ಕೃಷಿಗೆ ಸಂಬಂಧಿಸಿದ ಪ್ರಮುಖ ಸುದ್ದಿಗಳನ್ನು ರೈತರಿಗೆ ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಅಗ್ರಿ ನ್ಯೂಸ್ ಪರಿಚಯಿಸಿದೆ. ಇಂದಿನ ಪ್ರಮುಖ ಸುದ್ದಿಗಳು ಹೀಗಿವೆ.
1. ಪಿ.ಎಂ ಕಿಸಾನ್ ಅಪ್ಡೇಟ್: 13ನೇ ಕಂತಿಗಾಗಿ ಕಾಯುತ್ತಿರುವ ಕೋಟಿಗಟ್ಟಲೆ ರೈತರಿಗೆ ಮಹತ್ವದ ಮಾಹಿತಿ
2. ನಂದಿನಿ ಹಾಲು ತನ್ನ ಪ್ರತ್ಯೇಕ ಅಸ್ತಿತ್ವ ಕಾಯ್ದುಕೊಳ್ಳಲಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
3.ನಂದಿನಿ ಬ್ರ್ಯಾಂಡ್ ಅಸ್ತಿತ್ವಕ್ಕೆ ಧಕ್ಕೆ ಇಲ್ಲ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ
4. ಕನ್ನಡ ಮಸೂದೆ ಸುಗ್ರೀವಾಜ್ಞೆಗೆ ಕ್ರಮ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
5. ಏಳು ದಿನದಲ್ಲಿ ಮದ್ಯ ಮಾರಾಟದಿಂದ 657 ಕೋಟಿ ಸಂಗ್ರಹ!
6. ಸಣ್ಣ ಉಳಿತಾಯ ಯೋಜನೆ ಮೇಲಿನ ಬಡ್ಡಿದರ ಹೆಚ್ಚಳ
7. ಚಿಕ್ಕಮಗಳೂರು ಹಬ್ಬ: ಜನವರಿ 18ರಿಂದ ಕೃಷಿ ಮೇಳ ಆಯೋಜನೆ
8. ರಸ್ತೆಗುಂಡಿಯಿಂದ ರಿಷಬ್ ಪಂತ್ ಕಾರು ಅಪಘಾತ: ಉತ್ತರಖಂಡ ಸಿ.ಎಂ ಹೇಳಿಕೆ
9. ಅಂಗಳದಲ್ಲಿ ಹಾಕಿದ್ದ ಅಡಿಕೆ ಕಳುವು: ಆರೋಪಿ ಸೆರೆ
10. ಧನುಕಾ ಅಗ್ರಿಟೆಕ್ ಲಿಮಿಟೆಡ್ನ ಜನರಲ್ ಮ್ಯಾನೇಜರ್ ಆಗಿ ಸುಬೋಧ್ ಗುಪ್ತಾ
PM Kisan| ಪಿ.ಎಂ ಕಿಸಾನ್ ಸಾವಿರಾರು ರೈತರ ಕೆವೈಸಿ ಬಾಕಿ: 13ನೇ ಕಂತು ಡೌಟ್!
