ರೈತರಿಗೆ ಪ್ರಮುಖ ಸುದ್ದಿಗಳನ್ನು ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಕನ್ನಡ ಅಗ್ರಿನ್ಯೂಸ್ ಪರಿಚಯಿಸಿದೆ. ಇಂದಿನ ಪ್ರಮುಖ ಸುದ್ದಿಗಳು ಈ ರೀತಿ ಇವೆ.
1. ಹೃದಯಾಘಾತ ಜಾಗೃತಿ: ಎಸ್.ಎಸ್.ಎಲ್.ಸಿ., ಪಿಯುಸಿ ಪಠ್ಯಕ್ಕೆ ಸೇರ್ಪಡೆ
2. ಇನ್ಮುಂದೆ ಗ್ರಾಮೀಣ ಭಾಗದ ಜನರಿಗೆ ಸೇವಾ ಕೇಂದ್ರದಲ್ಲೇ ಸಿಗಲಿದೆ 44 ಸೇವೆಗಳು
3. ರಾಷ್ಟ್ರೀಯ ಅರಿಶಿಣ ಮಂಡಳಿ ಸ್ಥಾಪನೆ: ಪ್ರಧಾನಿ ನರೇಂದ್ರ ಮೋದಿ
4. ಮೈಸೂರಿನಿಂದ ಹೊರಡುವ ರೈಲುಗಳ ವೇಳಾಪಟ್ಟಿ ಬದಲು
5. ಕಾರ್‌ಪೂಲಿಂಗ್ ಬಗ್ಗೆ ಶೀಘ್ರ ನಿರ್ಧಾರ: ಸಚಿವ ರಾಮಲಿಂಗಾರೆಡ್ಡಿ
6. ಕರಾವಳಿ, ಬೆಂಗಳೂರು ಭಾಗದಲ್ಲಿ ಸಾಧಾರಣ ಮಳೆ
ಸುದ್ದಿಗಳ ವಿವರ ಈ ರೀತಿ ಇದೆ
1. ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಆತಂಕ ಮೂಡಿಸಿದೆ.
ಹೃದಯಾಘಾತದ ಬಗ್ಗೆ ಮಾಹಿತಿ ಇಲ್ಲದೆ ಇರುವುದರಿಂದಲೂ ಕೆಲವರ ಪ್ರಾಣವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಇದೀಗ ಹೃದಯ ಸ್ತಂಭನಕ್ಕೆ ಒಳಗಾದ ವ್ಯಕ್ತಿಗೆ ಅವಶ್ಯವಿರುವ ಪ್ರಥಮ ಚಿಕಿತ್ಸೆ ಸಿ.ಪಿ.ಆರ್. ಸೇರಿದಂತೆ ಕೆಲವು ನಿರ್ದಿಷ್ಟ
ವಿಷಯಗಳ ಕುರಿತು ಜಾಗೃತಿ ಮೂಡಿಸುವ ಪಾಠವನ್ನು, ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ವಿದ್ಯಾರ್ಥಿಗಳ ಶೈಕ್ಷಣಿಕ ಪಠ್ಯದಲ್ಲಿ ಅಳವಡಿಸಿ
ಕೊಳ್ಳಲು ಸರ್ಕಾರ ಮುಂದಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿರುವುದಾಗಿ
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
------------------------
2. ರಾಜ್ಯದ ಗ್ರಾಮೀಣ ಭಾಗದ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹೊಸದಾಗಿ 44 ಅಗತ್ಯ ಸೇವೆಗಳನ್ನು ಗ್ರಾಮೀಣಾಭಿವೃದ್ಧಿ
ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮಪಂಚಾಯಿತಿ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ.
ಇದರೊಂದಿಗೆ ಈಗಾಗಲೇ ಗ್ರಾಮೀಣ ಜನರಿಗೆ ಅವಶ್ಯವಿರುವ 22 ಸೇವೆಗಳೂ ಸಿಗಲಿವೆ.
