1. ಸುದ್ದಿಗಳು

“ಕನ್ನಡತನ, ಕನ್ನಡದ ಆಸ್ಮಿತೆಗಳ ವಿರುದ್ಧ ನಿಂತಿದ್ದರ ಫಲ" : ಸಾಹಿತಿ ಕವಿರಾಜ್‌ ಪೋಸ್ಟ್‌ ವೈರಲ್‌

Maltesh
Maltesh
Lyricist Kaviraj Talk About Karnataka election on fb post

ಕರ್ನಾಟಕದಲ್ಲಿ ನಡೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್‌ ಪಕ್ಷ ರಾಜ್ಯದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ಸರ್ಕಾರ ರಚನೆಗೆ ಸಿದ್ಧತೆ ನಡೆಸುತ್ತಿದೆ. ಇತ್ತ ಇಷ್ಟು ದಿನ ಆಡಳಿತ ನಡೆಸಿದ್ದ ಬಿಜೆಪಿ ಸರ್ಕಾರ ಕಾಂಗ್ರೆಸ್‌ ಅಲೆಯಲ್ಲಿ ತೇಲಿ ಹೋಗಿದೆ.

ಜೆಡಿಎಸ್‌ ಕೂಡ ಈ ಬಾರಿ ತೀರಾ ಹೀನಾಯ ಸ್ಥಿತಿಗೆ ಬಂದು ತಲುಪಿದೆ. ರಾಜ್ಯದ ಜನರು ತಮ್ಮ ವಿವೇಚನಾ ಶಕ್ತಿಯಿಂದ ಮತ ನೀಡಿ ಬಹುಮತದ ಸುಭದ್ರ ಸರ್ಕಾರ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಬಿಜೆಪಿಗೆ ಇದು ಅನೀರಿಕ್ಷಿತ ಫಲಿತಾಂಶ ಎಂದು ಬಣ್ಣಿಸಲಾಗುತ್ತಿದ್ದು ಭಾರತೀಯ ಜನತಾ ಪಾರ್ಟಿ ಸೋಲಿಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆಕ್ಟಿವ್‌ ಇರುವ ಚಿತ್ರ ಸಾಹಿತಿ ಕವಿರಾಜ್‌ ಅವರು ಫೇಸ್‌ಬುಕ್‌ನಲ್ಲಿ ಚುನಾವಣಾ ಫಲಿತಾಂಶ ಕುರಿತು ಪೋಸ್ಟ್‌ ಒಂದನ್ನು ಬರೆದುಕೊಂಡಿದ್ದು, ನಿರ್ಗಮಿತ ಆಡಳಿತ ಪಕ್ಷಕ್ಕೆ ಪರೋಕ್ಷವಾಗಿ ತಿವಿದಿದ್ದಾರೆ. ಸದ್ಯ ಈ ಪೋಸ್ಟ್‌ ಸೋಷಿಯಲ್‌ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ. ಹಾಗಾದ್ರೆ ಅವರು ಬರೆದ ಪೋಸ್ಟ್‌ನಲ್ಲಿ ಏನಿದೆ ಎಂಬುದು ಇಲ್ಲಿದೆ.

ಕವಿರಾಜ್‌ ಅವರ ಪೋಸ್ಟ್‌ನಲ್ಲೇನಿದೆ..?

ಪದೇ ಪದೇ ನಾಡಿನ ಶಾಂತಿ ಕದಡಿದ್ದು ,

ಶಾಲೆ - ಪಠ್ಯಪುಸ್ತಕಗಳಲ್ಲು ರಾಜಕೀಯ  ತಂದು ಮಲೀನಗೊಳಿಸಿದ್ದು, 

ಕುವೆಂಪು , ಬಸವಣ್ಣ , ಅಂಬೇಡ್ಕರ್ ,  ಅವರಂತಹ ಮಹನೀಯರನ್ನು ಅವಮಾನಿಸಿದ್ದು.

ಧರ್ಮ - ದೇವರು ಎಲ್ಲವನ್ನು ರಾಜಕೀಯ ಅಸ್ತ್ರವಾಗಿಸಿಕೊಂಡಿದ್ದು,

ಕನ್ನಡತನ, ಕನ್ನಡದ ಆಸ್ಮಿತೆಗಳ ವಿರುದ್ಧ ನಿಂತಿದ್ದು , ಹಿಂದಿ ಹೇರಿಕೆ ಬೆಂಬಲಿಸಿದ್ದು,

ಈ ಮಣ್ಣಿನ ಹೋರಾಟಗಾರರನ್ನು ಕಡೆಗಣಿಸಿ  , ಶಿವಾಜಿ, ಸಾವರ್ಕರ್ ಅಂತಹಾ ಉತ್ತರದ ಹೋರಾಟಗಾರರನ್ನು ಮೆರೆಸಿದ್ದು.

