ಕೊರೋನಾ ಸೋಂಕಿನ ಎರಡನೇ ಅಲೆ ತೀವ್ರ ಹಿನ್ನೆಲೆ ಒಂದರಿಂದ ಒಂಭತ್ತನೇ ತರಗತಿಗಳ ಮೌಲ್ಯಾಂಕನ ವಿಶ್ಲೇಷಣೆ ಮತ್ತು ಫಲಿತಾಂಶ ಪ್ರಕಟಣೆ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ತರಗತಿವಾರು ನಿರ್ಧಾರ ಕೈಗೊಂಡಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಕೋವಿಡ್ ಭೀತಿಯಲ್ಲಿ ರಜೆಯಲ್ಲಿದ್ದ 9 ನೇ ತರಗತಿ ವಿದ್ಯಾರ್ಥಿಗಳಿಗೆ ಇನ್ನೆರಡು ದಿನಗಳಲ್ಲಿ ಪರೀಕ್ಷೆ ದಿನಾಂಕವನ್ನು ತಿಳಿಸುವುದಾಗಿ ಶಿಕ್ಷಣ ಸಚಿವರು ಹೇಳಿದ್ದರು. ಆದರೆ ಇದೀಗ ಪರೀಕ್ಷೆ ನಡೆಸದೇ 1 ರಿಂದ 9ನೇ ತರಗತಿ ಎಲ್ಲಾ ವಿದ್ಯಾರ್ಥಿಗಳು ಪಾಸ್ ಮಾಡಲು ಆದೇಶ ಹೊರಡಿಸಿದ್ದಾರೆ.
1 ರಿಂದ 9ನೇ ತರಗತಿ ವಿದ್ಯಾರ್ಥಿಗಳನ್ನು ಪಾಸ್ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಒಂದರಿಂದ ಐದನೇ ತರಗತಿ ಮತ್ತು ಆರರಿಂದ ಒಂಭತ್ತನೇ ತರಗತಿಗಳವರೆಗೆ ಮೌಲ್ಯಾಂಕನ ಕುರಿತು ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
1 ರಿಂದ 9ನೇ ತರಗತಿಗಳ ವಿದ್ಯಾರ್ಥಿಗಳಿಗೆ ವಿದ್ಯಾಗಮ ಕಾರ್ಯಕ್ರಮದಲ್ಲಿ ನಿರ್ವಹಿಸಿದ ದಾಖಲೆಗಳು, ಸಂವಹನದ ಆಧಾರದ ಮೇಲೆ ಕೆಲವು ಶಾಲೆಯವರು ಆನ್‌ಲೈನ್ ಮೂಲಕ ತರಗತಿ ನಿರ್ವಹಿಸಿದ್ದಲ್ಲಿ ಆ ಸಂದರ್ಭದಲ್ಲಿ ಅವಲೋಕಿಸಿದ ವಿದ್ಯಾರ್ಥಿಗಳ ಕಲಿಕಾ ಪ್ರಗತಿ, ಮಕ್ಕಳಿಗೆ ನೀಡಿದ್ದ ಪ್ರಬಂಧ, ಗೃಹ ಕೆಲಸ ಇತರೆ ಚಟುವಟಿಕೆಗಳನ್ನಾಧರಿಸಿದ ಕೃತಿ ಸಂಪುಟ, ಚೈಲ್ಡ್ ಪ್ರೊಫೈಲ್, ಇತರೆ ಲಭ್ಯ ದಾಖಲೆಗಳನ್ನು ಅವಲೋಕಿಸಿ ಈವರೆವಿಗೆ ಪೂರೈಸಿದ ಪಠ್ಯವಸ್ತು, ಸಾಮರ್ಥ್ಯ ಕಲಿಕಾ-ಫಲಗಳ ಸಾಧನೆ ಮತ್ತು ಕೊರತೆಗಳನ್ನು ಶಾಲಾ ಹಂತದಲ್ಲಿ ಸಿಸಿಇ ನಿಯಮಗಳಂತೆ ವಿಶ್ಲೇಷಿಸಿ ಪ್ರಗತಿ ಪತ್ರದಲ್ಲಿ ದಾಖಲಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಮುಂದಿನ ತರಗತಿಗೆ ಬಡ್ತಿ ನೀಡುವುದು ಮತ್ತು ಅದನ್ನು ಪ್ರಗತಿ ಪತ್ರದಲ್ಲಿ ದಾಖಲಿಸುವುದು ಸೇರಿದಂತೆ ಈ ಎಲ್ಲ ಪ್ರಕ್ರಿಯೆಗಳನ್ನು ಏಪ್ರಿಲ್ 30 ರೊಳಗೆ ನಿರ್ವಹಿಸಿ ಫಲಿತಾಂಶ ದಾಖಲಿಸಿ ಪೂರ್ಣಗೊಳಿಸಲು ನಿರ್ದೇಶನ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಇನ್ನು, 6 ರಿಂದ 9ನೇ ತರಗತಿಗಳಿಗೆ 2020 ರ ಆಗಸ್ಟ್ 4 ರಿಂದ ಅಕ್ಟೋಬರ್ 10 ರವರೆಗೆ ವಿದ್ಯಾಗಮ ತರಗತಿಗಳು ನಡೆದಿವೆ. 2921 ಜನವರಿ 29 ರಿಂದ ಫೆಬ್ರವರಿ 1 ರವರೆಗೆ 9 ಮತ್ತು 10 ನೇ ತರಗತಿಗಳು ಪೂರ್ಣವಾಗಿ ನಡೆದಿವೆ. ಫೆ. 22 ರಿಂದ ಬೆಂಗಳೂರು ನಗರ ಮತ್ತು ಕೇರಳ ಗಡಿ ಭಾಗದ ಪ್ರದೇಶಗಳ ಶಾಲೆಗಳಲ್ಲಿ ವಿದ್ಯಾಗಮ ತರಗತಿಗಳು ನಡೆದಿವೆ. ಉಳಿದಂತೆ ರಾಜ್ಯದ ಎಲ್ಲ ಕಡೆಗಳಲ್ಲಿ ಈ ಅವಧಿಯಲ್ಲಿ ಪೂರ್ಣಾವಧಿ ಭೌತಿಕ ತರಗತಿಗಳು ನಡೆದಿವೆ. ಆನ್‌ಲೈನ್ ಸೇರಿದಂತೆ ವಿವಿಧ ಪ್ರಕಾರದ ತರಗತಿಗಳು ನಡೆದಿವೆ. ಈ ಹಿನ್ನೆಲೆಯಲ್ಲಿ 6 ರಿಂದ 9 ನೇ ತರಗತಿಗಳ ಮೌಲ್ಯಾಂಕನ ವಿಶ್ಲೇಷಣೆ ಹಾಗೂ ಫಲಿತಾಂಶ ಪ್ರಕಟಣೆ ಮಾಡಲಾಗತ್ತದೆ.
Share your comments