--------------------
3. ಕೇಂದ್ರ ಸರ್ಕಾರವು ರೈತರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇನ್ನೂ ಹಲವು ಯೋಜನೆಗಳನ್ನು ತರಲು ಕೇಂದ್ರ ಸರ್ಕಾರ ಸದಾ ಬದ್ಧವಾಗಿದೆ
ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಅರಿಶಿಣ ಬೆಳೆವ ರೈತರ ಅಗತ್ಯತೆ ಹಾಗೂ ಅನುಕೂಲ ಮಾಡುವ ಉದ್ದೇಶದಿಂದ
ರಾಷ್ಟ್ರೀಯ ಅರಿಶಿಣ ಮಂಡಳಿಯನ್ನು ಸ್ಥಾಪಿಸಲಾಗುವುದು ಎಂದು ಮೋದಿ ತಿಳಿಸಿದ್ದಾರೆ.
ಇದರಿಂದಾಗಿ ಪೂರೈಕೆಯಲ್ಲಿ ಮೌಲ್ಯವರ್ಧನೆ, ಮೂಲಸೌಕರ್ಯದ ವರೆಗೆ ದೇಶದ ವಿವಿಧ ಭಾಗದ ರೈತರಿಗೆ ಸಹಾಯವಾಗಲಿ ಎಂದಿದ್ದಾರೆ.
ಇನ್ನು ಕೇಂದ್ರ ಸರ್ಕಾರವು ರೈತರ ಯೋಗಕ್ಷೇಮ ಮತ್ತು ಸಮೃದ್ಧಿಗೆ ಆದ್ಯತೆ ನೀಡುತ್ತದೆ.
ಅರಿಶಿಣ ಬೆಳೆವ ರೈತರ ಸಾಮರ್ಥ್ಯವನ್ನು ಬಳಸಿಕೊಳ್ಳುವ ಮತ್ತು ಅವರಿಗೆ ಸೂಕ್ತವಾದ ಬೆಂಬಲವನ್ನು ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
--------------------
4. ಮೈಸೂರು ವಿಭಾಗ ರೈಲ್ವೆ ನಿಲ್ದಾಣಗಳಿಂದ ಸಂಚರಿಸುವ ರೈಲುಗಳ ಸಂಚಾರದ ವೇಳಾಪಟ್ಟಿಯನ್ನು ಬದಲಾಯಿಸಲು ನಿರ್ಧರಿಸಲಾಗಿದೆ.
ಹೀಗಾಗಿ, ಮೈಸೂರು ಬೆಂಗಳೂರು, ಮೈಸೂರು - ನವದೆಹಲಿ ಸೇರಿದಂತೆ 314 ರೈಲುಗಳ ಸಮಯವನ್ನು
ಅಕ್ಟೋಬರ್ 1 ರಿಂದಲೇ ಜಾರಿಗೆ ಬರುವಂತೆ ನೈರುತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ರೈಲುಗಳ ಆಗಮನ
ಮತ್ತು ನಿರ್ಗಮನದ ವೇಳಾಪಟ್ಟಿ ಪರಿಷ್ಕರಿಸಲು ನೈರುತ್ಯ ರೈಲ್ವೆ ಮುಂದಾಗಿದೆ.
--------------------
5. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾರ್‌ಪೂಲಿಂಗ್ಗೆ ಅಂದರೆ ಒಂದೇ ಕಾರ್‌ನಲ್ಲಿ ಶೇರ್ ಮಾಡಿಕೊಳ್ಳುವ ಅವಕಾಶ ನೀಡುವ
ಅಥವಾ ಅನುಮತಿ ಹಿಂತೆಗೆದುಕೊಳ್ಳುವ ಕುರಿತು 10 ದಿನದಲ್ಲಿ ನಿರ್ಧಾರ ಪ್ರಕಟಿಸುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಮಂಗಳವಾರ ಸಾರಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಆಪ್ ಆಧಾರಿತ ಕಾರ್‌ಪೊಲಿಂಗ್ ಸೇವೆ ಕಲ್ಪಿಸುತ್ತಿರುವ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಯಿತು.
--------------------
6. ಬುಧವಾರ ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಒಳನಾಡಿನ ವಿವಿಧೆಡೆ ಮಳೆಯಾಗಲಿದೆ.
ಇನ್ನು ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿ ವೇಳೆ ಹಗುರಾದ ಮಳೆಯಾಗಲಿದೆ.
ಗುರುವಾರ ರಾಜ್ಯದಲ್ಲಿ ಹಗುರಾದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಚಿತ್ರಕೃಪೆ: narendramodi
Share your comments