ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಇರುವಕ್ಕಿಯಲ್ಲಿ ಇರುವ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ‘ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ’ ಎಂದು ನಾಮಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.
ಅವರು (ಜು.24) ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ವರ್ಚುವಲ್ ವೇದಿಕೆ ಮೂಲಕ ನಡೆದ ಸುಮಾರು 1074 ಕೋಟಿ ರೂ. ವೆಚ್ಚದ ವಿವಿಧ ಯೋಜನೆ ಕಾಮಗಾರಿಗಳ ಉದ್ಘಾಟನೆ ಮತ್ತು 560 ಕೋಟಿ ರೂ. ವೆಚ್ಚದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಇತಿಹಹಾಸದಲ್ಲಿ ಕರ್ನಾಟಕವನ್ನು ಆಳಿ ಹೋಗಿರುವ ರಾಜರುಗಳ ಪೈಕಿ ಕೆಳದಿ ಶಿವಪ್ಪ ನಾಯಕ ಅವರ ಹೆಸರು ಅಜರಾಮರವಾಗಿದೆ. ಅವರು ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಾದರಿ ಆಡಳಿತ ನಡೆಸಿದ್ದರು. ಅಂತಹ ಮಹಾನ್ ಆಡಳಿತಗಾರರ ಹೆಸರನ್ನು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಇರಿಸುವುದು ಹೆಮ್ಮೆಯ ವಿಷಯ ಎಂದರು.
ಅಂತಾರಾಷ್ತ್ರೀಯ ಮಟ್ಟದ ಕೃಷಿ ವಿವಿ
ಸಾಗರ ತಾಲೂಕಿನ ಇರುವಕ್ಕಿಯಲ್ಲಿ 155 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಂತಾರಾಷ್ತ್ರೀಯ ಮಟ್ಟದ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಲಾಗಿದೆ. ವಿಶ್ವ ವಿದ್ಯಾಲಯಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ನೂತನ ಕ್ಯಾಂಪಸ್ ನಿರ್ಮಾಣ ಹಾಗೂ ವಿಶ್ವವಿದ್ಯಾಲಯದ ಉನ್ನತೀಕರಣವು ರಾಜ್ಯ ಸರ್ಕಾರದ ಒಂದು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಕೃಷಿ ಕ್ಷೇತ್ರದಲ್ಲಿ ಪದವಿ, ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ ಕೈಗೊಳ್ಳಲು ಆಸಕ್ತಿ ಹೊಂದಿರುವ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಮಂಗಳೂರು, ಕೊಡಗು, ಉಡುಪಿ ಜಿಲ್ಲೆಗಳ ವಿದ್ಯಾರ್ಥಿಗಳಿಗೆ, ಮುಖ್ಯವಾಗಿ ರಾಜ್ಯದ ರೈತರ ಮಕ್ಕಳಿಗೆ ವಿಶ್ವವಿದ್ಯಾಲಯದಿಂದ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಮಲೆನಾಡು, ಅರೆ ಮಲೆನಾಡು, ಬಯಲುಸೀಮೆ ಮತ್ತು ಕರಾವಳಿ ಪ್ರದೇಶಗಳಿಗೆ ವಿಶೇಷವಾದ ಹಾಗೂ ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ಶಾಸ್ತ್ರ ಅಧ್ಯಯನಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಒಳಗೊಂಡಿರುವ ಸಮಗ್ರ ವಿಶ್ವವಿದ್ಯಾಲಯವನ್ನು 2013ರಲ್ಲಿ ಪ್ರಾರಂಭಿಸಲಾಗಿತ್ತು. ಈ ವಿಶ್ವವಿದ್ಯಾಲಯವು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕನಸಿನ ಕೂಸಾಗಿದೆ. ವಿಶೇಷವೆಂದರೆ ಶಿವಮೊಗ್ಗ ಜಿಲ್ಲೆಯಲ್ಲಿ 2013ರಲ್ಲಿ ಈ ವಿಶ್ವವಿದ್ಯಾಲಯವನ್ನು ಹುಟ್ಟುಹಾಕಿದ್ದು ಸ್ವತಃ ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪನವರು. ಇಂದು ಇದೇ ವಿಶ್ವವಿದ್ಯಾಲಯದ ನೂತನ ಆವರಣವನ್ನು (ಕ್ಯಾಂಪಸ್) ಅವರೇ ತಮ್ಮ ಅಮೃತ ಹಸ್ತದಿಂದ ಉದ್ಘಾಟನೆ ಮಾಡುತ್ತಿದ್ದಾರೆ. ಇರುವಕ್ಕಿಯ ಕೃಷಿ ಮತ್ತು ತೋಟಗಾರಿಕೆ ವಿವಿಯು ರಾಜ್ಯದ ಅದರಲ್ಲಿಯೂ ವಿಶೇಷವಾಗಿ ಮಲೆನಾಡಿನ ರೈತರಿಗೆ ಒಂದು ವರದಾನವಾಗಿದೆ ಎಂದು ಅಭಿಪ್ರಾಯಪಟ್ಟರು.
