ಬೆಂಗಳೂರು ನಗರದ ಕೆ.ಆರ್.ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ತರಕಾರಿ ಸಗಟು ಮಾರುಕಟ್ಟೆಗಳು ಸೆ.1ರಿಂದ ಪುನರಾರಂಭಗೊಳ್ಳಲು ಸಜ್ಜಾಗಿವೆ. ವ್ಯಾಪಾರಿಗಳು ಹಾಗೂ ರೈತರ ಮನವಿಗೆ ಸ್ಪಂದಿಸಿದ ಪಾಲಿಕೆ, ಸುರಕ್ಷತಾ ಕ್ರಮಗಳನ್ನು ಅನುಸರಿಸಿಕೊಂಡು ವ್ಯಾಪಾರ ನಡೆಸಲು ಅನುಮತಿ ನೀಡಿದೆ. ವ್ಯಾಪಾರ ವಹಿವಾಟಿಗೆ ತೊಂದರೆಯಾಗದಂತೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.
ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದ ಹಿನ್ನೆಲೆಯಲ್ಲಿ ನಾಲ್ಕೂವರೆ ತಿಂಗಳಿಂದ ಎರಡೂ ಮಾರುಕಟ್ಟೆಗಳನ್ನು ಬಂದ್ ಮಾಡಲಾಗಿತ್ತು. ಇದೀಗ ಅನ್‌ಲಾಕ್ 4.0 ಹಿನ್ನೆಲೆಯಲ್ಲಿ ಮಾರುಕಟ್ಟೆಗಳನ್ನು ಸಾಮಾಜಿಕ ಅಂತರದೊಂದಿಗೆ ತೆರೆಯಲಾಗುತ್ತಿದೆ. ಇದಕ್ಕಾಗಿ ಮಾರುಕಟ್ಟೆ ವ್ಯಾಪ್ತಿಯ ಹಲವು ಭಾಗಗಳಲ್ಲಿ ಸ್ಯಾನಿಟೈಸ್ ಮಾಡಲಾಗಿದೆ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧಾರಣೆ ಮೇಲೆ ನಿಗಾ ಇಡಲು ಮಾರ್ಷಲ್‌ಗಳ ನೇಮಕಕ್ಕೂ ಪಾಲಿಕೆ ನಿರ್ಧರಿಸಿದೆ.
ಕೆ.ಆರ್.ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆ ಪ್ರಾಂಗಣದ ಮಳಿಗೆಗಳಲ್ಲಿ ವರ್ತಕರು ಭಾನುವಾರದಿಂದಲೇ ಸಿದ್ಧತೆ ಮಾಡಿಕೊಂಡಿದ್ದಾರೆ. ಮಾರುಕಟ್ಟೆಯೊಳಗೆ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಕೆಲವು ಅಡಿಗಳ ಅಂತರದಲ್ಲಿ ಬಾಕ್ಸಗಳನ್ನು ನಿರ್ಮಿಸಲಾಗಿದೆ.
ದೇಶದ ಎಲ್ಲಾ ಮಾರುಕಟ್ಟೆಗಳನ್ನು ತೆರೆಯಲಾಗಿದೆ. ಹೀಗಿರುವಾಗ ಬೆಂಗಳೂರಿನ ಮಾರುಕಟ್ಟೆಗಳನ್ನೇಕೆ ಬಂದ್ ಮಾಡಬೇಕು. ಕೊರೊನಾದಿಂದ ಕಳೆದ ನಾಲ್ಕು ತಿಂಗಳಿಂದ ಮಾರುಕಟ್ಟೆಯನ್ನು ಬಂದ್ ಮಾಡಲಾಗಿದೆ. ಇದರಿಂದ ಬೆಳೆಗಾರರಿಗೆ ಸಾಕಷ್ಟು ಸಮಸ್ಯೆಯಾಗಿದೆ. ಈ ಕೂಡಲೇ ನಮಗೆ ಮಾರುಕಟ್ಟೆ ತೆರೆಯಬೇಕೆಂದು ರೈತ ಮುಖಂಡರ ನೇತೃತ್ವದಲ್ಲಿ ಇತ್ತೀಚಿಗೆ ಪ್ರತಿಭಟನೆ ನಡೆಸಲಾಗಿತ್ತು. ಈಗ ಒತ್ತಡಕ್ಕೆ ಮಣಿದು ಕೆ.ಆರ್. ಮಾರುಕಟ್ಟೆ ಮತ್ತು ಕಲಾಸಿಪಾಳ್ಯ ಪುನರಾರಂಭಕ್ಕೆ ಸಮ್ಮತಿ ಸೂಚಿಸಿದೆ
ಸದಾ ಗ್ರಾಹಕರು, ವ್ಯಾಪಸ್ಥರು ಸೇರಿದಂತೆ ಲಕ್ಷ ಲಕ್ಷ ಜನರಿಂದ ಗಿಜಿ ಗಿಡುವ ಮಾರ್ಕೆಟ್ ಅನ್‌ಲಾಕ್ ಆದರೂ ಒಪನ್ ಆಗಿರಲಿಲ್ಲ. ಕೊರೊನಾ ಹರಡುವ ಸಾಧ್ಯತೆಯಿಂದ ಈ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಇದೀಗ ಮತ್ತೆ ಮಾರ್ಕೆಟ್ ಆರಂಭಕ್ಕೆ ಸಿದ್ಧತೆ ಚುರುಕಾಗಿದೆ. ‘ಕೆ.ಆರ್. ಮಾರುಕಟ್ಟೆಯಲ್ಲಿ ಹೂವು, ತೆಂಗಿನಕಾಯಿ, ಪೂಜಾ ಸಾಮಗ್ರಿಗಳು, ಬಾಳೆ ಎಲೆ ಮಾರಾಟಗಾರರು ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ಮಾರಾಟಗಾರರಿದ್ದಾರೆ.
Share your comments