ಎಲ್‌ಕೆಜಿಯಿಂದಲೇ ಆನ್‌ಲೈನ್ ಶಿಕ್ಷಣ ನೀಡಬಹುದು. ಅಲ್ಲಿ ಪಾಠಕ್ಕಿಂತ ಆಟ, ಹೊಸ ರೀತಿಯ ಚಟುವಟಿಕೆಗಳಿಗೆ ಆದ್ಯತೆ ಕೊಡಬೇಕು. ಪ್ರಾಥಮಿಕ ಶಾಲೆಗೆ ಅರ್ಧಗಂಟೆಗಿಂತ ಹೆಚ್ಚು ಒಂದು ಪಿರಿಯಡ್ ಇರಬಾರದು, ದಿನಕ್ಕೆ ಗರಿಷ್ಟ ನಾಲ್ಕು ಪೀರಿಯಡ್ ಮಾತ್ರ ನಡೆಸಬೇಕೆಂಬ ಷರತ್ತುಗಳೊಂದಿಗೆ ಪೂರ್ವ ಪ್ರಾಥಮಿಕ ತರಗತಿಯಿಂದಲೇ ಆನ್‌ಲೈನ್ ಪಾಠ ಮಾಡಲು ಡಾ. ಎಂ.ಕೆ. ಶ್ರೀಧರ ನೇತೃತ್ವದ ತಜ್ಞರ ಸಮಿತಿ ಒಪ್ಪಿಗೆ ನೀಡಿದೆ.
ಆನ್‌ಲೈನ್ ಪಾಠದ ಕುರಿತು ಸರ್ಕಾರ ರಚಿಸಿದ್ದ ಸಮಿತಿಯ ಸದಸ್ಯರು 10 ಶಿಫಾರಸ್ಸುಗಳ ತಂತ್ರಜ್ಞಾನಾಧಾರಿತ ಶಿಕ್ಷಣ ವರದಿಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ ಅವರಿಗೆ ಹಸ್ತಾಂತರಿಸಿದರು.
3 ರಿಂದ 6 ವರ್ಷ ವಯಸ್ಸಿನ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಆಟದ ಜತೆಗೆ ಕಥೆ, ಹಾಡು ಸೇರಿದಂತೆ ನವೀನ ಚಟುವಟಿಕೆಗಳ ಮೂಲಕ ಪಾಠ ಮಾಡಬೇಕು. ಪೋಷಕರ ಕಡ್ಡಾಯ ಉಪಸ್ಥಿತಿಯಲ್ಲಿ ನೇರ/ ಮುದ್ರಿತ ಬೋಧನಾ ವಿಧಾನಗಳಲ್ಲಿ ಪ್ರತಿದಿನ 30 ನಿಮಿಷದ ಒಂದು ಅವಧಿಯಂತೆ ವಾರಕ್ಕೆ ಮೂರು ದಿನ ಮಾತ್ರ ಕಲಿಸಬಹುದು. 1ರಿಂದ 2ನೇ ತರಗತಿಯ ವಿದ್ಯಾರ್ಥಿಗಳಿಗೆ ಆಟ, ಕಥೆಯ ರೂಪದ ನವೀನ ಚಟುವಟಿಕೆಗಳನ್ನು ಪ್ರತಿದಿನ 30 ನಿಮಿಷದ ಎರಡು ಅವಧಿಯಂತೆ ವಾರಕ್ಕೆ ಮೂರು ದಿನ ಕಲಿಕೆಗೆ ಅವಕಾಶ ನೀಡಬಹುದು. 2ನೇ ತರಗತಿವರಿಗಿನ ಮಕ್ಕಳ ಆನ್‌ಲೈನ್ ತರಗತಿಯಲ್ಲಿ ಪಾಲಕ ಅಥವಾ ಪೋಷಕರು ಕಡ್ಡಾಯವಾಗಿ ಹಾಜರಿರಬೇಕು. ಆನ್‌ಲೈನ್ ತರಗತಿಗೆ ಭಾಗವಹಿಸುವಂತೆ ಒತ್ತಡ ಹೇರುವಂತಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
3ರಿಂದ 5ನೇ ತರಗತಿಗಳಿಗೆ ವಾರಕ್ಕೆ 5 ದಿನ ಪ್ರತಿದಿನ 30 ನಿಮಿಷದ 2 ಅವಧಿಗಳನ್ನು ಬೋಧನೆಗೆ ನಿಗದಿಸಬಹುದು. 6ರಿಂದ 8ನೇ ತರಗತಿಗೆ 30 ರಿಂದ 45 ನಿಮಿಷಗಳ ಗರಿಷ್ಠ 3 ಅವಧಿ ಹಾಗೂ 9-10ನೇ ತರಗತಿಗೆ 30ರಿಂದ 45 ನಿಮಿಷಗಳ ಪ್ರತಿದಿನದ ಗರಿಷ್ಠ 4 ಅವಧಿ ಪರ್ಯಾಯ ಕಲಿಕೆಯನ್ನು ಶಿಫಾರಸು ಮಾಡಲಾಗಿದೆ,
ಮಕ್ಕಳ ಹಿತವನ್ನು ಗಮನದಲ್ಲಿಟ್ಟುಕೊಂಡು ವರದಿ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಸಿದ್ದೇವೆ. ಕೊರೋನಾ ಸಾಂಕ್ರಾಮಿಕ ಕಾಲಘಟ್ಟದಲ್ಲಿ ಮಕ್ಕಳ ಶಿಕ್ಷಣ ಕಲಿಕೆಯ ಮುಂದುವರಿಕೆಗೆ ತೊಂದರೆಯಾಗದಂತೆ ಸಮಿತಿ ವರದಿ ಸಲ್ಲಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಪ್ರೊ.ಎಂ.ಕೆ. ಶ್ರೀಧರ್ ಹೇಳಿದ್ದಾರೆ.
ಆನ್‍ಲೈನ್ ಶಿಕ್ಷಣ ಕುರಿತ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ ನೀಡುವ ತೀರ್ಪಿನ ಅನುಸಾರವಾಗಿ ನಿಯಮಗಳನ್ನು ಸಿದ್ಧಪಡಿಸಲಾಗುವುದು ಎಂದು ವರದಿ ಸ್ವೀಕರಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.
Share your comments