1. ಸುದ್ದಿಗಳು

ಸಹಜ ಕೃಷಿಯಲ್ಲಿ ಸಂಪೂರ್ಣ ಸ್ವಾವಲಂಬನೆ ಜೀವನ ಸಾಗಿಸುತ್ತಿದ್ದಾರೆ ಪಾಂಡುರಂಗಾಚಾರ್

KJ Staff
KJ Staff
Pandurangacharya

ನಮ್ಮ ಯುವ ಜನರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಅವರೆಲ್ಲಾ ಹೊಸ ಯುಗದ ಟ್ರೆಂಡೀ ಜೀವಿಗಳು. ಸದಾ ಹೊಸತರ ಹುಡುಕಾಟ, ತಂತ್ರಜ್ಞಾನದೊಂದಿಗೆ ನಿರಂತರ ಒಡನಾಟ, ಫ್ಯಾಷನ್ ಅನ್ನೇ ಉಸಿರಾಡುವ ಗೆಳೆಯದ ಕೂಟ... ಇದು ಈಗಿನ ಯುವ ಪೀಳಿಗೆಯ ಹುಡುಗರ ಲೈಫ್ ಸ್ಟೈಲ್. ಅವರಿಗೆ ದುಬಾರಿ ಬಟ್ಟೆ, ದುಬಾರಿ ಕಾರು, ದುಬಾರಿ ಫೋನು, ಸ್ಮಾರ್ಟ್ ಸಾಧನಗಳೇ ಬೇಕು. ಇವೆಲ್ಲವೂ ಇಲ್ಲದ ಬದುಕೂ ಒಂದು ಬದುಕೇ ಎನ್ನುವಷ್ಟರ ಮಟ್ಟಿಗೆ ಇಂದಿನ ಪೀಳಿಗೆಯ ಜೀವನ ನಡೆಯುತ್ತಿದೆ.

ಇದು ಒಂದು ಯುವ ಪಡೆಯ ಜೀವನದ ಬಗೆಯಾದರೆ, ಇನ್ನೊಂದೆಡೆ ಈ ಯಾವ ಟ್ರೆಂಡು, ಫ್ಯಾಷನ್ನು-ಗೀಷನ್ನಿನ ಗೀಳಿಲ್ಲದೆ, ನಿಸರ್ಗದೊಂದಿಗೆ ಬರೆತು ಅದು ತೋರಿಸಿದ್ದನ್ನು ನೋಡುವ, ಕೊಟ್ಟದ್ದನ್ನು ಸೇವಿಸುವ, ಆಡಿಸಿದಂತೆ ಆಡುವ ಒಂದು ಯುವ ಸಮೂಹವೂ ಇದೆ. ಆಡಂಬರದ ಬದುಕು ಬಿಟ್ಟು ಇಂತಹ ಸರಳ ಜೀವನದೆಡೆಗೆ ಮುಖ ಮಾಡುತ್ತಿರುವವರ ಸಂಖ್ಯೆ ಇತ್ತೀಚೆಗಂತೂ ಹೆಚ್ಚುತ್ತಲೇ ಇದೆ. ಕೆಲವರು ನಿಸರ್ಗದೊಂದಿಗೇ ನಡೆದುಹೋಗುವ ಸಹಜಕೃಷಿಯತ್ತ ಒಲವು ತೋರಿದರೆ, ಕೆಲವರು ಕೆಮಿಕಲ್ಗಳಿಂದ ಹೊರತಾದ ಕೃಷಿಗೆ ಮಾರುಹೋಗಿದ್ದಾರೆ. ಇಲ್ಲಿ ಈಗ ಹೇಳ ಹೊರಟಿರುವುದು ಸಹಜ ಕೃಷಿಯೊಂದಿಗೆ ಸರಳ ಜೀವನಕ್ಕೆ ಒಗ್ಗಿಕೊಂಡಿರುವ ಯುವಕನ ಬಗ್ಗೆ.

