ರಾಜ್ಯದಲ್ಲಿ ಕೋವಿಡ್-19 ನಿಂದ ಉಂಟಾದ ಪರಿಸ್ಥಿತಿಯನ್ನು ನಿಭಾಯಿಸಿ ಆರ್ಥಿಕ ಸ್ಥಿತಿಯನ್ನು ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಸಂಪನ್ಮೂಲವನ್ನು ಕ್ರೋಢೀಕರಿಸುವುದು ಅಗತ್ಯವಾಗಿರುತ್ತದೆ. ಇದಕ್ಕಾಗಿ, ಸರ್ಕಾರದ ವೆಚ್ಚದ ಬಾಬ್ತಿನಲ್ಲಿ ಮಿತವ್ಯಯ ಪಾಲಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳು ಮತ್ತು ಬ್ಯಾಕ್‌ಲಾಗ್ ಹುದ್ದೆಗಳೂ ಸೇರಿದಂತೆ ಎಲ್ಲಾ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವುದನ್ನು ಮುಂದಿನ ಆದೇಶದ ವರೆಗೆ ತಡೆಹಿಡಿಯಲಾಗಿದೆ ಎಂದು ಸರ್ಕಾರದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಅಲ್ಲದೇ "ಈಗಾಗಲೇ ಆರ್ಥಿಕ ಇಲಾಖೆಯ ಅನುಮತಿ ಪಡೆದುನೇಮಕಾತಿಯ ವಿವಿಧ ಹಂತಗಳಲ್ಲಿರುವ ಹುದ್ದೆಗಳಿಗೂ ಸಹ ಈ ಆದೇಶ ಅನ್ವಯವಾಗುತ್ತದೆ ಎಂದು ತಿಳಿಸಲಾಗಿದೆ.
ಗಾಯದ ಮೇಲೆ ಬರೆ ಎಳೆಯುವಂತೆ ಈಗಾಗಲೇ ಆರ್ಥಿಕ ಇಲಾಖೆಯ ಅನುಮತಿ ಪಡೆದು ನೇಮಕಾತಿಯ ವಿವಿಧ ಹಂತಗಳಲ್ಲಿರುವ ಹುದ್ದೆಗಳಿಗೂ ಸಹ ತಡೆ ಹಿಡಿಯಲಾಗಿದೆ.
371ನೇ ಜೆ ವಿಧಿ ತಿದ್ದುಪಡಿಯಾಗಿ ಏಳು ವರ್ಷಗಳಾಗುತ್ತಿವೆ. ಆ ಸಂದರ್ಭದಲ್ಲಿ ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಅಂದಾಜು 50 ಸಾವಿರ ಹುದ್ದೆಗಳನ್ನು ವರ್ಷದೊಳಗೆ ಭರ್ತಿ ಮಾಡುವ ಕುರಿತಾಗಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಇಂದಿನ ದಿನದವರೆಗೆ ಕೇವಲ 14 ಸಾವಿರ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಿಕೊಳ್ಳಲಾಗಿದೆ. ಏಳೆಂಟು ಸಾವಿರ ಹುದ್ದೆಗಳಿಗೆ ನೇಮಕಾತಿಯಾಗಿದ್ದರೂ ವಿವಿಧ ಕಾರಣಗಳಿಂದ ಇನ್ನೂ ಸೇವೆಗೆ ಹಾಜರಾಗಿಲ್ಲ.
Share your comments