1. ಸುದ್ದಿಗಳು

ರಾಜ್ಯದಲ್ಲಿ ಮಳೆ-ಚಳಿ: ಹವಾಮಾನ ಇಲಾಖೆ ವರದಿ

Kalmesh T
Kalmesh T

1 . ರಾಜ್ಯದಲ್ಲಿ ಮಳೆ-ಚಳಿ: ಹವಾಮಾನ ಇಲಾಖೆ ವರದಿ

2 . ನೇಕಾರರ ಉತ್ಪನ್ನಗಳನ್ನು ಅಂತರರಾಷ್ಟ್ರೀಯ ಬ್ರ್ಯಾಂಡಿಂಗ್ ಮಾಡಲು ಕ್ರಮ : ಸಿಎಂ

3 . LPG ಸಿಲಿಂಡರ್‌ ಬಳಕೆದಾರರಿಗೆ ಸಿಹಿಸುದ್ದಿ: 500 ರೂಪಾಯಿಗೆ ಸಿಲಿಂಡರ್‌!

4 . ಬೆಂಗಳೂರಿನ ಕೆರೆಗಳಿಗೆ ಈಗ ಕಲುಷಿತ ಗ್ರಾನೈಟ್‌ ನೀರು!

5 . 11.5 ಕೋಟಿ ರೈತರಿಗೆ ಪಿಎಂ ಕಿಸಾನ್‌ ಮಹತ್ವದ ಮಾಹಿತಿ: ನೀವಿದನ್ನು ತಿಳಿಯಲೆಬೇಕು!

6 . 50 ಎಕರೆ ಕಬ್ಬಿನ ಗದ್ದೆ ಬೆಂಕಿಗಾಹುತಿ: ಕಣ್ಣಿರಾದ ರೈತ!

7 . ವಿದ್ಯುತ್‌ ತಂತಿ ತಗುಲಿ 5 ವರ್ಷದಲ್ಲಿ 43 ಆನೆಗಳ ಸಾವು!

8 . ಸಂಸತ್ತಿನಲ್ಲಿ "ರಾಗಿ ಆಹಾರ ಉತ್ಸವ": ಕರ್ನಾಟಕದ ಪ್ರಮುಖ ಆಹಾರ ಅನಾವರಣ!

9 . ಹುಬ್ಬಳ್ಳಿಯಲ್ಲಿ "ಸಾಂಬಾರ ಪದಾರ್ಥಗಳ ಖರೀದಿದಾರರ ಮತ್ತು ಮಾರಾಟಗಾರರ ಸಭೆ

10 . ಪ್ರಕೃತಿ ಮೇಲಿನ ದುಷ್ಪರಿಣಾಮ ಸರಿದೂಗಿಸಲು "ಇಕೋ ಬಜೆಟ್‌": ಸಿಎಂ ಬೊಮ್ಮಾಯಿ

1-One

ಪ್ರಕೃತಿಯ ಮೇಲಿನ ದುಷ್ಪರಿಣಾಮವನ್ನ ಸರಿದೂಗಿಸಲು 100 ಕೋಟಿ ಮೊತ್ತದ "ಇಕೋ ಬಜೆಟ್‌ನ್ನು ಸರ್ಕಾರ ರೂಪಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ರಾಷ್ಡ್ರೀಯ ಜಿಯಾಗ್ರಾಫರ್ಸ್ ಅಸೋಸಿಯೇಷನ್ ಆಪ್ ಇಂಡಿಯಾ" ವತಿಯಿಂದ ಏರ್ಪಡಿಸಿದ್ದ 44 ನೇ ಇಂಡಿಯನ್ ಜಿಯಾಗ್ರಫಿ ಕಾಂಗ್ರೆಸ್ ನ 3 ದಿನಗಳ ಸಮ್ಮೇಳವನ್ನು ಉದ್ಘಾಟಿಸಿ ಅವರು  ಮಾತನಾಡಿದರು.

ಜೈವಿಕತೆ  ಮತ್ತು ಆರ್ಥಿಕತೆ ಸಮಾನಂತರವಾಗಿ ಹೋಗುತ್ತದೆ. ಜೈವಿಕತೆಗಿಂತ ಆರ್ಥಿಕತೆ ವೇಗವಾಗಿ ಹೋಗುತ್ತಿದೆ. ಈಗ ಜೈವಿಕ ಆರ್ಥಿಕತೆ ಬರಬೇಕಿದೆ. ಪುನರ್ಬಳಕೆ ಹಾಗೂ ಮರುಬಳಕೆಯ ಮಂತ್ರವನ್ನು ಪಾಲಿಸಬೇಕಿದೆ ಎಂದರು. 