ಚಿಕ್ಕ ವಯಸ್ಸಿಗೇ ಸಂಸಾರದ ಹೊಣೆ

ಹೆಸರು ಪಾಂಡುರಂಗಾಚಾರ್. ವಯಸ್ಸು ಈಗಿನ್ನೂ 32. ದಾವಣಗೆರೆ ಜಿಲ್ಲೆ, ಹರಿಹರ ತಾಲೂಕು, ಮಲೇಬೆನ್ನೂರು ಗ್ರಾಮದ ಇವರು, ಸಹಜ ಕೃಷಿಗೆ ಮನಸೋತು ಪ್ರತಿ ನಿತ್ಯ ಅದರಲ್ಲೇ ಮಿಂದೇಳುತ್ತಿರುವ ಯುವಕ. ಆಗಿನ್ನೂ ಅವರು ಪದವಿ ಅಭ್ಯಾಸ ಮಾಡುತ್ತಿದ್ದರು. ಅದೇಕೋ ತಂದೆ ಬೇಗ ವಿಧಿವಶರಾದರು. ಪರಿಣಾಮ, ಚಿಕ್ಕ ವಯಸ್ಸಿಗೇ ಸಂಸಾರದ ನೊಗ ಪಾಂಡುರಂಗ ಅವರ ಹೆಗಲೇರಿತು. ಅಪ್ಪ ಆರಂಭಿಸಿದ್ದ ಸಾಮಿಲ್ ಒಂದೆಡೆ. ಮತ್ತೊಂದೆಡೆ ನಾಲ್ಕು ಎಕರೆ ತೋಟ. ಎರಡೂ ಕಡೆ ಅಪ್ಪ ಕಲಿಸಿದ್ದ ಕೆಲಸ ಪಾಂಡುರಂಗ ಅವರ ಕೈ ಹಿಡಿಯಿತು. ಅತ್ತ ಜೀವನ ಕೂಡ ಒಒಂದೇ ಹಳಿ ಹಿಡಿದ ರೈಲಿನಂತೆ ನೆಟ್ಟಗೆ ಸಾಗಿತ್ತು.

ಕಾಡಿದ ಬರಗಾಲ

ಎಲ್ಲವೂ ಸಲೀಸಾಗಿ ಸಾಗುತ್ತಿದ್ದದಾಗ, ಕೆಲ ವರ್ಷಗಳ ಹಿಂದೆ ಸತತ ಮೂರು ವರ್ಷಗಳ ಬರಗಾಲ ಬಂದು ಅಪ್ಪಳಿಸಿ ಪಾಂಡುರಂಗ ಅವರ ಬದುಲನ್ನೇ ಅಲ್ಲಾಡಿಸಿತು.. ನೀರಿಲ್ಲದೆ ತೋಟ ಒಣಗುತ್ತಿತ್ತು. ಆಗ ಪಕ್ಕದ ಹೊಲದವರ ನೀರು ಪಡೆದು ಹೇಗೋ ತೋಟ ಉಳಿಸಿಕೊಂಡರು. ಆದರೆ, ಮುಂದೆ ಹೀಗೇ ಆದರೆ ಗತಿ ಏನು ಎಂಬ ಯೋಚನೆ ಶುರುವಾಯಿತು. ಈ ನಡುವೆ ಸುಭಾಷ್ ಪಾಳೆಕರ್ ಅವರನ್ನು ಭೇಟಿ ಮಾಡಿದ ಪಾಂಡುರಂಗಾಚಾರ್, ತೋಟಕ್ಕೆ ಜೀವವಾಮೃತ ಬಳಸಲು ಶುರು ಮಾಡಿದರು. ಎಲ್ಲಾ ಸಾಂಗವಾಗಿ ನಡೆಯುತ್ತಿದ್ದರೂ ಒಳಗೊಳಗೇ ಏನೋ ಅಸಮಾಧಾನ, ಇನ್ನೂ ಏನೋ ಬದಲಾವಣೆ ಬೇಕಿದೆ ಎಂಬ ತುಡಿತ.

