1. ಸುದ್ದಿಗಳು

ಅಸಂಘಟಿತ ವಲಯದಲ್ಲಿರುವ ಆಟೋ, ಲಾರಿ, ಬಸ್ ಚಾಲಕರು ಮೃತಪಟ್ಟರೆ 5 ಲಕ್ಷ ವಿಮೆ

Auto Driver

ಅಸಂಘಟಿತ ವಲಯದಲ್ಲಿರುವ  ಆಟೋ, ಲಾರಿ, ಬಸ್ ಚಾಲಕರು ಮತ್ತು ತಾಂತ್ರಿಕ ಸಿಬ್ಬಂದಿ ಮೃತಪಟ್ಟರೆ ಅವರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡುವ ಮಸೂದೆಯನ್ನು ಮುಂದಿನ ಅಧಿವೇಶನದಲ್ಲಿ ಮಂಡನೆ ಮಾಡಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಭರವಸೆ ನೀಡಿದ್ದಾರೆ.

ತಾವು ಸಹ ಚಾಲಕನಾಗಿ ಕೆಲಸ ಮಾಡಿ ಈ ಹಂತಕ್ಕೆ ಬಂದಿದ್ದೇನೆ. ಚಾಲಕರ ಸಮಸ್ಯೆಯನ್ನು ಸ್ವತಃ ಅನುಭವಿಸಿದ್ದರಿಂದಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಾರ್ಮಿಕರ ಕಲ್ಯಾಣಕ್ಕಾಗಿ ಮುಂದಿನ ವಿಧಾನಮಂಡಲದ ಅಧಿವೇಶನದಲ್ಲೇ ನೂತನ ಕಾರ್ಮಿಕ ಕಾಯ್ದೆಯನ್ನು ಮಂಡಿಸಲಾಗುತ್ತಿದೆ. ಹಾಗೆಯೇ ಕಾರ್ಮಿಕ ಇಲಾಖೆಯಿಂದ ಕಾರ್ಮಿಕರ ಕಲ್ಯಾಣಕ್ಕಾಗಿ ನೀಡಲಾಗುತ್ತಿರುವ ವಿವಿಧ ಸಹಾಯಧನವನ್ನು ದುಪ್ಪಟ್ಟು ಮಾಡುವ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕರ ಸಂಕಷ್ಟ ಗೊತ್ತಿದೆ. ಆಟೋ ರಿಕ್ಷಾ, ಟ್ರಕ್, ಬಸ್‌ಗಳ ಎಲ್ಲ ಚಾಲಕರು, ತಾಂತ್ರಿಕ ಸಿಬ್ಬಂದಿ ಇವರುಗಳನ್ನು ಕಾರ್ಮಿಕ ಇಲಾಖೆಯ ವ್ಯಾಪ್ತಿಗೆ ತರುವ ಉದ್ದೇಶದಿಂದ ಹೊಸ ಕಾಯ್ದೆಯನ್ನು ಜಾರಿಗೊಳಿಸಲಾಗುವುದು ಎಂದರು.
ಕಾರ್ಮಿಕರು ಮೃತರಾದರೆ 5 ಲಕ್ಷ ಪರಿಹಾರ ಸೇರಿದಂತೆ ಕಾರ್ಮಿಕರಿಗೆ ಹಲವು ಸೌಲಭ್ಯ-ಸವಲತ್ತುಗಳನ್ನು ಒದಗಿಸುವ ಸಲುವಾಗಿ ಈ ಕಾಯ್ದೆಯನ್ನು ಜಾರಿ ಮಾಡಲಾಗುತ್ತಿದೆ. ಮಾಧ್ಯಮದಲ್ಲಿ ಕೆಲಸ ಮಾಡುವವರನ್ನೂ ಸೇರಿದಂತೆ ಹಲವರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸುವ ಮನವಿಗಳು ಬಂದಿವೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತೀರ್ಮಾನ ಮಾಡುವುದಾಗಿ ಅವರು ಹೇಳಿದರು.

ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುವ ಅನುದಾನವನ್ನು ದುಪ್ಪಟ್ಟು ಮಾಡಲು ತೀರ್ಮಾನ ಮಾಡಲಾಗಿದೆ. ಕೆಎಎಸ್, ಐಎಎಸ್ ಓದುವ ಕಾರ್ಮಿಕ ಮಕ್ಕಳಿಗೆ ಉಚಿತ ತರಬೇತಿ ನೀಡಲಾಗುವುದು. ಕಾರ್ಮಿಕ ಕಾಯ್ದೆಗಳ ಅನುಷ್ಠಾನದ ಮೇಲೆ ನಿಗಾ ಇಡಲು ಹಾಗೂ ಕಾರ್ಮಿಕರ ಸಂಕಷ್ಟಗಳಿಗೆ ಸ್ಪಂದಿಸಲು ಕಾರ್ಮಿಕ ಇಲಾಖೆಯಲ್ಲೂ ಜಾಗೃತ ದಳವನ್ನು ರಚನೆ ಮಾಡುವುದಾಗಿಯೂ ಅವರು ಹೇಳಿದರು.