ಕರ್ನಾಟಕ ಅತ್ಯಂತ ಪ್ರಗತಿಪರ ರಾಜ್ಯ. ಹವಾಮಾನ ವೈಪರಿತ್ಯ, ಸುಸ್ಥಿರ ಅಭಿವೃದ್ಧಿಯ ಕುರಿತು ಚರ್ಚೆಯಾಗುತ್ತಿದ್ದು, ರಾಜ್ಯದ ಅಭಿವೃದ್ದಿಗೆ ಪೂರಕವಾಗುವ ಸಲಹೆಗಳನ್ನು ಇಲ್ಲಿ ನೀಡಬೇಕು. ಸಮ್ಮೇಳನಗಳು ಕೇವಲ ಬಹಳ ದಿನಗಳ ನಂತರ ಸೇರುವ ಸಭೆಗಳಾಗಬಾರದು. 

ಹವಾಮಾನ ವೈಪರಿತ್ಯದ ನಿಯಂತ್ರಣ ಮಾಡುವ ಬಗ್ಗೆ  ಚರ್ಚೆಯಾಗಬೇಕು. ಹವಾಮಾನ ವೈಪರಿತ್ಯದಿಂದಾಗಿ ಬರಪ್ರದೇಶಗಳು ಮರಳುಗಾಡಾಗುತ್ತಿವೆ. ನೀರಿನ ಸಂಪನ್ಮೂಲ ಕಡಿಮೆಯಾಗುವ ಸಾಧ್ಯತೆಯಿದೆ. ಆದ್ದರಿಂದ ನೀರಿನ ನಿರ್ವಹಣೆ ಬಹಳ ಮಹತ್ವದ್ದಾಗಿದೆ ಎಂದರು.

2-Two

ಇಳಕಲ್ ಸೀರೆ ಸೇರಿದಂತೆ ನೇಕಾರರ ಉತ್ಪನ್ನಗಳಿಗೆ ಅಂತರಾಷ್ಟ್ರೀಯ ಬ್ರ್ಯಾಂಡಿಂಗ್ ದೊರೆತಾಗ ಉತ್ಪಾದನೆ ಹಾಗೂ ಆರ್ಥಿಕತೆ ಹೆಚ್ಚಾಗುತ್ತದೆ.ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮುಂಬರುವ ದಿನಗಳಲ್ಲಿ ಜವಳಿ ನೀತಿಯಲ್ಲಿ ಸಾಕಷ್ಟು ಬದಲಾವಣೆ ತರಲಾಗುವುದು. ಅತಿಹೆಚ್ಚು ಜವಳಿ ರಫ್ತು ಮಾಡುವ ರಾಜ್ಯ ಕರ್ನಾಟಕವಾಗಿದೆ. ಇಳಕಲ್ ಸೇರೆ ಸಾಕಷ್ಟು ಪ್ರಸಿದ್ದಿ ಹೊಂದಿದೆ.

ಈ ಸೀರೆಗಳು ರಾಷ್ಟ್ರಮಟ್ಟಕ್ಕೆ ಬ್ರ್ಯಾಂಡಿಂಗ್ ಆಗಬೇಕು. ಅದಕ್ಕಾಗಿ ಅಮೇಜಾನ್ ನಂತಹ ಆನ್ ಲೈನ್ ವೇದಿಕೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದರು. ನೇಕಾರ‌ರಿಂದ ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.

3-Three

ಗೃಹಬಳಕೆಯ ಅಡುಗೆ ಸಿಲಿಂಡರ್‌ ಕೇವಲ 500 ರೂಪಾಯಿಗೆ ನೀಡುವುದಾಗಿ  ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್‌ ತಿಳಿಸಿದ್ದಾರೆ. 500ರೂಪಾಯಿ ಮೊತ್ತದಲ್ಲಿ ಒಟ್ಟು 12 ಸಿಲಿಂಡರ್‌ಗಳನ್ನು ಜನರಿಗೆ ನೀಡಲಾಗುವುದು.

