1. ಸುದ್ದಿಗಳು

ಮುಂಗಾರಿನ ಹಾನಿಯಂತೆ ಬಿಸಿಗಾಳಿಯಿಂದಲೂ ಭಾರತಕ್ಕೆ ಸಂಕಷ್ಟ

Thermometer

ಹೊಸದಿಲ್ಲಿ: ಕೇರಳ, ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಹಾಲಿ ಸಾಲಿನ ಮುಂಗಾರು ಹೆಚ್ಚಿನ ಹಾನಿ ಮಾಡಿದ ರೀತಿಯಲ್ಲೇ ಈ ಬಾರಿಯ ಬೇಸಗೆ ಅವಧಿ ಕೂಡ ಬಿರುಸಾಗಿಯೇ ಇರಲಿದೆ. ವಿಶ್ವಾದ್ಯಂತ ತಾಪಮಾನ 2 ಡಿಗ್ರಿ ಸೆಲ್ಷಿಯಸ್‌ನಷ್ಟು ಹೆಚ್ಚಾಗಲಿದ್ದು, ವಿಶೇಷವಾಗಿ ಬಿಸಿ ಗಾಳಿಯಿಂದಾಗಿ ಭಾರತದಲ್ಲಿ ಭಾರೀ ಹಾನಿ ಉಂಟಾಗಲಿದೆ ಎಂದು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಅಂತರ್‌ ಸರ್ಕಾರಿ ಸಮಿತಿ (ಐಪಿಸಿಸಿ) ವರದಿ ಹೇಳಿದೆ. ಇದೇ ವರದಿಯನ್ನು ಪೋಲಂಡ್‌ನ‌ ಕಟೋವೈಸ್‌ ನಲ್ಲಿ (Katowice) ಡಿಸೆಂಬರ್‌ನಲ್ಲಿ ನಡೆಯಲಿರುವ ಹವಾಮಾನ ಶೃಂಗದಲ್ಲಿ ಪರಿಶೀಲಿಸಿ ಚರ್ಚಿಸಲಾಗುತ್ತದೆ.

ತಾಪಮಾನದ ಪ್ರಮಾಣ ಹೆಚ್ಚುತ್ತಾ ಹೋದರೆ 2030ರಿಂದ 2050ರ ಒಳಗಾಗಿ ಜಗತ್ತಿನ ತಾಪಮಾನ 1.5 ಡಿಗ್ರಿ ಸೆಲ್ಷಿಯಸ್‌ ಹೆಚ್ಚಾಗಲಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಅದರಲ್ಲಿ ಭಾರತೀಯ ಉಪಖಂಡದ ಬಗ್ಗೆಯೂ ಪ್ರಸ್ತಾಪವಿದೆ. ಬಿಸಿಗಾಳಿಯಿಂದಾಗಿ ಪಾಕಿಸ್ಥಾನದ ಕರಾಚಿ ಮತ್ತು ಭಾರತದ ಕೋಲ್ಕತಾಕ್ಕೆ ಹೆಚ್ಚಿನ ಸಮಸ್ಯೆ ಉಂಟಾಗಲಿದೆ ಎಂದು ಅದರಲ್ಲಿ ತಿಳಿಸಲಾಗಿದೆ. 2015ರಲ್ಲಿ ಭಾರತದಲ್ಲಿ ಉಂಟಾಗಿದ್ದ ಬಿಸಿಗಾಳಿಯಿಂದಾಗಿ 2,500 ಮಂದಿ ಅಸುನೀಗಿದ್ದರು. ತಾಪಮಾನ ಹೆಚ್ಚುತ್ತಿರುವುದರಿಂದಲಾಗಿ ಜಾಗತಿಕವಾಗಿ ಮಾನವರ ಆರೋಗ್ಯದ ಮೇಲೆಯೂ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ವರದಿ ಸಿದ್ಧಪಡಿಸಿರುವ ಆರ್ಥರ್‌ ಲೈನ್ಸ್‌ ಹೇಳಿದ್ದಾರೆ. ತಾಪಮಾನವನ್ನು 1.5 ಡಿ.ಸೆ.ನಷ್ಟು ಕಡಿಮೆ ಪ್ರಮಾಣದಲ್ಲಿರುವಂತೆ ಮಾಡಬೇಕು ಎಂದು ಸೂಚಿಸಲಾಗಿದೆ. 