----------------
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮುಂದಿನ ಕಂತು ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ.ಆದರೆ, ನಿಖರವಾದ ದಿನಾಂಕ ಘೋಷಣೆ ಆಗಿಲ್ಲ. ಈ ತಿಂಗಳು ಅಂದರೆ ಜನವರಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 12ನೇ ಕಂತನ್ನು 17ನೇ ಅಕ್ಟೋಬರ್ 2022 ರಂದು ಬಿಡುಗಡೆ ಮಾಡಿದ್ದರು. ಈಗ ರೈತರು ಈ ಯೋಜನೆಯ 13ನೇ ಕಂತಿಗಾಗಿ ಕಾಯುತ್ತಿದ್ದಾರೆ. ಇನ್ನೂ ಹೆಸರನ್ನು ನೋಂದಾಯಿಸಿಕೊಳ್ಳದ ರೈತರು ಈಗಲೇ ನೋಂದಣಿ ಮಾಡಿಕೊಳ್ಳಬೇಕು. ಇದರಿಂದ ಅವರಿಗೆ ಮುಂದಿನ ಕಂತಿನ ಎರಡು ಸಾವಿರ ರೂಪಾಯಿ ಪಡೆಯಬಹುದಾಗಿದೆ. ಪಿ.ಎಂ ಕಿಸಾನ್‌ನ ಫಲಾನುಭವಿಗಳು ಈ ಬಾರಿ ಹೆಚ್ಚಿನ ಮೊತ್ತವನ್ನು ಪಡೆಯಬಹುದು ಎಂದು ಕೆಲವು ಮಾಧ್ಯಮ ವರದಿಗಳು ಹೇಳಿವೆ. ಸಾಂಕ್ರಾಮಿಕ ರೋಗದ ನಂತರ, ಈ ಯೋಜನೆಯಡಿ ನೀಡುವ ಮೊತ್ತವನ್ನು 6 ಸಾವಿರದಿಂದ ವರ್ಷಕ್ಕೆ 10 ಸಾವಿರಕ್ಕೆ ಹೆಚ್ಚಿಸುವಂತೆ ರೈತರು ಸರ್ಕಾರಕ್ಕೆ ಮನವಿ ಮಾಡಿದ್ದರು.
---------------
---------------
2. ನಂದಿನಿ ಹಾಲು ತನ್ನ ಪ್ರತ್ಯೇಕ ಅಸ್ತಿತ್ವವನ್ನು ಸದಾ ಕಾಯ್ದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ನಂದಿನಿಯನ್ನು ಅಮುಲ್‌ನೊಂದಿಗೆ ವಿಲೀನ ಮಾಡುತ್ತಾರೆ ಎನ್ನುವುದು ತಪ್ಪು ಕಲ್ಪನೆ. ಯಾರೂ ಊಹೆ ಮಾಡಿ ಟೀಕೆ ಮಾಡಬಾರದು. ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಮಾತನಾಡಿರುವುದು ಸ್ಪಷ್ಟವಾಗಿದೆ. ಒಬ್ಬರಿಗೊಬ್ಬರು ಸಹಕಾರದಿಂದ ಮುಂದುವರಿಯಬೇಕು ಎಂದು ಅವರು ಹೇಳಿದ್ದಾರೆ. ನಂದಿನಿ ಮತ್ತು ಅಮುಲ್ ತಾಂತ್ರಿಕವಾಗಿ, ಮಾರುಕಟ್ಟೆಯಲ್ಲಿ ಸಹಕಾರ ಮಾಡಬೇಕು. ಇವೆರಡೂ ದೊಡ್ಡ ಸಂಸ್ಥೆಗಳು. ಪೂರಕವಾಗಿ ಕೆಲಸ ಮಾಡಬೇಕು ಎಂದಿದ್ದಾರೆ. ಅದರರ್ಥ ವಿಲೀನಗೊಳಿಸುವುದು ಎಂದಲ್ಲ. ನಂದಿನಿ ಅಸ್ತಿತ್ವ ನೂರಾರು ವರ್ಷ ಶಾಶ್ವತವಾಗಿ ಇರಲಿದೆ. ಯಾವುದೂ ಸಮಸ್ಯೆಯಿಲ್ಲ. ಕೆಲವು ವಲಯಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದರೆ ಲಾಭವಿದೆ. ನಂದಿನಿ ಅಥವಾ ಅಮುಲ್ ತಾಂತ್ರಿಕವಾಗಿ ಮುಂದಿದ್ದರೆ ವಿನಿಯಮ ಮಾಡಿಕೊಳ್ಳಬಹುದು. ಆಡಳಿತಾತ್ಮಕ ಕ್ರಮಗಳನ್ನು ವಿನಿಮಯ ಮಾಡಿಕೊಳ್ಳಿ ಎಂದಷ್ಟೇ ಅವರು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
---------------
3. ಅಮುಲ್ ಮತ್ತು ನಂದಿನಿ ಒಂದಾದರೆ, ಎರಡೂ ಬ್ರ್ಯಾಂಡ್ ಮೌಲ್ಯ ಹೆಚ್ಚಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ. ಆದರೆ, ಅಮುಲ್‌ನಲ್ಲಿ ನಂದಿನಿ ವಿಲೀನ ಮಾಡುವುದಾಗಿ ಹೇಳಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ನಂದಿನಿ ಹಾಲಿನ ಅಸ್ತಿತ್ವಕ್ಕೆ ಯಾವುದೇ ಧಕ್ಕೆ ಆಗುವುದಿಲ್ಲ. ಶಾ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದರು.