ಇದೀಗ ಒಂದು ಸಿಲಿಂಡರ್‌ನ ದರ 1050 ರೂಪಾಯಿ ಇದೆ. ಮುಂದಿನ ದಿನಗಳಲ್ಲಿ ಕೇವಲ 500ಕ್ಕೆ ನೀಡಲಿದ್ದೇವೆ. ಈ ಯೋಜನೆ ಏಪ್ರಿಲ್‌ ತಿಂಗಳಿಂದ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.

ಫೆಬ್ರವರಿಯಲ್ಲಿ ಮಂಡಿಸುವ ಬಜೆಟ್‌ನಲ್ಲಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಜನಸ್ನೇಹಿ ಕಿಚನ್‌ ಕಿಟ್‌ ವಿತರಿಸುವ ಯೋಜನೆಯನ್ನು ಘೋಷಣೆ ಮಾಡಿ ಅದನ್ನು ಜಾರಿ ಮಾಡುವುದಾಗಿ  ತಿಳಿಸಿದ್ದಾರೆ.

4-Four

ಬೆಂಗಳೂರಿನ ಹೊರವಲಯದ ಕೆರೆಗಳಿಗೆ ಇದೀಗ ಗ್ರಾನೈಟ್ ಕೆಸರು ಸೇರಿದಂತೆ ಹಲವು ರೀತಿಯ ಕೊಳಚೆ ನೀರು ಹರಿಯುತ್ತಿದ್ದು, ಎಚ್ಚರಿಕೆ ವಹಿಸುವಂತೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ನಿರ್ದೇಶನ ನೀಡಿದೆ.

ಗ್ರಾನೈಟ್‌, ಮಾರ್ಬಲ್‌ ವಹಿವಾಟಿನಿಂದ ಸೃಷ್ಟಿಯಾಗುತ್ತಿರುವ ಮಾಲಿನ್ಯ ಕೆರೆಗಳಿಗೆ ಹಾನಿ ಉಂಟುಮಾಡುತ್ತಿದೆ. ಗ್ರಾನೈಟ್‌ ಕತ್ತರಿಸುವ ವೇಳೆ ಹೊರಬರುವ ಕೆಸರು, ಕೆರೆಗಳ ಮಾಲಿನ್ಯಕ್ಕೆ ಕಾರಣವಾಗಿದೆ.

ಇದನ್ನು ತಡೆಯುವಂತೆ ಸಣ್ಣ ನೀರಾವರಿ ಇಲಾಖೆ, ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

5-Five

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 11.5 ಕೋಟಿ ರೈತರಿಗೆ 2.24 ಲಕ್ಷ ಕೋಟಿ ವಿತರಣೆ ಮಾಡಲಾಗಿದೆ ಎಂದು ಸಚಿವ ಕೈಲಾಶ್ ಚೌಧರಿ ತಿಳಿಸಿದ್ದಾರೆ.

ರಾಜ್ಯಸಭೆಯಲ್ಲಿ ಪೂರಕ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 

ಕೃಷಿ ಬಜೆಟ್ 2013ರಲ್ಲಿ 23,000 ಕೋಟಿ ರೂಪಾಯಿಗಳಿಂದ ಈ ವರ್ಷ 1 ಲಕ್ಷ 32 ಸಾವಿರ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇದರಲ್ಲಿ ಸುಮಾರು 65,000 ಕೋಟಿ ರೂಪಾಯಿಯನ್ನ ನೇರವಾಗಿ DBT ಮೂಲಕ ರೈತರಿಗೆ ಪಾವತಿಸಲಾಗಿದೆ.

ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡಲು FPO ರಚನೆಗೆ ಸರ್ಕಾರ ನೆರವು ನೀಡಿದೆ. ಈ ಯೋಜನೆಯಲ್ಲಿ ಭಾಗವಹಿಸುವ ರೈತರು ತಂತ್ರಜ್ಞಾನವನ್ನು ಪಡೆಯುತ್ತಾರೆ. ಇದು ರೈತರಿಗೆ ವೆಚ್ಚವನ್ನು ಕಡಿಮೆ ಮಾಡಿ ಸರಳವಾಗಿ ವ್ಯವಹಾರ ನಡೆಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

6-Six

ಬೆಳೆದು ನಿಂತ ಕಬ್ಬಿನ ಗದ್ದೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ರೈತರ ಅಪಾರ ಬೆಳೆ ನಷ್ಟವಾಗಿದೆ. ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಉತ್ತನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಸುಮಾರು 40 ರಿಂದ 50 ಎಕರೆಯಲ್ಲಿ ಬೆಳೆದಿದ್ದು ಕಬ್ಬು ಆಕಸ್ಮಿಕವಾಗಿ ತಗುಲಿದ ಬೆಂಕಿಗೆ ಸುಟ್ಟು ಭಸ್ಮವಾಗಿದೆ.