ಹಿಂದೆಂದು ಕಂಡಿರದ ಭ್ರಷ್ಟಾಚಾರ -ಅಹಂಕಾರದ ಅಡಳಿತ ,

ಬೆಲೆ ಏರಿಕೆಗಳಿಂದ ಬಡವರ ಬದುಕನ್ನು ಸಂಕಷ್ಟಕ್ಕೆ ದೂಡಿದ್ದು,

ಪದೇ ಪದೇ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ಜನ ಉಗಿದ ನಂತರ ಯೂ ಟರ್ನ್ ಹೊಡೆದಿದ್ದು ,

ಕರೋನಾದಂತ ವಿಕೋಪದ ಸಮಯದಲ್ಲಿ ಜೀವಗಳನ್ನು ರಕ್ಷಿಸುವಲ್ಲಿ ಹೊಣೆಗೇಡಿತನ ತೋರಿದ್ದು,

ಅಮಾಯಕ ಯುವಕರ ಹೆಣಗಳನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದು , ನಾಗಪುರ ನಿರ್ದೇಶಿತ ಮೂಲಭೂತವಾದದ ಪ್ರಯೋಗಗಳಿಗೆ ಕರ್ನಾಟಕವನ್ನು ಪ್ರಯೋಗಶಾಲೆಯಾಗಿಸಿದ್ದು ,

ಆಪರೇಷನ್ ಕಮಲ, ರೆಸಾರ್ಟ್ ರಾಜಕೀಯದಂತ ಅನೈತಿಕ ರಾಜಕಾರಣದಿಂದ ರಾಷ್ಟ್ರಮಟ್ಟದಲ್ಲಿ ನಾಡಿನ ಗೌರವ ಹಾಳುಮಾಡಿದ್ದು ,  ವಿರೋಧಿಸಿದವರನ್ನು ಹೆದರಿಸಲು ಆಡಳಿತ ವ್ಯವಸ್ಥೆಯನ್ನು ಬಳಸಿಕೊಂಡಿದ್ದು

ಇವೆಲ್ಲವುಗಳ ವಿರುದ್ಧ ಕರ್ನಾಟಕದ ಮತದಾರರು ಜಾಗೃತನಾಗಿ ತೀರ್ಪು ನೀಡಿದ್ದಾರೆ.

ಕೇಂದ್ರ ನಾಯಕರ ಅಬ್ಬರದ ರ್‍ಯಾಲಿಯಿಂದ ಅಲೆ ಸೃಷ್ಟಿಯಾಗಿಬಿಡುತ್ತೆ ಎಂಬ ಭ್ರಮೆ ,

ಹಣ ಬಲದ ಧಿಮಾಕು , ಜಾತಿ ರಾಜಕೀಯ , ದ್ವೇಷ ಭಾಷಣ ಇವಕ್ಕೆಲ್ಲಾ ಸೊಪ್ಪು ಹಾಕದ ಕರುನಾಡಿನ ಮತದಾರರ ಪ್ರಜ್ಞಾವಂತಿಕೆ ಬಗ್ಗೆ  ಹೆಮ್ಮೆಯೆನಿಸುತ್ತದೆ. ಅತಂತ್ರ ಫಲಿತಾಂಶ ಕೊಟ್ಟರೇ ಅನೈತಿಕ ರಾಜಕಾರಣದ ರೂವಾರಿಗಳು ಅದನ್ನು ಹೇಗೆಲ್ಲಾ ದುರುಪಯೋಗ ಪಡಿಸಿಕೊಂಡು ಹಣಬಲ , ಅಧಿಕಾರ ಬಲದಿಂದ ರಾಜ್ಯದಲ್ಲಿ ಸರ್ಕಾರ ಸ್ಥಾಪಿಸುತ್ತಾರೆ ಎಂಬ ಸ್ಪಷ್ಟ ಅರಿವು ಮತದಾರ ಪ್ರಭುಗಳಿಗೆ ಇದೆ. ಹಾಗಾಗಿಯೇ ನಿರ್ಣಾಯಕ ಫಲಿತಾಂಶ ನೀಡಿ ಯಾರ್ಯಾರು ಎಲ್ಲಿರಬೇಕು ಎಂದು ಖಚಿತವಾಗಿ ತೋರಿಸಿರುವ ಮತದಾರರು ಅಭಿನಂದನಾರ್ಹರು.

ಮತದಾರರ ಪ್ರಜ್ಞಾವಂತಿಕೆ ಮತ್ತು ಪ್ರಜಾಪ್ರಭುತ್ವ ಹೀಗೆ ಪ್ರಬುದ್ಧವಾಗುತ್ತ ಚಿರಾಯುವಾಗಲಿ. ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

Published On: 14 May 2023, 02:26 PM English Summary: Lyricist Kaviraj Talk About Karnataka election on fb post

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.