ಪ್ರತಿವರ್ಷ ನೇಕಾರರಿಗೆ 2 ಸಾವಿರ ರುಪಾಯಿ ಆರ್ಥಿಕ ನೆರವು ನೀಡುವ ನೇಕಾರ ಸಮ್ಮಾನ್ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಚಾಲನೆ ನೀಡಿದರು.
ಅವರು ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇಕಾರರ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡುವ ಮೂಲಕ ಯೋಜನೆಗೆ ಚಾಲನೆ ನೀಡಿದರು. ಮೊದಲ ಹಂತದಲ್ಲಿ 19,744 ಕೈಮಗ್ಗ ನೇಕಾರರ ಬ್ಯಾಂಕ್ ಖಾತೆಗಳಿಗೆ ರಾಜ್ಯ ಸರ್ಕಾರ ನೇರ ನಗದು ಜಮೆ ಮಾಡಲಿದೆ. ರೇಷ್ಮೆ, ಹತ್ತಿ ಹಾಗೂ ಉಣ್ಣೆ ವಲಯದ ಕೈಮಗ್ಗ ಮತ್ತು ಪೂರಕ ಚಟುವಟಿಕೆಯಲ್ಲಿ ತೊಡಗಿರುವವರು ಯೋಜನೆಗೆ ಅರ್ಹರಾಗಿದ್ದಾರೆ. ರಾಷ್ಟ್ರೀಯ ಕೈಮಗ್ಗ ಗಣತಿಯ ಪ್ರಕಾರ ರಾಜ್ಯದಲ್ಲಿ ಒಟ್ಟು 54,789 ಕೈಮಗ್ಗ ನೇಕಾರರು ನೋಂದಣಿ ಮಾಡಿಕೊಂಡಿದ್ದು, ಯೋಜನೆಗೆ ವಾರ್ಷಿಕ 10.96 ಕೋಟಿ ವೆಚ್ಚ ಆಗಲಿದೆ ಎಂದರು.
ಗಣತಿಯಲ್ಲಿ ನೇಕಾರರ ಹೆಸರು ಬಿಟ್ಟು ಹೋಗಿದ್ದರೆ ಅಂಥವರಿಗೂ ಯೋಜನೆಯಲ್ಲಿ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
‘ಈವರೆಗೆ 40,634 ಕೈಮಗ್ಗ ನೇಕಾರರು ಸೇವಾಸಿಂಧು ತಂತ್ರಾಂಶದಲ್ಲಿ ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ, 37,314 ಅರ್ಜಿಗಳನ್ನು ಪರಿಶೀಲಿಸಿ ಅನುಮೋದನೆ ನೀಡಲಾಗಿದೆ. ಉಳಿದ, ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಮುಂದಿನ ದಿನಗಳಲ್ಲಿ ಆರ್ಥಿಕ ನೆರವು ವರ್ಗಾಯಿಸಲಾಗುವುದು ಎಂದರು.
Share your comments