ಕಳೆದ ಕೆಲವು ದಿನಗಳಿಂದ ಏರುಗತಯಲ್ಲಿದ್ದ ಈರುಳ್ಳಿ ಬೆಲೆ ದಿಢೀರನೆ ಕುಸಿದಿದೆ.ಕೆಲ ದಿನಗಳ ಹಿಂದೆ 40 ರಿಂದ 50 ರೂಪಾಯಿಗೆ ಮಾರಾಟವಾಗುತ್ತಿದ್ದ ಈರುಳ್ಳಿ ಈಗ ಚಿಲ್ಲರೆ ಮಾರುಕಟ್ಟೆಯಲ್ಲಿ 15 ರಿಂದ 20 ರೂಪಾಯಿಗೆ ಮಾರಾಟವಾಗುತ್ತಿದೆ. ಇನ್ನೂ ಬೆಲೆ ಕಡಿಮೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ರಾಜ್ಯಗಳಿಂದ ಅಪಾರ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿರುವ ಕಾರಣ ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ಈರುಳ್ಳಿ ದರ ಭಾರಿ ಕುಸಿತ ಕಂಡಿದೆ.
ಬೀದರ್‌ನಲ್ಲಿ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಪ್ರತಿ ಕ್ವಿಂಟಲ್‌ಗೆ 1,500 ರಿಂದ 1,600 ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಪ್ರತಿ ಕೆ.ಜಿಗೆ 20 ದರದಲ್ಲಿ ಮಾರಾಟವಾಗುತ್ತಿದೆ. ಎರಡು ವಾರದ ಹಿಂದೆ ಕೆ.ಜಿಗೆ 50 ಇದ್ದ ಬೆಲೆ ಶುಕ್ರವಾರ 20ಕ್ಕೆ ಕುಸಿದಿದೆ. ಈ ಬಾರಿ ಸ್ಥಳೀಯವಾಗಿಯೂ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಇದು ಸಹ ಬೆಲೆ ಇಳಿಕೆಯಾಗಲು ಕಾರಣವಾಗಿ ಎನ್ನುತ್ತಾರೆ ವ್ಯಾಪಾರಿಗಳು..
ಈರುಳ್ಳಿ ದರ ಏಕಾಏಕಿ ಕುಸಿದಿರುವುದು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ. ಇದರಿಂದ ಈರುಳ್ಳಿ ಕಟಾವು ಮಾಡಲು ರೈತರು ಹಿಂದೇಟು ಹಾಕುತ್ತಿದ್ದಾರೆ. ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ಈರುಳ್ಳಿಯ ಕಟಾವು ನಡೆಯುತ್ತಿದೆ. ಅರ್ಧದಷ್ಟು ಈರುಳ್ಳಿ ಈಗಾಗಲೇ ಮಾರುಕಟ್ಟೆ ತಲುಪಿದೆ.
ಅತಿವೃಷ್ಟಿ ಕಾಣಿಸಿಕೊಂಡಿದ್ದರಿಂದ ಮುಂಗಾರು ಹಂಗಾಮಿನ ಈರುಳ್ಳಿ ರೈತರ ಕೈಸೇರಿರಲಿಲ್ಲ. ಲಕ್ಷಾಂತರ ಈರುಳ್ಳಿ ಬೆಳೆ ಮಳೆಯ ನೀರಿನಲ್ಲಿ ಕೊಳೆತುಹೋಗಿ ಅಪಾರ ಹಾನಿಯಾಗಿತ್ತು. ಕಟಾವು ಮಾಡದ ರೈತರು ನಷ್ಟ ಅನುಭವಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ರೋಗಬಾಧೆ ಕಾಣಿಸಿಕೊಂಡಿದ್ದರಿಂದ ಸರಾಸರಿಗಿಂತ ಕಡಿಮೆ ಇಳುವರಿ ಬಂದಿದೆ. ಇದರೊಂದಿಗೆ ದರವೂ ಕುಸಿದಿದ್ದರಿಂದ ಬೆಳೆಗಾರರಿಗೆ ಹಾನಿಯಾಗುವ ಸಾಧ್ಯತೆಯಿದೆ.
Share your comments