1. ಸುದ್ದಿಗಳು

ಹಳ್ಳಿಗೆ ಹೋಗಿ ದನದ ಸಗಣಿ ಬಾಚಿ, ಕಸ ಗುಡಿಸಿ, ಹಾಲು ಕರೆದು, ರೊಟ್ಟಿ ತಟ್ಟಿದ ನಟಿ ಅದಿತಿ!

Basavaraja KG
Basavaraja KG

ಸೆಲೆಬ್ರಿಟಿಗಳು, ಅದರಲ್ಲೂ ಸಿನಿಮಾ ನಟ, ನಟಿಯರು ಒಂದಿಲ್ಲೊAದು ಕಾರಣಕ್ಕೆ ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಕೆಲವರು ವಿಭಿನ್ನ ಫ್ಯಾಷನ್ ಟ್ರೆöÊಮಾಡಿದ್ರೆ, ಕೆಲವರು ದೂರ ದೂರಿಗೆ ಪ್ರಯಾಣ ಮಾಡಿ ಅದರ ಫೋಟೋ, ವಿಡಿಯೋ ಶೇರ್ ಮಾಡಿ ಸುದ್ದಿ ಮಾಡುತ್ತಾರೆ. ಕೆಲ ನಟರು ತಮ್ಮ ನಿತ್ಯ ಜಗಳ, ವಿವಾದಗಳ ಮೂಲಕ ಸುದ್ದಿಗೆ  ಬಂದರೆ ಕೆಲ ನಟಿಯರು ಗ್ಲಾಮರ್ ತುಂಬಿದ ಮೋಹಕ ಭಂಗಿಯ ಚಿತ್ರ, ಫೋಟೋ ಶೂಟಿನ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ರಾತ್ರೋರಾತ್ರಿ ಫೇಮಸ್ ಆಗುತ್ತಾರೆ.

ಅದೇ ರೀತಿ ನಮ್ಮ ದಾವಣಗೆರೆಯ ಬೆಡಗಿ ಅದಿತಿ ಪ್ರಭುದೇವ ಕೂಡ ಇತ್ತೀಚೆಗೆ ಸುದ್ದಿ ಜಾಲದ ಮುನ್ನೆಲೆಗೆ ಬಂದಿದ್ದಾರೆ. ಆದರೆ, ಅವರು ಸುದ್ದಿಯಾಗಿರುವುದು ಯಾವುದೋ ಗ್ಲಾಮರಸ್ ಫೋಟೋ, ವಿಡಿಯೋ ಅಥವಾ ತಮ್ಮ ಹೊಸ ಚಿತ್ರದ ವಿಭಿನ್ನ ಲುಕ್‌ನಿಂದಾಗಿ ಅಲ್ಲ. ನಟಿ ಅಧಿತಿ ಅಪ್ಪಟ ಹಳ್ಳಿ ಹುಡುಗಿಯಾಗಿ ಈ ಬಾರಿ ವೈರಲ್ ಆಗಿದ್ದಾರೆ. ದಾವಣಗೆರೆ ಜಿಲ್ಲೆ, ಚನ್ನಗಿರಿಯಲ್ಲಿರುವ ತಮ್ಮ ಹಳ್ಳಿಗೆ ಬಂದು ಪಕ್ಕಾ ಗ್ರಾಮೀಣ ಯುವತಿಯರಂತೆ ಚೂಡಿದಾರ ತೊಟ್ಟು, ದನದ ಕೊಟ್ಟಿಗೆಯ ಕಸ ಗುಡಿಸಿದ್ದಾರೆ.

