ವನ್ಯಜೀವಿ ಮಂಡಳಿ ಸಭೆಯಲ್ಲಿ ಚರ್ಚಿಸಲಾಗಿತ್ತು.
10-Ten
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಪಿಎಂ ಮತ್ಸ್ಯ ಸಂಪದ ಯೋಜನೆಯಡಿ ಫಲಾನುಭವಿಗಳು ಸ್ಥಾಪಿಸಿರುವ ಎರಡು ಬಯೋಫ್ಲಾಕ್ ಘಟಕಗಳಿಗೆ ಮೀನುಗಾರಿಕೆ ಜಂಟಿ ನಿರ್ದೇಶಕ ಸಿದ್ಧಯ್ಯ,
ಮೀನುಗಾರಿಕೆ ಉಪನಿರ್ದೇಶಕ ಗಿರೀಶ್ ಹಾಗೂ ಮೀನುಗಾರಿಕೆ ಉಪನಿರ್ದೇಶಕ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು.
ಇವಿಷ್ಟು ಈ ಹೊತ್ತಿನ ಪ್ರಮುಖ ಕೃಷಿ ಸುದ್ದಿಗಳು
ಇನ್ನೂ ಹೆಚ್ಚಿನ ಕೃಷಿ ಸಂಬಂಧಿ ಮಾಹಿತಿಗಳಿಗಾಗಿ ಓದುತ್ತಿರಿ ಕೃಷಿ ಜಾಗರಣ ಕನ್ನಡ.
ನಮಸ್ಕಾರ…
Share your comments