1. ಸುದ್ದಿಗಳು

ಪಿಎಂ ಕಿಸಾನ್ ಸಮ್ಮಾನ್ ನಿಧಿ ಮೂಲಕ ಇನ್ಮುಂದೆ ರೈತರಿಗೆ ಸಿಗಲಿದೆ 12,000 ರೂ. ಗೌರವಧನ!

Basavaraja KG
Basavaraja KG

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ ನೀವು ನೋಂದಣಿಯಾಗಿದ್ದೀರಾ? ಈಗಾಗಲೇ ವಾರ್ಷಿಕ 6,000 ರೂಪಾಯಿ ಗೌರವಧನದ ಪ್ರಯೋಜನ ಪಡೆಯುತ್ತಿದ್ದೀರಾ? ಹಾಗಾದರೆ ಇಲ್ಲಿ ನಿಮಗೊಂದು ಶುಭ ಸಮಾಚಾರವಿದೆ. ಅದೇನೆಂದರೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ರೈತರಿಗೆ ನೀಡುತ್ತಿರುವ ಗೌರವಧನ ಇನ್ನುಮುಂದೆ ಡಬಲ್ ಆಗಲಿದೆ!

ಹೌದು. ಮುಂಬರುವ ಹಣಕಾಸು ವರ್ಷದಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ (ಪಿಎಂ ಕಿಸಾನ್) ಯೋಜನೆ ಅಡಿ ನೀಡುವ ಗೌರವಧನವನ್ನು ದುಪ್ಪಟ್ಟು ಮಾಡಲು ಕೆಂದ್ರ ಸರ್ಕಾರ ನಿರ್ಧರಿಸಿದೆ. ಅದರ ಪ್ರಕಾರ ಈ ಹಿಂದೆ ವಾರ್ಷಿಕ 6,000 ರೂ. ಗೌರವಧನ ಪಡೆಯುತ್ತಿದ್ದ ದೇಶದ ರೈತರು ಇನ್ನು ಮುಂದೆ ಪ್ರತಿ ವರ್ಷ 12,000 ರೂಪಾಯಿ ಪಡೆಯಲಿದ್ದಾರೆ. ಇದುವರಗೆ ಒಂದು ಕಂತಿಗೆ 2,000 ಬರುತ್ತಿದ್ದ ಜಾಗದಲ್ಲಿ 4,000 ರೂಪಾಯಿ ಮೊತ್ತವು ರೈತರ ಖಾತೆಗೆ ಜಮಾ ಆಗಲಿದೆ. ಈ ಬಗ್ಗೆ ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಗೌರವಧನ ಹೆಚ್ಚಿಸಲು ನಿರ್ಧರಿಸಿರುವ ಸರ್ಕಾರ, ಈ ಬಗ್ಗೆ ಅಧಿಕೃತವಾಗಿ ಅಧಿಸೂಚನೆ ಹೊರಡಿಸುವುದು ಮಾತ್ರ ಬಾಕಿ ಇದೆ.

ಎರಡು ಹೆಕ್ಟೇರ್‌ಗಿಂತಲೂ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದೊಂದಿಗೆ 2018ರಲ್ಲಿ ಕೆಂದ್ರ ಸರ್ಕಾರ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ ಅರ್ಹ ಫಲಾನುಭವಿ ರೈತರಿಗೆ ವರ್ಷಕ್ಕೆ 6,000 ರೂಪಾಯಿ ಗೌರವಧನವನ್ನು ನೀಡಲಾಗುತ್ತದೆ. ಈ ಹಣವು ನಾಲ್ಕು ತಿಂಗಳಿಗೆ ಒಮ್ಮೆ, ವರ್ಷದಲ್ಲಿ ಮೂರು ಬಾರಿ, ಅಂದರೆ ಮೂರು ಕಂತುಗಳಲ್ಲಿ (ಒಂದು ಕಂತಿಗೆ 2000 ರೂಪಾಯಿಯಂತೆ) ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಸೇರುತ್ತಿದೆ. ಈ ಹಣ ಇನ್ನು ಕೆಲವೇ ದಿನಗಳಲ್ಲಿ ದುಪ್ಪಟ್ಟು ಆಗಲಿದ್ದು, ನಾಲ್ಕು ತಿಂಗಳಿಗೆ ಒಮ್ಮೆ ರೈತರ ಬ್ಯಾಂಕ್ ಖಾತೆಗೆ 4000 ರೂ. ಜಮಾ ಆಗಲಿದೆ.

ಸೆಪ್ಟೆಂಬರ್ 30 ಕಡೆಯ ದಿನ

ಪಿಎಂ ಕಿಸಾನ್ ನಿಧಿ ಯೋಜನೆಯ ಅಡಿಯಲ್ಲಿ ಗೌರವಧನದ ಪ್ರಯೋಜನ ಪಡೆಯಲು ಇಚ್ಛಿಸುವ ರೈತರು ತಮ್ಮ ಹೆಸರನ್ನು ಯೋಜನೆ ಅಡಿ ನೋಂದಣಿ ಮಾಡಿಕೊಳ್ಳಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ. ನೋಂದಣಿಗೆ ಇನ್ನು ಕೆಲವೇ ದಿನಗಳು ಮಾತ್ರ ಉಳಿದಿದ್ದು, ಈ ಹಂತದಲ್ಲಿ ಅರ್ಜಿ ಸಲ್ಲಿಸುವ ಅಥವಾ ನೋಂದಣಿ ಮಾಡಿಕೊಳ್ಳುವ ರೈತರ ಅರ್ಜಿ ಸ್ವೀಕೃತವಾದರೆ ಅಕ್ಟೋಬರ್ ಅಥವಾ ನವೆಂಬರ್ ತಿಂಗಳ ವೇಳೆಗೆ 2,000 ರೂ. ಹಾಗೂ ಡಿಸೆಂಬರ್‌ನಲ್ಲಿ 2,000 ರೂ. ಪಡೆಯಲಿದ್ದಾರೆ.