ಯೂಟ್ಯೂಬ್ ವಿಡಿಯೋ

ದನದ ಸಗಣಿ ಬಾಚುವ ಜೊತೆಗೆ, ಅವುಗಳಿಗೆ ಮೇವು ಹಾಕಿ, ನುಚ್ಚು ಕಲಸಿಟ್ಟು, ಹಾಲು ಕರೆದಿರುವ ಅದಿತಿ, ಹೊಲಕ್ಕೆ ಹೋಗಿ ಟ್ರ್ಯಾಕ್ಟರ್ ಕೂಡ ಓಡಿಸಿದ್ದಾರೆ. ಈ ಕುರಿತಂತೆ ಅದಿತಿ ಪರಭುದೇವ ಅವರು ತಾವು ಹೊಸದಾಗಿ ಆರಂಭಿಸಿರುವ ಯೂಟ್ಯೂಬ್ ಚಾನೆಲ್ ‘ಅಧಿತಿ ಪರಭುದೇವ’ದಲ್ಲಿ ‘ಮೈ ವಿಲೇಜ್ ಮೈ ಲವ್’ (ನನ್ನ ಹಳ್ಳಿ, ನನ್ನ ಪ್ರೀತಿ) ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿದ್ದಾರೆ. ಅದರ  ಕೆಳಗೆ, “ಚಿಕ್ಕಂದಿನಿAದ ಹಳ್ಳಿಯಲ್ಲಿ ಬೆಳೆದವಳು ನಾನು. ಬೆಳೆಯುತ್ತ ಆಧುನಿಕ ಬದುಕಿಗೆ ಹತ್ತಿರವಾದರು ಮನಸ್ಸು ಮಾತ್ರ ಸದಾ ಹಳ್ಳಿಯಲ್ಲಿ ಜೀವಂತ. ಜೀವನದಲ್ಲಿ ಏನೇ ಸಿಕ್ಕರೂ ಪ್ರೀತಿ, ನೆಮ್ಮದಿ ಎಲ್ಲದಕ್ಕೂ ಮಿಗಿಲು ಎಂದು ತಿಳಿದವಳು ನಾನು. ಹಳ್ಳಿಯಲ್ಲಿನ ಅಜ್ಜಿ ಮನೆಗೆ ಹೋದಾಗ ನನ್ನ ದಿನಚರಿಯ ವಿಡಿಯೋ ನಿಮಗಾಗಿ. ಪ್ರೀತಿಯಿಂದ ಅದಿತಿ ಪ್ರಭುದೇವ” ಎಂದು ಚಿಕ್ಕದಾಗಿ, ಚೊಕ್ಕವಾಗಿ ಒಂದು ಟಿಪ್ಪಣಿ ಬರೆದಿದ್ದಾರೆ.

ಜುಲೈ 30ರಂದು ಈ ವಿಡಿಯೋ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಿದ್ದು, ಕೇವಲ ಐದು ದಿನಗಳಲ್ಲಿ 10 ಲಕ್ಷ ಮಂದಿ ಇದನ್ನು ವೀಕ್ಷಿಸಿದ್ದಾರೆ. ಅಲ್ಲದೆ ಸಾವಿರಾರು ಕನ್ನಡ ಸಿನಿ ಪ್ರೇಮಿಗಳು, ಅದಿತಿ ಅಭಿಮಾನಿಗಳು ಕಮೆಂಟ್ ಕೂಡ ಮಾಡಿದ್ದಾರೆ. ಅದಿತಿಯ ಹಳ್ಳಿ ಪ್ರೀತಿ, ಅಜ್ಜಿಯ ಊರು, ಮನೆ ಬಗ್ಗೆ ಅವರಿಗಿರುವ ಅಟ್ಯಾಚ್‌ಮೆಂಟ್, ಹಲವಾರು ಚಿತ್ರಗಳಲ್ಲಿ, ಸ್ಟಾರ್ ನಟರ ಜೊತೆ ನಾಯಕ ನಟಿಯಾಗಿ ನಟಿಸಿದ ನಂತರವೂ ಹಳ್ಳಿಗೆ ಬಂದು ಹಳ್ಳಿಯ ಹೆಣ್ಮಗಳೇ ಆಗಿ, ದನದ ಕೊಟ್ಟಿಗೆ ಕೆಲಸ ಮಾಡುವ ಪರಿಯನ್ನು ಮೆಚ್ಚಿ ಕೊಂಡಾಡಿದ್ದಾರೆ.