ರಾಘವಣ್ಣ ಸಿಕ್ಕರು

ಇಂಥ ಸಂದರ್ಭದಲ್ಲಿ ಪಾಂಡುರಂಗ ಅವರಿಗೆ ಸಿಕ್ಕಿದ್ದು ರಾಘವ ಅವರು. ಮಲೇಬೆನ್ನೂರು ಬಳಿ ಇರುವ ಮಲ್ಲನಾಯಕನಹಳ್ಳಿಯಲ್ಲಿ ರಾಘವ ಅವರ 10 ಎಕರೆ ತೋಟ, ಅಷ್ಟೇ ಗದ್ದೆ ಇದೆ. ದಶಕಗಳಿಂದಲೂ ಸಹಜ ಕೃಷಿಯೊಂದಿಗೆ ಸರಳ ಜೀವನ ನಡೆಸುತ್ತಿರುವ ಅವರು, ತಮ್ಮ ಊರಿನ ಸುತ್ತಮುತ್ತ ನೂರಾರು ಮಂದಿ ಸಹಜ ಕೃಷಿಯಲ್ಲಿ ತೊಡಗಲು ಪ್ರೇರಣೆಯಾಗಿದ್ದಾರೆ. ಅದರಲ್ಲೂ ಪಾಂಡುರಂಗಾಚಾರ್ ಅವರಂತಹ ಹಲವು ಆಸಕ್ತ ಯುವಕರಿಗೆ ಮಾರ್ಗದರ್ಶನ ಕೂಡ ನೀಡುತ್ತಿದ್ದಾರೆ. ರಾಘವ ಅವರ ಪರಿಚಯ ಆದ ಬಳಿಕ ಪಾಂಡುರಂಗ ಅವರ ಕೃಷಿ, ಜೀವನ ಪದ್ಧತಿಯೇ ಬದಲಾಯಿತು. ಜೀವಾಮೃತ ಬಳಕೆ ತೊರೆದ ಅವರು, ಪ್ರಕೃತಿಯೊಂದಿಗೇ ಸಾಗುವ ಸಹಜ ಕೃಷಿಯಲ್ಲಿ ತೊಡಗಿಕೊಂಡರು.

 ಫುಡ್ ಫಾರೆಸ್ಟ್

ಸಹಜ ಕೃಷಿಯಲ್ಲೂ ಸಾಕಷ್ಟು ಶ್ರಮ ಬೇಕಾಗುತ್ತದೆ. ತೋಟವನ್ನು ಮಗುವಿನಂತೆ ನೋಡಿಕೊಳ್ಳಬೇಕಾಗುತ್ತದೆ. ಗಿಡ ಮರಗಳೊಂದಿಗೆ ಸ್ನೇಹ ಬೆಳೆಸಿಕೊಳ್ಳಬೇಕಾಗುತ್ತದೆ. ಮಣ್ಣಿನೊಂದಿಗೆ ಭಾವನೆ ಹಂಚಿಕೊಳ್ಳಬೇಕಾಗುತ್ತದೆ. ಪ್ರಕೃತಿ, ಪ್ರಾಣಿ, ಪಕ್ಷಿಗಳೊಂದಿಗೆ ಆತ್ಮೀಯತೆ ಕೂಡ ಬೇಕಾಗುತ್ತದೆ. ಪಾಂಡುರಂಗ ಅವರು ಕೂಡ ಹೀಗೆ ತಮ್ಮ ತೋಟದ ಪ್ರತಿ ಗಿಡ-ಮರ-ಬಳ್ಳಿಗಳೊಂದಿಗೆ ಸಖ್ಯ ಬೆಳೆಸಿಕೊಂಡಿದ್ದಾರೆ. ಮುಖ್ಯವಾಗಿ ತಮ್ಮ ತೋಟವನ್ನು, ತಮಗೆ ದಿನ ನಿತ್ಯ ಅಗತ್ಯವಿರುವ ಎಲ್ಲ ವಿಧದ ಆಹಾರ ಒದಗಿಸುವ ಕಾಡಾಗಿ (ಫುಡ್ ಫಾರೆಸ್ಟ್) ಪರಿವರ್ತಿಸಿದ್ದಾರೆ.

