ಲಾಕ್‌ಡೌನ್‌ನಿಂದಾಗಿ ಕೈಗಾರಿಕೆ ಕ್ಷೇತ್ರ ಸೇರಿದಂತೆ ನಾನಾ ವಲಯಗಳು ಸೊರಗಿದ್ದರೂ, ಕೃಷಿ ಬಿತ್ತನೆ ಮಾತ್ರ ಮುನ್ನಡೆ ಕಾಯ್ದುಕೊಂಡಿದೆ. ಮುಂಗಾರು ಪ್ರವೇಶ ಈ ವರ್ಷ ಸರಿಯಾದ ಸಮಯಕ್ಕೆ ಆರಂಭವಾಯಿತು. ರಂಭದಿಂದಲೂ ನಿಯಮಿತವಾಗಿ ಮಳೆ ಬಿದ್ದ ಕಾರಣ ಬಿತ್ತನೆಗೆ ಪೂರಕ ವಾತಾವರಣ ಮೂಡಿದ್ದರಿಂದ ಬಿತ್ತಣಿಕೆ ಗಣನೀಯವಾಗಿ ಹೆಚ್ಚಾಗಿದೆ.ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿದೆ. 1,095.38 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ.
2019-20ನೇ ಸಾಲಿನಲ್ಲಿ 1,030.32 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಭತ್ತದ ಬಿತ್ತನೆಯಲ್ಲಿ ಶೇ. 8.27 ಹೆಚ್ಚಳವಾಗಿದೆ ದ್ವಿದಳ ಧಾನ್ಯಗಳ ಬಿತ್ತನೆ ಶೇ. 4.67, ಎಣ್ಣೆ ಕಾಳುಗಳ ಬೆಳೆ ಬಿತ್ತನೆಯಲ್ಲಿ ಶೇ. 12, ಕಬ್ಬಿನ ಬಿತ್ತನೆಯಲ್ಲಿ ಶೇ. 1.3, ಹತ್ತಿ ಬಿತ್ತನೆಯಲ್ಲಿ ಶೇ. 3.24 ಹೆಚ್ಚಳವಾಗಿರುವುದಾಗಿ ತಿಳಿಸಲಾಗಿದೆ. ದೇಶದ ಹಲವೆಡೆ ಇನ್ನೂ ಭತ್ತದ ಬಿತ್ತನೆ ಮಾಡಲಾಗುತ್ತಿದೆ. ಸಿರಿಧಾನ್ಯ ಮತ್ತು ರಾಗಿಯ ಬಿತ್ತನೆ ಬಹುತೇಕ ಪೂರ್ಣಗೊಂಡಿದೆ. ಅಕ್ಟೋಬರ್ 2ರವರೆಗೂ ಬಿತ್ತನೆ ಕಾರ್ಯ ನಡೆಯಲಿದೆ ಎಂದು ಸಚಿವಾಲಯ ತಿಳಿಸಿದೆ.
ಬೀಜ, ಕೀಟನಾಶಕ, ರಸಗೊಬ್ಬರ, ಯಂತ್ರೋಪಕರಣಗಳನ್ನು ಸೂಕ್ತ ಸಮಯದಲ್ಲಿ ಒದಗಿಸಿದ್ದರಿಂದ ಕೊರೊನಾ ಲಾಕ್‌ಡೌನ್ ಪರಿಸ್ಥಿತಿಯಲ್ಲಿಯೂ ಹೆಚ್ಚಿನ ಪ್ರಮಾಣದ ಬಿತ್ತನೆ ಸಾಧ್ಯವಾಗಿದೆ. ದೇಶಾದ್ಯಂತ ಲಾಕ್‌ಡೌನ್ ಹೇರಿಕೆಯಿದ್ದರೂ ಅದು ಕೃಷಿ ವಲಯದ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ ಎಂದು ತಿಳಿಸಿದೆ. ಸೆ.3ರವರೆಗೆ ದೇಶದಲ್ಲಿ ವಾಡಿಕೆಯ 730.8 ಮಿ.ಮೀ. ಬದಲು 795.0 ಮಿ.ಮೀ ಮಳೆಯಾಗಿದೆ ಅಂದರೆ ವಾಡಿಕೆಗಿಂತ ಶೇ.9 ರಷ್ಟು ಹೆಚ್ಚು ಮಳೆಯಾಗಿದೆ.
ಕರ್ನಾಟಕದಲ್ಲಿ 12 ವರ್ಷಗಳ ಬಳಿಕ ಶೇ. 100 ರಷ್ಟು ಬಿತ್ತನೆ:
ರಾಜ್ಯದಲ್ಲಿ ಕಳೆದ 12 ವರ್ಷಗಳ ನಂತರ ದಾಖಲೆಯ ಪ್ರಮಾಣದ ಬಿತ್ತನೆಯಾಗಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಗಸ್ಟ್ ತಿಂಗಳಾಂತ್ಯದಲ್ಲೇ ಶೇ.100 ರಷ್ಟು ಬಿತ್ತನೆಯಾಗಿದೆ. ಪ್ರಸಕ್ತ ಮುಂಗಾರು ಅವಧಿಯಲ್ಲಿ73 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಇದಕ್ಕೆ ಪ್ರತಿಯಾಗಿ ಆ.31ಕ್ಕೆ ನೂರಕ್ಕೆ ನೂರರಷ್ಟು ಗುರಿ ಸಾಧಿಸಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.62ರಷ್ಟು ಬಿತ್ತನೆಯಾಗಿತ್ತು. ಮುಂಗಾರು ಹಂಗಾಮು ಸೆ.28ಕ್ಕೆ ಕೊನೆಗೊಳ್ಳಲಿದ್ದು, ಹೆಚ್ಚುವರಿಯಾಗಿ 2-3 ಲಕ್ಷ ಹೆಕ್ಟೆರ್ ನಷ್ಟು ಬಿತ್ತನೆ ಕ್ಷೇತ್ರ ಹೆಚ್ಚಾಗಲಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ.
ಈ ಹಿಂದೆ ರಾಜ್ಯವು 2005-06ರಲ್ಲಿ ಶೇ.104, 2007-08ರಲ್ಲಿ ಶೇ.101 ಹಾಗೂ 2010-11ರಲ್ಲಿ ಶೇ.98ರಷ್ಟು ಬಿತ್ತನೆ ಪ್ರದೇಶದ ದಾಖಲೆ ಹೊಂದಲಾಗಿತ್ತು. ಆದರೆ ಆ ಮೂರೂ ಸಾಲಿನಲ್ಲಿ ಬಿತ್ತನೆ ವಿಸ್ತೀರ್ಣ 70 ಲಕ್ಷ ಹೆಕ್ಟೇರ್ ಮಾತ್ರ ಇತ್ತು.
Share your comments