ಕಟಾವಿನ ಹಂತದಲ್ಲಿದ್ದ ಕಬ್ಬು ಸುಟ್ಟು ಭಸ್ಮವಾದ ಕಾರಣ ರೈತರಿಗೆ ಅಪಾರ ನಷ್ಟವಾಗಿದೆ. ಇನ್ನು ಕೇವಲ ಒಂದೇ  ವಾರದಲ್ಲಿ ಕಟಾವು ಮಾಡಲು ರೈತರು ಸಿದ್ದತೆ ನಡೆಸಿದ್ದರು. ಅಷ್ಟರಲ್ಲಿ ಈ ಘಟನೆ ನಡೆದಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರತಿ ಎಕರೆಗೆ ಸುಮಾರು 20,000 ಖರ್ಚು ಮಾಡಿ ಕಬ್ಬು ಬೆಳೆಯಲಾಗಿತ್ತು. ಬೆಳೆದು ನಿಂತ ಕಬ್ಬು ಬೆಂಕಿಯಲ್ಲಿ ಸುಡುತ್ತಿರುವುದನ್ನು ಕಂಡು ರೈತರು ಮಮ್ಮಲ ಮರುಗಿದ್ದಾರೆ.

 

 

7-Seven

ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಲ್ಲಿ ವಿದ್ಯುತ್‌ ತಂತಿ ತಗುಲಿ 43 ಆನೆಗಳು ಸಾವನ್ನಪ್ಪಿವೆ. ಹೌದು ಈ ವಿಷಯವನ್ನು ಕೇಂದ್ರ ಅರಣ್ಯ, ಪರಿಸರ ಹಾಗೂ ಹವಾಮಾನ ಬದಲಾವಣೆಯ ರಾಜ್ಯ ಸಚಿವ ಅಶ್ವಿನ್‌ ಕುಮಾರ್ ಚೌಬೆ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ 43 ಆನೆಗಳು ಮೃತಪಟ್ಟಿವೆ. ಅಲ್ಲದೇ ರೈಲು ಡಿಕ್ಕಿಯಿಂದಾಗಿ ಐದು  ಆನೆಗಳು ಮೃತಪಟ್ಟಿವೆ. ವಿಷಪ್ರಾಶನದಿಂದಲೂ ಒಂದು ಆನೆ ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.

 ಆನೆ ಯೋಜನೆಯಡಿ ರಾಜ್ಯ ಸರ್ಕಾರಗಳಿಗೆ ಆರ್ಥಿಕ ಹಾಗೂ ತಾಂತ್ರಿಕ ನೆರವನ್ನು ಕೇಂದ್ರ ಸರ್ಕಾರವು ನೀಡುತ್ತಿದೆ. ಅಲ್ಲದೇ ಆನೆಗಳು ಹಾಗೂ ಅವುಗಳ ವಾಸಸ್ಥಾನ ಸಂರಕ್ಷಣೆಗೂ ಕೇಂದ್ರ ಸರ್ಕಾರವು ಮುಂದಾಗಿದೆ.

ವಿದ್ಯುತ್‌ ತಗುಲಿ ಆನೆಗಳು ಮೃತಪಡುವುದನ್ನು ತಪ್ಪಿಸಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರಗಳು ಹಾಗೂ ವಿದ್ಯುತ್ ಪ್ರಸರಣಾ ನಿಗಮಗಳಿಗೆ ಆಗಾಗ ನಿರ್ದೇಶನ ನೀಡಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು,  ಮಾನವ–ಪ್ರಾಣಿ ಸಂಘರ್ಷ ತಡೆಗಟ್ಟಲು ಕರ್ನಾಟಕ ಸರ್ಕಾರ ತಜ್ಞರ ನೇತೃತ್ವದ ಕಾರ್ಯಪಡೆ ರಚಿಸಿದೆ.

