ರೈತರ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ಮೈಸೂರಿನಿಂದ ದೆಹಲಿಗೆ ತಲುಪಿಸಲು ಕಿಸಾನ್ ರೈಲು ಸಂಚಾರ ಆರಂಭವಾಗಿದೆ.
ಕೃಷಿ ಮತ್ತು ಹೈನುಗಾರಿಕೆ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ಸಾಗಿಸಲಾಗುವುದು. ಈ ರೈಲು ಮೈಸೂರುನಿಂದ ಆರಂಭವಾಗಿ ಬೆಂಗಳೂರು- ಹುಬ್ಬಳ್ಳಿ ಮಾರ್ಗವಾಗಿ ನವದೆಹಲಿಯ ಹಜರತ್ ನಿಜಾಮುದ್ದೀನ್ ತಲುಪಲಿದೆ.
ಈ ರೈಲು ಶುಕ್ರವಾರ ಬೆಳಗ್ಗೆ ಮೈಸೂರಿನಿಂದ ಹೊರಟಿದೆ. ಮುಂದೆ ಪ್ರತಿ ಶನಿವಾರದಂದು ಈ ಕಿಸಾನ್ ರೈಲು ಸಂಚಾರ ನಡೆಸಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
ಕೊರೋನಾ ಸೋಂಕಿನ ಸಮಯದಲ್ಲಿ ರೈತರು ತಾವು ಬೆಳದ ಹಣ್ಣು-ತರಕಾರಿ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆ ಕೊಂಡೊಯ್ದು ಮಾರಾಟ ಮಾಡಲು ಅನುಕೂಲ ಕಲ್ಪಿಸಲು ಕೇಂದ್ರ ಸರಕಾರ ಕಿಸಾನ್ ರೈಲು ಸೇವೆ ಆರಂಭಿಸಿದೆ. ಕೃಷಿ ಉತ್ಪನ್ನಗಳನ್ನು ಕಡಿಮ ಖರ್ಚಿನಲ್ಲಿ ರಾಜ್ಯಗಳಿಗೆ ಸಾಗಾಟ ಮಾಡುವ ಕೇಂದ್ರ ಸರ್ಕಾರದ ಮಹತ್ವದ ಯೋಜನೆ ಇದಾಗಿದೆ.
ಕಿಸಾನ್ ರೈಲು ಮೈಸೂರಿನಿಂದ ಆರಂಭವಾಗಲಿದೆ. ಮೈಸೂರಿನಿಂದ ಬೆಂಗಳೂರಿನ ಕೆಎಸ್‌ಆರ್ ರೈಲು ನಿಲ್ದಾಣ, ಹಾಸನ, ಅರಸೀಕೆರೆ, ಕಡೂರು, ಹರಿಹರ, ದಾವಣಗೆರೆ, ಹುಬ್ಬಳ್ಳಿ ಬೆಳಗಾವಿ, ಮೀರಜ್ ಪುಣೆ, ಭೋಪಾಲ್, ಝಾನ್ಸಿ ಮೂಲಕ ದೆಹಲಿಯ ಹಜರತ್ ನಿಜಾಮುದ್ದೀನ್ ತಲುಪಲಿದೆ.
ದೇಶದ ಮೊದಲ ಕಿಸಾನ್ ರೈಲು ಆಗಸ್ಟ್ 7ರಂದು ಮಹಾರಾಷ್ಟ್ರದ ದೇವಳಾಯಿಂದ ಬಿಹಾರದ ದಾನಾಪುರಕ್ಕೆ ಸಂಚಾರ ನಡೆಸಿತ್ತು.
ದಕ್ಷಿಣ ಭಾರತದಿಂದ ಮೊದಲ ಕಿಸಾನ್ ರೈಲು ಆಂಧ್ರ ಪ್ರದೇಶದ ಅನಂತಪುರದಿಂದ ದಿಲ್ಲಿಗೆ ಹೊರಟ್ಟಿತ್ತು. ಕರ್ನಾಟಕದ ಪ್ರಥಮ ಕಿಸಾನ್ ರೈಲು ಕಳೆದ ಸೆ.19ರಂದು ಸಂಚಾರ ಆರಂಭಿಸಿತ್ತು. ರೈತರು ಬೆಳೆದ ತರಕಾರಿ, ಹಣ್ಣುಗಳಿಗೆ ಶೇ.50ರಷ್ಟು ಸಹಾಯಧನ ಸಹ ನೀಡಲಾಗುತ್ತದೆ.
Share your comments