1. ಸುದ್ದಿಗಳು

ಅಕ್ಟೋಬರ್ 1 ರಿಂದ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಗೆ ಆದೇಶ

ಭೂ ಸುಧಾರಣೆ ಕಾಯ್ದೆ ಸೇರಿದಂತೆ ಇತರ ರೈತ ಮಸೂದೆಗಳನ್ನು ವಿರೋಧಿಸಿ ದೇಶಾದ್ಯಂತ ರೈತರ ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ಪ್ರತಿಭಟನಾ ನಿರತ ರೈತರನ್ನು ಸಮಾಧಾನಗೊಳಿಸಲು ಯತ್ನಿಸಿರುವ ಕೇಂದ್ರ ಸರ್ಕಾರ ಪಂಜಾಬ್ ಮತ್ತು ಹರಿಯಾಣದಲ್ಲಿ ಕನಿಷ್ಠ ಬೆಂಬಲ ಬೆಲೆಗೆ(ಎಂಎಸ್‌ಪಿ) ಭತ್ತ ಖರೀದಿಸಲು ಅನುಮತಿ ನೀಡಿದೆ. ಭತ್ತ ಖರೀದಿಗಾಗಿ ಖಾರಿಫ್ ಮಾರ್ಕೆಟಿಂಗ್ ಸೀಸನ್(ಕೆಎಂಎಸ್) ಅಕ್ಟೋಬರ್ 1 ರಿಂದ ಎಲ್ಲಾ ರಾಜ್ಯಗಳಲ್ಲಿ ಆರಂಭವಾಗಬೇಕಿತ್ತು. ಆದರೆ ಕೃಷಿ ಮಸೂದೆ ವಿರೋಧಿಸಿ ಪಂಜಾಬ್ ಹರಿಯಾಣ ರಾಜ್ಯಗಳಲ್ಲಿ ಪ್ರತಿಭಟನೆ ತೀವ್ರತೆ ಹೆಚ್ಚಾಗಿದ್ದರಿಂದ ಎರಡು ದಿನಗಳ ಮುಂಚೆಯೇ ಕೇಂದ್ರ ಸರ್ಕಾರ ಸೀಸನ್ ಗೂ ಮುನ್ನವೇ ಭತ್ತ ಖರೀದಿಗೆ ಆದೇಶಿಸಿದೆ.

‘ಕನಿಷ್ಠ ಬೆಂಬಲ ಬೆಲೆಯ (ಎಂಎಸ್‌ಪಿ) ಅಡಿ ಅಂದಾಜು 5,637 ಟನ್ ಭತ್ತವನ್ನು ಹರಿಯಾಣ ಮತ್ತು ಪಂಜಾಬ್‌ನ ರೈತರಿಂದ ಖರೀದಿಸಲಾಗಿದೆ. ಇನ್ನುಳಿದ ರಾಜ್ಯಗಳ ರೈತರಿಂದ ಭತ್ತ ಖರೀದಿಯು ಸೋಮವಾರದಿಂದ ಆರಂಭವಾಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ.

ರೈತರು ತಮ್ಮ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಗೆ(ಎಂಎಸ್‌ಪಿ) ತ್ವರಿತವಾಗಿ ಮಾರಾಟ ಮಾಡಲು ಅನುಕೂಲವಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಕೇಂದ್ರ ಪ್ರಸಕ್ತ ವರ್ಷದಲ್ಲಿ 'ಸಾಮಾನ್ಯ ವೈವಿಧ್ಯಮಯ' ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ 1,868 ರೂ. ಮತ್ತು 'ಎ' ದರ್ಜೆಯ ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ 1,888 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದೆ. ಮುಂಗಾರು ಅವಧಿಯಲ್ಲಿ ಒಟ್ಟು 495.37 ಲಕ್ಷ ಟನ್ ಭತ್ತ ಖರೀದಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಬೇಳೆಕಾಳು, ಎಣ್ಣೆಬೀಜ ಖರೀದಿಗೆ ಅನುಮೋದನೆ:

ಕರ್ನಾಟಕ ಸೇರಿದಂತೆ ಐದು ರಾಜ್ಯಗಳಲ್ಲಿ ಮಾರುಕಟ್ಟೆ ಮಧ್ಯ ಪ್ರವೇಶಿಸಿ ಬೇಳೆ ಕಾಳು ಖರೀದಿ ಮಾಡುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಖಾರೀಫ್ ಬೆಳೆಗಳನ್ನು ಕನಿಷ್ಟ ಬೆಂಬಲ ಬೆಲೆ ನೀಡಿ ಖರೀದಿಸುವ ಪ್ರಕ್ರಿಯೆ ಮುಂದುವರೆದಿದ್ದು, ಸೆ. 28 ರವರೆಗೆ ಕರ್ನಾಟಕ,ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ ಮತ್ತು ಹರಿಯಾಣಗಳಿಂದ 14.09 ಲಕ್ಷ ಮೆಟ್ರಿಕ್ ಟನ್ಗಳಷ್ಟು ಎಣ್ಣೆ ಕಾಳುಗಳು ಮತ್ತು ಬೇಳೆ ಕಾಳುಗಳನ್ನು ಖರೀದಿಸಲಾಗಿದೆ.

ಈ ತಿಂಗಳ 24 ರವರೆಗೆ ಕೇಂದ್ರ ಸರ್ಕಾರವು ನೋಡಲ್ ಏಜೆನ್ಸಿಗಳ ಮೂಲಕ ತಮಿಳುನಾಡಿನಿಂದ 34 ಟನ್ ಹೆಸರು ಕಾಳು ಖರೀದಿಸಿದೆ. ಕರ್ನಾಟಕ ಮತ್ತು ತಮಿಳುನಾಡಿನಲ್ಲಿ 52 ಕೋಟಿ ರುಪಾಯಿ ಬೆಂಬಲ ಬೆಲೆಯಲ್ಲಿ 5,089 ಟನ್ ಕೊಬ್ಬರಿಯನ್ನು ಖರೀದಿಸಸಲಾಗಿದೆ. ಇದರಿಂದಾಗಿ 3961 ರೈತರಿಗೆ ಪ್ರಯೋಜನವಾಗಿದೆ ಎಂದು ತಿಳಿಸಿದೆ.

Published On: 30 September 2020, 10:25 AM English Summary: MSP procurement of kharif paddy begins

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.