ಅಲ್ಲದೇ ಮಾನವ–ಪ್ರಾಣಿ ಸಂಷರ್ಘ ತಡೆಯುವ ಉದ್ದೇಶದಿಂದ ರಾಜ್ಯ ಮಟ್ಟದಲ್ಲಿ ಸಮನ್ವಯ ಸಮಿತಿ ರಚಿಸುವಂತೆ ಆಯಾ ರಾಜ್ಯ ಸರ್ಕಾರಗಳಿಗೆ ಈ ವರ್ಷದ ಜೂನ್‌ನಲ್ಲಿ ಸೂಚಿಸಲಾಗಿತ್ತು. 

ಆನೆ ಮತ್ತು ಮಾನವ ಸಂಘರ್ಷ ತಡೆಗಟ್ಟಲು ವೈಜ್ಞಾನಿಕ ಮಾರ್ಗಗಳನ್ನು ಅನುಸರಿಸುವಂತೆಯೂ ಸೂಚನೆ ನೀಡಲಾಗಿದೆ. ಆನೆಗಳು ಸಾಗುವ ಹಾದಿಯ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳಲು ವೈಜ್ಞಾನಿಕ ಅಧ್ಯಯನ ನಡೆಸಿ ಸೂಕ್ತ ಬದಲಾವಣೆ ಮಾಡಿಕೊಳ್ಳುವಂತೆಯೂ ಆಯಾ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

8-Eight

2023ರನೇ ಸಾಲನ್ನು ಅಂತರರಾಷ್ಟ್ರೀಯ ರಾಗಿ ವರ್ಷ ಎಂದು ಆಚರಿಸಲಾಗುತ್ತಿದೆ. ಇದೀಗ ಕೃಷಿ ಸಚಿವಾಲಯವು ಡಿಸೆಂಬರ್ 20ರಂದು ಸಂಸತ್ತಿನಲ್ಲಿ "ರಾಗಿ ಆಹಾರ ಉತ್ಸವವನ್ನು" ಆಯೋಜಿಸಿದೆ.

ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅವರು ಹಿರಿಯ ಕೃಷಿ ಮತ್ತು ಐಸಿಎಆರ್ ಅಧಿಕಾರಿಗಳೊಂದಿಗೆ ಸಿದ್ಧತೆಗಳನ್ನು ಪರಿಶೀಲಿಸಿದರು. ರಾಗಿ ಆಹಾರ ಉತ್ಸವದ ಸಂದರ್ಭದಲ್ಲಿ, ರಾಗಿಯ ಬ್ರ್ಯಾಂಡಿಂಗ್ ಮತ್ತು ಪಾಕವಿಧಾನಗಳನ್ನು ಪ್ರದರ್ಶಿಸಲಾಗುತ್ತದೆ.

ಅಲ್ಲದೇ ರಾಗಿ ಆಧಾರಿತ ಆಹಾರ ಪದಾರ್ಥಗಳನ್ನು ಸಂಸತ್ತಿನ ಸದಸ್ಯರಿಗೆ ನೀಡಲಾಗುತ್ತದೆ. ಇತ್ತೀಚಿಗೆ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ, ಇಟಲಿಯ ರೋಮ್‌ನಲ್ಲಿ

ಅಂತರರಾಷ್ಟ್ರೀಯ ಮಿಲ್ಲೆಟ್ ವರ್ಷ -2023ರ ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದೆ. 

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಅಂತಾರಾಷ್ಟ್ರೀಯ ರಾಗಿ ವರ್ಷವನ್ನಾಗಿ ಆಚರಿಸುವ  ಪ್ರಧಾನಿ ನರೇಂದ್ರ ಮೋದಿಯವರ ಪ್ರಸ್ತಾವನೆಯನ್ನು ಅಂಗೀಕರಿಸಲಾಗಿತ್ತು.