----------------
Siddaramaiah| ರಾಜ್ಯದಲ್ಲಿ ಎಪಿಎಂಸಿ ಕಾಯ್ದೆ ಹಿಂಪಯಲು ಸಿದ್ದರಾಮಯ್ಯ ಆಗ್ರಹ | Apmc
----------------
4. ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ-2022 ಬಗ್ಗೆ ಚರ್ಚೆ ಮಾಡಲು ಸಾಧ್ಯವಾಗದೆ ಇರುವುದರಿಂದ ಸುಗ್ರೀವಾಜ್ಞೆಯ ಮೂಲಕ ಈ ಮಸೂದೆಯನ್ನು ಕಾನೂನು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಈ ಬಾರಿಯ ಅಧಿವೇಶನದಲ್ಲಿ ರಾಜ್ಯದ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆಗಳು ನಡೆದಿವೆ. ಕನ್ನಡ ಮಸೂದೆಯ ಚರ್ಚೆ ಸಾಧ್ಯವಾಗಲಿಲ್ಲ ಎಂದಿದ್ದಾರೆ. ಅಲ್ಲದೇ ಸಾಹಿತ್ಯ ಸಮ್ಮೇಳನವು ಕನ್ನಡದ ಹಾಗೂ ಕನ್ನಡಿಗರ ಅಸ್ಮಿತೆಯ ಹಬ್ಬವಾಗಬೇಕು. ಈ ಸಂಬಂಧ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರಾಜ್ಯ ಸರ್ಕಾರ ಅವಿರತವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
---------------
5. ರಾಜ್ಯದಲ್ಲಿ ಹೊಸ ವರ್ಷದ ಹಿಂದಿನ ದಿನ ಹಾಗೂ ವರ್ಷಾಂತ್ಯಂದ ಕಡೆಯ ಒಂದು ವಾರದಲ್ಲಿ ಭಾರೀ ಪ್ರಮಾಣದಲ್ಲಿ ಮದ್ಯ ಮಾರಾಟ ಆಗಿರುವುದು ವರದಿ ಆಗಿದೆ. ಡಿ.23ರಿಂದ ಡಿ.31ರ ಅವಧಿಯಲ್ಲಿ ಮದ್ಯ ಮಾರಾಟದಿಂದ ರಾಜ್ಯ ಸರ್ಕಾರದ ಖಜಾನೆಗೆ ಬರೋಬ್ಬರಿ 657 ಕೋಟಿ ತೆರಿಗೆ ಸಂಗ್ರಹವಾಗಿದೆ. 2022ರ ಡಿಸೆಂಬರ್‌ನ ಕೊನೆಯ ಏಳು ದಿನಗಳಲ್ಲಿ 1,262 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮದ್ಯ ಮಾರಾಟದಲ್ಲಿ ಶೇಕಡ 15 ರಷ್ಟು ಹೆಚ್ಚಳವಾಗಿದೆ. ಮದ್ಯ ಮಾರಾಟ ಬ್ರ್ಯಾಂಡ್‌ಗಳಲ್ಲಿ ಈ ಬಾರಿಯೂ ಬಿಯರ್ ಗಣನೀಯ ಪ್ರಮಾಣದಲ್ಲಿ ಮಾರಾಟವಾಗಿದೆ.