ಮೆಚ್ಚುಗೆ ಮಹಾಪೂರ

‘ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೀರೋಯಿನ್ ಆಗಿದ್ದರೂ ಈ ರೀತಿಯ ಕೆಲಸ ಮಾಡುತ್ತಿರುವುದು ನೋಡಿದರೆ ನಿಜವಾಗಲೂ ಖುಷಿಯೆನಿಸುತ್ತದೆ ಮೇಡಂ... ಈ ರೀತಿ ವಿಡಿಯೋಗಳನ್ನು ನೋಡಿದಾ ನಂತರ ನಿಮ್ಮ ಮೇಲಿನ ಗೌರವ ಮತ್ತಷ್ಟು ಹೆಚ್ಚಾಗುತ್ತದೆ... ಕನ್ನಡ ಚಿತ್ರರಂಗದಲ್ಲಿ ಇನ್ನೂ ಎತ್ತರದ ಸ್ಥಾನಕ್ಕೆ ಬೆಳೆಯಿರಿ. ನಮ್ಮ ಬೆಂಬಲ ಇದ್ದೇ ಇರುತ್ತದೆ’ ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು, ‘ಅಕ್ಕಾ ನೀವು ದೊಡ್ಡ ಹೀರೋಯಿನ್ ಆಗಿದ್ದರೂ, ಇಷ್ಟೊಂದು ಸಿಂಪಲ್ಲಾಗಿ ಇರೋದನ್ನ ನೋಡಿದರೆ ತುಂಬಾ ಖುಷಿ ಆಗುತ್ತದೆ. 100 ವರ್ಷ ಬಾಳಿ’ ಎಂದು ಹರಸಿದ್ದಾರೆ. ಜೊತೆಗೆ, ‘ಸಿಟಿಯಲ್ಲಿ ಇದ್ದರೆ ಮಾಡರ್ನ್ ಟ್ರೆಂಡಿಗೂ ಸೈ, ಹಳ್ಳಿಗೆ ಬಂದರೆ ಪಕ್ಕಾ ಹಳ್ಳಿ ಹುಡುಗಿಯಾಗಿಯೂ ಜೈ ನಮ್ಮ ಅದಿತಿ ಪ್ರಭುದೇವ’, ‘ಮಣ್ಣು, ಸಗಣಿ ಕಂಡರೆ ಹಳ್ಳಿ ಹುಡುಗಿಯರೇ ಮಾರು ದೂರ ಸರಿಯುವ ಈ ದಿನಗಳಲ್ಲಿ ಅದಿತಿ ಅವರ ಹಳ್ಳಿ ಪ್ರೀತಿ ಮೆಚ್ಚುವಂಥದ್ದು’, ‘ನಿಮ್ಮ ಕನ್ನಡ ಅಭಿಮಾನ, ಹಳ್ಳಿ ಮೇಲಿನ ಪ್ರೀತಿ ಸದಾ ಹೀಗೇ ಇರಲಿ’ ಎಂದೆಲ್ಲಾ ಕಮೆಂಟ್ ಮಾಡುವ ಮೂಲಕ ಅದಿತಿಯ ಹಳ್ಳಿ ಪ್ರೀತಿಯನ್ನು ಮನಸಾರೆ ಮೆಚ್ಚಿದ್ದಾರೆ.