ಕಾರ್ಮಿಕ ಮಕ್ಕಳ ವಿದ್ಯಾಭಾಸಕ್ಕೆ ನೀಡುವ ಅನುದಾನ ಹೆಚ್ಚಿಸಲಾಗಿದೆ. ಎಲ್ಕೆಜಿಯಿಂದ 4ನೇ ತರಗತಿಯ ವಿದ್ಯಾರ್ಥಿಗಳಿಗೆ 3 ಸಾವಿರದಿಂದ ಐದು ಸಾವಿರದವರೆಗೆ ಹೆಚ್ಚಿಸಲಾಗಿದೆ. 5 ನೇ ತರಗತಿಯಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ 5 ಸಾವಿರದಿಂದ 8 ಸಾವಿರ, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ 10 ಸಾವಿರದಿಂದ 12 ಸಾವಿರ ರೂಪಾಯಿ ಹೆಚ್ಚಿಸಲಾಗಿದೆ. ಪಿಯುಸಿ ವಿದ್ಯಾರ್ಥಿಗಳಿಗೆ 10 ಸಾವಿರದಿಂದ 15 ಸಾವಿರ ರೂಪಾಯಿಯವರೆಗೆ, ಡಿಪ್ಲೋಮಾ ಮತ್ತು ಐಟಿಐ ವಿದ್ಯಾರ್ಥಿಗಳಿಗೆ 12 ಸಾವಿರದಿಂದ 20 ಸಾವಿರ ರೂಪಾಯಿಯವರೆಗೆ ಹೆಚ್ಚಿಸಲಾಗಿದೆ. ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ 20 ಸಾವಿರದಿಂದ 40 ಸಾವಿರ, ಬಿಇ, ಬಿಟೆಕ್ ವಿದ್ಯಾರ್ಥಿಗಳಿಗೆ 25 ಸಾವಿರದಿಂದ 50 ಸಾವಿರ ರೂಪಾಯಿ ಹಾಗೂ ಮೆಡಿಕಲ್ ವಿದ್ಯಾರ್ಥಿಗಳಿಗೆ 30 ಸಾವಿರದಿಂದ 60 ಸಾವಿರ ರೂಪಾಯಿಯವರೆಗೆ ಹೆಚ್ಚಿಸಲಾಗಿದೆ ಎಂದರು.

ರಾಜ್ಯದಲ್ಲಿ ಕಲಿಕಾ ಗುರುತಿಸುವಿಕೆ ಯೋಜನೆ ಜಾರಿ ಮಾಡುವ ಸಂಸ್ಥೆಗಳ ಜೊತೆಯಲ್ಲಿ ಜಂಟಿ ಸಹಯೋಗದ ಮೂಲಕ ಪ್ರಮಾಣ ಪತ್ರವಿಲ್ಲದ ಕಾರ್ಮಿಕರು ಅಂದರೆ ಎಲೆಕ್ಟ್ರಿಷಿಯನ್, ಬಾರ್ ಬೆಂಡರ್, ಸ್ಟೀಲ್ ಫಿಕ್ಸರ್, ಮೇಸನ್, ಕಟ್ಟಡ ಕಾರ್ಮಿಕರು, ಪೇಂಟರ್, ಸ್ಕಫೋಲ್ಡರ್, ಪ್ಲಂಬರ್ ಹಾಗೂ ಕಾರ್ಪೆಂಟರ್ ಅಂತಹ ವಿವಿಧ ಪ್ರವರ್ಗದವರಿಗೆ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಆಯೋಜಿಸಲಾಗುತ್ತಿದೆ. ಈ ತರಬೇತಿಯು ಕಾರ್ಮಿಕರಿಗೆ ತಮ್ಮ ತಿಳುವಳಿಕೆಯನ್ನು ವೃದ್ಧಿಸಿಕೊಳ್ಳಲು, ಸುರಕ್ಷತಾ ಕ್ಷೇತ್ರದಲ್ಲಿನ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಹಾಗೂ ಉತ್ಪಾದಕತೆಯನ್ನು ಸುಧಾರಿಸಲು ಸಹಾಯಕವಾಗುತ್ತದೆ.

ಆಗಸ್ಟ್ 16 ರಿಂದ ಕಾರ್ಮಿಕ ಅದಾಲತ್ ಮಾಡಲು ಉದ್ದೇಶಿಸಲಾಗಿದ್ದು, ಸೆಪ್ಟೆಂಬರ್ 16ರಿಂದಲೂ ಕಾರ್ಮಿಕರಿಗೆ ಸಂಬಂಧಿಸಿದ ವಿವಾದಗಳು ವಿವಿಧ ಹಂತದಲ್ಲಿ ಬಾಕಿಯಿವೆ. ಈ ಎಲ್ಲಾ ಅರ್ಜಿಗಳನ್ನು ಒಂದು ಬಾರಿಗೆ ವಿಚಾರಣೆ ನಡೆಸಿ ತಜ್ಞಣ ತೀರ್ಪು ನೀಡಿ ಪರಿಸಮಾಪ್ತಗೊಳಿಸಲು ನಿರ್ಧರಿಸಲಾಗಿದೆ ಎಂದರು.

Published On: 14 August 2021, 12:40 PM English Summary: New bill to be introduced soon to help drivers and other workers

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.