ರಾಜ್ಯದಲ್ಲಿ ಕೃಷಿ ಪಂಪ್ ಸೆಟ್ಗಳಿಗೆ ಮೀಟರ್ ಅಳವಡಿಸುವ ಚಿಂತನೆ ಸದ್ಯಕ್ಕೆ ಇಲ್ಲ, ಈ ಬಗ್ಗೆ ಊಹಾಪೋಹಗಳಿಗೆ ರೈತರು ನಂಬಬಾರದು ಎಂದು ಇಂಧನ ಸಚಿವ ವಿ. ಸನೀಲ್ ಕುಮಾರ ಸ್ಪಷ್ಟಪಡಿಸಿದ್ದಾರೆ. ರೈತರು ಬಳಸುವ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಮೀಟರ್ ಅಳವಡಿಸಲಾಗುವುದು ಎಂಬ ಸುದ್ದಿ ರೈತರಲ್ಲಿ ಆತಂಕವಷ್ಟೇ ಅಲ್ಲ ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ಇಂಧನ ಸಚಿವರು ಮೀಟರ್ ಅಳವಡಿಕೆ ಮಾಡಲಾಗುವುದಿಲ್ಲ. ಈ ಸುದ್ದಿ ಕೇವಲ ಊಹಾಪೋಹ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ರೈತರು ಕೃಷಿ ಉದ್ದೇಶಕ್ಕಾಗಿ ಬಳಸುವ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಲಾಗುತ್ತದೆ ಎಂಬ ಸುದ್ದಿಯನ್ನು ಇಂಧನ ಸಚಿವರು ನಿರಾಕರಿಸಿದ್ದಾರೆ.
ವಿದ್ಯುತ್ ಮಸೂದೆಗೆ ತಿದ್ದುಪಡಿ ಹಾಗೂ ಕೃಷಿ ಪಂಪ್‌ಸೆಟ್‌ಗೆ ಮೀಟರ್ ಅಳವಡಿಸಲಾಗುತ್ತಿದೆ ಎಂದು ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮೀಟರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದರು.
ಕೇಂದ್ರ ಸರ್ಕಾರ ವಿದ್ಯುತ್ ಮಸೂದೆಗೆ ತಿದ್ದುಪಡಿ ತಂದಿರುವುದನ್ನು ತಕ್ಷಣದಿಂದಲೇ ಕೈಬಿಡಬೇಕು. ಸ್ಮಾರ್ಟ್ ಮೀಟರ್ ಅಳವಜಡಿಸಿ, ಗೃಹ ಬಳಕೆ, ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಹಾಗೂ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಪ್ರೀಪೇಡ್ ನೀತಿಯನ್ನು ಜಾರಿಗೊಳಿಸುವುದನ್ನು ಖಂಡಿಸಿದರಲ್ಲದೆ, ಈ ಪದ್ಧತಿಯನ್ನು ರದ್ದುಗೊಳಿಸಿ ಹಾಲಿ ಇರುವ ವ್ಯವಸ್ಥೆಯನ್ನೇ ಮುಂದುವರಿಸುವಂತೆ ಆಗ್ರಹಿಸಿದ್ದರು.
ವ್ಯಾಪಕ ಮಳೆಯಿಂದಾಗಿ ಒಡ್ಡುಗಳು ಒಡೆದು ಹೋಗಿ ಅಪಾರ ಪ್ರಮಾಣದ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ. ಜಮೀನನ್ನೇ ನಂಬಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿರುವ ರೈತರು ಬೆಳೆಹಾನಿಯಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ರೈತರಿಗೆ ನೆರವಾಗುವ ಕಾರ್ಯ ಕೈಗೊಳ್ಳುವುದನ್ನು ಬಿಟ್ಟು ಪಂಪ್‌ಸೆಟ್‌ಗಳಿಗೆ ವಿದ್ಯುತ್ ಮೀಟರ್ ಅಳವಡಿಸುತ್ತಿರುವುದು ಸರಿಯಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದರು.
ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಎಲ್ಲಿಯಾದರೂ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಿದರೆ, ಅಂತಹ ಮೀಟರ್‌ಗಳನ್ನು ಕಿತ್ತಾಕುವ ಚಳವಳಿಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.