ಕ್ಯಾಂಪಸ್ ಉನ್ನತೀಕರಣ
‘ಇರುವಕ್ಕಿಯಲ್ಲಿರುವ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ 787 ಎಕರೆ ಜಮೀನನ್ನು ನೀಡಿರುವ ರಾಜ್ಯ ಸರ್ಕಾರ, ವಿವಿ ಅಭಿವೃದ್ಧಿಗಾಗಿ 155 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. ಈಗಾಗಲೇ ಅಸ್ತಿತ್ವದಲ್ಲಿದ್ದ ವಿಶ್ವವಿದ್ಯಾಲಯವನ್ನು ಉನ್ನತೀಕರಿಸಿ ನೂತನ ಕ್ಯಾಂಪಸ್ ಅಭಿವೃದ್ಧಿಗೆ ಬಿಎಸ್‌ವೈ ನೇತೃತ್ವದ ಸರ್ಕಾರವು ಆದೇಶ ಹೊರಡಿಸಿತ್ತು. ಹಾಲಿ ವಿಶ್ವವಿದ್ಯಾಲಯಕ್ಕೆ ಸೇರಿರುವ 4 ಲಕ್ಷ 95 ಸಾವಿರ ಚದುರ ಅಡಿ ಪ್ರದೇಶದಲ್ಲಿ ಸರ್ಕಾರದ ಆದೇಶದ ಪ್ರಕಾರ, ಆಡಳಿತ ಭವನ, ಬೆಳೆ ಉತ್ಪಾದನೆ ಮತ್ತು ಬೆಳೆ ಸಂರಕ್ಷಣಾ ವಿಭಾಗ, ಬೆಳೆ ಅಭಿವೃದ್ಧಿ ಮತ್ತು ಜೈವಿಕ ತಂತ್ರಜ್ಞಾನ ವಿಭಾಗ, ಸಮಾಜ ಮತ್ತು ಮೂಲ ವಿಜ್ಞಾನಗಳ ವಿಭಾಗ, ತೋಟಗಾರಿಕೆ ಮತ್ತು ಅರಣ್ಯ ವಿಭಾಗ, ಗ್ರಂಥಾಲಯ, ಕೊಳಚೆ ನೀರು ಶುದ್ಧೀಕರಣ ಘಟಕ ಹಾಗೂ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ನಿಲಯಗಳನ್ನು (ಹಾಸ್ಟೆಲ್) ನೂತನವಾಗಿ ನಿರ್ಮಿಸಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಉಡುಪಿ, ಕೊಡಗು ಮತ್ತು ಮಂಗಳೂರು ಸೇರಿ ಒಟ್ಟು 7 ಜಿಲ್ಲೆಗಳು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರಲಿವೆ,’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾಹಿತಿ ನೀಡಿದರು.
ಸಮಗ್ರ ಕೃಷಿ ವಿಶ್ವವಿದ್ಯಾಲಯ
ಇದೊಂದು ಸಮಗ್ರ ಕೃಷಿ ವಿಶ್ವವಿದ್ಯಾಲಯವಾಗಿದ್ದು, ಇಲ್ಲಿ ಹಂತ ಹಂತವಾಗಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ವಿಭಾಗಗಳಲ್ಲಿ ಸ್ನಾತಕ, ಸ್ನಾತಕೋತ್ತರ ಮತ್ತು ಪಿಎಚ್.ಡಿ ಪದವಿಗಳನ್ನು ನೀಡಲು ಮೂಲ ಸಂಪನ್ಮೂಲಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ವಿಶ್ವವಿದ್ಯಾಲಯದ ಅಡಿಯಲ್ಲಿ 4 ಪದವಿ ಕಾಲೇಜುಗಳು, 2 ಡಿಪ್ಲೊಮಾ ಕಾಲೇಜುಗಳು, 13 ಸಂಶೋಧನಾ ಕೇಂದ್ರಗಳು, 4 ಕೃಷಿ ವಿಜ್ಞಾನ ಕೇಂದ್ರಗಳು ಹಾಗೂ 2 ವಿಸ್ತರಣಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ವಿಶ್ವವಿದ್ಯಾಲಯವು ಕೆಪಿಆರ್-1, ಕೆಕೆಪಿ-5, ಐಇಟಿ-21179, ಪ್ರಗತಿ, ಸಹ್ಯಾದ್ರಿ ಮೇಘ, ಸಹ್ಯಾದ್ರಿ ಪಂಚಮುಖಿ, ಸಹ್ಯಾದ್ರಿ ಕಾವೇರಿ ಎಂಬ ಭತ್ತದ ತಳಿಗಳು, ಮೈದಾನ ಸ್ಥಳೀಯ ಎಂಬ ಅಡಿಕೆ ತಳಿ ಮತ್ತು ಅಲಸಂದೆಯಲ್ಲಿ ಸಹ್ಯಾದ್ರಿ ಯುಕ್ತಿ ತಳಿಗಳನ್ನು ಅಭಿವೃದ್ಧಿ ಪಡಿಸಿದೆ. ವಿಶ್ವವಿದ್ಯಾಲಯದ ಪ್ರಾರಂಭದಿAದ 2019-20ರವರೆಗೆ 389 ಟನ್ ಗುಣಮಟ್ಟದ ಬೀಜಗಳನ್ನು ಉತ್ಪಾದಿಸಿ ಹಾಗೂ 39 ಲಕ್ಷ ಸಸಿಗಳನ್ನು ಬೆಳೆಸಿ ರೈತರಿಗೆ ವಿತರಿಸಲಾಗಿದೆ.
Share your comments