ಪಕ್ಕಾ ಹಳ್ಳಿ ಹುಡುಗಿಯಂತೆ ಕೆಲಸ

ಕೆಲವು ನಟಿಯರು ಪ್ರಚಾರಕ್ಕಾಗಿ ಹಳ್ಳಿ, ಹೊಲದಲ್ಲಿ ಕೆಲಸ ಮಾಡುವ, ಮನೆ ಕೆಲಸ ಮಾಡುವಂತೆ ನಟಿಸುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಾರೆ. ಆದರೆ, ಅದಿತಿ ಪ್ರಭುದೇವ ಕೆಲಸ ಮಾಡುವ ಪರಿ ನೋಡಿದರೆ ಎಂಥ ಹಳ್ಳಿ ಹುಡುಗಿಯೂ ನಾಚಿಕೊಳ್ಳುವಂತಿದೆ. ಚೂಡಿದಾರದ ವೇಲನ್ನು ಸೊಂಟಕ್ಕೆ ಕಟ್ಟಿಕೊಂಡು, ಕಡ್ಡಿ ಬರ್ಲು (ಕಸಮರಿಗೆ) ತೆಗೆದುಕೊಂಡು ಕೊಟ್ಟಿಗೆಯ ಕಸ ಗುಡಿಸುವ ಅದಿತಿ, ಹಸು-ಎಮ್ಮೆಗಳನ್ನು ಮಾತನಾಡಿಸುತ್ತಾರೆ. ಜೊತೆಗೆ ಮೇವು ಹಾಕಿ, ಹಾಲು ಕರೆಯುತ್ತಾರೆ. ಅಷ್ಟೇ ಅಲ್ಲ, ಅಡುಗೆ ಮನೆಗೆ ಹೋಗಿ ರೊಟ್ಟಿ ಕೂಡ ತಟ್ಟಿ ಬೇಯಿಸಿದ್ದಾರೆ.

;

ಅದಿತಿ ಸಿನಿ ಜರ್ನಿ

2017ರಲ್ಲಿ ‘ಧೈರ್ಯಂ’ ಚಿತ್ರದ ಮೂಲಕ ಸ್ಯಾಂಡಲ್ ವುಡ್‌ಗೆ  ಪಾದಾರ್ಪಣೆ ಮಾಡಿದ ಅದಿತಿ, ಬಜಾರ್, ಆಪರೇಷನ್ ನಕ್ಷತ್ರ, ಸಿಂಗ, ರಂಗನಾಯಕಿ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅವರಿಗೆ ಹೆಚ್ಚು ಹೆಸರು ಮತ್ತು ಯಶಸ್ಸು ತಂದುಕೊಟ್ಟದ್ದು, ದಿವಂಗತ ನಟ ಚಿರಂಜೀವಿ ಸರ್ಜಾ ಅವರೊಂದಿಗೆ ನಟಿಸಿದ ‘ಸಿಂಗ’ ಚಿತ್ರ. ಚಿತ್ರದಲ್ಲಿನ ‘ಸಾನೆ ಟಾಪಗೌಳೆ ನಮ್ ಹುಡುಗಿ’ ಎಂಬ ಹಾಡು ಕರುನಾಡಿನ ಮನಸ್ಸು ಗೆದ್ದಿತ್ತು. ಪ್ರಸ್ತುತ ದಿಲ್ಮಾರ್, ತೋತಾಪುರಿ, ತೋತಾಪುರಿ2, ಓಲ್ಡ್ ಮಾಂಕ್, ಒಂಭತ್ತನೇ ದಿಕ್ಕು, ಚಾಂಪಿಯನ್, ಗಜಾನನ ಆಂಡ್ ಗ್ಯಾಂಗ್, ಆನಾ, ಭಗವಾನ್ ಶ್ರೀಕೃಷ್ಣ, ತ್ರಿಬಲ್ ರೈಡಿಂಗ್, 5ಡಿ, ಅಂದೊAದಿತ್ತು ಕಾಲ ಎಂಬ ಚಿತ್ರಗಳಲ್ಲೂ ನಟಿಸಿದ್ದಾರೆ. ಈ ಪೈಕಿ ಹಲವು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದ್ದು, ಕೆಲವು ಚಿತ್ರೀಕರಣ ಹಂತದಲ್ಲಿವೆ.

ಏಕಕಾಲಕ್ಕೆ ಮರ‍್ನಾಲ್ಕು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಅದಿತಿ, ಊರಲ್ಲಿರುವ ಅಜ್ಜಿ ಮನೆಗೆ ಹೋಗಿ ಅಪ್ಪಟ ಗ್ರಾಮೀಣ ಹುಡುಗಿಯಾಗಿ ದಿನ ಕಳೆದಿರುವುದು ನಿಜಕ್ಕೂ ಶ್ಲಾಘನೀಯಯ.

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.