ಸಿಂಧೂ ನಾಗರೀಕತೆಯ ಅವಧಿಯಲ್ಲಿನ ಹಲವಾರು ಪುರಾವೆಗಳೊಂದಿಗೆ ಭಾರತದಲ್ಲಿ ಪಳಗಿದ ಮೊದಲ ಬೆಳೆಗಳಲ್ಲಿ 'ರಾಗಿಯೂ' ಸೇರಿದೆ. 130ಕ್ಕೂ ಹೆಚ್ಚು ದೇಶಗಳಲ್ಲಿ ರಾಗಿಯನ್ನು ಬೆಳೆಯಲಾಗುತ್ತದೆ. ರಾಗಿಯೂ ಏಷ್ಯಾ ಮತ್ತು ಆಫ್ರಿಕಾದಾದ್ಯಂತ ಅರ್ಧ ಶತಕೋಟಿಗೂ ಹೆಚ್ಚು ಜನರಿಗೆ ಸಾಂಪ್ರದಾಯಿಕ ಆಹಾರ ಪದ್ಧತಿಗಳಲ್ಲಿ ಒಂದಾಗಿದೆ.

9-Nine

ಡಿಸೆಂಬರ್ 22 ರಂದು ಹುಬ್ಬಳ್ಳಿಯಲ್ಲಿ 'ಸಾಂಬಾರ ಪದಾರ್ಥಗಳ ಖರೀದಿದಾರರ ಮತ್ತು ಮಾರಾಟಗಾರರ ಸಭೆ' ನಡೆಯಲಿದೆ. ಕರ್ನಾಟಕ ರಾಜ್ಯ ಸಾಂಬಾರ ಪದಾರ್ಥಗಳ ಅಭಿವೃದ್ಧಿ ಮಂಡಳಿಯು ಸಂಬಾರ ಮಂಡಳಿಯ ಸಹಯೋಗದಲ್ಲಿ ರಫ್ತುದಾರರು, ವ್ಯಾಪಾರಿಗಳು ಮತ್ತು ರೈತರ ನಡುವೆ ನಡೆಯಲಿದೆ.

ಗುಣಮಟ್ಟದ ಸಾಂಬಾರ ಪದಾರ್ಥಗಳ ರಫ್ತು ಉತ್ತೇಜಿಸುವ ಪ್ರಯತ್ನದ ಭಾಗವಾಗಿ ಈ ಸಭೆ ನಡೆಯಲಿದೆ. ಅಧಿಕೃತ ಮೂಲಗಳ ಪ್ರಕಾರ, ಹುಬ್ಬಳ್ಳಿಯ ನವೀನ್ ಹೋಟೆಲ್‌ನಲ್ಲಿ ಸಭೆ ನಡೆಯಲಿದೆ.

ಎಲ್ಲಾ ಪಾಲುದಾರರು ಸಭೆಯಲ್ಲಿ ಮಸಾಲೆಗಳ ಉತ್ಪಾದನೆ, ವ್ಯಾಪಾರ ಮತ್ತು ರಫ್ತಿಗೆ ಸಂಬಂಧಿಸಿದ  ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. ಮೆಣಸಿನಕಾಯಿ, ಅರಿಶಿನ, ಮೆಣಸು ಮತ್ತು ಶುಂಠಿಯ ಮೇಲೆ ಒತ್ತು ನೀಡಲಾಗುವುದು.

10-Ten

ರಾಜ್ಯದ ಕೆಲ ಜಿಲ್ಲೆಗಳಲ್ಲಿ ಚಳಿ ಇರಲಿದ್ದು, ಮಧ್ಯಾಹ್ನ ಬಿಸಿಲಿನ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ ಮಧ್ಯಾಹ್ನದ ವೇಳೆಗೆ ಬಿಸಿಲು ಹಾಗೂ ಮೋಡ ಕವಿದ ವಾತಾವರಣ ಇರಲಿದೆ.

ಕರ್ನಾಟಕ ಸೇರಿದಂತೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ ಮತ್ತು ಮಹಾರಾಷ್ಟ್ರದ ಬಹುತೇಕ ಭಾಗಗಳಲ್ಲಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಇವಿಷ್ಟು ಈ ಹೊತ್ತಿನ ಪ್ರಮುಖ ಕೃಷಿ ಸುದ್ದಿಗಳು

ಇನ್ನೂ ಹೆಚ್ಚಿನ ಕೃಷಿ ಸಂಬಂಧಿ ಮಾಹಿತಿಗಳಿಗಾಗಿ ನೋಡ್ತಾಯಿರಿ ಕೃಷಿ ಜಾಗರಣ ಕನ್ನಡ.  

ನಮಸ್ಕಾರ…

Published On: 20 December 2022, 05:24 PM English Summary: Rain-cold in the state: Meteorological department report

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.