---------------
Aadhaar Card| ಆಧಾರ್ ಕಾರ್ಡ್‌ನೊಂದಿಗೆ ಪಾನ್‌ಕಾರ್ಡ್ ಜೋಡಣೆ ಕಡ್ಡಾಯ: ಮತ್ತೊಮ್ಮೆ ಗಡುವು! Pan Card
---------------
6. ಸಣ್ಣ ಉಳಿತಾಯ ಯೋಜನೆಗಳಾದ ಹಿರಿಯ ನಾಗರಿಕರ ಉಳಿತಾಯ ಯೋಜನೆ ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಯೋಜನೆಯ ಬಡ್ಡಿ ದರವನ್ನು ಹೊಸ ವರ್ಷದಿಂದ ಹೆಚ್ಚಿಸಲಾಗಿದೆ. ಹೀಗಾಗಿ, ಫಲಾನುಭವಿಗಳಿಗೆ ಹೆಚ್ಚುವರಿ ಆದಾಯ ಸಿಗಲಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ, ಕಿಸಾನ್ ವಿಕಾಸ್ ಬಾಂಡ್, ಉಳಿತಾಯ ಯೋಜನೆ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳಿಗೆ ತ್ರೈಮಾಸಿಕವಾಗಿ ಬಡ್ಡಿ ದರವನ್ನು ಪರಿಷ್ಕರಿಸಲಾಗುತ್ತದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಸೇರಿದಂತೆ ಯೋಜನೆಗಳ ಬಡ್ಡಿ ದರವನ್ನು ಶೇ.1.1ರಷ್ಟು ಹೆಚ್ಚಿಸಲಾಗಿದೆ. ಈ ಬಡ್ಡಿದರ ಏರಿಕೆ ಇಂದಿನಿಂದಲೇ ಜಾರಿಗೆ ಬಂದಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.
---------------
7. ಚಿಕ್ಕಮಗಳೂರು ಹಬ್ಬ 2023ರ ಅಂಗವಾಗಿ ಚಿಕ್ಕಮಗಳೂರು ನಗರದ ಎಐಟಿ ಕಾಲೇಜು ಆವರಣದಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತದ ವತಿಯಿಂದ ಜನವರಿ 18ರಿಂದ ಜನವರಿ 22ರ ವರೆಗೆ ರಾಜ್ಯ ಮಟ್ಟದ ಬೃಹತ್ ಕೃಷಿ ಮೇಳ ಮತ್ತು ವಸ್ತು ಪ್ರದರ್ಶನ ನಡೆಯಲಿದೆ. ಕೃಷಿ ಮೇಳ ಮತ್ತು ವಸ್ತು ಪುದರ್ಶನವು ಚಿಕ್ಕಮಗಳೂರು ಹಬ್ಬದ ಮುಖ್ಯ ಆಕರ್ಷಣೀಯ ಕಾರ್ಯಕ್ರಮವಾಗಿದ್ದು, ಮಳಿಗೆಗಳ ಮೂಲಕ ವೈಜ್ಞಾನಿಕ ಮಾಹಿತಿ, ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ. ಇದಕ್ಕಾಗಿ ಸುಸಜ್ಜಿತವಾದ ಜರ್ಮನ್ ಟೆಂಟ್ ಒಳಗೆ 250ಕ್ಕೂ ಹೆಚ್ಚು ಹೈ-ಟೆಕ್ ವಸ್ತು ಪ್ರದರ್ಶನ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. 5 ದಿನಗಳವರೆಗೆ ಜರುಗಲಿರುವ ಈ ಕೃಷಿ ಮೇಳದಲ್ಲಿ ಲಕ್ಷಾಂತರ ಜನರನ್ನು ಸೆಳೆಯಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಆಸಕ್ತರು ವಸ್ತು ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲು ಇಚ್ಛಿಸುವ ಕೃಷಿ ಮತ್ತು ಕೃಷಿ ಸಂಬಂಧಿತ ಎಲ್ಲಾ ಸಂಸ್ಥೆಗಳು, ಸ್ವಸಹಾಯ ಸಂಘಗಳು, ಸಹಕಾರ ಸಂಘಗಳು, ವಾಣಿಜ್ಯೋದ್ಯಮಿಗಳು ಜನವರಿ 7ರ ಒಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
