ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ರೈತರಿಗೆ ಕೊಡುವ ಕಿಸಾನ್ ಕ್ರೇಡಿಟ್ ಕಾರ್ಡ್ ಇನ್ನೂ ಮುಂದೆ ಮೀನುಗಾರರಿಗೂ ನೀಡಲಾಗುವುದು ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಅವರು ಸುದ್ದಿಗಾರರೊಂದಿಗೆ ಮಾತನಾಡಿದ, ''ಭವಿಷ್ಯದಲ್ಲಿ ಮೀನುಗಾರಿಕೆ ಇಲಾಖೆಗೆ ಸಂಬಂಧಿಸಿದ ಯಾವುದೇ ಸೌಲಭ್ಯಗಳ ವಿತರಣೆಗೆ ರೈತರ ಮಾದರಿಯಲ್ಲಿ ಮೀನುಗಾರರಿಗೂ ಕಿಸಾನ್ ಕಾರ್ಡ್ ನೀಡಲಾಗುವುದು. ಇದರಿಂದ ನೇರವಾಗಿ ಮೀನುಗಾರರು ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.
'ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿಗೆ ಶೂನ್ಯ ಬಡ್ಡಿ ದರದಲ್ಲಿ 50,000 ರೂ.ವರೆಗೆ ಸಾಲ ಸೌಲಭ್ಯ ನೀಡಲಾಗುವುದು. ಒಳನಾಡು ಮೀನುಗಾರಿಕೆಗೆ ಬಳಸುತ್ತಿರುವ ಸುಮಾರು 25 ಸಾವಿರ ಕೆರೆಗಳ ಅಭಿವೃದ್ಧಿ ಹೇಗೆ ಮಾಡಬೇಕು, ಆ ಕೆರೆಗಳನ್ನು ನಿರುದ್ಯೋಗಿಗಳು ಅಥವಾ ಬಡವರು ನಿರ್ವಹಣೆ ಮಾಡುವುದಾದರೆ ಅವರಿಗೆ ಕಿಸಾನ್ ಕಾರ್ಡ್ ಮೂಲಕ ಯಾವ ರೀತಿ ಉತ್ತೇಜನ ಕೊಡಬಹುದು ಎಂಬುದರ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಲಾಗುತ್ತಿದೆ. ಮೀನುಗಾರರಿಗೆ ಸರ್ಕಾರದಿಂದ ದೊರಕುವ ಅನುದಾನವನ್ನು ಪಾರದರ್ಶಕವಾಗಿ ತಲುಪಿಸುವ ಕೆಲಸ ಮಾಡಲಾಗುವುದು ಎಂದರು.
''ರಾಜ್ಯದ ಎರಡು ಲಕ್ಷ ಹೆಕ್ಟೇರ್ ಸವಳು-ಜವಳು ಭೂಮಿಯನ್ನು ಅಭಿವೃದ್ಧಿಪಡಿಸಿ ಮೀನುಗಾರಿಕೆಗೆ ಬಳಕೆ ಮಾಡಿಕೊಳ್ಳಲು ಚಿಂತನೆ ನಡೆದಿದೆ. ಈ ಬಗ್ಗೆ ಚರ್ಚಿಸಲು ಜೂ.30ರಂದು ಮೀನುಗಾರರ ಸಭೆ ಕರೆದು ಚರ್ಚಿಸಲಾಗುವುದು ಎಂದರು.
Share your comments