ಕೃಷಿ ಪಂಪ್ ಸೆಟ್ಗಳಿಗೆ ಮೀಟರ್ ಅಳವಡಿಸಿಲಾಗುವುದು ಎಂದು ರೈತ ಸಂಘಟನೆಗಳು ಆಕ್ರೋಶಗೊಂಡಿದ್ದರಿಂದ ಇಂಧನ ಸಚಿವ ಪಂಪ್ಸೆಟ್ ಗಳಿಗೆ ಮೀಟರ್ ಅಳವಡಿಸುವುದಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.
ಅವರು ಬೆಂಗಳೂರು ನಗರದಲ್ಲಿ ಶುಕ್ರವಾರ ತಮ್ಮ ಕಚೇರಿಯ ಪೂಜೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪಂಪ್ ಸೆಟ್ ಬಳಕೆಗೆ ಮೀಟರ್ ಅಳವಡಿಸುವ ಕುರಿತಾದ ಊಹಾಪೋಹಗಳನ್ನು ರೈತರು ನಂಬಬಾರದು.
ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವ ಸಂಬಂಧ, ಈಗಾಗಲೇ ಅಧಿಕಾರಿಗಳ ಸಭೆ ಕರೆದು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದೇನೆ. ಇಂಧನ ಇಲಾಖೆ ಆಳ ಮತ್ತು ಅಗಲಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಇಲಾಖೆಯನ್ನು ಜನಸ್ನೇಹಿಯನ್ನಾಗಿಸುವುದು ನಮ್ಮ ಮುಂದೆ ಇರುವ ಸವಾಲು ಎಂದು ತಿಳಿಸಿದ್ದಾರೆ.
ಈ ಇಲಾಖೆಯಲ್ಲಿ ಲೈನ್‌ಮನ್‌ಗಳಿಂದ ವ್ಯವಸ್ಥಾಪಕ ನಿರ್ದೇಶಕರವರೆಗೆ ವಿವಿಧ ಹಂತಗಳ ಸಿಬ್ಬಂದಿ ಇಲಾಖೆಯಲ್ಲಿದ್ದಾರೆ. ಎಲ್ಲ ಹಂತಗಳಲ್ಲಿಯೂ ಸುಧಾರಣೆ ತರುವ ಮೂಲಕ ಇಲಾಖೆಯನ್ನು ಕ್ರಿಯಾಶೀಲಗೊಳಿಸುವ ಬಗ್ಗೆ ಆಲೋಚನೆ ನಡೆಸಿದ್ದೇನೆ. ಈ ವಿಚಾರವಾಗಿ ಅಧಿಕಾರಿಗಳ ಜತೆ ಸಬೆ ನಡೆಸಿದ್ದೇನೆ ಎಂದು ಹೇಳಿದ್ದಾರೆ.
ಸೌರ ವಿದ್ಯುತ್ ಯೋಜನೆಗಳಲ್ಲಿ ಈ ಹಿಂದೆ ನಡೆದಿರುವ ಹಗರಣಗಳ ಬಗ್ಗೆ ತನಿಖೆ ನಡೆಯಬೇಕು ಎಂದು ವಿಧಾನಸಭೆ ಕಲಾಪದ ವೇಳೆ ಮಾಡಿದ್ದಕ್ಕೆ ಈಗಲೂ ಬದ್ಧನಾಗಿದ್ದೇನೆ. ಇಂಧನ ಇಲಾಖೆಯಲ್ಲಿ ಈ ಹಿಂದೆ ಯಾವುದೇ ತಪ್ಪುಗಳಾಗಿದ್ದರೆ, ಅದನ್ನು ಸರಿಪಡಿಸುವುದು ಮತ್ತು ಸುಧಾರಣೆ ಮಾಡುವುದು ನಮ್ಮ ಆದ್ಯತೆಯಾಗಿದೆ. ಅಧಿಕಾರಿಗಳಿಂದ ಎಲ್ಲ ವಿವರಗಳನ್ನೂ ಪಡೆಯುತ್ತೇನೆ. ತಪ್ಪುಗಳಾಗಿದ್ದರೆ ತನಿಖೆ ನಡೆಸಲು ಸಿದ್ಧ ಎಂದಿದ್ದಾರೆ.
Share your comments