ಮಲೇಬೆನ್ನೂರು ಬಳಿಯ ಕೊಮಾರನಹಳ್ಳಿಯ ಕೆರೆ ಏರಿ ಮೇಲಿರುವ ಪಾಂಡುರಂಗಾಚಾರ್ ಅವರ ತೋಟವನ್ನು ಒಂದು ಸುತ್ತು ಹಾಕಿದರೆ ಹಲವು ವಿಧದ ಸೊಪ್ಪು, ಗೆಡ್ಡೆ-ಗೆಣಸು, ಹಣ್ಣು, ತರಕಾರಿ ಗಿಡಗಳು ಕಾಣಸಿಗುತ್ತವೆ. ಇಲ್ಲಿ ಸಿಗುವ ಸೊಪ್ಪು, ತರಕಾರಗಳಲ್ಲೇ ಪಾಂಡುರಂಗ ಅವರ ಮನೆಯಲ್ಲಿ ನಿತ್ಯ ಸಾಂಬಾರು, ಪಲ್ಯ ಮತ್ತಿತರ ಆಹಾರ ತಯಾರಾಗುತ್ತದೆ. ಪಪ್ಪಾಯ, ಮಾವು ಹಾಗೂ ಇತರ ಮರಗಳು ಕೊಡುವ ಹಣ್ಣುಗಳು ಊಟದ ನಡುವಿನ ಸಮಯಯದಲ್ಲಿ ಉಪಹಾರವಾಗುತ್ತವೆ. ಗೆಡ್ಡೆ ಗೆಣಸುಗಳೂ ಆಹಾರಕ್ಕೆ ಬಳಕೆಯಾಗುತ್ತವೆ. ಸಾವಯವ ಪದ್ಧತಿಯಲ್ಲಿ ಬೆಳೆದ ಅಕ್ಕಿ ಇವರ ಮನೆಯಲ್ಲಿ ಅನ್ನವಾಗುತ್ತದೆ. ವಿದೇಶಿ ಮೂಲದ ಧಾನ್ಯಗಳಿಗೆ ಇವರ ಮನೆ, ತೋಟದಲ್ಲಿ ಜಾಗವಿಲ್ಲ. ಮನೆಯ ಆಹಾರಕ್ಕೆ ಅಗತ್ಯವಿರುವ ಬಹುತೇಕ ಎಲ್ಲವೂ ಇವರ ತೋಟದಿಂದಲೇ ಸಿಗುತ್ತಿದೆ.

ಸಂಪೂರ್ಣ ಸ್ವಾವಲಂಬನೆ

ಸಹಜ ಕೃಷಿಯಲ್ಲಿ ತೊಡಗುವವರ ಮತ್ತೊಂದು ವಿಶೇಷತೆ ಸಂಪೂರ್ಣ ಸ್ವಾವಲಂಬನೆ. ಅವರು ತಮಗೆ ಅಗತ್ಯವಿರುವ ಆಹಾರ ಮತ್ತಿತರ ವಸ್ತುಗಳಿಗಾಗಿ ಅಂಗಡಿಗೆ ಹೋಗುವುದಿಲ್ಲ. ಬದಲಿಗೆ ತಮ್ಮಂತೆಯೇ ಸಹಜವಾಗಿ ಕೃಷಿ ಮಾಡುವವರ ಬಳಿ ಕೊಟ್ಟು-ಕೊಳ್ಳುವ (ವಸ್ತು ವಿನಿಮಯದ ರೀತಿ) ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಪ್ರಸ್ತುತ ಪಾಂಡುರಂಗ ಅವರಿನ್ನೂ ಸಹಜ ಕೃಷಿಯ ಆರಂಭದ ಮೆಟ್ಟಿಲಲ್ಲಿದ್ದಾರೆ. ಆದಾಗ್ಯೂ ತಾವು ಬೆಳೆದು ಸಂರಕ್ಷಿಸಿದ ವೆಲ್ವೆಟ್ ಮತ್ತಿತರ ಗಿಡ-ಬಳ್ಳಿಯ ಬೀಜಗಳನ್ನು ಕೊಟ್ಟು, ರಾಘವ ಅವರಿಂದ ಸಾವಯವ ಅಕ್ಕಿ ಪಡೆಯುತ್ತಾರೆ. ಇನ್ನು ಒಂದೆರಡು ವರ್ಷ ಕಳೆದರೆ ಅವರು ಸಂಪೂರ್ಣ ಸ್ವಾವಲಂಬಿಯಾಗುತ್ತಾರೆ.

