ಗ್ರಾಮಾಂತರ ಪ್ರದೇಶದಿಂದ ನಗರ ಪ್ರದೇಶಕ್ಕೆ ವಲಸೆ ಹೋಗುವುದನ್ನು ತಡೆಯುವುದಕ್ಕಾಗಿ ಕೂಲಿ ಕಾರ್ಮಿಕರಿಗೆ ಆ ಗ್ರಾಮದಲ್ಲಿಯೇ ಉದ್ಯೋಗ ನೀಡಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ದುಡಿಯೋಣ ಬಾ ಅಭಿಯಾನಕ್ಕೆ ಮುಂದಾಗಿದೆ.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಭಾಗದ ಜನರಿಗೆ ಯಾವುದೇ ಕೆಲಸ ದೊರೆಯದೆ ಇರುವ ಕಾರಣ ಅವರಿಗೆ ನಿರಂತರವಾಗಿ ಕೆಲಸ ನೀಡಲು ಮಾರ್ಚ್ 15ರಿಂದ ಮೂರು ತಿಂಗಳವರೆಗೆ ಕೂಲಿ ಕೆಲಸ ಒದಗಿಸಲಾಗುವುದು. ಗ್ರಾಮೀಣ ಜನರಿಗೆ ಸ್ಥಳೀಯವಾಗಿ ಉದ್ಯೋಗ ನೀಡಿ ಸ್ವಾವಲಂಬಿಗಳಾಗಿ ಬದುಕುವಂತೆ ಮಾಡಲಾಗುವುದು. ಕೆಲಸ ಹಾಗೂ ಕಾಮಗಾರಿಗೆ ಬೇಡಿಕೆ ಸಲ್ಲಿಸುವ ವಿಧಾನವಾಗಿದೆ. ಒಂದು ಕುಟುಂಬವು ಒಂದು ವರ್ಷದಲ್ಲಿ 100 ದಿನ ಕೆಲಸ ಮಾಡಲು ಅವಕಾಶವಿದೆ. ಅಭಿಯಾನದ ವೇಳೆಯಲ್ಲಿ 60 ದಿನ ಕೆಲಸ ಮಾಡಲು ಅವಕಾಶವಿದ್ದು, 16,500 ರೂಪಾಯಿ ಕೂಲಿ ಸಂಪಾದಿಸಬಹುದು.
ಮಾರ್ಚ್ 23ರಿಂದ ಮಾರ್ಚ್ 31ರವರೆಗೆ ಉದ್ಯೋಗ ಚೀಟಿಗೆ ಅರ್ಜಿ ಸಲ್ಲಿಸಿದ ಕುಟುಂಬಗಳಿಗೆ ಉದ್ಯೋಗ ಚೀಟಿ ನೀಡಲಾಗುವುದು. ಬೇಡಿಕೆ ಸಲ್ಲಿಸಿ ಕೂಲಿಕಾರರಿಗೆ ಕೆಲಸ ನೀಡಲು ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಸಲಾಗುವುದು. ಕೂಲಿಕಾರರ ಗುಂಪು ರಚಿಸಿ, ತಂಡ ಗುರುತಿಸಿ ಅವರಿಗೆ ತರಬೇತಿ ನೀಡಲಾಗುವುದು.
ಏಪ್ರಿಲ್ 1ರಿಂದ ಜೂನ್ 15ರವರೆಗೆ ಪ್ರತಿ ಸೋಮವಾರ ಕೆಲಸದ ಬೇಡಿಕೆ ಪೆಟ್ಟಿಗೆ ತೆರೆಯಲಾಗುವುದು. ಕೆಲಸದ ಬೇಡಿಕೆ ಸಲ್ಲಿಸಿದ ಕೂಲಿಕಾರರ ವಿವರಗಳನ್ನು ಎಂಐಎಸ್‌ನಲ್ಲಿ ದಾಖಲಿಸಿ ಎರಡು ದಿನಗಳೊಳಗೆ ಕೆಲಸ ನೀಡಲಾಗುವುದು. ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ನೆರಳು, ಶಿಶುಪಾಲನೆ ಸೌಲಭ್ಯ ಕಲ್ಪಿಸಿ, ಕೂಲಿಕಾರರಿಗೆ ನಿರಂತರವಾಗಿ ಕೆಲಸ ನೀಡಲಾಗುವುದು.
ಅಭಿಯಾನದಲ್ಲಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 50 ರೈತರ ಜಮೀನುಗಳಲ್ಲಿ ಬದು, ಕೃಷಿ ಹೊಂಡ ನಿರ್ಮಾಣ ಮಾಡಲಾಗುವುದು. ಕೃಷಿ ಹೊಂಡ ಬಾವಿ ನಿರ್ಮಾಣ. ಸೋಕ್ ಪಿಟ್ ನಿರ್ಮಾಣ ಮಾಡಲಾಗುವುದು. ಕೆರೆಗಳನ್ನು ಅಭಿವೃದ್ಧಿ ಪಡಿಸಲು ಕೆರೆಗೆ ನೀರು ಹರಿದು ಬರುವ ಕಾಲುವೆಗಳ ಪುನಶ್ಚೇತನ, ಕೆರೆ ಹೂಳು ತೆಗೆಯುವುದು,.ಕೆರೆ ಏರಿ, ಕೋಡಿ ದುರಸ್ತಿ, ರೈತರ ಜಮೀನಿಗೆ ನೀರು ಹರಿದು ಹೋಗುವ ಕಾಲುವೆಗಳ ಪುನಶ್ಚೇತನ ಕೆರೆ ಅಂಚಿನಲ್ಲಿ ಅರಣ್ಯೀಕರಣ, ರಸ್ತೆ ಬದಿ ನೆಡುತೋಪು ಮಾಡಲಾಗವುದು. ಬ್ಲಾಕ್ ಪ್ಲಾಂಟೆಷನ್, ಕೃಷಿ ಅರಣ್ಯೀಕರಣ, ರೈತರ ಜಮೀನುಗಳಲ್ಲಿ ತೋಟಗಾರಿಕೆ ಬೆಳೆ ಬೆಳೆಯಲು ಮುಂಗಡ ಗುಂಡಿ ತೆಗೆಯುವ ಕಾಮಗಾರಿಗಳು ಹಾಗೂ ಬೋರ್ ವೆಲ್ ರಿಚಾರ್ಜ್ ಕಾಮಗಾರಿ ಸೇರಿದಂತೆ ಇನ್ನಿತರ ಕಾಮಗಾರಿ ಕೈಗೊಳ್ಳಲಾಗುವುದು.
Share your comments