-----------
8. ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಭಾರತದ ಕ್ರಿಕೆಟಿಗ ರಿಷಬ್ ಪಂತ್ ಅವರ ಆರೋಗ್ಯ ಸುಧಾರಿಸುತ್ತಿದೆ. ಶುಕ್ರವಾರ ರಿಷಬ್ ಪಂತ್ ಅವರು ದೆಹಲಿಯಿಂದ ರೂರ್ಕಿಗೆ ಪ್ರಯಾಣಿಸುತ್ತಿದ್ದಾಗ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ನಂತರ ಕಾರಿಗೆ ಬೆಂಕಿ ಹೊತ್ತಿಕೊಂಡಿತು. ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಪಂತ್ ಅವರ ಆರೋಗ್ಯ ವಿಚಾರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆಗುಂಡಿಯಿಂದಾಗಿ ಅಪಘಾತ ಸಂಭವಿಸಿದೆ. ಪಂತ್ ಅವರನ್ನು ರಕ್ಷಿಸಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ. ಪ್ರಾಥಮಿಕವಾಗಿ ವರದಿಯಾದಂತೆ ರಿಷಬ್ ಪಂತ್ ಅವರು ನಿದ್ರೆಗೆ ಜಾರಿದ್ದರಿಂದಲೇ ಅಪಘಾತ ಸಂಭವಿಸಿದೆ ಎನ್ನಲಾಗಿತ್ತು.
---------------
9. ಅಂಗಳದಲ್ಲಿ ಹಾಕಿದ್ದ ಅಡಿಕೆ ಕಳುವು ಮಾಡಿದ ಆರೋಪದ ಮೇಲೆ ಬಂಟ್ವಾಳದ ಬಾಳ್ತಿಲ ಗ್ರಾಮದ ಕಶೆಕೋಡಿ ನಿವಾಸಿ ಮಂಜುನಾಥ ನಾಗರಾಜ್ ಭೋವಿ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಈಚೆಗೆ ಮಂಗಳೂರಿನ ಬೋಳಂಗಡಿ ಗ್ರಾಮದಲ್ಲಿ ತೋಟದ ಸಮೀಪದ ಅಂಗಳದಲ್ಲಿ ಹಾಕಿದ್ದ ಅಡಿಕೆ ಕಳುವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೇ ಆರೋಪಿಯಿಂದ ಕಳುವು ಮಾಡಿದ್ದ ಅಡಿಕೆ, ಸ್ಕೂಟರ್ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಅಡಿಕೆ ಕಳುವಾಗಿರುವ ಕುರಿತು ಅಡಿಕೆ ತೋಟದ ಮಾಲೀಕ ಐವನ್ ತೋರಸ್ ದೂರು ನೀಡಿದ್ದರು. ಒಣಗಲು ಹಾಕಿದ್ದ ಸುಮಾರು 120 ಕೆ.ಜಿ ಅಡಿಕೆ ಕಳುವಾಗಿದೆ ಎಂದು ದೂರಲಾಗಿತ್ತು. ಬಂಧಿತ ಆರೋಪಿಯಿಂದ ಪೊಲೀಸರು ಕಳವು ಮಾಡಿದ್ದ 105 ಕೆ.ಜಿ. ಅಡಿಕೆ ವಶಪಡಿಸಿಕೊಳ್ಳಲಾಗಿದೆ.
---------------
10. ಸುಬೋಧ್ ಗುಪ್ತಾ ಅವರು ಧನುಕಾ ಅಗ್ರಿಟೆಕ್ ಲಿಮಿಟೆಡ್ನ ಮಾರ್ಕೆಟಿಂಗ್ ವಿಭಾಗದ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿ ನೇಮಕವಾಗಿದ್ದಾರೆ. ಹೊಸ ಜವಾಬ್ದಾರಿಯ ಕುರಿತು ಅವರು ಟ್ವೀಟ್ ಮಾಡಿದ್ದು ಸಂತಸ ಹಂಚಿಕೊಂಡಿದ್ದಾರೆ.
---------------
Share your comments