ತೋಟದಲ್ಲಿ ಏನೇನಿದೆ

ಪಾಂಡುರಂಗ ಅವರ ತೋಟದಲ್ಲಿ ಪ್ರಸ್ತುತ ನುಗ್ಗೆಕಾಯಿ, ಪಪ್ಪಾಯ, ನಿಂಬೆ, ಶ್ರೀಗಂಧ, ತುಳಸಿ, ಜಾಯಿಕಾಯಿ, ಸರ್ವ ಸಾಂಬಾರು (ಆಲ್ ಸ್ಪೈಸ್), ದಾಲ್ಚಿನಿ, ವಾಟರ್ ಆಪಲ್, ಪೀನಟ್, ಮಾವು, ಹಲಸು, ಕಂಚೀಕಾಯಿ, ಮೂಸಂಬಿ, ಬೂದಗುಂಬಳ ಕಾಯಿ, ಬಳೆಯೊಡಕ ಸೊಪ್ಪು, ಹೊಣಗೊನೆ, ಒಂದೆಲಗ, ದಂಟು, ನೆಲಬಸಳೆ ಸೊಪ್ಪುಗಳು, ಮಜ್ಜಿಗೆ ಹುಲ್ಲು (ಲೆಮನ್ ಗ್ರಾಸ್), ಹಾಗಲಕಾಯಿ, ಚರ್ರಿ ಟೊಮೇಟೊ, ಕೊಕೊವಾ, ಫ್ಯಾಷನ್ ಫ್ರೂಟ್, ಅಂಟವಾಳ, ತೊಗರಿ, ಹುರುಳಿ, ವೆಲ್ವೆಟ್ ಬೀನ್ಸ್, ಅರಿಶಿಣ, ತೆಂಗು ಮತ್ತು ಅಡಕೆ ಗಿಡಗಳಿವೆ. ಇವುಗಳಿಗೆ ತೋಟದಲ್ಲೇ ಬೆಳೆಯುವ ಗಿಡಗಳ ಹಸಿರೆಲೆ ಗೊಬ್ಬರ, ಜೊತೆಗೆ ಸಾಮಿಲ್ ನಲ್ಲಿ ಸಿಗುವ ಕಟ್ಟಿಗೆ ಪುಡಿಯನ್ನೇ ಗೊಬ್ಬರವಾಗಿ ಬಳಸುತ್ತಿದ್ದಾರೆ. ಇವುಗಳಲ್ಲಿ ಬಹುತೇಕ ಹಣ್ಣು, ಸೊಪ್ಪು, ತರಕಾರಿ ಗಿಡಗಳು ತಾವಾಗೇ ಬೆಳೆದಿವೆ. ಮನೆಯಲ್ಲಿ ಬಳಸಿ ಮಿಕ್ಕುವ ಹಣ್ಣು, ತರಕಾರಿ, ಸೊಪುಗಳನ್ನು ಮಾರಾಟ ಮಾಡಿ ಹಣ ಕೂಡ ಸಂಪಾದಿಸುತ್ತಿದ್ದಾರೆ ಪಾಂಡುರಂಗಾಚಾರ್.

Published On: 01 June 2021, 02:45 PM English Summary: Natural Forming The Way of living

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.