ಯಾರೆಲ್ಲ ಫಲಾನುಭವಿ ಆಗಬಹುದು?

ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರು ಈ ಯೋಜನೆಯ ಸದುಪಯೋಗ ಪಡೆಯಬಹುದು. ಗರಿಷ್ಠ ಎರಡು ಹೆಕ್ಟೇರ್ ಕೃಷಿ ಭೂಮಿ ಹೊಂದಿರುವ ಯಾವುದೇ ರೈತರು ಈ ಯೋಜನೆಯ ಫಲಾನುಭವಿಗಳಾಗಬಹುದು. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 9ನೇ ಕಂತಿನ ಹಣ ಆಗಸ್ಟ್ 9ರಂದು ಬಿಡುಗಡೆಯಾಗಿತ್ತು. 8ನೇ ಕಂತಿನ ಹಣ 2,000 ರೂ.ಗಳನ್ನು ವನ್ನು ಮೇ 14ರಂದು ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗಿತ್ತು.

ಈ ಯೋಜನೆಯಡಿ 11.17 ಕೋಟಿಗೂ ಹೆಚ್ಚು ರೈತರು ನೋಂದಣಿ ಮಾಡಿಕೊಂಡಿದ್ದು, ಇವರೆಲ್ಲರಿಗೂ ಕೇಂದ್ರ ಸರ್ಕಾರ ಸಹಾಯಧನ ನೀಡಿದೆ. ಸರ್ಕಾರದ ಈ ಹೊಸ ನಿರ್ಧಾರದಿಂದಾಗಿ ಫಲಾನುಭವಿ ರೈತರ ಸಂಖ್ಯೆ 15 ಕೋಟಿ ತಲುಪಲಿದೆ ಎಂದು ಅಂದಾಜಿಸಲಾಗಿದೆ.

ಹೆಸರಿದೆಯಾ ಪರಿಶೀಲಿಸಿ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಲಾಭ ಪಡೆಯಲು ನೀವು ಅರ್ಜಿ ಸಲ್ಲಿಸಿದ್ದರೆ, ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಲು ಅವಕಾಶವಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 2020ರ ಫಲಾನುಭವಿಗಳ ಹೊಸ ಪಟ್ಟಿಯನ್ನು ಅಧಿಕೃತ ವೆಬ್‌ಸೈಟ್ pmkisan.gov.in ಮೂಲಕ ಪರಿಶೀಲಿಸಬಹುದು.

;

ನೋಂದಣಿ ಹೇಗೆ?

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ವೆಬ್‌ಸೈಟ್ pmkisan.gov.in ಗೆ ಭೇಟಿ ನೀಡಿ, ಅಲ್ಲಿ ‘ಫಾರ್ಮರ್ ಕಾರ್ನರ್' ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ, ನಂತರ ‘ನ್ಯೂ ಫಾರ್ಮರ್ ರಿಜಿಸ್ಪ್ರೇಶನ್’ ಆಯ್ಕೆ ಮಾಲೆ ಕ್ಲಿಕ್ ಮಾಡಿ. ಬಳಿಕ ನಿಮ್ಮ (ಫಲಾನುಭವಿ ಆಗಲಿರುವ ರೈತರ) ಆಧಾರ್ ಸಂಖ್ಯೆಯನ್ನು ನಮೂದಿಸಿ, ಕೊನೆಯ ಬಾಕ್ಸ್ನಲ್ಲಿ ಕಾಣುವ ಕ್ಯಾಪ್ಚಾ ಕೋಡ್ ಅನ್ನು ಸರಿಯಾಗಿ ನಮೂದಿಸಿ. ಆಗ ತೆರೆದುಕೊಳ್ಳುವ ಮುಂದಿನ ಪುಟದಲ್ಲಿ ಕೇಳಲಾಗಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ. ಬ್ಯಾಂಕ್ ಖಾತೆಯ ವಿವರಗಳನ್ನು ದಾಖಲಿಸಿ ಸಬ್‌ಮಿಟ್ ಮಾಡಿ.

ಬೇಕಿರುವ ದಾಖಲೆಗಳು

ಆಧಾರ್ ಕಾರ್ಡ್, ಆದಾಯ ಪ್ರಮಾಣಪತ್ರ ಹಾಗೂ ಕೃಷಿ ಭೂಮಿ ವಿವರಗಳ, ಉಳಿತಾಯ ಖಾತೆ ಅಥವಾ ಜನ್ ಧನ್ ಖಾತೆ ಹೊಂದಿರುವ ಬ್ಯಾಂಕ್ ಪಾಸ್‌ಬುಕ್, ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರುವ ಮೊಬೈಲ್ ಸಂಖ್ಯೆ (ಈ ಸಂಖ್ಯೆ ಸಕ್ರಿಯವಾಗಿರಬೇಕು), ರೇಷನ್ ಕಾರ್ಡ್ ಮತ್ತು ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು.

Share your comments

Latest feeds

More News
Krishi Jagran Kannada Magazine Subscription Online Subscription
Krishi Jagran Kannada Subscription

CopyRight - 2021 Krishi Jagran Media Group. All Rights Reserved.