ವಾಷಿಂಗ್ಟನ್‌ ವಿವಿಯ ಹವಾಮಾನ ತಜ್ಞರು ಉಲ್ಲೇಖೀಸಿರುವಂತೆ ಭಾರತ ಮತ್ತು ಪಾಕ್‌ನಲ್ಲಿ ಹೆಚ್ಚು ತೀವ್ರತೆಯ ಬಿಸಿಗಾಳಿ ಬೀಸಲಿದೆ. ಜತೆಗೆ ಆಹಾರದ ಕೊರತೆಯಿಂದಾಗಿ ಬಡವರ ಸಂಖ್ಯೆ ಹೆಚ್ಚಾಗಲಿದೆ. ಆದಾಯ ಕೊರತೆ, ಜೀವ ನಷ್ಟ, ಜನರ ಗುಳೆ, ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಜತೆಗೆ ಉಷ್ಣತೆ ಹೆಚ್ಚಿದಲ್ಲಿ ಅಕ್ಕಿ, ಗೋದಿ ಸೇರಿದಂತೆ ಹಲವು ಬೆಳೆಗಳ ನಷ್ಟ ಉಂಟಾದೀತು ಎಂದು ಎಚ್ಚರಿಸಲಾಗಿದೆ. ತಾಪಮಾನ ಹೆಚ್ಚಳವನ್ನು 1.5 ಡಿ.ಸೆ.ಗೆ ಮಿತಿಗೊಳಿಸುವುದರಿಂದ ಸಾವಿರಾರು ಮಂದಿಯ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದನ್ನು ತಪ್ಪಿಸಬಹುದು ಎಂದಿದೆ ವರದಿ.

1.5 ಡಿಗ್ರಿ ಸೆಲ್ಸಿಯಸ್‌ : 2030 ರಿಂದ 2050ರ ಒಳಗಾಗಿ ಜಗತ್ತಿನಲ್ಲಿ ತಾಪಮಾನ ಇಷ್ಟು ಪ್ರಮಾಣದಲ್ಲಿ ಹೆಚ್ಚಳ

0.5ಡಿಗ್ರಿ ಸೆಲ್ಸಿಯಸ್ ಇಷ್ಟು ಪ್ರಮಾಣದಲ್ಲಿ ತಾಪಮಾನ ಹೆಚ್ಚಿದರೂ ಮಾನವರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ

ತಾಪಮಾನ 2 ಡಿ.ಸೆ.ಹೆಚ್ಚಾದರೆ
- ಭಾರತ, ಪಾಕಿಸ್ಥಾನಗಳಲ್ಲಿ ಭಾರಿ ಪ್ರಮಾಣದಲ್ಲಿ ಬಿಸಿಗಾಳಿ ಬೀಸಲಿದೆ

- ಮಲೇರಿಯಾ, ಡೆಂಘ್ಯೂಯಂಥ ಮಾರಕ ಕಾಯಿಲೆಗಳ ಹೆಚ್ಚಳ

- ಮೆಗಾ ಸಿಟಿಗಳಲ್ಲಿ ತಾಪಮಾನದ ಪ್ರಮಾಣ ಹೆಚ್ಚಳ. 2050ರ ವೇಳೆ 35 ಕೋಟಿಗೂ ಹೆಚ್ಚಿನ ಸಂಖ್ಯೆಯ ಜನರಿಗೆ ತೊಂದರೆ

- ಬಡತನ ಪ್ರಮಾಣ ಹೆಚ್ಚಾಗುವ ಸಾಧ್ಯತೆ

1.5 ಡಿ.ಸೆ.ಗೆ ಮಿತಿಗೊಳಿಸಿದರೆ
- ಹಲವಾರು ಕೋಟಿ ಮಂದಿ ಬಡತನಕ್ಕೆ ಸಿಲುಕಿಕೊಳ್ಳುವುದು ಮತ್ತು ಆರೋಗ್ಯ ಸಂಬಂಧಿ ಸಮಸ್ಯೆಯಿಂದ ಬಳಲುವುದನ್ನು ತಪ್ಪಿಸಬಹುದು.

- ಭಾರತ ಸೇರಿದಂತೆ ಇತರ ರಾಷ್ಟ್ರಗಳಲ್ಲಿ  ಅಕ್ಕಿ, ಗೋದಿ ಮತ್ತು ಇತರ ಬೆಳೆಗಳ ನಷ್ಟ ತಪ್ಪಿಸಬಹುದು.

150 ವರ್ಷಗಳಲ್ಲಿ ಯಾವ ನಗರಗಳಲ್ಲಿ ತಾಪಮಾನ ಎಷ್ಟು ಹೆಚ್ಚು
ನವದೆಹಲಿ : 01 ಡಿ.ಸೆ.
ಮುಂಬಯಿ : 0.7 ಡಿ.ಸೆ.
ಕೋಲ್ಕತಾ : 1.2 ಡಿ.ಸೆ.
ಚೆನ್ನೈ : 0.6 ಡಿ.ಸೆ.

Published On: 10 October 2018, 02:30 AM English Summary: India is suffering from heat as a result of monsoon damage

Share your comments

Latest feeds

More News
Krishi Jagran Kannada Magazine Subscription Online Subscription

CopyRight - 2024 Krishi Jagran Media Group. All Rights Reserved.